ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಣ್ಣದ ಲೋಕದ ಕಪ್ಪು ನಕ್ಷತ್ರ..

ತೇಜಾವತಿ ಎಚ್ ಡಿ.

**

ಕೆ ಎಸ್ ಕುಲಕರ್ಣಿ ಅವರು ಅನುವಾದಿಸಿದ ಕೃತಿ ‘ನಾಳೀನ ಚಿಂತ್ಯಾಕ.’

ಅಹರ್ನಿಶಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಹಿತಿ ತೇಜಾವತಿ ಎಚ್ ಡಿ. ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.

**

‘ನಾಳೀನ ಚಿಂತ್ಯಾಕ’ ಇದು ಕಲಾವಿದೆ ಶಾಂತ ಹುಬಳೀಕರ ಅವರ ಕನ್ನಡದಲ್ಲಿರುವ ಆತ್ಮ ಚರಿತ್ರೆ. ಮೂಲ ಮರಾಠಿಯಲ್ಲಿ ಶಶಿಕಲಾ ಉಪಾಧ್ಯೆ ನಿರೂಪಿಸಿದ್ದ ‘ಕಶ್ಯಾಲಾ ಉದ್ಯಾಚಿಬಾತಾ’ ಎಂಬ ಆಕೆಯ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದವರು ಕೆ ಎಸ್ ಕುಲಕರ್ಣಿಯವರು. ‘ಕಶ್ಯಾಲಾ ಉದ್ಯಾಚಿಬಾತಾ’ ಎನ್ನುವುದು ಶಾಂತಾರನ್ನ ಒಬ್ಬ ಶ್ರೇಷ್ಠ ಕಲಾವಿದೆ ಹಾಗೂ ಗಾಯಕಿಯನ್ನಾಗಿ ಗುರುತಿಸದ ಮರಾಠಿಯ ‘ಮಾಣುಸ್’ ಚಲನಚಿತ್ರದಲ್ಲಿ ಶಾಂತಾ ಅವರೇ ಹಾಡಿದ್ದ ಹಾಡಿನ ಮೊದಲ ಸಾಲು. ಕನ್ನಡದಲ್ಲಿಯೂ ಅವಳ ಆತ್ಮಕಥೆಗೆ ಈ ಸಾಲಿನ ಕನ್ನಡ ಅನುವಾದವಾದ ‘ನಾಳೀನ ಚಿಂತ್ಯಾಕ’ ಎಂದು ಇಡಲಾಗಿದೆ. ಶಾಂತ ಹುಟ್ಟಿದ್ದು ಹುಬ್ಬಳ್ಳಿಯ ಸಮೀಪದ ಒಂದು ಚಿಕ್ಕಹಳ್ಳಿ ಅದರಗುಂಚಿಯಲ್ಲಿ.14 ಏಪ್ರಿಲ್ 1914 ರಲ್ಲಿ ಜನಿಸಿದ ಇವರು ಬಡ ರೈತಾಪಿ ಕುಟುಂಬದ ಹೆಣ್ಣು ಮಗಳು. ಮೂವರು ಸೋದರಿಯರೊಂದಿಗೆ ಹುಟ್ಟಿದ ಇವರು ತನ್ನ ಮೂರನೇ ವಯಸ್ಸಿಗೆ ಅಪ್ಪ ಅಮ್ಮರನ್ನು ಕಳೆದುಕೊಂಡು ಅನಾಥರಾಗುತ್ತಾರೆ. ಬಾಲ್ಯ ವಿವಾಹ ರೂಢಿಯಲ್ಲಿದ್ದ ಆ ಕಾಲದಲ್ಲಿ ಅಕ್ಕ ನೀಲಮ್ಮನನ್ನು ಅದಾಗಲೇ ಮದುವೆ ಮಾಡಿಕೊಟ್ಟಿರುತ್ತಾರೆ. ಉಳಿದ ರಾಜಮ್ಮ ಮತ್ತು ಶಾರದೆಯನ್ನು ಅಜ್ಜಿ ಜೋಪಾನ ಮಾಡುತ್ತಾರೆ. ಆದರೆ ಅದೇ ಕಾಲಕ್ಕೆ ಬರಗಾಲ ಬಂದು ಹಳ್ಳಿಯ ಸಂಸಾರಗಳು ದುಡಿಮೆಯಿಲ್ಲದೆ ಹಸಿವಿನಿಂದ ಕಂಗಾಲಾಗತ್ತವೆ. ತಮ್ಮ ತಮ್ಮ ಸಂಸಾರಗಳನ್ನೇ ನೀಗಿಸುವುದು ಕಷ್ಟವಾದಾಗ ಈ ಎರಡು ಮಕ್ಕಳನ್ನು ಇಟ್ಟುಕೊಂಡಿದ್ದ ಅಜ್ಜಿಯ ಬದುಕು ದುಸ್ತರವಾಗುತ್ತದೆ. 

ಶಾಂತಾಳ ಮೂಲ ಹೆಸರು ರಾಜಮ್ಮ. ಇಡೀ ರಾತ್ರಿ ಹಸಿವಿನಿಂದ ರೋಧಿಸುತ್ತಿದ್ದ ರಾಜಮ್ಮನ ಅಳುವನ್ನು ಕೇಳಲಾರದ ಅಕ್ಕಪಕ್ಕದವರು ಅಜ್ಜಿಗೆ ಈ ತಂದೆ ತಾಯಿಯನ್ನು ತಿಂದ ಮಕ್ಕಳನ್ನು ಯಾರಿಗಾದರೂ ಕೊಟ್ಟುಬಿಡಿ ಎಂದು ಮೂಗು ಮುರಿಯುತ್ತಾರೆ. ಅಜ್ಜಿಯ ತಲೆಯಲ್ಲಿ ಸುಳಿದ ಜನರ ಮಾತು ಈ ಮಕ್ಕಳು ಅನ್ನ ನೀರಿಲ್ಲದೆ ಸಾಯುವುದಕ್ಕಿಂತ ಎಲ್ಲಿಯಾದರೂ ತಿಂದುಂಡು ಬದುಕಿದ್ದರೆ ಸಾಕು ನಾಳೆ ನೋಡಬಹುದೆಂಬ ಆಸೆ ಹುಟ್ಟಿಸುತ್ತದೆ. ಮೊದಲಿನಿಂದಲೂ ಗಂಗೆ ಗೌರಿಯರ ಹಾಲು ಸಂತೆಯ ಮಾರಾಟದ ಪರಿಚಯವಿದ್ದ ಹುಬ್ಬಳ್ಳಿಯ ಸಾವಿತ್ರಕ್ಕನ ಕೈಗೆ ಮಕ್ಕಳನ್ನು ಕೊಡುವಂತೆ ಮಾಡುತ್ತದೆ. ಇಲ್ಲಿಂದ ಶಾಂತಾಳ ಬದುಕಿಗೊಂದು ತಿರುವು ದೊರೆಯುತ್ತದೆ. ಸಾವಿತ್ರಕ್ಕ ಆ ಕಾಲಕ್ಕೆ ಮೆಟ್ರಿಕ್ ಪರೀಕ್ಷೆ ಪಾಸ್ ಆಗಿದ್ದ ವೃದ್ಧ ವಿಧವೆ. ಅವಳದ್ದು ಹೋರಾಟದ ಬದುಕು. ಮಕ್ಕಳಿಲ್ಲದ ವಿಚಾರಕ್ಕೆ ಆಸ್ತಿಯಲ್ಲಿ ತಕರಾರು ತೆಗೆದಿದ್ದ ಕುಟುಂಬಸ್ಥರಿಂದ ನ್ಯಾಯ ಕೇಳಲು ಕೋರ್ಟ್ ಮೆಟ್ಟಿಲೇರಿದ್ದಳು. ಸುಸಂಸ್ಕೃತ ಹೆಣ್ಣು ಮಗಳಾಗಿದ್ದ ಸಾವಿತ್ರಕ್ಕ ಈ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡುತ್ತಾಳೆ. ಸಾವಿತ್ರಕ್ಕನ ಧ್ವನಿಯು ಕೂಡ ಚೆನ್ನಾಗಿದ್ದು ಗಾಯನ ಭಜನೆ, ನಾಟಕಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾಳೆ. ಇದರ ಪ್ರಭಾವ ಶಾಂತಾಳ ಮೇಲೆ ದಟ್ಟವಾಗಿರುತ್ತದೆ. ಅಲ್ಲದೆ ಅಜ್ಜಿಯ ಮನೆಯ ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಖ್ಯಾತ ಸಂಗೀತಗಾರ ಕರೀಂ ಖಾನ್ ಅವರಿಂದ ಸಂಗೀತ ಪಾಠವಾಗುತ್ತದೆ.

