ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್ – ಹಾಜಿ ಮುರಾದ್‌ ಕೊಲೆಯ ವಿಫಲ ಪ್ರಯತ್ನ..

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

20

ಹಾಜಿ ಮುರಾದ್ ಕೋಟೆಯಲ್ಲಿದ್ದ ಮೇಜರನ ಮನೆಯಲ್ಲಿ ಇರಲು ತೊಡಗಿ ಒಂದು ವಾರವಾಗಿತ್ತು. ಅವನು ತನ್ನ ಜೊತೆಗೆ ಇಬ್ಬರು ಮುರೀದ್‍ಗಳನ್ನು, ಖಾನೇಫಿ ಹಾಗೂ ಎಲ್ದಾರ್, ಮಾತ್ರ ಕರೆದುಕೊಂಡು ಬಂದಿದ್ದ. ಮೇರಿ ದ್ಮಿತ್ರಿಯೇವ್ನಾ ಕರಡಿ ಮೈಯ ಖಾನೇಫಿಯ ಜೊತೆಗೆ ಜಗಳವಾಡಿದ್ದರೂ ಅವನು ಅಡುಗೆ ಮನೆಗೆ ಬರಬಾರದೆಂದು ಹೊರದಬ್ಬಿದ್ದರೂ, ಅವಳು ಹಾಗಂದಾಗ ಅವನು ಆಕೆಯನ್ನು ಕೊಲ್ಲುವುದಕ್ಕೇ ಸಿದ್ಧನಾಗಿದ್ದರೂ, ಅವಳು ಮಾತ್ರ ಹಾಜಿ ಮುರಾದ್‍ನ ಬಗೆಗೆ ಗೌರವ, ಸಹಾನುಭೂತಿಗಳನ್ನು ಬೆಳೆಸಿಕೊಂಡಿದ್ದಳು. ಅವಳೀಗ ಹಾಜಿ ಮುರಾದ್‍ಗೆ ಊಟ ಬಡಿಸದೆ ಆ ಕೆಲಸವನ್ನು ಎಲ್ದಾರ್ಗೆ ವಹಿಸಿದ್ದಳು. ಮಿಕ್ಕಂತೆ ಅವನಿಗೆ ಉಪಚಾರ ಮಾಡುವುದಕ್ಕೆ ಸಿಕ್ಕ ಯಾವ ಅವಕಾಶವನ್ನೂ ಬಿಡುತ್ತಿರಲಿಲ್ಲ. ಅವನ ಕುಟುಂಬದ ವ್ಯವಹಾರಗಳ ಬಗ್ಗೆ ಅವಳಿಗ ಆಸಕ್ತಿ ಇತ್ತು. ಅವನಿಗೆ ಎಷ್ಟು ಹೆಂಡತಿಯರು, ಎಷ್ಟು ಮಕ್ಕಳು, ಅವರೆಲ್ಲರ ವಯಸ್ಸು ಎಷ್ಟೆಷ್ಟು ಅನ್ನುವುದೆಲ್ಲ ಅವಳಿಗೆ ತಿಳಿದಿತ್ತು. ಅವನನ್ನು ಭೇಟಿಯಾಗಲು ಪ್ರತಿ ಬಾರಿ ಗೂಢಚಾರನೊಬ್ಬ ಬಂದಾಗಲೂ ಹಾಜಿ ಮುರಾದ್‍ನ ಕುಟುಂಬದ ವ್ಯವಹಾರ ಹೇಗೆ ಬಗೆಹರಿಯಬಹುದು ಎಂದು ವಿಚಾರಿಸುತ್ತಿದ್ದಳು.

ಈ ಒಂದು ವಾರದ ಅವಧಿಯಲ್ಲಿ ಬಟ್ಲರ್ ಹಾಜಿ ಮುರಾದ್‍ನೊಂದಿಗೆ ಒಳ್ಳೆಯ ಗೆಳೆತನವನ್ನೇ ಬೆಳೆಸಿಕೊಂಡಿದ್ದ. ಒಮ್ಮೊಮ್ಮೆ ಹಾಜಿ ಮುರಾದ್ ಅವನ ಕೋಣೆಗೆ ಹೋದರೆ ಕೆಲವೊಮ್ಮೆ ಬಟ್ಲರ್ ಹಾಜಿ ಮುರಾದ್‍ನ ಕೋಣೆಗೆ ಬರುತ್ತಿದ್ದ. ಒಂದೊಂದು ಸಾರಿ ಅವರು ದುಭಾಷಿಯನ್ನಿಟ್ಟುಕೊಂಡು ಮಾತಾಡುತ್ತಿದ್ದರು, ಒಂದೊಂದು ಸಾರಿ ಸನ್ನೆಗಳನ್ನು ಮಾಡುತ್ತ, ಅದಕ್ಕಿಂತ ಮಿಗಿಲಾಗಿ ನಗುತ್ತ, ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಾಜಿ ಮುರಾದ್‍ ಕೂಡ ಬಟ್ಲರ್‍ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದ. ಎಲ್ದಾರ್‌ನ ವರ್ತನೆಯಿಂದ ಇದು ತಿಳಿಯುತ್ತಿತ್ತು. ಬಟ್ಲರ್ ಯಾವಾಗ ಹಾಜಿ ಮುರಾದ್‍ನ ಕೋಣೆಗೆ ಬಂದರೂ ಎಲ್ದಾರ್ ತನ್ನ ಹೊಳೆವ ಹಲ್ಲೆಲ್ಲ ಹಾಣುವ ಹಾಗೆ ನಗು ಬೀರಿ ಸ್ವಾಗತಿಸುತ್ತಿದ್ದ. ಅವನು ಕೂರಲು ದೊಡ್ಡ ಮೆತ್ತೆಯನ್ನು ತಂದು ಹಾಕುತ್ತಿದ್ದ, ಬಟ್ಲರ್ಕತ್ತಿಯನ್ನೇನಾದರೂ ತಂದಿದ್ದರೆ ಅದನ್ನು ತೆಗೆದುಕೊಂಡು ಅವನ ಭಾರ ಕಡಮೆ ಮಾಡುತ್ತಿದ್ದ.

