ಬದುಕು ಪ್ರಿಯವಾಗುವ ಬಗೆ..

ಸುಧಾ ಚಿದಾನಂದಗೌಡ ಅವರ ೨೦ ಕಥೆಗಳ ಸಂಕಲನ ‘ಬದುಕು ಪ್ರಿಯವಾಗುವ ಬಗೆ’ ಈಗ ಓದುಗರ ಮುಂದೆ ಬರುತ್ತಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರ ಪಡೆದ ಈ ಕೃತಿಗೆ ಲೇಖಕರು ಬರೆದ ನುಡಿ ಇಲ್ಲಿದೆ-


‘ಬದುಕು..’ ಓದುವ ಮುನ್ನ
ಸುಧಾ ಚಿದಾನಂದಗೌಡ
ನನ್ನ ಪ್ರಪಂಚ ಚಿಕ್ಕದು.
ಪತಿ, ಮಗಳು, ಮನೆ, ಅಡುಗೆ, ಓದು, ಸಮಾನಾಸಕ್ತರು ಭೇಟಿಯಾದಾಗ ಚರ್ಚೆ, ಹರಟೆ ಮತ್ತು ಒಂದಿಷ್ಟು ಬರಹ. ಬರೆಯುವ ಈ ಚಟ ಬಾಲ್ಯದಿಂದಲೇ ಇದ್ದು ಕೆಲವು ಕವನ, ಚಿಕ್ಕ ಚಿಕ್ಕ ಕಥೆ, ಪ್ರಬಂಧಗಳಿಗೆ ಸೀಮಿತವಾಗಿತ್ತು.
ಬರುಬರುತ್ತ ನನ್ನೊಳಗಿನ ಇನ್ನೊಬ್ಬ ಹೆಣ್ಣುಮಗಳು ಸಮಯ ಸಿಕ್ಕಾಗಲೆಲ್ಲ ಗೀಚುತ್ತಿದ್ದುದನ್ನು ಮತ್ತಷ್ಟು ಪ್ರಯತ್ನಪಟ್ಟು ಈ ಬರಹಗಳಿಗೆ ಒಂದು ಚೌಕಟ್ಟು ನಿಮಿಸಿ ಕಥೆಗಳನ್ನಾಗಿಸಿದೆ. ಈಗೀಗ ಬರೆಯದಿರುವುದೇ ಅಸಾಧ್ಯವೆನಿಸಿದೆ. ಬಹುಶಃ ಬರೆಯುವ ತುಡಿತ ಎಂದರೆ ಇದೇ ಇರಬೇಕು.
ಆದರೆ ನಿಜಕ್ಕೂ ಬರವಣಿಗೆ ಹೇಗಿರಬೇಕು?
ಈ ಪ್ರಶ್ನೆ ಎಲ್ಲ ಕಾಲಗಳ, ಎಲ್ಲ ದೇಶಗಳ ಬರಹಗಾರರನ್ನು ಕಾಡಿರುವುದರಿಂದಲೇ ಸಾಹಿತ್ಯದ ರೂಪುಗಳು, ಮಾರ್ಗಗಳು ಬದಲಾಗುತ್ತ ಬಂದಿರಬೇಕು. ಕಾವ್ಯ, ವಚನ, ತ್ರಿಪದಿ, ರಮ್ಯ, ನವ್ಯ, ನವೋದಯ, ಬಂಡಾಯ…. ಹೀಗೆ. ಇವುಗಳ ಮಧ್ಯೆ ಸಣ್ಣ ಕಥೆಗಳ ಪಾತ್ರವೇನು, ಅಸ್ತಿತ್ವವೇನು ಎಂಬುದು ಕುತೂಹಲಕರ ಪ್ರಶ್ನೆ.
ಕಥೆ ಇಂದಿನ ವೇಗದ ಬದುಕಿಗೆ ಕನ್ನಡಿಯಾಗಿ ಹುಟ್ಟಿಕೊಂಡಿರಬಹುದು. ಅಂದರೆ ಹೇಳಬೇಕಾದ ಸಂಗತಿ, ಸಂವೇದನೆ, ಸಂಬಂಧಗಳ ವಿಶ್ಲೇಷಣೆಯನ್ನು ಆದಷ್ಟೂ ಕಡಿಮೆ ಮಾತುಗಳಲ್ಲಿ ಹೇಳುವ ಕಲೆಗಾರಿಕೆಯನ್ನು ಕಥೆ ಬೇಡುತ್ತದೆ. ಆದರೆ ಎಷ್ಟೋ ಬಾರಿ ಕಥೆಯ ಗಾತ್ರ ಕಾಪಾಡಿಕೊಳ್ಳುವುದೇ ಕಥೆ ಬರೆಯುವವರ ಜವಾಬ್ದಾರಿಯಾಗಿ ಬಿಡುವ ಅಪಾಯವಿದೆ.