ಅಫೀಮಿಗೆ ಒಳಗಾಗಿದ್ದ ಶಾರದೆಯ ದೇಹ ಪ್ರಕೃತಿಯನ್ನು ಸುಧಾರಿಸಿ, ರಾಜಮ್ಮ ಎಂದಿದ್ದ ಹೆಸರನ್ನು ಶಾಂತಾ ಎಂದು ಬದಲಿಸಿ ಮಕ್ಕಳನ್ನು ಶಾಲೆಗೂ ಕಳಿಸುತ್ತಾಳೆ. ಇವರಿಗೂ ಮುನ್ನ ಸಾವಿತ್ರಕ್ಕ ದತ್ತು ತೆಗೆದುಕೊಂಡಿದ್ದ ಚಂದ್ರಕ್ಕಳನ್ನು ಈ ಮಕ್ಕಳು ಅವ್ವ ಮತ್ತು ಅವಳ ಗಂಡ ಚೆನ್ನಪ್ಪನನ್ನು ಅಪ್ಪ ಎಂದು ಕರೆಯುತ್ತಾರೆ. ಚಂದ್ರಕ್ಕ ಕೋರ್ಟಿನಿಂದ ಸಾವಿತ್ರಕ್ಕನಿಗೆ ಸೇರಿದ ಆಸ್ತಿಯ ಮೇಲಿನ ಆಸೆಯಿಂದಾಗಿ ಈ ಮಕ್ಕಳ ಮೇಲೆ ಅಸೂಯೆ ತೋರಿಸುತ್ತಾಳೆ. ಅಲ್ಲಿಯವರೆಗೂ ಸುಖವಾಗಿ ಬೆಳೆದಿದ್ದ ಮಕ್ಕಳ ಜೀವನ ಈಗ ಕಠಿಣವಾಗುತ್ತಾ ಹೋಗುತ್ತದೆ. ಅಜ್ಜಿಯ ಆರೈಕೆಯಲ್ಲಿ ತಿಂದುಂಡು ಬೆಳೆದ ಮಕ್ಕಳಿಗೆ ಹೊತ್ತು ಹೊತ್ತಿನ ಊಟವೂ ಸಿಗದಂತಾಗುತ್ತದೆ. ಜೊತೆಗೆ ಚಂದ್ರಕ್ಕನ ಕೊಂಕುಮಾತುಗಳು ಬೇರೆ. ಕೊನೆಗೊಂದು ದಿನ ಚಂದ್ರಕ್ಕ ಯಾರಿಗೂ ತಿಳಿಯದಂತೆ ಹದಿನಾರು ವರ್ಷದ ಶಾಂತಾಗೆ 75 ವರ್ಷದ ಮುದುಕನೊಂದಿಗೆ ಮದುವೆ ಏರ್ಪಾಟು ಮಾಡುತ್ತಾಳೆ. ಈ ಘಟನೆಯಿಂದ ಶಾಂತಾಳ ಜೀವನ ಬಹು ಮುಖ್ಯ ತಿರುವು ಪಡೆಯುತ್ತದೆ.

ಇಂತಹ ಕಠಿಣ ಸಂದರ್ಭದಲ್ಲಿ ಶಾಂತಾಗೆ ಸಹಾಯ ಮಾಡಿದ್ದು ಗೆಳತಿ ಅಂಬೂ ಹಾಗೂ ಅವಳ ಗಂಡ ಭಾವುಜಿಯವರು. ರಾತ್ರೋ ರಾತ್ರಿ ಭಾವುಜಿ ಶಾಂತಾಳನ್ನು ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಅಲ್ಲಿಂದ ಗದಗದಲ್ಲಿ ತಂಗಿದ್ದ ಗುಬ್ಬಿ ನಾಟಕ ಕಂಪನಿಯಲ್ಲಿ ತನ್ನ ಪರಿಚಯದ ಮೇಲೆ ಕೆಲಸ ಕೊಡಿಸುತ್ತಾರೆ. ಭಾವುಜಿ ಶಾಂತಾಳ ಜೀವನದಲ್ಲಿ ದೊರೆಯುವ ಒಬ್ಬ ನಿಸ್ವಾರ್ಥ ಹೃದಯಿ. ಅಲ್ಲಿಂದ ಮುಂದೆ ಶಾಂತಾಳ ಕುಶಲೋಪರಿಗಳನ್ನು ಆಗಾಗ ವಿಚಾರಿಸುವ ಪೋಷಕನಾಗುತ್ತಾನೆ. ಒಮ್ಮೆ ತನ್ನ ಗೆಳತಿ ಅಂಬೂ ತನ್ನ ಮಕ್ಕಳಿಲ್ಲದ ಕೊರಗಿಗಾಗಿ ಜೀವದ ಗೆಳತಿಯಾದ ಶಾಂತಾಳಿಗೆ ತನ್ನ ಗಂಡನನ್ನು ಮದುವೆಯಾಗಲು ಕೇಳಿದಾಗ ಗೆಳತಿಯ ಒಳಿತಿಗಾಗಿಯೇ ಶಾಂತಾ ನಿರಾಕರಿಸುತ್ತಾಳೆ. ಆದರೆ ಇದೇ ಶಾಂತಾ ಮುಂದೆ ಗೆಳತಿ ಮಕ್ಕಳಿಲ್ಲದ ಕೊರಗಿನಲ್ಲಿ ಸತ್ತಾಗ ಭಾವುಜಿ ಒಂದು ಮಾತು ಕೇಳಿದ್ದರೆ ಸಾಕು ತನ್ನೆಲ್ಲ ಸಿನಿಮಾ ಜೀವನವನ್ನು ಬಿಟ್ಟು ಬಾಳಲು ಮನಸ್ಸು ಮಾಡಿರುತ್ತಾಳೆ. ಆದರೆ ಅದು ಘಟಿಸುವುದೇ ಇಲ್ಲ. ಭಾವುಜಿ ಬೇರೊಂದು ಮದುವೆಯಾಗಿ ಎರಡು ಮಕ್ಕಳ ತಂದೆಯಾಗುತ್ತಾರೆ. ಇದೊಂದು ಶಾಂತಾಳ ಬದುಕಿನ ವಿಪರ್ಯಾಸ.

1930 ರ ಸುಮಾರಿನಲ್ಲಿ ತನ್ನ ಹದಿನಾರನೇ ವಯಸ್ಸಿಗೆ ಗುಬ್ಬಿ ನಾಟಕ ಕಂಪನಿ ಸೇರಿದ ಶಾಂತಾ 18 ವರ್ಷ ತುಂಬಿದ ಬಳಿಕ ನಾಟಕಗಳಲ್ಲಿ ಅಭಿನಯ ಆರಂಭಿಸುತ್ತಾಳೆ. ಬಳಿಕ ನಾಟಕ ಕಂಪನಿ ಹುಬ್ಬಳ್ಳಿಗೂ ಬರುತ್ತದೆ. ಆಗ ಅದಾಗಲೇ ಶಾಂತ ಸತ್ತಳೆಂದು ತಿಳಿದಿದ್ದ ಕುಟುಂಬದವರಿಗೆ ಅವಳು ಬದುಕಿರುವುದು ತಿಳಿಯುತ್ತದೆ. ಮನೆಗೆ ಕರೆಯಲು ಬಂದ ಚಂದ್ರಕ್ಕಳ ಜೊತೆಗೆ ಹೋಗಲು ಸಿದ್ದಳಾಗದ ಶಾಂತಳನ್ನು ಕಂಪನಿಯೇ ಉಳಿಸಿಕೊಳ್ಳುತ್ತದೆ. ಹೀಗೆ ಮೊದಲ ಬಾರಿಗೆ ಸತ್ತು ಬದುಕಿದ ಶಾಂತಾ ಬೆಳಗಾವಿಯಲ್ಲಿ ನಾಟಕ ಮಾಡುತ್ತಿದ್ದಾಗ ಶಾಂತ ಬೇಹರೆಯ ಪರಿಚಯವಾಗುತ್ತದೆ. ಪ್ರೀತಿಯಿಂದ ತಾನೂ ಅಪ್ಪ ಎಂದು ಕರೆಯುತ್ತಿದ್ದ ಬೇಹರೆಯ ಜೊತೆಗೆ ‘ಭಕ್ತ ಪ್ರಹ್ಲಾದ’ ಸಿನಿಮಾ ನೋಡಲು ಹೋಗಿ ಶಾಂತಾಗೆ ಸಿನಿಮಾದಲ್ಲಿ ಕೆಲಸ ಮಾಡುವ ಕನಸು ಚಿಗುರುತ್ತದೆ. ಅದನ್ನು ವ್ಯಕ್ತಪಡಿಸಿದ್ದ ಸ್ವಲ್ಪ ದಿನಗಳಲ್ಲೇ ಬೇಹರೇ ಹಾಗೂ ವಾಸುದೇವರಾಯರ ಸಹಾಯದಿಂದ ಕೊಲ್ಲಾಪುರಕ್ಕೆ ಹೋಗುತ್ತಾಳೆ. 

