ನಾನು ಮತ್ತು ಬಿಡಿ ಪದ್ಯಗಳು

ಸಂಧ್ಯಾ ಐಯ್ಯಂಗಾರ್
1. ನಾನೆಂದೆ ನಿನ್ನ ಪದ್ಯಗಳನ್ನು
ಕದಿಯಲೆ
ಅವನೆಂದ ನಾ ನಿನ್ನನ್ನೇ
ಕದಿಯಲೆ

2. ಬರಿಯ ಮುಖವಾಡದ
ಜೀವನ ನಿನ್ನದು
ಬಟ್ಟೆ ಬದಲಾಯಿಸಿದಂತೆ
ಮುಖವಾಡ ಬದಲಾಯಿಸುತ್ತಿರುವೆ
ಅಬ್ಬಬ್ಬಾ ಇದರಲ್ಲಿ ನೀನು ನಿಸ್ಸೀಮನಾಗಿರಬೇಕು
ಮುಂದೊಂದು ದಿನ ನಿನ್ನ ಅಂತರಂಗದ
ಪರಚಯವಿಲ್ಲದಿದ್ದರೆ ಅಚ್ಚರಿಪಡೆಬೇಕಿಲ್ಲ
ಎಂದಾದರೊಂದು ದಿನ
ಈ ಎಲ್ಲಕ್ಕೂ ತೆರೆ ಬಿದ್ದೀತು
3.ಕಳೆದ ರಾತ್ರಿಯಲ್ಲಾ
ನಿನ್ನ ನೆನಪಲ್ಲಿ ಕಳೆದೂ
ನಡೆದಿದ್ದೆಲ್ಲಾ ಭ್ರಮೆಯೆನಿಸಿತು
ಬೆಳಗೆದ್ದು
ತೆರೆದ ಕಣ್ಣುಗಳು
ನಿದ್ದೆ ಹಾಳು ಮಾಡಿಕೊಂಡೆಯಲ್ಲಾ ಮಂಕೇ
ಎಂದು ನಕ್ಕು ಸುಮ್ಮನಾದವು
4. ಹೊತ್ತು ಗೊತ್ತಿಲ್ಲದೇ ನಿನ್ನ ನೆನೆಯುವೆ
ಕಾರಣ
ನೀನು ಬರೀಯ ನೆನಪು
5. ನೆನಪುಗಳ ಸರಕನ್ನು ಮೂಟೆ ಕಟ್ಟಿ
ಕಾಣದ ಹಾದಿಯಲ್ಲಿ ಎಸೆದಿರುವೆ
ಆಗೊಮ್ಮೆ ಈಗೊಮ್ಮೆ ನನ್ನ ಹುಡುಕಿ ಬಂದು
ಕೆಲವೊಮ್ಮೆ ಕಣ್ಣ ಒದ್ದೆಯಾಗಿಸಿ
ಕೆಲವೊಮ್ಮೆ ಕೆನ್ನೆ ಕೆಂಪಾಗಿಸಿ
ತನ್ನ ದಾರಿ ಹಿಡಿಯುವುದು
ಈ ಮಧ್ಯೆ ಕೆದಕಿದ ನೆನಪುಗಳೂ
ಸರಕನ್ನು ಸೇರಿವೆ
6. ನನ್ನ ಬಳಿಯಿರುವ ನಿನ್ನೆಲ್ಲ ನಿಶಾನೆಗಳನ್ನೂ
ವಾಪಸ್ಸು ಮಾಡಬೇಕೆಂದಿದ್ದೆ
ಈಗ ಈ ನೆನಪುಗಳು ಯಾರ ಸೊತ್ತು?
ನೆನಪುಗಳು ಇಂದಿಗೂ ಜೀವಂತ
ಆದರೆ ನಾನಿಲ್ಲ
7. ಮನಃಪೂರ್ವಕವಾಗಿ ಪ್ರೀತಿಸಿಯೂ
ಒಪ್ಪಲು ಅದೆಂಥ ಅಂಜಿಕೆ
ಸಾಕ್ಷಿಯಂತಿದ್ದ ಎಲ್ಲ ಕುರುಹುಗಳನ್ನು
ನಾಶ ಮಾಡುವುದರಲ್ಲಿ ಅದೇನೂ ಸೊಗಸು
ಈ ಎಲ್ಲ ಕೃತ್ಯಗಳನ್ನು ಮಾಡುವಾಗ
ಜೀವ ಹೋದಂತೆ ಭಾಸವಾದರೂ
ಎಲ್ಲವನ್ನು ಸಹಿಸಿದೆ
ಮಿತಿ ಮೀರಲು ಅದನ್ನು ಸಹಿಸಿದೆ
ಆಗೆಲ್ಲ ಕಾಡುತ್ತಿದ್ದ ಪ್ರಶ್ನೆಯೆಂದರೆ
ನೀ ಮೋಸವೋ, ನಿನ್ನ ಪ್ರೀತಿ ಮೋಸವೋ
ಉತ್ತರ ಸಿಗಲಿಲ್ಲ
ಇಂದಿಗೂ ಇದು ಯಕ್ಷ ಪ್ರಶ್ನೆ
ಆದರೆ ನೀನಿಲ್ಲ
ನನ್ನ ಪ್ರಶ್ನೆಗೆ ಅರ್ಥವಿಲ್ಲ
8. ನೀ
ಒಂಟಿ ಮಾಡಿ ತೆರಳಿ
ಅನೇಕ ವರ್ಷಗಳು
ಕಳೆದಿವೆ
ನಿನ್ನ ಬರುವಿಕೆಗಾಗಿ
ಕಾಯುತ್ತ, ಪ್ರೀತಿ
ಕೋಲ್ಮಿಂಚಿನಂತಾಗಿದೆ
ಇಂದು ನೀ ಮರಳಿದರೂ
ನಾ ಮರಳಲಾಗುವುದಿಲ್ಲ






Nice,,,
Thank you
ಇಂಚಿಂಚಾಗಿ ನೆನಪುಗಳ ಕಿತ್ತು ಬಿಸಾಕಿದಂತಿದೆ
ಬಟ್ಟೆ ಬದಲಾಯಿಸಿದಂತೆ
Thank you
Thank you
ಎನೆಂದು ಹೇಳುವದು…. ಒಂದಕ್ಕಿಂತ ಚೆಂದ ….
Awesome
DhanyavaadagaLu