ಇದನ್ನು ಪ್ರಜ್ಞಾಪೂರ್ವಕ ನೆನಪಿಟ್ಟುಕೊಂಡೇ “ಕಥಾರೂಪ” ನನ್ನ ಅಭಿವ್ಯಕ್ತಿಗೆ ಒಗ್ಗುವಂಥದ್ದು ಎಂದು ಆಯ್ಕೆ ಮಾಡಿಕೊಂಡಿದ್ದೇನೆ. ಒಮ್ಮೊಮ್ಮೆ ಇವು ಹತೋಟಿ ಮೀರಿ ನೀಳ್ಗತೆಯಾಗಿ ಬೆಳೆದು ನನ್ನನ್ನೇ ಬೆಚ್ಚಿ ಬೀಳಿಸಿವೆ. ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದಾಗ ಅಚ್ಚರಿಗೊಳ್ಳುವಷ್ಟು ಒಳ್ಳೆಯ ಸ್ಪಂದನವನ್ನು ಪಡೆದು ಸಂಕಲನ ಮಾಡುವಷ್ಟು ಧೈರ್ಯ ಹುಟ್ಟಿಸಿವೆ.
ನಾನು ಮೊದಲ ಕಥೆಯನ್ನು ಬರೆದದ್ದು ಒಂಬತ್ತನೆಯ ಕ್ಲಾಸಿನಲ್ಲಿ ಓದುವ ವಿದ್ಯಾರ್ಥಿನಿಯಾಗಿದ್ದಾಗ. ಪ್ರೇಮ, ತ್ಯಾಗ, ಆದರ್ಶಗಳು ಬೆರೆತ ಒಂದು ಬಗೆಯ Mouldನಲ್ಲಿ ಹಾಕಿ ತೆಗೆದಂಥ ಆ ಕಥೆಯನ್ನು ಈಗ ಯಾರಿಗೂ ತೋರಿಸುವ ಗೋಜಿಗೆ ಹೋಗುವುದಿಲ್ಲ!
ಅನಂತರದ ಪಿ.ಯು.ಸಿ.ಯ ವಿಜ್ಞಾನದ ಓದು ಬರವಣಿಗೆಯನ್ನು ಇನ್ನೂ ಹೆಚ್ಚು ಸಾಂದ್ರಗೊಳಿಸಿತೇ ಹೊರತು ಹತ್ತಿಕ್ಕಲಿಲ್ಲ, ಡಿಗ್ರಿ ಓದುವಾಗಲಂತೂ ಸಾಹಿತ್ಯ ಲೋಕದ ಹೊಸ ಬಾಗಿಲುಗಳೇ ತೆರೆದುಕೊಂಡಂತೆ ಭಾಸವಾಗಿ ವಿಜ್ಞಾನಕ್ಕೆ ಕೈ ಮುಗಿದು ಇಂಗ್ಲೀಷ್ ಎಂ.ಎ. ಆರಿಸಿಕೊಂಡೆ. ಓದು ಮುಗಿಯುವಷ್ಟರಲ್ಲಿ, ಅಂದರೆ ಆ ನಾಲ್ಕೈದು ವರ್ಷಗಳಲ್ಲೇ ಬರೆದ ಕಥೆಗಳು ಪತ್ರಿಕೆಗಳಲ್ಲಿ ಅಕಸ್ಮಾತ್ ಎಂಬಂತೆ ಕಾಣಿಸಿಕೊಂಡು, ಓದುಗರಿಂದ ಹೊಗಳಿಸಿಕೊಂಡವು. ಏನೇ ಆದರೂ ಒಂದು ಇಡೀ ಕಥಾ ಸಂಕಲನವನ್ನು ವಾಚಕರ ಎದುರಿಗಿಡುವಾಗ ಎಲ್ಲ ಕಥೆಗಾರ/ಗಾರ್ತಿಯರು ಅನುಭವಿಸುವ ಅಳುಕು ಮತ್ತು ಸಡಗರ ನನಗೂ ಇದೆ.
ನಿಜಕ್ಕೂ ಈ ಕಥೆಗಳ ಪ್ರೂಫ್ ತಿದ್ದುವಾಗ ಆಲೋಚಿಸುತ್ತಿದ್ದೆ.
ಬರಹಕ್ಕೆ ಮನುಷ್ಯನನ್ನು ಚಿರಂಜೀವಿಯಾಗಿಸುವ ಶಕ್ತಿ ಇರಲೇಬೇಕು. ಆದ್ದರಿಂಲೇ ವಿಶುಕುಮಾರ್ ರ “ಮದರ್” ಕೃತಿಗೂ, ಮಾಕ್ಸಿಂ ಗೋರ್ಕಿಯ “ಮದರ್” ಕೃತಿಗೂ ಇರುವ ಸಾಂಗತ್ಯ ಮತ್ತು ವೈರುಧ್ಯಗಳು ಈಗಲೂ ನಾವು ಚರ್ಚೆಗೆ ಕುಳಿತಾಗ ಆಸಕ್ತದಾಯಕವಾಗಿ ಕಂಡುಬರುತ್ತವೆ.
Pride and Prejudice ನಂಥ ಸಾಮಾನ್ಯ ಪ್ರೇಮ ಕಾದಂಬರಿ ಇಷ್ಟು ವರ್ಷಗಳ ನಂತರವೂ ತನ್ನ ಲಾಲಿತ್ಯವನ್ನು, ಸೊಬಗನ್ನು ಉಳಿಸಿಕೊಂಡು ಬಂದಿರಬೇಕಾದರೆ ಜೇನ್ ಆಸ್ಟಿನ್‍ಳ ಸಹಜ ಪ್ರತಿಭೆಯ ಬರವಣಿಗೆಯೇ ಕಾರಣವಿರಬೇಕು. ವರ್ಜಿನಿಯಾ ವೂಲ್ಫ್ ಳ ಬರಹಗಳು ಇಂದಿಗೂ ಅಧ್ಯಯನ ಯೋಗ್ಯ ಎನಿಸಬೇಕಾದರೆ, ದೂರದ ಆಫ್ರಿಕಾದ ಕಪ್ಪು ಕವಿಯೊಬ್ಬನ ದುರಂತ ಕರ್ನಾಟಕದ ಮೂಲೆಯೊಂದರಲ್ಲಿ ಪ್ರತಿಧ್ವನಿಸಬೇಕಾದರೆ ಸಾಹಿತ್ಯಕ್ಕೆ ಅಂಥ ಶಕ್ತಿ ಇರಲೇಬೇಕೆನಿಸುತ್ತದೆ. ಅಂಥದೊಂದು ಕೃತಿಯನ್ನು, ಸಣ್ಣ-ಕಥೆಯನ್ನು ನಾನು ಬರೆಯಲು ಸಾಧ್ಯವಾಗಬಹುದೇ? ಎಂದು ಯೋಚಿಸುತ್ತೇನೆ. ಈ ರೀತಿ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ ಅನಿಸಬಹುದು. “ಸಾಧನೆ ಸಣ್ಣದಾದರೆ ಆಗಲಿ, ಆದರೆ ಗುರಿಯಾದರೂ ದೊಡ್ಡದಿರಲಿ” ಎಂದುಕೊಳ್ಳುವವಳು ನಾನು.
“ಹಯಾದ್ ಬಿ” ಕಥೆಯನ್ನು ಬರೆಯುವ ಕಾಲಕ್ಕೆ ಈಕೆಯ ಸಮಸ್ಯೆಗೆ ಸಮಾಧಾನವೇನು? ಎಂಬ ಪ್ರಶ್ನೆ ಎದುರಾಗಿತ್ತು. ನಾವು ಓದುವ ಏಂಗಲ್ಸ್ ಆಗಲಿ, ಮಾವೋ ಆಗಲಿ ಅಥವಾ ಗಾಂಧಿಯೇ ಆಗಲಿ ಹಯಾದ್ ಬಿಯಂತಹ ಮಹಿಳೆಯರಿಗೆ ಸಾಮುದಾಯಿಕ ಅರ್ಥದಲ್ಲಿ ಪರಿಹಾರ ಸೂಚಿಸಲು ಸಾಧ್ಯವಾಗಬಹುದಲ್ಲದೇ? ಇಷ್ಟಕ್ಕೂ ಕುಟುಂಬದ ಸಮಸ್ಯೆಗಳಿಗೂ ಇಸಂಗಳಿಗೂ ಸಂಬಂಧವೇ ಇಲ್ಲ ಎನ್ನಲು ಬರುವುದಿಲ್ಲವಲ್ಲ? ಹಯಾದ್ ಬಿ ಬೀಡಿ ಕಟ್ಟುವ ಅತಿಸಣ್ಣ ಕಾರ್ಮಿಕಳೆಂಬುದು ಮತ್ತು ಅದೇ ಆಕೆಯ ಆತ್ಮವಿಶ್ವಾಸ, ಒಳ್ಳೆಯತನಗಳಿಗೆ ಬುನಾದಿಯಾಗಿತ್ತೆಂಬುದು ಗಮನಾರ್ಹ ಸಂಗತಿ. ಹಯಾದ್ ಬಿ ಮುಸ್ಲಿಮಳಾಗದೆ ಹಿಂದೂ ಹೆಣ್ಣು ಮಗಳಾಗಿದ್ದರೆ ಆಕೆಯ ಮರು ಮದುವೆ ಅಷ್ಟೊಂದು ಸುಲಭದ್ದಾಗಿರುತ್ತಿರಲಿಲ್ಲ ಎಂಬುದು ಕೂಡ ಅಲಕ್ಷಿಸಬೇಕಾದ ಸಂಗತಿಯಲ್ಲ.