ಹಾಜಿ ಮುರಾದ್‍ನ ವಾಗ್ದತ್ತ ಸಹೋದರ ಕರಡಿ ಮೈಯ ಖಾನೇಫಿಯ ಜೊತೆಗೂ ಬಟ್ಲರ್ ಸ್ನೇಹ ಬೆಳೆಸಿದ್ದ. ಖಾನೇಫಿಗೆ ಬೆಟ್ಟದ ಸೀಮೆಯ ಎಷ್ಟೋ ಹಾಡು ಬರುತ್ತಿದ್ದವು. ಚೆನ್ನಾಗಿ ಹಾಡುತ್ತಿದ್ದ. ಬಟ್ಲರ್‍ ಖುಷಿಪಡಲೆಂದು ಹಾಜಿ ಮುರಾದ್ ಎಷ್ಟೋ ಸಲ ಖಾನೇಫಿಗೆ ಹಾಡುವಂತೆ ಹೇಳುತ್ತಿದ್ದ. ತನಗೆ ಅತ್ಯುತ್ತಮ ಅನಿಸಿದ ಹಾಡುಗಳನ್ನು ಹೇಳಿಸುತ್ತಿದ್ದ. ತೀವ್ರ ನಿಷಾದದಲ್ಲಿ, ಬಹಳ ಸ್ಪಷ್ಟವಾಗಿ ಭಾವಪೂರ್ಣವಾಗಿ ಹಾಡುತ್ತಿದ್ದ ಖಾನೇಫಿ. ಹಾಜಿ ಮುರಾದ್‍ಗೆ ಇಷ್ಟವಾಗಿದ್ದ ಒಂದು ಹಾಡಿನಲ್ಲಿದ್ದ ಗಂಭೀರ ವಿಷಾದದ ದನಿ ಬಟ್ಲರ್‌ಗೂ ಇಷ್ಟವಾಗಿ ಆ ಹಾಡನ್ನು ತರ್ಜುಮೆ ಮಾಡುವಂತೆ ದುಭಾಷಿಯನ್ನು ಕೇಳಿದ. ಆ ಹಾಡು ಖಾನೇಫಿಗೂ ಹಾಜಿ ಮುರಾದ್‍ಗೂ ಇದ್ದ ತಲೆಮಾರುಗಳ ದ್ವೇಷವನ್ನು ಕುರಿತದ್ದು. ಹಾಡು ಹೀಗಿತ್ತು:

ನನ್ನ ಗೋರಿಯ ಮೇಲೆ ಮಣ್ಣು ಒಣಗುವುದು
ಅಮ್ಮಾ ನನ್ನಮ್ಮಾ
ನೀನೂ ನನ್ನ ಮರೆಯುವೆ
ಹುಲ್ಲು ಬೆಳೆಯುವುದು ಗೋರಿಯ ಮೇಲೆ
ಅಪ್ಪಾ ನನ್ನಪ್ಪಾ
ನಾನು ಸತ್ತದ್ದು ನಿನಗೇನೂ ದುಃಖವಿಲ್ಲ ಅಪ್ಪಾ
ನಿನ್ನ ಕಣ್ಣೀರು ಒಣಗಿದ ಮೇಲೆ
ಅಕ್ಕಾ ನನ್ನಕ್ಕಾ
ದುಃಖ ನಿನ್ನ ಕಾಡುವುದಿಲ್ಲ ಅಕ್ಕಾ
ಅಣ್ಣ ನನ್ನಣ್ಣ ಮಾತ್ರ ಮರೆಯುವುದಿಲ್ಲ ನನಗಾದ ಅನ್ಯಾಯ
ಮರೆಯುವುದಿಲ್ಲ ನನ್ನ ಸೇಡು.
ಗೊತ್ತು ನನಗೆ ತಮ್ಮಾ ನೀನು ಅಳುತ್ತಲೇ ಇರುತ್ತೀ
ಗೋರಿಯಲ್ಲಿ ನನ್ನ ಪಕ್ಕ ಮಲಗುವ ತನಕಾ
ಸಾವನ್ನು ತರುವ ಬಂದೂಕಿನ ಸುಡು ಸುಡುವ ಗುಂಡೇ
ನೀನು ನನ್ನ ನೆಚ್ಚಿನ ಬಂಟನಾಗಿದ್ದೆ ಅಲ್ಲವೇ
ಕುದುರೆಗಳು ತುಳಿದಾಡಿ ಧೂಳೆಬ್ಬಿಸಿದ ಮಣ್ಣು
ಈಗ ನನ್ನ ಗೋರಿಯ ಮುಚ್ಚಿದೆ
ತಣ್ಣಗೆ ಕೊರೆಯುವ ಓ ಸಾವೇ
ನಾನೊಮ್ಮೆ ನಿನ್ನ ಪ್ರಭುವಾಗಿದ್ದೆ
ನಿನ್ನ ದಣಿಯಾಗಿದ್ದೆ ನಾನು
ನನ್ನ ದೇಹ ಮಣ್ಣಿಗಿಳಿದಿದೆ
ನನ್ನಾ ಆತ್ತಮಾ ಆಕಾಶಕ್ಕೇ ಏರಿದೇ