1930ರ ದಶಕವು ಭಾರತೀಯ ಚಿತ್ತರಂಗದ ಇತಿಹಾಸದಲ್ಲಿ ಒಂದು ರೋಚಕ ಯುಗ. ಚಲನಚಿತ್ರ ನಿರ್ಮಾಣ ಮತ್ತು ಪ್ರದರ್ಶನದ ಹಳೆಯ ವಿಧಾನಗಳು ಇನ್ನೂ ತಮ್ಮ ಹಿಡಿತವನ್ನು ಹೊಂದಿರುವಾಗಲೇ ಹೊಸ ತಂತ್ರಜ್ಞಾನದ ಆಗಮನವು ಹೊಸ ಚಲನಚಿತ್ರೋದ್ಯಮವನ್ನು ಸ್ತಬ್ದಗೊಳಿಸಿತ್ತು. ಈ ಸಮಯದಲ್ಲಿ ಭಾರತದಲ್ಲಿ ಚಲನಚಿತ್ರವು ರಾಷ್ಟ್ರೀಯತೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಸಾಮಾಜಿಕ ಸುಧಾರಣಾ ಚಳುವಳಿಯ ಪ್ರಭಾವಕ್ಕೆ ಜೋಡಿಸಲ್ಪಟ್ಟಿತ್ತು. ಈ ಕಾಲದಲ್ಲಿ ಅನೇಕ ರಂಗಭೂಮಿ ನಟ ನಟಿಯರು ಸಿನಿಮಾದತ್ತ ಪ್ರಯಾಣ ಬೆಳೆಸುತ್ತಾರೆ. ಈ ಸಂದರ್ಭದಲ್ಲಿ ಅಭಿನಯ ಮತ್ತು ಗಾಯನ ಎರಡರಲ್ಲೂ ಪ್ರತಿಭಾವಂತಳಾಗಿದ್ದ ಶಾಂತಾ ಕೊಲ್ಲಾಪುರದ ಸಿನೆಟೊಕ್ಕೆ ಸೇರ್ಪಡೆಯಾಗಿ ತನ್ನ 21 ನೇ ವರ್ಷಕ್ಕೆ ಎರಡು ವರ್ಷದ ಕರಾರಿಗೆ ಸಹಿ ಹಾಕಿದರು. ಅಲ್ಲಿಂದ ಭಗಿನಿ ಲೀಲಾವತಿ ಹಾಗೂ ಗುರುವಾದ ಸುರೇಶ್ ಬಾಬು ಅವರ ಜೊತೆಗೆ 1933 ಕ್ಕೆ ಪುಣೆಗೆ ಹೋದ ಶಾಂತಾರ ಜೀವನದ ಸುವರ್ಣ ಘಟ್ಟವೆಂದರೆ ಪುಣೆಯ ಬಹುಶ್ರೇಷ್ಠ ಸಿನಿಮಾ ಕಂಪನಿ ಪ್ರಭಾತದ ವಿ ಶಾಂತರಾಮ ಅವರ ಸಂಪರ್ಕವಾಗಿದ್ದು.

ಅಲ್ಲಿಯವರೆಗೂ ತಾಯಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶಾಂತಾಳನ್ನು ನಾಯಕಿಯ ಪಾತ್ರಕ್ಕೆ ಅರಿಸಿದ್ದು ನಾರಾಯಣರಾವ್ ಕಾಳೆ. ಅವರ ನಿರ್ಧಾರದಿಂದ ಮರಾಠಿ ಸಿನಿಮಾದಲ್ಲಿ ಹೀರೋಯಿನ್ ಪಾತ್ರಕ್ಕೆ ಬೇಕಾದ ಭಾಷೆಯ ತಾಲೀಮನ್ನು ಸ್ವತಃ ಶಾಂತಾ ಬಾಯಿಯೇ ಮಾಡಿದರು. ಹೀಗೆ ಅಸಾಧ್ಯವಾದುದನ್ನು ಸಾಧ್ಯ ಮಾಡಿಕೊಳ್ಳುತ್ತಾ ತನ್ನ ಪ್ರತಿಭೆಯಿಂದ ಶಾಂತರಾಮರ ಮನ ಗೆದ್ದ ಶಾಂತಾ ಅವರು ‘ಮಾಝಾ ಮಲಗಾ’ ಚಿತ್ರದಲ್ಲಿ ಅಭಿನಯ ಮತ್ತು ಗಾಯನ ಎರಡನ್ನೂ ದಕ್ಕಿಸಿಕೊಂಡರು. ಈ ವೇಳೆಗೆ ಪ್ರಭಾತದಲ್ಲಿದ್ದ ನಾಯಕಿ ಶಾಂತಾ ಅಪ್ಟೆಯನ್ನು ಹೊರಹಾಕಲಾಗಿ ಶಾಂತಾಗೆ ‘ಮಾಣುಸ್’ ಚಿತ್ರದ ಅವಕಾಶ ಸಿಕ್ಕಿತ್ತು. ಈ ಚಿತ್ರ ಏಕಕಾಲಕ್ಕೆ ಹಿಂದಿಗೂ ಕೂಡ ಆದ್ಮಿ ಹೆಸರಿನಲ್ಲಿ ತೆರೆ ಕಂಡಿತ್ತು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಶಾಂತಾ ಈ ಒಂದೇ ಚಿತ್ರದಿಂದ ಹಿಂದಿ ಹಾಗೂ ಮರಾಠಿ ಮೂಲಕ ದೇಶವ್ಯಾಪಿ ಪ್ರಸಿದ್ಧಿಯನ್ನು ಪಡೆದರು. ಇವತ್ತಿಗೂ ಶಾಂತಾ ಹುಬಳೀಕರಳ ಹೆಸರು ಗಟ್ಟಿಯಾಗಿ ನಿಂತಿರುವುದು ಇದೇ ಚಿತ್ರದ ಯಶಸ್ಸಿನಿಂದ. ಹಾಗಾಗಿಯೇ ಶಾಂತಾ ತನ್ನ ಕೊನೆಯ ದಿನಗಳಲ್ಲಿ ಮಾಣುಸ್ ನಂತಹ ಇನ್ನೊಂದು ಚಿತ್ರವನ್ನು ತನಗೆ ದೇವರು ದಯಪಾಲಿಸಬೇಕಿತ್ತು ಎಂದು ಬೇಡುತ್ತಲೇ ಮತ್ತೊಮ್ಮೆ ಕಲಾವಿದೆಯಾಗಿಯೇ ನನಗೆ ಜನ್ಮ ನೀಡು ಎಂದು ಪರಮೇಶ್ವರನಲ್ಲಿ ನಿವೇದಿಸಿಕೊಳ್ಳುತ್ತಾಳೆ.