ಕ್ಷಮಿಸಿ, ಟಿಪ್ಪಣಿ ದೀರ್ಘವಾಯಿತು. ಕಥೆ ಹೇಳುವುದಷ್ಟೇ ಕಥೆಗಾರ್ತಿಯ ಕೆಲಸವೇ ಹೊರತು ಕಥೆಗಳ ಉದ್ದೇಶ, ಗುರಿ, ನಿರೀಕ್ಷೆಗಳನ್ನೆಲ್ಲ ವಿವರಿಸುವುದಲ್ಲ. ನಾನು ಇದುವರೆಗೆ ಬರೆದ 45 ಕಥೆಗಳಲ್ಲಿ 20 ಕಥೆಗಳು ಮರುಮುದ್ರಣ ಮೌಲ್ಯದಲ್ಲಿ ಬಹುಕಾಲ ಉಳಿಯುವಂಥದ್ದನ್ನು, ನೆನಪಿಡುವಂಥದ್ದನ್ನು ಬರೆಯಲು ನನ್ನಿಂದ ಸಾಧ್ಯವಾಗಬಹುದೇ ಎಂಬ ಯೋಚನೆ ಕಾಡುತ್ತಲೇ ಇದೆ. ಮೌಲ್ಯಮಾಪನ ಮಾಡಬೇಕಾದವರು ಓದುಗರು ಮತ್ತು ವಿಮರ್ಶಕರು. ನಿಮ್ಮ ಬಿಚ್ಚು ಮನಸ್ಸಿನ ಟೀಕೆ, ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತವಿದೆ.
ಈ ಸಂದರ್ಭದಲ್ಲಿ ನಾನು ನೆನಪಿಸಿಕೊಳ್ಳಬಯಸುವವರೂ ಹಲವರಿದ್ದಾರೆ ತುಂಬ ಮುಖ್ಯವಾಗಿ-
ಕಥೆಯೊಂದನ್ನು ಪ್ರಕಟಿಸಿದ್ದಲ್ಲದೆ ನಮ್ಮ ಪುಟ್ಟ ಲೈಬ್ರರಿಗೆ ಸಾಕಷ್ಟು ಪುಸ್ತಕಗಳ ಉಡುಗೊರೆ ಕೊಟ್ಟು ಪ್ರೋತ್ಸಾಹಿಸುವ “ಲಂಕೇಶ್ ಪತ್ರಿಕೆ”ಯ ಸಂಪಾದಕರಾದ ಪಿ. ಲಂಕೇಶರಿಗೆ,
ಹಲವಾರು ಕಥೆಗಳನ್ನು ಪ್ರಕಟಿಸಿದ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಕರ್ಮವೀರ, ಸುಧಾ, ಮಯೂರ, ಉದಯವಾಣಿ (ವಿಶೇಷಾಂಕ) ಪತ್ರಿಕೆಗಳ ಸಂಪಾದಕರಿಗೆ,
ಬರಹಕ್ಕೆ ಸ್ಪಂದಿಸುತ್ತಾ, ಪ್ರೀತಿಯ ನೀರೆರೆಯುತ್ತಾ, ಗೌರವಿಸುವ ನನ್ನ ಪತಿ ಚಿದಾನಂದಗೌಡರಿಗೆ,
ವಿಪರೀತದ ತುಂಟಾಟ, ತಂಟೆಕೋರತನಗಳಿಂದ ತಲೆ ತಿನ್ನುವ, ತನ್ಮೂಲಕವೇ ಜೀವಿಸುವ ಆಸಕ್ತಿ ಹೆಚ್ಚಿಸಿರುವ ಮಗಳು ಚೈತ್ರಳಿಗೆ,
ಅಮ್ಮನಿಗೆ,
ನನ್ನ ಹೃತ್ಪೂರ್ವಕ ನಮನಗಳು ಸಲ್ಲುತ್ತವೆ.

‍ಲೇಖಕರು avadhi

December 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: