ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕಾವ್ಯಸ್ಪರ್ಧೆಯಲ್ಲಿ
ಮೆಚ್ಚುಗೆ ಪಡೆದ ಕವಿತೆ

ವಿದ್ಯಾ ಕುಂದರಗಿ
ಕೊತಕೊತನೇ ಕುದಿವ ಅಗ್ನಿ ಕುಂಡ
ಬದುಕ ಬೇಗೆಯೊಳಗೆ
ಬಾಳು ಅರಸಿಹೊರಟ ಜೀವ ನಾನು
ಇಲ್ಲಿ ಯಾವುದೂ ಯಾವುದಕ್ಕೂ ಕಾಯುವುದಿಲ್ಲ
ಪ್ರಕೃತಿ ದರ್ಪಣದೊಳಗೆಲ್ಲ
ನನ್ನದೇ ಪ್ರತಿಬಿಂಬ ……

ಚಿಗುರಿಗೆ ಮುಗುಳನಗೆಯ ಕಲಿಸಿದ್ದೆನೆ
ಹೂವಿಗೆ ಕೋಮಲ ರಂಗ ಸವರಿ,
ಹಸಿರಿಗೆ ಶ್ವಾಸದ ಗತಿಯ ತಿಳಿಸಿ
ಹಣ್ಣಿಗೆ ರಸ ಒಸರುವ ಬಗೆ ಅರುಹಿ
ಭೂ ಒಡಲಾಳದೊಳಗೆ
ಹೆಜ್ಜೆ ಸದ್ದಿಲ್ಲದ ಪಸೆಯಾಗಿದ್ದೇನೆ
ನೀರಿಗೆ ಈಜು ಕಲಿಸಿದ್ದೆನೆ
ಗಾಳಿಗೆ ರೆಕ್ಕೆ ತೊಡಿಸಿದ್ದೆನೆ
ಬೆಳಕಿಗೆ ಬಣ್ಣ ಬಳಿದು
ಕತ್ತಲೆಯ ಕಣ್ಣು ಕಟ್ಟಿಟ್ಟು
ಕಾಳ ಗರ್ಭದೊಳಗೆ
ಕೋಟಿಕೋಟಿ ಜೀವಕೋಶಗಳಿಗೆ
ಉಸಿರ ಹಾಸಿದ್ದೇನೆ
ಮೌನಕ್ಕೆ ನಿಶಬ್ದಗಳ ಪರಿಚಯಿಸಿದ್ದೇನೆ
ಧ್ವನಿತರಂಗಕೆ ಲಯ ತಿಳಿಸಿದ್ದೆನೆ
ನಗುವಿಗೆ ಚೈತನ್ಯದಚಿಲುಮೆಯ
ರಹದಾರಿ ತೋರಿಸಿ……
ಅಳುವಿಗೆ ಕಣ್ಣಂಚಲ್ಲಿ ಭದ್ರಮಡುತೋಡಿಸಿ
ಹೀರುವ ತಗ್ಗಾಗಿದ್ದೆನೆ
ನೋವಿಗೆ ನೆರಳುವ ತತ್ತರುಸುರಿ
ಕೀವಾಗಿ ಬಸಿಯದೆ
ವಣಗಿ ಮಾಯವಾಗಿದ್ದೆನೆ
ಹೃದಯಮಿದುಳವಾಹಿನಿಗಳ
ಹಿಗ್ಗಿಸಿ ನಮ್ಯಳಾಗಿದ್ದೆನೆ
ಬಾನಿಗೆ ಹರವಿನ ಅಳತೆಗಲಿಸಿ
ಭೂಮಿಗೆ ಗರ್ಭದಾಂತರ್ಯದಾಳ ಪ್ರದರ್ಶಿಸಿ
ಕನ್ನಡಿಗೆ ಪಾರದರ್ಶಕೆಯ ತೋರಿ
ದೀಪಕ್ಕೆ ಜ್ಯೋತಿರ್ವಳಿಯಾಗಿ ದಾರಿ ತೋರಿದ್ದೆನೆ
ಸೂರ್ಯನಿಗೆಬಿಸಿ ಮುಟ್ಟಿಸಿದ್ದೆನೆ
ಚಂದ್ರನಿಗೆ ತಂಪು ತಟ್ಟಿಸಿದ್ದೆನೆ
ಹಗಲುರಾತ್ರಿಗಳ ಪರಿಭ್ರಮಣಕ್ಕೆ
ಸಂಕ್ರಾಂತಿಯಾಗಿದ್ದೆನೆ
ದೀಪಕ್ಕೆ ಜ್ಯೋತಿರ್ವಳಿಯಾಗಿದ್ದೆನೆ
ಇಲ್ಲಿ ಯಾವುದೂ ಯಾವುದಕ್ಕೂ ಕಾಯುವುದಿಲ್ಲ
ಹಂಗು ಹರಿದ ಕೂಡಲಸಂಗಮ
ಅಗಮ್ಯ,ಅಗೋಚರ ಅಪ್ರತಿಮದೊಳಗಿನ
ಬಯಲು ಆಲಯ ನಾನು





0 Comments