ಇತ್ತ ಸಿನಿ ಜೀವನದಲ್ಲಿ ಉತ್ತುಂಗ ಯಶಸ್ಸು ಪಡೆದಿದ್ದ ಶಾಂತಾ ಎಡವುದು ತನ್ನ ವೈಯಕ್ತಿಕ ಜೀವನದಲ್ಲಿ. ಆ ಕಾಲದಲ್ಲೆಲ್ಲಾ ಹೆಣ್ಣು ಮಕ್ಕಳಿಗೆ ಬಹು ಬೇಗ ವಿವಾಹ ಮಾಡುವ ಪದ್ಧತಿ ಇರುತ್ತದೆ. ಆದರೆ ಈಗ ಶಾಂತಾರ ವಿವಾಹ ಕುರಿತು ಚಿಂತಿಸುವವರು ಯಾರೂ ಇಲ್ಲವಾಗಿರುತ್ತಾರೆ. ಎಲ್ಲಾ ಹೀರೋಯಿನ್ ಗಳಿಗೂ ಅಣ್ಣನೋ ತಮ್ಮನೋ ಗಂಡನೋ ಅಪ್ಪನೋ ಆಧಾರವಾಗಿ ನಿಲ್ಲುವಂತೆ ಈಗಾಗಲೇ ಪಡೆದಂತಹ ಪ್ರಸಿದ್ಧಿ ಹಣ ಅಂತಸ್ತು ಎಲ್ಲವನ್ನು ಸಂಭಾಳಿಸಲು ತನಗೆ ಮದುವೆಯ ಅವಶ್ಯಕತೆಯಿದೆ ಎಂದುಕೊಂಡ ಶಾಂತಾ ಹೆಚ್ಚು ವಿಚಾರ ಮಾಡದೆ ಮದುವೆಯ ತೀರ್ಮಾನ ಮಾಡಿಬಿಡುತ್ತಾರೆ. ಎಂತ ಮೋಹದ ಬಲೆಯೊಳಗೂ ಬೀಳದ ಶಾಂತಾ ಈಗ ತಾನಾಗಿ ಬಲಿಯಾಗುತ್ತಾಳೆ. ಖಲೀಲ್ ಗಿಬ್ರಾನ್ ಒಂದು ಕಡೆ ಹೇಳುತ್ತಾನೆ “ಬಹಳ ಸಾರಿ ನಿಮ್ಮ ದುಃಖಗಳು ನೀವು ಆರಿಸಿಕೊಂಡ ನೋವುಗಳೆ ಆಗಿರುತ್ತವೆ”ಎಂದು.

ಅದರಂತೆ ಶಾಂತ ಕೂಡ ಇಲ್ಲಿ ತಾನು ಆರಿಸಿಕೊಂಡ ನೋವುಗಳಿಂದಲೇ ದುಃಖವನ್ನು ಅನುಭವಿಸುತ್ತಾಳೆ. ಪ್ರಭಾತದ ಎಲ್ಲರೂ ತಮ್ಮ ಬಿಡುವಿನ ವೇಳೆಯಲ್ಲಿ ಭೇಟಿ ನೀಡುತ್ತಿದ್ದ ಪುಣೆಯ ಡೆಕ್ಕನ್ ಎಂಪೋರಿಯಂ ಅಂಗಡಿಯ ಮಾಲೀಕರಾದ ಶ್ರೀ ಗೀತೆಯವರೊಂದಿಗೆ ಶಾಂತಾಗೆ ಗಾಢ ಪರಿಚಯವಾಗುತ್ತದೆ. ಒಮ್ಮೆ ಅವರಲ್ಲಿ ತಾನು ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದಾಗ ಗೀತೆಯವರು ಮಾಣುಸ್ ಚಿತ್ರದಲ್ಲಿನ ಮೈನಾಳ ಪಾತ್ರ ಬಹಳ ಹಿಡಿಸಿದ್ದಾಗಿ ಹೇಳಿ ಜೊತೆಗೆ ತಾನೇ ಮದುವೆಯಾಗುತ್ತೇನೆಂದು ಹೇಳುತ್ತಾನೆ. ಈ ವಿಷಯದಲ್ಲಿ ತಕ್ಷಣದ ನಿರ್ಧಾರವನ್ನು ತೆಗೆದುಕೊಂಡ ಶಾಂತಾ ಅದಾಗಲೇ ಎರಡು ಮದುವೆಯಾಗಿದ್ದ ತನಗಿಂತ 14 ವರ್ಷ ದೊಡ್ಡವರಾದ ಗಿತೆಯವರನ್ನು ಪೂರ್ವಾಪರ ವಿಚಾರಿಸದೆ 1939 ರಲ್ಲಿ ಮದುವೆಯಾಗುತ್ತಾರೆ. 

ಈ ವೇಳೆಗಾಗಲೇ ಮಾಣುಸ್ ನ ಯಶಸ್ಸಿನಿಂದಾಗಿ ಎಲ್ಲೆಡೆ ಶಾಂತಾಳ ಪ್ರಸಿದ್ಧಿ ಪಸರಿಸಿ ಫಿಲ್ಮ್ ಇಂಡಿಯಾದ ಬಾಬುರಾವ್ ಪಟೇಲರು ಶಾಂತಾರೊಂದಿಗೆ ಒಂದು ಸಂದರ್ಶನವನ್ನು ನಡೆಸಿ ಪ್ರಕಟಿಸುತ್ತಾರೆ. ಆ ಸಂದರ್ಶನದಲ್ಲಿ ಶಾಂತಾ ಕೊಟ್ಟ ಹೇಳಿಕೆಯು ಅವಳಿಗೆ ಶಾಪವಾಗಿ ಪರಿಣಮಿಸುತ್ತದೆ. ಗಂಡಾಳ್ವಿಕೆಯ ಸಮಾಜದಲ್ಲಿ ಮಾಣುಸ್ ಚಿತ್ರದ ಯಶಸ್ಸಿಗೆ ತಾನೂ ಕೂಡ ಕಾರಣವೆಂದು ಸಮರ್ಥಿಸಿಕೊಂಡದ್ದೇ ವಿ ಶಾಂತರಾಮರ ಅಸಹನೆಗೆ ಕಾರಣವಾಗುತ್ತದೆ. ಇದರ ಪ್ರಭಾವ ಶಾಂತಾಳೊಂದಿಗೆ ಐದು ವರ್ಷದ ಕರಾರಿದ್ದರೂ ಮುನ್ನವೇ ಅದನ್ನು ಮುರಿದು ಶಾಂತಳನ್ನು ಪ್ರಭಾತದಿಂದ ಹೊರಹಾಕಲಾಗುತ್ತದೆ. ಈ ಸಿನಿಮಾ ಜೀವನದ ಏರಿಳಿತಗಳು ರೊಟ್ಟಿ ಮಗುಚಿದಂತೆಯೇ. ಇಲ್ಲಿಯೂ ತನ್ನ ಬುದ್ಧಿವಂತಿಕೆಯಿಂದ ಎಲ್ಲರಿಗೂ ಪೇಡ ಹಂಚಿ ಮನೆಗೆ ಬಂದ ಶಾಂತಾ ತನ್ನ ಪತಿಗೆ ವಿಷಯ ತಿಳಿಸಿದಾಗ ಅವನ ಪ್ರತಿಕ್ರಿಯೆ ಮಾತ್ರ ಅವಳು ಊಹಿಸಲಾರದ್ದು. ಕೇವಲ ಶಾಂತಾಳ ಕೀರ್ತಿ ಪ್ರಸಿದ್ಧಿ ಹಣದಾಸೆಗಾಗಿಯೇ ಮದುವೆಯಾಗಿದ್ದ ಗಿತೆಯ ಒಂದೊಂದೇ ಬಣ್ಣಗಳು ಇಲ್ಲಿಂದ ಬಯಲಾಗುತ್ತಾ ಹೋಗುತ್ತವೆ. ಆದರೆ ಕಾಲ ಸರಿದು ಹೋಗಿರುತ್ತದೆ.

ಇದರಿಂದಲೇನೂ ಚಂಚಲಳಾಗದ ಶಾಂತಾಗೆ ಮುಂದೆ ಹಿಂದಿ ಚಿತ್ರರಂಗದಿಂದ ಅವಕಾಶ ಸಿಗುತ್ತದೆ. ಆದರೆ ಶಾಂತಾಳ ಜೀವನದಲ್ಲಿ ಪ್ರಭಾತ ಕೊಟ್ಟಂತಹ ಪ್ರಸಿದ್ಧಿ ಪಾಠಗಳು ಅವಳ ಜೀವನದ ಉತ್ಕೃಷ್ಟ ಅನುಭವವೆಂದೇ ಹೇಳಬಹುದು. ಪ್ರಭಾತದಿಂದ ಹೊರಬಂದ ಬೆನ್ನಲ್ಲೇ ಮುಂಬೈನಿಂದ ಬಂದ ವಿ ಎಂ ವ್ಯಾಸ ಅವರು ಭೇಟಿಯಾಗಿ ಹಿಂದಿ ಚಿತ್ರರಂಗಕ್ಕೆ ಆಹ್ವಾನಿಸುತ್ತಾರೆ. ಈ ವೇಳೆಗೆ ಮೊದಲ ಗರ್ಭಿಣಿಯಾಗಿದ್ದ ಶಾಂತಾ ಜೀವನ ಮಟ್ಟ ಸುಸ್ಥಿರವಾಗಿದ್ದರೂ ಕೂಡ ಹುಟ್ಟಿದ ಕೂಸು ತೀರಿದ್ದರಿಂದ ದುಃಖ ಅನುಭವಿಸುತ್ತಾಳೆ. ಪ್ರಪಂಚಾದ್ಯಂತ ಆಗ ಯುದ್ಧ ದೇಶ ವಿಭಜನೆ ನಡೆಯುತ್ತಿರುತ್ತದೆ. ಅಷ್ಟು ದಿನ ಯಾರೂ ಇಲ್ಲದಂತಿದ್ದ ಶಾಂತಾಗೆ ಈಗ ರಕ್ತ ಸಂಬಂಧಗಳೆಲ್ಲವೂ ನೆನಪಾಗುತ್ತವೆ. ಮತ್ತೆ ಬಿ ಎಂ ವ್ಯಾಸರ ಕರೆಗೆ ಓಗೊಟ್ಟು ತನ್ನ ದುಃಖದಿಂದ ಹೊರಬಂದು ಮುಂಬೈಗೆ ಹೋಗುತ್ತಾಳೆ.ಈ ಬಾರಿ ಗಿತೆ ಎಲ್ಲವನ್ನೂ ಬಿಟ್ಟು ಹೆಂಡತಿಯ ಬೆನ್ನು ಹತ್ತಿರುತ್ತಾನೆ. ಇವೆಲ್ಲದರಿಂದ ಒಳಗೊಳಗೆ ಇರಿಸು ಮುರಿಸುಗಳನ್ನು ಅನುಭವಿಸುತ್ತಾ ಶಾಂತ ಮಾಡಿಕೊಂಡ ತಪ್ಪಿಗೆ ಸಂಕಟಪಡುತ್ತಾ ಸಂಶಯ ಪ್ರವೃತ್ತಿಯ ಗಂಡನೊಂದಿಗೆ ಹೆಜ್ಜೆ ಹಾಕುತ್ತಾರೆ. ಕಟ್ಟಿಕೊಂಡ ಹೆಂಡತಿ ಮಕ್ಕಳಿಗೆ ಒಂದು ದಿನವೂ ಹೊಟ್ಟೆಗೆ ಹಿಟ್ಟು ಹಾಕದ ಮನುಷ್ಯತ್ವವಿಲ್ಲದ ಗಂಡ ಅವಳಿಗೆ ಜೋಡಿಯಾಗಿರುತ್ತಾನೆ. ಆದರೆ ಗಿತೆಗೆ ದುಡಿಯದೇ ಕುಂತು ಉಣ್ಣುವ ಐಷಾರಾಮಿ ಬದುಕು ಮೈ ಉಂಡಿರುತ್ತದೆ. ಅವನ ಈ ಚಟಕ್ಕೆ ಸೋದರ ಮಾವನ ಪ್ರಭಾವವೂ ಆಗಿರುತ್ತದೆ. ಹಲವು ಹೆಂಗಸರ ಸಹವಾಸವಿದ್ದ ಕನಿಷ್ಠ ಕಾಳಜಿಯೂ ಇಲ್ಲದ ಗಿತೆಯ ಮೇಲೆ ಶಾಂತಾಗೆ ತಿರಸ್ಕಾರ ಭಾವನೆ ಮೂಡಿರುತ್ತದೆ. 

ತನ್ನ ಯವ್ವನದ ಪ್ರಸಿದ್ಧಿಯ ವೇಳೆ ತನಗಾಗಿ ಬಂದ ಲೆಕ್ಕವಿಲ್ಲದಷ್ಟು ಪತ್ರಗಳ ಕಡೆಗೆ ಕಣ್ಣು ಹಾಯಿಸಲೂ ಸಮಯವಿಲ್ಲದಿದ್ದ ಶಾಂತಾಗೆ ಒಮ್ಮೆ ತನ್ನ ಶೂಟಿಂಗ್ ಸೆಟ್ನಲ್ಲಿ ಶಾಮರಾವ ಶಿರವಾಡ್ಕರ ಭೇಟಿಯಾಗುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿ ನಡು ನಡುವೆ ನುಸುಳಿ ಹೋಗುವ ಭಾವುಜಿಯ ಸ್ಮರಣೆಯೊಂದಿಗೆ ಈಗ ತನ್ನ ಪ್ರೇಮವನ್ನು ನಿವೇದಿಸಿಕೊಂಡ ಶಾಮರಾವ್ ಅವರ ಮೇಲೆ ಮನಸ್ಸಿನ ಒಂದು ಮೂಲೆಯಲ್ಲಿ ಒಲವು ಮೂಡುತ್ತದೆ. ಆದರೆ ವಿಧಿಯಾಟವೇ ಬೇರೆಯಾಗಿ ಕನಸು ಚಿಗುರಿದ ಬೆನ್ನಲ್ಲೇ ಕಮರಿ ಹೋಗುತ್ತದೆ. ತಾನು ಈಗ ಎರಡನೇ ಮಗುವಿಗೆ ಗರ್ಭಿಣಿಯಾಗಿರುವುದನ್ನು ತಿಳಿಸಿ ಅವರಿಂದ ದೂರವಾಗುತ್ತಾಳೆ. ಗಿತೆಯನ್ನು ಮದುವೆಯಾಗುವ ಮುನ್ನವೇ ಇದು ಘಟಿಸಿದ್ದರೆ ನನ್ನ ಜೀವನದ ಗತಿಯೇ ಬದಲಾಗುತ್ತಿತ್ತು ಎಂದು ಒಲಿದು ಬಂದ ಪ್ರೀತಿಯನ್ನು ತಿರಸ್ಕರಿಸಿ ಮಾತೃತ್ವವೇ ಶ್ರೇಷ್ಠವೆಂದು ಉಳಿಸಿಕೊಂಡ ಮಗನು ಮುಂದೆ ದೊಡ್ಡ ಕಂಟಕಪ್ರಾಯನಾಗುತ್ತಾನೆ. 

“ಒಬ್ಬನು ನನ್ನ ತಾರುಣ್ಯದಲ್ಲಿ ನನ್ನನ್ನು ಹಾಳು ಮಾಡಿದನು. ಇನ್ನೊಬ್ಬನು ನನ್ನ ವೃದ್ಧಾಪ್ಯದಲ್ಲಿ ” ಈ ಮಾತನ್ನು ಶಾಂತಾ ಬಹಳ ನೋವಿನಿಂದ ಹೇಳುತ್ತಾಳೆ. ಈ ಮಾತು ಅವಳ ಮಗ ಹಾಗೂ ಪತಿಯ ಕುರಿತದ್ದು. ಮೊದಲ ಮಗುವಿನ ಮರಣದ ನಂತರ ಎರಡನೆಯ ಮಗು ಪ್ರದೀಪನಿಗೆ 22 ಅಕ್ಟೋಬರ್ 1942ರಲ್ಲಿ ಜನ್ಮ ನೀಡುತ್ತಾಳೆ. ಅದೇ ವೇಳೆಗೆ ಪ್ರದೀಪ ಬಂಗಲೆಯನ್ನು ಕಟ್ಟಲು ಆರಂಭಿಸಿರುತ್ತಾಳೆ. 10 ಕೋಣೆಗಳುಳ್ಳ, 11 ಅಂಗಡಿಗಳುಳ್ಳ ದುಂಡಾಕಾರದ ಹಾಲ್ ಹೊಂದಿದ್ದ ಆ ಬಂಗಲೆ ದೊಡ್ಡ ಖರ್ಚಿನದ್ದು. ಆದರೆ ಆ ಬಂಗಲೆ ಕಟ್ಟುವಾಗ ಆದ ಖರ್ಚಿಗಿಂತ ಪತಿ ತೋರಿಸಿದ ಖರ್ಚೇ ದುಪ್ಪಟ್ಟಾಗಿತ್ತು. ಭವಿಷ್ಯಕ್ಕಾಗಿ ಒಂದು ಕಾಸನ್ನು ದುಡಿಯದ ಕೂಡಿಡದ ಗಂಡ ಖರ್ಚು ಮಾತ್ರ ನಿರಾಯಾಸವಾಗಿ ಮಾಡಿಬಿಡುತ್ತಿದ್ದ. ಕೂಡಿದ ಹೆಂಡತಿಯೆಂದೂ ನೋಡದೆ ಖರ್ಚಿನ ಮೇಲೆ ಖರ್ಚು, ಸಾಲದ ಮೇಲೆ ಸಾಲ ಮಾಡಿ ಶಾಂತಳ ತಲೆಯ ಮೇಲೆ ಚಪ್ಪಡಿಗಲ್ಲು ಹಾಕಿದ್ದ. ಗೀತೆ ಮಾಡಿದ್ದ ಅವ್ಯವಹಾರಗಳಿಂದ ಶಾಂತಾಳ ಸಂಪತ್ತೆಲ್ಲವೂ ಕರಗಿ ಹೋಗಿತ್ತು.

ಕಡೆಗೆ ಶಾಂತಾ ಜೀವನೋಪಾಯಕ್ಕಾಗಿ ಮನೆಯ ಬಾಡಿಗೆ, ತರಕಾರಿ ಹಣ್ಣುಗಳನ್ನು ಬೆಳೆದು ಮಾರಾಟ ಮಾಡುವುದು, ಕೋಳಿ ಸಾಕಣೆ ಮುಂತಾದವುಗಳನ್ನು ಅವಲಂಬಿಸಬೇಕಾಯಿತು. ಆದರೆ ಗಿತೆ ಮಾತ್ರ ತನಗೆ ಸಂಬಂಧವಿಲ್ಲದಂತೆ ಕುಂತು ತಿನ್ನುವುದೇ ಜೀವನವಾಯಿತು. ಇದೆಲ್ಲದರಿಂದ ಬೇಸತ್ತಿದ್ದ ಶಾಂತ ವಿಚ್ಛೇದನದ ಮನಸ್ಸು ಮಾಡಿದ್ದರೂ ಗಿತೆ ಅವಕಾಶ ಕೊಡಲಿಲ್ಲ. ದರೋಡೆಕೋರರ ಭಯದಿಂದ ಒಂದು ಕಬ್ಬಿಣದ ಟ್ರಂಕಿನೊಳಗೆ ಹಾಕಿ ಬ್ಯಾಂಕಿನಲ್ಲಿ ಮುಚ್ಚಿಟ್ಟಿದ್ದ ಎಲ್ಲ ಒಡವೆಗಳನ್ನು ಶಾಂತಾಳಿಗೆ ಗೊತ್ತಿಲ್ಲದಂತೆಯೇ ಮುಳುಗಿಸಿ ಬಿಟ್ಟಿದ್ದ. ಶತ್ರು ಬಾಗಿಲಲ್ಲೇ ಇದ್ದುಕೊಂಡು ಮನೆಯ ಹಡಗನ್ನೇ ಮುಳುಗಿಸಿದಾಗ ಕಂಡುಹಿಡಿಯುವುದಾದರೂ ಹೇಗೆ? ಎಷ್ಟೋ ವೇಳೆ ಕಣ್ಣಿಗೆ ನಿದ್ದೆ ಹತ್ತದೇ ಆತ್ಮಹತ್ಯೆಯ ಯೋಚನೆಗಳು ಸುಳಿದು ಬಂದರು ಅವುಗಳನ್ನೆಲ್ಲ ದೂರಸರಿಸಿ ಮೆಟ್ಟಿನಿಂತ ಕಾರಣ ಮಗನನ್ನಾದರೂ ದಡಮುಟ್ಟಿಸಬೇಕೆಂಬುದು. ಆದರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕಂದಿನಿಂದಲೇ ತನ್ನ ತಂದೆಯನ್ನು ಚಾಚು ತಪ್ಪದೆ ಪಾಲಿಸುತ್ತಿದ್ದ ಮಗ ಅಮ್ಮನನ್ನು ದ್ವೇಷಿಸುತ್ತಾ ತಂದೆಯನ್ನು ಅನುಸರಿಸುತ್ತಾ ಹೋದ.

ಕೊನೆಗೆ ತಾಯಿಯೇ ದೇವರಲ್ಲಿ, “ಇಂಥ ಮಗನನ್ನು ಯಾರಿಗೂ ಕೊಡಬೇಡ ತಂದೆ” ಎಂದು ಬೇಡುವಂತ ಸ್ಥಿತಿಯನ್ನು ಮಗ ಪ್ರದೀಪ ತಂದಿಟ್ಟ. ಸಾಲದ ಸುಳಿಯಲ್ಲಿ ಸಿಲುಕಿದ್ದ ಶಾಂತಾ ಕೊನೆಗೆ ತನ್ನ ಕನಸಿನ ಪ್ರದೀಪ ಬಂಗಲೆಯನ್ನು ಮಾರಬೇಕಾಯಿತು. 40ರ ವಯಸ್ಸಿನ ನಂತರ ಸಿನಿಮಾ ಅವಕಾಶಗಳು ಕಡಿಮೆಯಾಗಿ ತನಗಿದ್ದ ಗಾಯನದ ಪ್ರತಿಭೆಯಿಂದ ಜಲಸಾ ಕಾರ್ಯಕ್ರಮಗಳನ್ನು ನೀಡುತ್ತಾ ಹೋದಳು. ಅಲ್ಲಿ ಖರ್ಚು ಲಾಭ ಎರಡು ಒಂದೇ ಆದಾಗ ಅವುಗಳನ್ನು ನಿಲ್ಲಿಸಿ ಮರಾಠಿ ನಾಟಕಗಳತ್ತ ವಾಲಿದಳು. ನಂತರ ಡಬ್ಬಿಂಗ್ ಕೆಲಸ ಹಿಡಿದಳು. ತನಗಿದ್ದ ಎಲ್ಲ ಪ್ರತಿಭೆಗಳನ್ನು ಬಿಡುವಿಲ್ಲದೆ ದುಡಿಸಿಕೊಂಡ ಶಾಂತಾ ಜೀವನಕ್ಕಾಗಿ ಹೋರಾಟ ಮಾಡಿದಳು. ಮಗನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂದು ಒಳ್ಳೆಯ ಶಾಲೆಗೆ ಹಾಕಿದರೂ ಅವನು ಶಾಲೆ ಬಿಟ್ಟು ಬಂದು ಮನೆ ಸೇರಿದ. ಈ ಎಲ್ಲದರ ನಡುವೆ ಅವಳ ಜೀವನ ನಿಜಕ್ಕೂ ದುಸ್ತರವಾಗಿ ಹೋಗಿತ್ತು.

ಇದ್ದದ್ದೆಲ್ಲವನ್ನು ಕಳೆದುಕೊಂಡು ಮತ್ತೆ ಶೂನ್ಯದಿಂದ ಬದುಕು ಶುರು ಮಾಡುವಂತಾಗಿತ್ತು. ಸಿಂಧಿ ಮಕ್ಕಳಿಗೆ ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಕಲಿಸುವುದಕ್ಕಾಗಿ ಹೋದಳು. ಮತ್ತೆ ಕಷ್ಟಪಟ್ಟು ಒಂದು ಮನೆಯನ್ನು ಕೊಂಡಳು. ತನ್ನ ಗಂಡನಿಂದ ತಪ್ಪಿಸಿಕೊಳ್ಳಲು ಈ ಬಾರಿ ಮನೆಯನ್ನು ಮಗ ಪ್ರದೀಪನ ಹೆಸರಿಗೆ ಮಾಡಿದ್ದಳು. ಆದರೆ ತಂದೆಯ ಚಟ ಮಗನಿಗೂ ಹತ್ತಿ ಹುಡುಗಿಯರ ಸಹವಾಸ ಮೋಜು ಮಸ್ತಿಗಿಳಿದಿದ್ದ. ಮಗನನ್ನು ದಾರಿಗೆ ತರಲು ಮದುವೆ ಮಾಡಿದ ಶಾಂತಳಿಗೆ ಆ ಮನೆಯಿಂದಲೂ ಹೊರ ಹೋಗಬೇಕಾದ ಅನಿವಾರ್ಯತೆ ಉಂಟಾಗಿತ್ತು. ಮಗ ತಾಯಿಯ ಮೇಲೆ ಸಂಪೂರ್ಣ ಅವಲಂಬಿತನಾಗಿ ಒಂದು ಹೊತ್ತಿನ ಊಟದ ಖರ್ಚುನ್ನು ಲೆಕ್ಕ ಹಾಕುತ್ತಾ ಹೋದ. ಈಗ ಮನೆಯ ವಾತಾವರಣ ಸಂಪೂರ್ಣ ಹದಗೆಟ್ಟು ಆ ಮನೆಯಲ್ಲಿ ಅರೆಘಳಿಗೆ ಉಳಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ತನ್ನ ಸತ್ಸಂಗದ ಗೆಳತಿ ಓರ್ವಳ ಸಲಹೆಯ ಮೇರೆಗೆ ವಸಯಿ ಶ್ರದ್ದಾನಂದ ಆಶ್ರಮಕ್ಕೆ ಯಾರಿಗೂ ಹೇಳದಂತೆ ಹೊರಟು ಹೋದಳು. ಆದರೆ ಆಶ್ರಮ ವಾಸವೂ ಸುಖಕರವಾಗಿರಲಿಲ್ಲ.

ಸರ್ಕಾರದಿಂದ ಧನ ಸಹಾಯ ಪಡೆಯುತ್ತಿದ್ದರೂ ಅಲ್ಲಿ ಸಾಕಷ್ಟು ಗೋಲ್ ಮಾಲ್ಗಳು ನಡೆಯುತ್ತಿದ್ದವು. ಅಶಕ್ತರ ಪಾಲಿನ ತುತ್ತನ್ನು ಶಕ್ತರೇ ನುಂಗಿ ಹಾಕುತ್ತಿದ್ದರು. ಬೇರೆ ದಾರಿಯಿಲ್ಲದೆ ಹಸಿ ಬಿಸಿ ಊಟ ಮಾಡುತ್ತಾ, ಅಲ್ಲೇ ಸಿಕ್ಕಿದ ಒಂದಿಬ್ಬರು ಗೆಳತಿಯರ ಜೊತೆಗೆ ಕಷ್ಟ ಸುಖ ಹಂಚಿಕೊಳ್ಳುತ್ತಾ, ಆಶ್ರಮದಲ್ಲಿನ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಕಾಲ ದೂಡಿದರು. ಅಲ್ಲಿರುವಾಗ ಒಮ್ಮೆ ಟಿವಿಯಲ್ಲಿ ಮಾಣುಸ್ ಸಿನಿಮಾ ಪ್ರಸಾರವಾಗಿತ್ತು. ಆ ಚಿತ್ರವನ್ನು ವೀಕ್ಷಿಸುತ್ತಿದ್ದ ಆಶ್ರಮವಾಸಿಗಳು ಇಂತಹ ಶ್ರೇಷ್ಠ ನಟಿ ಏಕೆ ಮತ್ತೆ ಮುಂದಿನ ಯಾವ ಚಿತ್ರದಲ್ಲೂ ಅಭಿನಯಿಸಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಆಕೆ ಸತ್ತು ಬಹಳ ವರ್ಷಗಳಾದವು ಎಂದರು ಮತ್ತೊಬ್ಬರು. ಈಗ ಶಾಂತ ಎರಡನೆಯ ಬಾರಿ ಸತ್ತಿದ್ದಳು. ಆ ಮಾತನ್ನು ಕೇಳಿದ ಕೂಡಲೇ ಟಿವಿ ಹಾಲ್ ನಿಂದ ಹೊರ ನಡೆದ ಶಾಂತ ಅಲ್ಲಿ ಕೇವಲ ಶಾಂತ ಗಿತೆಯಾಗಿ ಜೀವಿಸುತ್ತಿದ್ದಳು. ಆಗ ತನ್ನ 40 ವರ್ಷ ಹಿಂದಿನ ನೆನಪೆಲ್ಲವೂ ಅಪ್ಪಳಿಸಿ ಬಂದು ಶಾಂತ ಹುಬಳೀಕರ ಎನ್ನುವ ಅಮೋಘ ತಾರೆಯ ಇಂದಿನ ಸ್ಥಿತಿಗೆ ಕಾರಣವೇನೆಂಬುದನ್ನು ತಾನೇ ವಿಮರ್ಶಿಸತೊಡಗಿದಳು.

12 ವರ್ಷದ ಅವಳ ಅಜ್ಞಾತವಾಸದ ನಂತರ ಮಗನಿಗೆ ವಿಳಾಸ ದೊರಕಿ ಅವರಿಂದ ಕರೆ ಬಂತು. ಹಳೆಯದೆಲ್ಲ ಮರೆತು ಎಲ್ಲವೂ ಸರಿ ಹೊಂದಿದರೆ ಮಗನ ಮನೆಯಲ್ಲಿ ಉಳಿಯುವ ಒಂದು ಸಣ್ಣ ಆಸೆ ಹೊತ್ತು ಹೋದ ಶಾಂತಾಗೆ ಮತ್ತೆ ನಿರಾಸೆಯಾಯಿತು. ಮನೆಗೆ ಮರಳಿದ ಬಳಿಕ ಭ್ರಮೆಗೊಂಡು ಹಾಸಿಗೆ ಹಿಡಿದಿದ್ದ ಗಿತೆಯು ಮರಣ ಹೊಂದಿ ಏಳು ವರ್ಷಗಳಾಗಿದ್ದು ತಿಳಿಯಿತು. ಆ ಸಂದರ್ಭದಲ್ಲಿ ನನ್ನ ಕೈಯಲ್ಲಿ ಕಾಯಿದೆಯ ಅಧಿಕಾರ ಇದ್ದಿದ್ದರೆ “ಮನೆಯಲ್ಲೇ ದರೋಡೆ ಮಾಡಿ ಪತ್ನಿಯನ್ನು ದರಿದ್ರಳಾಗಿ ಮಾಡಿ ರಸ್ತೆಗೆ ದೂಡಿದ ಈ ದರೋಡೆಕೋರನಿಗೆ ನಾನು ಆನೆ ಕಾಲಿನ ಬುಡಕ್ಕೆ ಕೆಡುವುತ್ತಿದ್ದೆ” ಎಂದು ಹೇಳುವ ಶಾಂತಾಳ ಈ ಮಾತು ಆಗಿನ ಸಮಾಜದ ಕೌಟುಂಬಿಕ ತುಳಿತಕ್ಕೊಳ್ಳಕ್ಕಾಗ ಹೆಣ್ಣು ಮಗಳೊಬ್ಬಳ ಪ್ರತಿಧ್ವನಿಯಾಗುತ್ತದೆ. 

ಪುನಃ ಆಶ್ರಮಕ್ಕೆ ಮರಳಿದ ಶಾಂತ ಒಂದು ದಿನ ಪತ್ರಿಕೆಯಲ್ಲಿದ್ದ ಸುದ್ದಿ ಓದಿ ಹಳೆಯ ಕಲಾವಿದರಿಗೆ ಸರ್ಕಾರದ ಸಾಂಸ್ಕೃತಿಕ ಖಾತೆಯ ಮೂಲಕ ಪೆನ್ಷನ್ ಪಡೆಯಲು ಅರ್ಜಿ ಹಾಕುವ ಮಾಹಿತಿ ಹುಡುಕಿ ಹೋದಾಗ ಅಲ್ಲಿಯವರೆಗೂ ಶಾಂತಾ ಗಿತೆಯಾಗಿದ್ದ ಅವಳು ಆಗ ಶಾಂತಾ ಹುಬಳೀಕರ ಆಗುವುದು ಅನಿವಾರ್ಯವಾಗುತ್ತದೆ. ಅದಕ್ಕೆ ಬೇಕಾದ ಎಲ್ಲ ಸಾಕ್ಷಿಗಳನ್ನು ಒದಗಿಸುತ್ತಾಳೆ. ನಂತರ ತನ್ನ ಮೊಮ್ಮಗನ ಮೂಲಕ ಲೋಕಸತ್ತಾ ಪತ್ರಿಕೆಯ ಶ್ರೀ ಮಾಧವರಾಯರ ಭೇಟಿಯಾಗುತ್ತದೆ. ಆ ಹೊತ್ತಿಗೆ ಹೀಗೆ ಕಣ್ಮರೆಯಾದ ಹಿರಿಯ ಜೀವಗಳ ಹುಡುಕಾಟದಲ್ಲಿದ್ದ ಮಾಧವರಾಯರ 12 ಡಿಸೆಂಬರ್ 1988 ರಂದು ಲೋಕಸತ್ತಾ ಪತ್ರಿಕೆಯ ‘ಚೌಫೇರ’ ಸಂಚಿಕೆಯಲ್ಲಿ’ “14 ವರ್ಷದ ವನವಾಸದ ನಂತರ ಪ್ರಕಟವಾಗಿದೆ ಒಂದು ದಂತಕಥೆ – ಶಾಂತ ಹುಬಳೀಕರ ಇವರ ಇಂದಿನ ಮಾತು” ಎಂಬ ಲೇಖನ ಪ್ರಕಟವಾಗುತ್ತದೆ. ಆ ಲೇಖನದಿಂದ ಶಿಥಿಲಾವಸ್ಥೆಯಲ್ಲಿದ್ದ ಶಾಂತ ಹುಬಳೀಕರ ನಿಜವಾಗಿಯೂ ಪುನರ್ಜನ್ಮ ಪಡೆಯುತ್ತಾಳೆ.

ಪ್ರೀತಿ ಪಾತ್ರರಿಂದ ಸಹಾಯಧನ ಪತ್ರಗಳು ಬರತೊಡಗುತ್ತವೆ. ಶಾಂತಳ ಮನಸ್ಸಿಗೆ ನಿಜವಾಗಿಯೂ ಸಂತೃಪ್ತ ಭಾವ ಮೂಡುವುದು ಆಗಲೇ. ಆದರೆ ಅವಳ ಆ ಮುಪ್ಪಿನ ವಯಸ್ಸಿನಲ್ಲಿಯೂ ಮತ್ತೆ ಅವಳ ಹಣದ ಮೇಲೆ ಎಲ್ಲರ ಕಣ್ಣು ಬೀಳುತ್ತದೆ. ಈ ಬಾರಿ ಆಶ್ರಮದ ಶ್ರೀ ತಾಟಕೆಯವರೂ ಕೂಡ ಶಾಂತಾಳ ಹಣಕ್ಕಾಗಿ ಬೆದರಿಸುತ್ತಾರೆ. ಮತ್ತೊಂದೆಡೆ ಮಗ ಹಣದ ಆಸೆಯಿಂದ ತಾಯಿಯನ್ನು ಮನೆಗೆ ಕರೆಯಲು ಬರುತ್ತಾನೆ. ಆಶ್ರಮ ತೊರೆದು ಮನೆಗೆ ಹೋದ ತಾಯಿಯ ಮೇಲೆ ಆಕ್ರಮಣ ಮಾಡಿ ಅವಳಿಂದ ಒಂದಷ್ಟು ಹಣವನ್ನು ಕಿತ್ತುಕೊಳ್ಳುತ್ತಾನೆ. ಇದೆಲ್ಲದರ ನಡುವೆ ಶಾಂತಾಗೆ ಸ್ಥಳೀಯ ಸಂಘ ಸಂಸ್ಥೆಗಳು ಸನ್ಮಾನಗಳನ್ನು ಮಾಡುತ್ತವೆ. ಜೀವನದುದ್ದಕ್ಕೂ ಶಾಂತಳ ಹಣ ಅಧಿಕಾರಕ್ಕಾಗಿ ಅವಳ ಹಿಂದೆ ಬಿದ್ದು ಅವಳನ್ನು ಕಾಡುವ ಮನುಷ್ಯರ ಬಗ್ಗೆ ಅಸಹ್ಯವೇ ಮೂಡುತ್ತದೆ. 75 ರ ವಯಸ್ಸಿನಲ್ಲೂ ತಾಯಿಯ ಚಾರಿತ್ರ್ಯವಧೆ ಮಾಡುವ ಮಗ ತಾಯಿಯೇ ಖರೀದಿಸಿದ್ದ ಮನೆಯ ಮೂಲೆಯಲ್ಲಿ ತಾಯಿಗೆ ಒಂದು ಸ್ಥಳವಿಲ್ಲದಂತೆ ಮಾಡಿ ಕೊನೆಯವರೆಗೂ ಆಶ್ರಮಗಳಲ್ಲೇ ಇರುವ ಸ್ಥಿತಿಗೆ ತರುತ್ತಾನೆ.

ಮಗನ ಮನೆಯಿಂದ ಹೊರಬಿದ್ದ ಶಾಂತಾ ಮದರ್ ಇಂಡಿಯಾ ಹೋಟೆಲ್, ಪರ್ಲ್ ಸೆಂಟರ್ ನಂತರ ಪುಣೆಯ ಮಹಿಳಾ ಮಂಡಲ ವೃದ್ಧಾಶ್ರಮ ಹೀಗೆ ಅಲೆದಾಡುತ್ತಾ ಜೀವನವನ್ನು ಮುಗಿಸುತ್ತಾರೆ. 17 ಜುಲೈ 1992ರಂದು 77ನೇ ವಯಸ್ಸಿನಲ್ಲಿ ತೀರಿಕೊಳ್ಳುವ ಶಾಂತ ಮತ್ತೆ ನಮ್ಮನ್ನೆಲ್ಲ ಕಾಡುವುದು ತನ್ನ ಶವವನ್ನು ಮಗ ಮುಟ್ಟಬಾರದೆನ್ನುವ ಕಾರಣಕ್ಕೆ ಆಸ್ಪತ್ರೆಗೆ ದೇಹದಾನ ಮಾಡುವ ಉಯಿಲು ಬರೆದಿಡುತ್ತಾಳೆ. ಪ್ರಭಾತದಂತಹ ಒಂದು ಶ್ರೇಷ್ಠ ಸಿನಿಮಾ ಕಂಪೆನಿಯಲ್ಲಿ ತನ್ನ ಪ್ರತಿಭೆಯಿಂದಲೇ ಮಿಂಚಿ ಬೆಳಗಿದ ಅಪ್ಪಟ ಹುಬ್ಬಳ್ಳಿಯ ಪ್ರತಿಭೆ ಶಾಂತ ಹುಬಳೀಕರ ಶ್ರೇಷ್ಠವೆನಿಸುವುದು ಕೇವಲ ಅವಳ ಕಲಾ ಸಾಧನೆಯಿಂದ ಮಾತ್ರವಲ್ಲ. ಅವಳ ದಿಟ್ಟ ನಿರ್ಧಾರಗಳು, ಎಂತಹ ಅಸಂಬದ್ಧ ಸಂದರ್ಭಗಳಲ್ಲೂ  ಬದುಕನ್ನು ಎದುರಿಸುವ ಪ್ರೀತಿಸುವ ಅವಳ ಕಲೆ, ಇದ್ದಷ್ಟು ಕಾಲ ಪರೋಪಕಾರಿಯಾಗಿಯೇ ಬದುಕುವ ಅವಳ ಮಾನವೀಯತೆ, ಇತರರಿಗೆ ಸ್ಪೂರ್ತಿಯಾಗುವ ಅವಳ ಮೋಹಗಳನ್ನು ತೊರೆದ ಬದುಕು ಇವೆಲ್ಲವೂ ನಮ್ಮೆದೆಯಾಳವನ್ನು ಕಲಕುತ್ತವೆ. ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಹಾಡಿ ಹೆಸರು ಮಾಡಿದ್ದ ಶಾಂತಾ ಕನ್ನಡದಲ್ಲಿ ನಟಿಸಿದ್ದ ಏಕೈಕ ಸಿನಿಮಾ ‘ಜೀವನ ನಾಟಕ’. ಕನ್ನಡಿಗಳಾದ ಶಾಂತಾ ದೇಶದಾದ್ಯಂತ ಬೆಳಗಿದ ಒಂದು ದೀಪವಾದರೂ ಸರ್ವಕಾಲಿಕ ಸತ್ಯದಂತೆ ದೀಪದ ಕೆಳಗಿನ ಕತ್ತಲಲ್ಲಿ ಉರಿದುರಿದು ಬೆಳಕನ್ನೇ ನೀಡಿದ ಆ ಜೀವ ಅಜರಾಮರ.

‍ಲೇಖಕರು Admin MM

3 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading