ಬಣ್ಣ ಬಳಿಯಬೇಕಿದೆ…
ರಶ್ಮಿ ಕಾಸರಗೋಡು
ಬಣ್ಣ ಬಳಿಯಬೇಕಿದೆ
ಕನ್ನಡಿಗಳಲಿ ತೋರುವ ಬಿಂಬಗಳಿಗೆ
ನಾನಾರೆಂಬ ಅರಿವನ್ನು ಮರೆ ಮಾಚಿರುವ
ಕಪ್ಪು ಬಿಳುಪಿನ ಹೃದಯಗಳಿಗೆ
ಸಮುದ್ರದ ಅಂಚಿನ ನೀಲಿಗೆರೆ
ಮನೆಯ ಮಾಡಿನ ಮೇಲೆ
ಮೂಡಿರುವ ಕಾಮನ ಬಿಲ್ಲು
ಅಪ್ಪನ ಬೆಳ್ಳಗಿನ ಧೋತಿ
ಅಮ್ಮನ ಕುಂಕುಮದ ಬಿಂದಿ
ಬಣ್ಣಗಳು ಕಾಡುತ್ತಿವೆ
ಕನಸು, ನೆನಪುಗಳಾಗಿ
ಹಗಲು ರಾತ್ರಿ

ನಂಜು ಕಳೆಯುವ ಅರಶಿನ
ಸುಟ್ಟ ಸುಣ್ಣದ ಗಟ್ಟಿ
ಕುರ್ದಿನೀರಲ್ಲಿ ಕರಗಿ ತನುಶುದ್ಧಿಗಾದರೆ
ಮನಶುದ್ಧಿಯಾಗಿಸಲು
ಬಣ್ಣವಿಲ್ಲದ ಕಣ್ಣೀರು!
ಬೆರಣಿ ಒಲೆಯ ಬಿಳಿ ಹೊಗೆಯಲ್ಲಿ
ಮೇಲೇರುತಿದೆ ನೋವಿನ ಕಾವು
ಒಡಲಾಳದ ಬೇಗುದಿಗೂ
ಉಂಟು ಕೆಂಡದಂತಾ ಬಣ್ಣ
ಆಯಸ್ಸಿನ ರೇಖೆಗಳು ಮಾಸಿರುವ
ಸುಕ್ಕುಗಟ್ಟಿದ ಸಣಕಲು ಕೈಗಳಲಿ
ಸಂಕೋಲೆಯ ಭಾರ
ಒಡೆದ ಪಾದದಲಿ ಚಿಮ್ಮುವ
ನೆತ್ತರಿನಲಿ ವಿಮುಕ್ತಿಯ
ನಿಟ್ಟುಸಿರು
ಏಳು ಬಣ್ಣಗಳನ್ನೂ ಬಾಚಿ ಕುಡಿಯಬೇಕು
ದಾಹ ನೀಗಿಸಲು
ಮುಖವಾಡ ಕಳಚಿ ಕಿತ್ತೆಸೆದು
ಮನ ಬಿಚ್ಚಿ ಗಹಗಹಿಸಿ ನಗಬೇಕು
ಧಮನಿ ಧಮನಿಯಲ್ಲಿನ ಕಿಚ್ಚು
ಹೊತ್ತಿ ಉರಿಯುವ ಮುನ್ನ
ದನಿಯೆತ್ತಿ ಕೂಗಿ ಬೆತ್ತಲಾಗಬೇಕು
ಬಣ್ಣ ಮಾಸಿದ ಬಟ್ಟೆಗಳಲಿ
ಬೆವರ ಘಮ, ರಕುತದ ಕಲೆ
ಕಪ್ಪು ಕಂಗಳಲಿ ಬಣ್ಣ ಬಣ್ಣದ ಕನಸು
ಸೆಟೆದು ನಿಲ್ಲಬೇಕು ಪ್ರಖರ ಬೆಳಕ ಮುಂದೆ
ಬೆನ್ನ ಹಿಂದಿನ ನೆರಳ ಕತ್ತಲು
ಗುಮ್ಮನಾಗುವ ವೇಳೆಯಲಿ
ಬೆಳಗಾಗಬೇಕು
ಬೆಳಕಾಗಬೇಕು
ಉಸಿರು ಸುಮ್ಮನಾಗುವ ಮುನ್ನ






rashmi,nanju kaleyuva arasina …………. tanushudhigaadare manashudhiyaagisalu bannavillada kanneeru saalugalu tumba ishtavaadavu.
ಕವನ ಮೆಚ್ಚುಗೆಯಾಯಿತು.
‘ಬೆಳಗಾಗಬೇಕು
ಬೆಳಕಾಗಬೇಕು
ಉಸಿರು ಸುಮ್ಮನಾಗುವ ಮುನ್ನ’ ಅರ್ಥವತ್ತಾದ ಸಾಲುಗಳು.
Nice effort. Keep it going..
manasige thattida kavana.