ಈ ಹಾಡನ್ನು ಹಾಜಿ ಮುರಾದ್ ಯಾವಾಗಲೂ ಕಣ್ಣು ಮುಚ್ಚಿ ಆಲಿಸುತ್ತಿದ್ದ. ಬಹಳ ಹೊತ್ತು ಕಿವಿ ತುಂಬಿರುತ್ತಿದ್ದ ಕೊನೆಯ ಸಾಲು ನಿಧಾನವಾಗಿ ಮುಗಿದಾಗ ಅವನು ಯಾವಾಗಲೂ ರಶಿಯನ್ ಭಾಷೆಯಲ್ಲಿ, ‘ಒಳ್ಳೆಯ ಹಾಡು, ವಿವೇಕದ ಹಾಡು!’ ಅನ್ನುತ್ತಿದ್ದ. ಹಾಜಿ ಮುರಾದ್ ಬಂದ ಮೇಲೆ, ಅವನ ಮತ್ತು ಮುರೀದ್‍ಗಳ ಆತ್ಮೀಯತೆ ಬೆಳೆದ ಹಾಗೆ ಗುಡ್ಡಗಾಡಿನ ಕವಿತೆಯ ಚೈತನ್ಯ ಬಟ್ಲರನನ್ನು ತೀವ್ರವಾಗಿ ಸೆಳೆಯಿತು. ಅವನು ಬೆಶ್ಮೆಟ್, ಸರ್ಕಾಸಿಯನ್ ಕೋಟು, ಲೆಗಿಂಗ್‍ಗಳನ್ನು ಸಂಪಾದಿಸಿಕೊಂಡು ತಾನೂ ಗುಡ್ಡಗಾಡಿವನು ಎಂದು ಕಲ್ಪನೆ ಮಾಡಿಕೊಳ್ಳುವುದಕ್ಕೆ ಶುರು ಮಾಡಿದ್ದ. ಹಾಜಿ ಮುರಾದ್ ಹೊರಡುವ ದಿನ ಮೇಜರ್ ಪುಟ್ಟದೊಂದು ಬೀಳ್ಕೊಡುಗೆಯನ್ನು ವ್ಯವಸ್ಥೆ ಮಾಡಿ ಕೆಲವು ಅಧಿಕಾರಿಗಳನ್ನು ಆಹ್ವಾನಿಸಿದ್ದ. ಮಾರ್ಯಾ ದ್ಮಿತ್ರಿಯೇವ್ನಾ ಚಹಾ ಬಗ್ಗಿಸಿಕೊಡುತ್ತಿದ್ದ ಮೇಜಿನ ಹತ್ತಿರ ಕೆಲವರು, ವೋಡ್ಕಾ, ಚಿಖಿರ್, ಕುರುಕುಲು ತಿನಿಸುಗಳಿದ್ದ ಮೇಜಿನ ಬಳಿ ಕೆಲವರು ಇದ್ದರು. ಪ್ರಯಾಣಕ್ಕೆ ತಕ್ಕ ದಿರಿಸು ತೊಟ್ಟು ಹಾಜಿ ಮುರಾದ್ ಕುಂಟು ಕಾಲಿನಲ್ಲಿ ಸದ್ದಿಲ್ಲದೆ ದೊಡ್ಡ ಹೆಜ್ಜೆ ಹಾಕಿಕೊಂಡು ಕೋಣೆಯೊಳಕ್ಕೆ ಬಂದ. ಎಲ್ಲರೂ ಎದ್ದು ನಿಂತು ಅವನ ಕೈ ಕುಲುಕಿದರು. ದಿವಾನ್‍ದ ಮೇಲೆ ಕೂರುವಂತೆ ಮೇಜರ್ ಆಹ್ವಾನಿಸಿದ. ಹಾಜಿ ಮುರಾದ್ ಕಿಟಕಿಯ ಪಕ್ಕದ ಕುರ್ಚಿಯ ಮೇಲೆ ಕುಳಿತ. ಅವನು ಕೋಣೆಗೆ ಕಾಲಿಟ್ಟ ಕ್ಷಣ ಆವರಿಸಿಕೊಂಡ ನಿಶ್ಶಬ್ದದಿಂದ ಕಿಂಚಿತ್ತೂ ಸಂಕೋಚಪಡದೆ ಒಬ್ಬೊಬ್ಬರ ಮುಖವನ್ನೂ ಗಮನಿಸಿ ನೋಡಿದ. ಚಹಾದ ಸಮೋವರ್, ಮತ್ತು ತಿನಿಸುಗಳಿದ್ದ ಮೇಜನ್ನು ಉದಾಸೀನವಾಗಿ ದಿಟ್ಟಿಸಿದ. ಹಾಜಿ ಮುರಾದ್‍ನನ್ನು ಇದೇ ಮೊದಲ ಬಾರಿ ನೋಡುತ್ತಿದ್ದ ಪೆಟ್ರೋವ್‌ಸ್ಕಿ ದುಭಾಷಿಯ ಮೂಲಕ ‘ಟಿಫ್ಲಿಸ್‌ ಇಷ್ಟವಾಯಿತೇ?’ ಎಂಬ ಪ್ರಶ್ನೆಯನ್ನು ಕೇಳಿದ.

‘ಅಯಾ!’ ಎಂದ ಹಾಜಿ ಮುರಾದ್.
‘ಹೌದು ಅನ್ನುತ್ತಿದ್ದಾನೆ,’ ಎಂದ ದುಭಾಷಿ.
‘ಅವನಿಗೆ ಏನು ಇಷ್ಟವಾಯಿತಂತೆ ಇಲ್ಲಿ?’
ಹಾಜಿ ಮುರಾದ್ ಏನೋ ಹೇಳಿದ.
‘ಎಲ್ಲಕ್ಕಿಂತ ನಮ್ಮ ಥಿಯೇಟರು ಅವನಿಗೆ ಬಹಳ ಇಷ್ಟವಾಯಿತಂತೆ.’
‘ಕಮಾಂಡರ್ ಇನ್ ಛೀಫ್ ಏರ್ಪಡಿಸಿದ್ದ ಬಾಲ್ ಡಾನ್ಸು ಏನನ್ನಿಸಿತಂತೆ?’
ಹಾಜಿ ಮುರಾದ್ ಹುಬ್ಬು ಗಂಟಿಕ್ಕಿದ. ‘ಒಂದೊಂದು ದೇಶದಲ್ಲಿ ಒಂದೊಂದು ಪದ್ಧತಿ. ನಮ್ಮಲ್ಲಿ ಹೆಂಗಸು ಹೀಗೆ ಉಡುಪು ತೊಡುವುದಿಲ್ಲ,’ ಅನ್ನುತ್ತ ಮಾರ್ಯಾಳನ್ನು ನೋಡಿದ.
‘ಅವನಿಗೆ ಇಷ್ಟವಾಗಲಿಲ್ಲವಂತಾ?’
‘ನಮ್ಮಲ್ಲೊಂದು ಗಾದೆ ಇದೆ—ಕತ್ತೆಗೆ ನಾಯಿ ಮಾಂಸ ಕೊಟ್ಟಿತು, ನಾಯಿಗೆ ಕತ್ತೆ ಹುಲ್ಲು ಕೊಟ್ಟಿತು ಅಂತ,’ ಎಂದು ದುಭಾಷಿಗೆ ಹೇಳಿದ ಹಾಜಿ ‘ನಾಯಿ, ಕತ್ತೆ ಎರಡೂ ಹಸಿದುಕೊಂಡೇ ಇರಬೇಕಾಯಿತು,’ ಅನ್ನುತ್ತ ಮುರಾದ್ ನಕ್ಕ. ಅವರವರದ ದೇಶದ ಸಂಪ್ರದಾಯ ಅವರಿಗೆ ಒಳ್ಳೆಯದು ಅನಿಸತ್ತೆ.’
ಸಂಭಾಷಣೆ ಮುಂದುವರೆಯಲಿಲ್ಲ. ಕೆಲವು ಆಫಿಸರುಗಳು ಚಹಾ ತೆಗೆದುಕೊಂಡರು, ಕೆಲವರು ತಿನಿಸು. ಹಾಜಿ ಮುರಾದ್ ತನಗೆ ನೀಡಿದ ಚಹಾ ಬಟ್ಟಲನ್ನು ತೆಗೆದುಕೊಂಡು ಪಕ್ಕದಲ್ಲಿ ಇರಿಸಿಕೊಂಡ.
‘ಇನ್ನೇನಾದರೂ ಬೇಕಾ? ಕ್ರೀಮು? ಬನ್ನು?’ ಮಾರ್ಯಾ ಕೇಳಿದಳು.
ಹಾಜಿ ಮುರಾದ್ ತಲೆ ಬಾಗಿಸಿದ.

‘ಸರಿ, ಗುಡ್ ಬೈ ಹೇಳುವ ಹೊತ್ತು!’ ಅನ್ನುತ್ತ ಬಟ್ಲರ್ ಹಾಜಿ ಮುರಾದ್‍ನ ಮೊಳಕಾಲು ಮುಟ್ಟಿ, ‘ಮತ್ತೆ ನಮ್ಮ ಭೇಟಿ ಯಾವಾಗ?’ ಎಂದು ಕೇಳಿದ.
‘ಗುಡ್‍ ಬೈ, ಗುಡ್ ಬೈ! ಕುನಾಕ್, ಮಿತ್ರಾ… ಗಟ್ಟೀ… ಹೊತ್ತು ಆಯ್ದಾ ಹೋಗಬೇಕು!’ ಎಂದು ಮುರುಕಲು ರಶಿಯನ್‍ನಲ್ಲಿ ಹೇಳುತ್ತ ತಾನು ಹೋಗಬೇಕಾಧ ದಿಕ್ಕನ್ನು ತಲೆ ಅತ್ತ ವಾಲಿಸಿ ತೋರಿಸಿದ.
ಎಲ್ದಾರ್ ಬಾಗಿಲಲ್ಲಿ ಕಾಣಿಸಿದ. ಅವನ ಭುಜದ ಮೇಲೆ ದೊಡ್ಡ ಬಿಳಿಯದೇನೋ ವಸ್ತು ಇತ್ತು, ಕೈಯಲ್ಲಿ ಕತ್ತಿ ಇತ್ತು. ಹತ್ತಿರ ಬರುವಂತೆ ಹಾಜಿ ಮುರಾದ್ ಸನ್ನೆ ಮಾಡಿದ. ಎಲ್ದಾರ್ ದೊಡ್ಡ ಹೆಜ್ಜೆ ಹಾಕಿಕೊಂಡು ಒಳಗೆ ಬಂದ. ಅವನ ಭುಜದ ಮೇಲಿದ್ದ ಬಿಳಿಯ ಬುರ್ಖಾ ವನ್ನು ತೆಗೆದುಕೊಂಡು ಮಡಿಸಿ, ಕೈಯಲ್ಲಿ ಹಿಡಿದು ದುಭಾಷಿಗೆ ಏನೋ ಹೇಳಿ, ಬುರ್ಕಾವನ್ನು ಮಾರ್ಯಾಳಿಗೆ ಕೊಟ್ಟ.
‘ನೀವು ಇದನ್ನು ಮೆಚ್ಚಿದ್ದಿರಂತೆ, ಅದಕ್ಕೇ ಇದನ್ನು ಒಪ್ಪಿಸಿಕೊಳ್ಳಬೇಕು,’ ಅಂದ.
‘ಅಯ್ಯೋ, ಯಾಕೆ?’ ಅನ್ನುತ್ತ ಮಾರ್ಯಾ ನಾಚಿದಳು.
‘ತಗೊಳ್ಳಬೇಕು, ಅದು ಆದತ್, ನಮ್ಮ ಸಂಪ್ರದಾಯ,’ ಅಂದ ಹಾಜಿ ಮುರಾದ್.
ಬುರ್ಕಾ ತೆಗೆದುಕೊಳ್ಳುತ್ತಾ, ‘ಥ್ಯಾಂಕ್‍ ಯೂ, ನಿಮ್ಮ ಮಗನನ್ನು ಕಾಪಾಡುವ ಶಕ್ತಿ ಕೊಡಲಿ ದೇವರು, ಉಲಾನ್ ಯಕ್ಸೀ, ಹುಡುಗ ಗಟ್ಟಿಗ, ‘ ಎಂದು ಹೇಳಿ, ದುಭಾಷಿಯತ್ತ ತಿರುಗಿ ಅವನ ಮಗನನ್ನು ಬಿಡಿಸುವುದಕ್ಕೆ ದೇವರು ಸಹಾಯಮಾಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳು ಅಂದಳು ಮರ್ಯಾ.
ಹಾಜಿ ಮುರಾದ್ ಮರ್ಯಾಳತ್ತ ನೋಡುತ್ತ ಒಪ್ಪಿದೆ ಅನ್ನುವ ಹಾಗೆ ತಲೆಯಾಡಿಸಿದ. ಆಮೇಲೆ ಎಲ್ದಾರ್ನ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಅದನ್ನು ಮೇಜರ್‍ ಕೈಗೆ ಕೊಟ್ಟ. ಮೇಜರ್ ಅದನ್ನು ತೆಗೆದುಕೊಂಡು, ‘ನನ್ನ ಚೆಸ್ನಟ್ ಕುದುರೆಯನ್ನು ತೆಗೆದುಕೊಂಡು ಹೋಗುವುದಕ್ಕೆ ಹೇಳು. ಅವನಿಗೆ ಕೊಡುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ, ಎಂದು ದುಭಾಷಿಗೆ ಹೇಳಿದ.

ನನಗೆ ಏನೂ ಬೇಡ ಅನ್ನುವ ಹಾಗೆ ಕೈಯಾಡಿಸಿದ ಹಾಜಿ ಮುರಾದ್ ಕುದುರೆ ಬೇಡ ತನಗೆ ಎಂದು ಹೇಳಿದ. ಆಮೇಲೆ ಮೊದಲು ಬೆಟ್ಟಸಾಲಿನ ಕಡೆಗೆ ಕೈ ತೋರಿ ಆಮೇಲೆ ಎದೆ ಮುಟ್ಟಿಕೊಂಡು ಹೊರಟ. ಎಲ್ಲರೂ ಅವನ ಜೊತೆಯಲ್ಲಿ ಬಾಗಿಲವರೆಗೂ ಹೋದರು. ಮನೆಯ ಒಳಗೇ ಉಳಿದ ಆಫೀಸರುಗಳು ಕತ್ತಿಯನ್ನು ಒರೆಯಿಂದ ಎಳೆದು ನೋಡಿ, ಅದು ನಿಜವಾದ ಗ್ರೂಡಾ ಕತ್ತಿ ಎಂದು ತೀರ್ಮಾನಿದರು.

ಹಾಜಿ ಮುರಾದ್‍ನೊಂದಿಗೆ ಬಟ್ಲರ್ ಕೂಡ ತಲೆಬಾಗಿಲವರೆಗೆ ಹೋದ. ಆಗ ಅನಿರೀಕ್ಷಿತವಾದೊಂದು ಘಟನೆ ನಡೆದು ಹಾಜಿ ಮುರಾದ್ ಸೂಕ್ಷ್ಮದೃಷ್ಟಿಯವನು, ತಕ್ಷಣ ನಿರ್ಧಾರ ತೆಗೆದುಕೊಳ್ಳುವವನು, ಚುರಾಕಾಗಿರುವವನು ಆಗಿರದಿದ್ದರೆ ಅವನ ಪ್ರಾಣವೇ ಹೋಗಬಹುದಾಗಿತ್ತು. ಕುಮುಕ್‌ ಔಲ್ನ ನಿವಾಸಿಗಳಾದ ತಾಶ್-ಕಿಚುಗಳು ರಶಿಯನ್ನರ ಜೊತೆಗೆ ಸ್ನೇಹವಿಟ್ಟುಕೊಂಡಿದ್ದರು, ಹಾಜಿ ಮುರಾದ್‍ನನ್ನು ಬಹಳ ಗೌರವಿಸುತ್ತಿದ್ದರು. ಸುಪ್ರಸಿದ್ಧ ನಾಯಿಬ್‌ನನ್ನು ನೋಡುವುದಕ್ಕೆಂದೆ ಎಷ್ಟೋ ಸಲ ಕೋಟೆಗೆ ಬಂದಿದ್ದರು. ಮೂರು ದಿನಗಳ ಹಿಂದೆ ಅವನ ಬಳಿಗೆ ಸುದ್ದಿವಾಹಕನನ್ನು ಕಳಿಸಿ ಆತ ಶುಕ್ರವಾರದ ದಿನ ತಮ್ಮ ಮಸೀದಿಗೆ ಬರಬೇಕೆಂದು ಕೋರಿದ್ದರು. ಆದರೆ ತಾಶ್-ಕಿಚುನಲ್ಲಿ ವಾಸವಾಗಿದ್ದ ಕುಮುಖ್ ಪ್ರಿನ್ಸ್‌ಗಳು ಹಾಜಿ ಮುರಾದ್‍ನನ್ನು ದ್ವೇಷಿಸುತಿದ್ದರು. ಯಾಕೆಂದರೆ ಅವರ ನಡುವೆ ತಲಾಂತರಗಳ ದ್ವೇಷವಿತ್ತು. ಈ ಆಹ್ವಾನದ ಸುದ್ದಿ ಕೇಳಿ ‘ಅವನು ನಮ್ಮ ಮಸೀದಿಗೆ ಬರುವುದಕ್ಕೆ ಬಿಡುವುದಿಲ್ಲ,’ ಎಂದು ಘೋಷಿಸಿದ್ದರು. ಜನ ಕೆರಳಿದರು. ಪ್ರಿನ್ಸ್ ಬೆಂಬಲಿಗರಿಗೂ ಜನಕ್ಕೂ ಹೊಡೆದಾಟ ನಡೆಯಿತು. ಬೆಟ್ಟದ ಜನರನ್ನು ರಶಿಯನ್ ಅಧಿಕಾರಿಗಳು ಸಮಾಧಾನ ಮಾಡಿದರು, ಹಾಜಿ ಮುರಾದ್‍ ಮಸೀದಿಗೆ ಹೋಗಬಾರದೆಂದು ಹೇಳಿಕಳಿಸಿದರು. ಹಾಜಿ ಮುರಾದ್ ಹೋಗಲಿಲ್ಲ, ವಿಷಯ ಅಲ್ಲಿಗೆ ಮುಗಿಯಿತು ಅಂದುಕೊಂಡರು ಎಲ್ಲರೂ.

ಆದರೆ, ಹೊರಡುವ ಗಳಿಗೆಯಲ್ಲಿ ಅವನು ವೆರಾಂಡಕ್ಕ ಬಂದಾಗ, ಕುದುರೆಗಳು ಕಾಯುತ್ತಿರುವಾಗ, ಕುಮುಖ್‌ ಪ್ರಿನ್ಸ್‌ಗಳಲ್ಲಿ ಒಬ್ಬನಾದ ಅರ್ಸ್ಲಿಯನ್‌ ಖಾನ್ ಅಲ್ಲಿಗೆ ಬಂದ. ಬಟ್ಲರ್‌ಗೂ ಮೇಜರ್‌ಗೂ ಅವನ ಪರಿಚಯವಿತ್ತು. ಹಾಜಿ ಮುರಾದ್ ಕಣ್ಣಿಗೆ ಬೀಳುತಿದ್ದ ಹಾಗೇ ಅವನು ಸೊಂಟದ ಪಟ್ಟಿಯಿಂದ ಪಿಸ್ತೂಲು ತೆಗೆದು ಗುರಿಯಿಟ್ಟ. ಅವನು ಗುಂಡು ಹಾರಿಸುವ ಮೊದಲೇ ಹಾಜಿ ಮುರಾದ್, ಕಾಲು ಕುಂಟಾಗಿದ್ದರೂ, ಬೆಕ್ಕಿನ ಹಾಗೆ ಚುರುಕಾಗಿ ವರಾಂಡದಿಂದಿಳಿದು ಅರ್ಸ್ಲಿಯನ್‌ ಖಾನ್‌ನ ಮೇಲೆ ಏರಿ ಹೋದ. ಗುಂಡು ಹಾರಿದರೂ ಗುರಿ ತಪ್ಪಿತ್ತು.

ಅರ್ಸ್ಲಾನ್‌ ಖಾನ್‌ನ ಕುದುರೆಯ ಲಗಾಮನ್ನು ಒಂದು ಕೈಯಲ್ಲಿ ಹಿಡಿದ ಹಾಜಿ ಮುರಾದ್, ಇನ್ನೊಂದು ಕೈಯಲ್ಲಿ ಸೊಂಟದಲ್ಲಿದ್ದ ಕಠಾರಿಯನ್ನು ಒರೆಯಿಂದೆಳೆದುಕೊಂಡು ಟಾರ್ಟರ್‌ ಭಾಷೆಯಲ್ಲಿ ಗಟ್ಟಿಯಾಗಿ ಏನೋ ಒದರಿದ.

ಬಟ್ಲರ್, ಎಲ್ದಾರ್ ಇಬ್ಬರೂ ಓಡಿ ಬಂದು ಅವರಿಬ್ಬರ ತೋಳು ಹಿಡಿದು ದೂರ ಎಳೆದುಕೊಂಡರು. ಗುಂಡಿನ ಸದ್ದು ಕೇಳಿ ಮೇಜರ್ ಕೂಡ ಹೊರಕ್ಕ ಬಂದಿದ್ದ.


ಏನು ನಡೆಯಿತೆಂದು ಕೇಳಿ ತಿಳಿದವನೇ, ‘ಅರ್ಸ್ಲಾನ್‌, ಏನಿದು? ನಮ್ಮ ಮನೆಯ ಅಂಗಳದಲ್ಲಿ ಹೀಗೆ ಮಾಡುತ್ತೀಯಲ್ಲಾ? ಇದು ಸರಿಯಲ್ಲ, ಮಿತ್ರಾ. ಯುದ್ಧ ಭೂಮಿಯಲ್ಲಿ ಶತ್ರುವಿಗೆ ನೀನು ಸೋಲಬೇಕಾಗಿಲ್ಲ, ಸರಿ. ಮನಸ್ತಾಪ ಏನಾದರೂ ಇರಲಿ, ನನ್ನ ಮನೆಯ ಮುಂದೆ ಕೊಲೆಗೆ ಕೈ ಹಾಕುವುದೆಂದರೆ…’

ಕಪ್ಪು ಮೀಸೆಯ, ತೆಳು ಮೈಯ ಗಿಡ್ಡ ಮನುಷ್ಯ ಅರ್ಸ್ಲಾನ್‌ ಖಾನ್ ಮುಖವೆಲ್ಲ ಬಿಳಿಚಿಕೊಂಡು, ಕುದುರೆಯಿಂದಿಳಿದು, ಮೈಯೆಲ್ಲ ಕಂಪಿಸುತ್ತ, ಹಾಜಿ ಮುರಾದನನ್ನು ದುರುದುರನೆ ನೋಡಿ ಮೇಜರನೊಂದಿಗೆ ಮನೆಯೊಳಕ್ಕೆ ಹೋದ. ಹಾಜಿ ಮುರಾದ್ ಏದುಸಿರು ಬಿಡುತ್ತ, ಸಣ್ಣ ನಗು ಬೀರುತ್ತ ಕುದುರೆಯ ಹತ್ತಿರಕ್ಕೆ ಹೋದ.

‘ಅವನನ್ನ ಯಾಕೆ ಕೊಲ್ಲುವುದಕ್ಕೆ ಹೋದೆ?’ ಬಟ್ಲರ್ ತನ್ನ ಪ್ರಶ್ನೆಯನ್ನು ದುಭಾಷಿಗೆ ಕೇಳಿದ.
‘ಅದು ಅವರ ಜನದ ಕಟ್ಟಳೆ ಅನ್ನುತ್ತಾನೆ. ಅರ್ಸ್ಲಾನ್. ತನ್ನವರ ಸಾವಿನ ಸೇಡು ತೀರಿಸಿಕೊಳ್ಳ ಬೇಕು ಎಂದು ಈ ಕೊಲೆಗೆ ಪ್ರಯತ್ನಪಟ್ಟ,’ ಹಾಜಿ ಮುರಾದ್‍ನ ಮಾತನ್ನು ದುಬಾಷಿ ತರ್ಜುಮೆ ಮಾಡಿ ಹೇಳಿದ.

‘ದಾರಿಯಲ್ಲಿ ಪ್ರಯಾಣ ಮಾಡುತ್ತಿರುವಾಗ ಅವನು ಬಂದು ಮೇಲೆ ಬಿದ್ದರೆ?’ ಬಟ್ಲರ್ ಕೇಳಿದ.
ಹಾಜಿ ಮುರಾದ್ ನಕ್ಕ.

‘ಅವನು ನನ್ನ ಕೊಂದರೆ ಅದು ಅಲ್ಲಾನ ಇಚ್ಛೆ…ಗುಡ್ ಬೈ’ ಎಂದು ರಶಿಯನ್‍ ಮಾತಿನಲ್ಲಿ ಹೇಳಿ ಕುದುರೆಯ ಹೆಗಲ ಮೇಲೆ ಕೈ ಇರಿಸಿ, ತನ್ನನ್ನು ಕಳಿಸಿಕೊಡಲು ಬಂದವರನ್ನೆಲ್ಲ ಮತ್ತೊಮ್ಮೆ ನೋಡಿ, ಮೇರಿ ದ್ಮಿತ್ಮಿಯೇವ್ನಾಳನ್ನು ಮರುಕದಿಂದ ದಿಟ್ಟಿಸುತ್ತ, ‘ಹೋಗಿ ಬರತೇನೆ, ಥ್ಯಾಂಕ್ಸ್,’ ಎಂದ. ‘ದೇವರು ಒಳ್ಳೆಯದು ಮಾಡಲಿ, ನಿನ್ನ ಮನೆಯವರನ್ನೆಲ್ಲ ಕಾಪಾಡಲಿ,’ ಅಂದಳು ಮೇರಿ ದ್ಮಿತ್ಮಿಯೇವ್ನಾ. ಹಾಜಿ ಮುರಾದ್‌ಗೆ ಅವಳ ಮಾತು ಅರ್ಥವಾಗಲಿಲ್ಲ, ಅವಳ ಮನಸು ತಿಳಿಯಿತು. ‘ಈ ನಿನ್ನ ಕುನಾನಕ್‌ನನ್ನು ಮರೆಯಬೇಡ,’ ಅಂದ ಬಟ್ಲರ್.

‘ನಾನು ನಿಷ್ಠೆ ಇರುವ ಗೆಳೆಯ, ಅವನನ್ನು ಯಾವತ್ತೂ ಮರೆಯುವುದಿಲ್ಲ ಅಂತ ಹೇಳು,’ ಹಾಜಿ ಮುರಾದ್ ದುಭಾಷಿಗೆ ತಿಳಿಸಿದ. ಅವನದೊಂದು ಕಾಲು ಗಿಡ್ಡವಾಗಿದ್ದರೂ ಲಾಘವದೊಡನೆ ಚುರುಕಾಗಿ, ರಿಕಾಪಿನ ಮೇಲೆ ಭಾರ ಬಿಟ್ಟೂ ಬಿಡದ ಹಾಗೆ ಕಾಲಿಟ್ಟು ಎತ್ತರದ ತಡಿಯ ಮೇಲೆ ಚಿಮ್ಮಿ ಕೂತು, ಅಭ್ಯಾಸಗತವಾದ ಕೈಯ ಚಲನೆಯಲ್ಲಿ ಕಠಾರಿಯನ್ನೊಮ್ಮೆ ಮುಟ್ಟಿ ನೋಡಿ, ಕತ್ತಿಯ ಒರೆಯನ್ನು ಸರಿಮಾಡಿಕೊಂಡ. ಕಕೇಶಿಯದ ಬೆಟ್ಟಗಾಡಿನ ಜನಕ್ಕೆ ಸಹಜವಾದ ಯೋಧರ ಹೆಮ್ಮೆಯ ಭಾವದಲ್ಲಿ ತಾನೂ ತನ್ನ ಕುದುರೆಯೂ ಒಂದೇ ಜೀವ ಅನ್ನುವ ಹಾಗೆ ಸವಾರಿ ಮಾಡುತ್ತ ಮೇಜರ್‍ ಮನೆಯಿಂದ ಸಾಗಿ ಹೋದ ಹಾಜಿ ಮುರಾದ್.

ಖಾನೇಫಿ, ಎಲ್ದಾರ್ ಕೂಡ ಕುದುರೆ ಏರಿದರು, ತಮ್ಮ ಆತಿಥೇಯರಿಗೆ, ಅಧಿಕಾರಿಗಳಿಗೆ ವಂದನೆ ತಿಳಿಸಿ ಕುಕ್ಕುಲೋಟದಲ್ಲಿ ಸಾಗುತ್ತ ಮುರ್ಶೀದ್‌ನನ್ನು ಹಿಂಬಾಲಿಸಿದರು. ಸಾಮಾನ್ಯವಾಗಿ ಯಾವಾಗಲೂ ಆಗುವ ಹಾಗೆ ಆಗ ತಾನೇ ಅಲ್ಲಿಂದ ಹೊರಟ ಮನುಷ್ಯನ ಬಗ್ಗೆ ಅಲ್ಲೇ ಉಳಿದವರು ಮಾತಾಡಿಕೊಂಡರು. ‘ತುಂಬ ಧೈರ್ಯವಂತ! ಒಳ್ಳೆಯ ತೋಳದ ಹಾಗೆ ಅರ್ಸ್ಲಾನ್‌ ಖಾನ್ ಮೇಲೆ ಏರಿ ಹೋದ! ಅವನ ಮುಖ ಎಷ್ಟು ಬೇಗ ಬದಲಾಗಿತ್ತು!’

‘ಪಾಕಡಾ ಆಸಾಮಿ—ನಮಗೆ ಕೈ ಕೊಡತಾನೆ ನೋಡತಾ ಇರಿ,’ ಅಂದ ಪೆಟ್ರೋವ್‌ಸ್ಕಿ. ಮೇರಿ ದ್ಮಿತಿಯೇವ್ನಾಗೆ ಸಿಟ್ಟು ಬಂದಿತ್ತು. ‘ಅಂಥ ಪಾಕಡಾಗಳು ರಶಿಯಾದಲ್ಲಿ ಹೆಚ್ಚು ಜನ ಇರುವ ಹಾಗೆ ದೇವರು ಮನಸು ಮಾಡಬೇಕಾಗಿತ್ತು! ನಮ್ಮ ಮನೆಯಲ್ಲಿ ಒಂದು ವಾರ ಇದ್ದ. ಅವನಲ್ಲಿ ಒಳ್ಳೆಯದನ್ನು ಬಿಟ್ಟು ಬೇರೆ ಏನೂ ಕಾಣಲಿಲ್ಲ,’ ಅಂದಳು.

‘ನಿಮಗೆ ಹೇಗೆ ಗೊತ್ತಾಯಿತು?’
‘ಗೊತ್ತಾಯಿತು, ನನಗೆ!’
‘ಅವನಿಗೆ ಬಿದ್ದು ಹೋಗಿದಾಳೆ, ಸತ್ಯ ಈ ಮಾತು!’ ಆಗ ತಾನೇ ಅಲ್ಲಿಗೆ ಬಂದ ಮೇಜರ್ ಹೇಳಿದ.
‘ಸರಿ, ನಾನು ಅವನಿಗೆ ಬಿದ್ದರೆ ಏನಾಯಿತು? ನಿಮಗೇನಾಗಬೇಕು? ಅವನು ಒಳ್ಳೆಯವನಾಗಿದ್ದರೆ ಅವನನ್ನ ಹೊಡೆದು ಹಾಕುವುದಕ್ಕೆ ಯಾಕೆ ನೋಡತೀರಿ? ಅವನು ಟಾರ್ಟರ್ ಆದರೇನಂತೆ, ಒಳ್ಳೆಯವನು.’
‘ನಿಜ, ನಿಜ, ಮೇರಿ ದ್ಮಿತ್ರಿಯೇವ್ನಾ ನೀವು ಅವನ ಪಕ್ಷ ವಹಿಸುವುದು ಸರಿ,’ ಅಂದ ಬಟ್ಲರ್.

| ಮುಂದುವರೆಯುವುದು |

‍ಲೇಖಕರು avadhi

February 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: