ಡಿ ಉಮಾಪತಿ ಅವರಿಗೆ ಅಂಬೇಡ್ಕರ್ ಪ್ರಶಸ್ತಿ…

ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರಿಗೆ ಕೆಯುಡಬ್ಲೂಜೆ ಯ ಪ್ರತಿಷ್ಠಿತ “ಬಾಬಾಸಾಹೇಬ್ ಅಂಬೇಡ್ಕರ್ ದತ್ತಿಪ್ರಶಸ್ತಿ” ಗೌರವ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. (ರಿ) ಬೆಂಗಳೂರು ಕೊಡ ಮಾಡುವ 2022-23 ನೇ ಸಾಲಿನ ಪ್ರತಿಷ್ಠಿತ “ಡಾ. ಬಿ.ಆರ್ ಅಂಬೇಡ್ಕರ್ ದತ್ತಿ ಪ್ರಶಸ್ತಿ” ಗೆ ಹಿರಿಯರು, ವಿಚಾರಶೀಲ-ಸಂವೇದನಾಶೀಲ ಪತ್ರಕರ್ತರಾದ ಶ್ರೀಯುತ ಡಿ ಉಮಾಪತಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಾಮಾಜಿಕ ಕಳಕಳಿಯ , ಸಮಸಮಾಜದ ಆಶಯಗಳ ಬಿಂಬಿತ , ಮಾನವೀಯ ವರದಿ ಮತ್ತು ವಿಶ್ಲೇಷಣಾ ಬರಹಗಳ ಸಂವೇದನಾ ಶೀಲ ಪತ್ರಕರ್ತರನ್ನು ಗುರುತಿಸಿ ಗೌರವಪೂರ್ವಕವಾಗಿ ಅಭಿನಂದಿಸುವ ಆಶಯದಿಂದ ಬಾಗಲಕೋಟೆಯ ಹಿರಿಯ ಪತ್ರಕರ್ತರಾದ ಸುಭಾಷ್ ಹೊದ್ಲೂರು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಹಾ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯ ದತ್ತಿನಿಧಿಯನ್ನು ಸ್ಥಾಪಿಸಿದ್ದು, 2021-22 ನೇ ಸಾಲಿನಿಂದ ಈ ಪ್ರಶಸ್ತಿಯನ್ನು ವೃತ್ತಿಪರ- ಸಾಧಕ ಪತ್ರಕರ್ತರಿಗೆ ಪ್ರಧಾನಮಾಡಲಾಗುತ್ತಾ ಬರಲಾಗುತ್ತಿದೆ.

ಭಾರತದ ಪತ್ರಿಕೋದ್ಯಮಕ್ಕೆ ಮತ್ತು ಪತ್ರಕರ್ತನಿಗೆ ಮೌಲಿಕ ಮಾದರಿಯೊಂದನ್ನು ಕಟ್ಟಿಕೊಟ್ಟ ಶ್ರೇಷ್ಠ ಪತ್ರಕರ್ತ ಬಾಬಾಸಾಹೇಬ್ ಅಂಬೇಡ್ಕರ್. ನಮ್ಮ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳು ಅದೆಷ್ಟೇ ಕಲುಷಿತಗೊಂಡಿದ್ದರೂ ಅವುಗಳ ನಡುವೆಯೇ ಇದ್ದು ಅವುಗಳನ್ನು ಮಾನವೀಯಗೊಳಿಸುವ, ನ್ಯಾಯಬದ್ದಗೊಳಿಸುವ ಹಾಗೂ ಆ ದಿಕ್ಕಿನಲ್ಲಿ ಜನಸಮುದಾಯಗಳನ್ನು ವೈಚಾರಿಕವಾಗಿ ಎಚ್ಚರಿಸಬೇಕಾಗುತ್ತದೆ. ಅದಕ್ಕಾಗಿ ಚಳವಳಿಮಾದರಿಯಲ್ಲಿ ಬರೆಯುವುದು, ಬದುಕುವುದು ನೈಜ ಪತ್ರಕರ್ತನ ಗುಣಲಕ್ಷಣಗಳಾಗುತ್ತವೆ. ಇದನ್ನೆ ಅಂಬೇಡ್ಕರ್ ಮಾದರಿ ಎನ್ನುವುದನ್ನು ಇತಿಹಾಸದಲ್ಲಿ ಕಾಣಬಹುದು.

ಇಂತಹ ಮಾದರಿ ಪತ್ರಕರ್ತರನೇಕರು ನಮ್ಮ ನಡುವೆ ಇಂದಿಗೂ ಇದ್ದಾರೆ . ಅಂತಹವರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಆದರ್ಶ ವೃತ್ತಿಪರತೆಯನ್ನು ಹೊಸತಲೆಮಾರಿಗೂ ವಿಸ್ತರಿಸುವ ಹೊಣೆಗಾರಿಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಚನಾತ್ಮಕ ಕಾರ್ಯಕ್ರಮಗಳ ಭಾಗವಾಗಿದೆ.

2021-22 ನೇ ಸಾಲಿನ ಮೊದಲ ಪ್ರಶಸ್ತಿಯನ್ನು ನಾಡಿನ ಹಿರಿಯ ಪತ್ರಕರ್ತರು, ಸಾಧಕರೂ ಆದ ದಿನೇಶ್ ಅಮೀನ್ ಮಟ್ಟು ಅವರಿಗೆ ಪ್ರಧಾನ ಮಾಡುವ ಮೂಲಕ ಬಾಬಾಸಾಹೇಬ ಅಂಬೇಡ್ಕರ್ ದತ್ತಿ ಪ್ರಶಸ್ತಿಗೆ ಸಾರ್ಥಕ ಮುನ್ನುಡಿಯನ್ನು ಬರೆಯಲಾಗಿತ್ತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ ರಾಜ್ಯ ಪದಾಧಿಕಾರಿಗಳ ಸಮಿತಿ,
2022-23 ನೇ ಸಾಲಿನ “ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ” ಗೆ ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಶಸ್ತಿಯ ಆಶಯಕ್ಕೆ ಮೆರಗು ತಂದಂತಾಗಿದೆ.

ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕಗಳನ್ನು ಹೊಂದಿದೆ.

ಡಿ.ಉಮಾಪತಿ;
ಪರಿಚಯ:

ಮಾರ್ಚ್ 18,1959 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಎಂ.ಎಂ ಸ್ನಾತಕೋತ್ತರ ಪದವಿಯಲ್ಲಿ ಎರಡನೆ ರ‍್ಯಾಂಕ್ ಪಡೆದವರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಮೂಹ ಸಂಸ್ಥೆ ಯ ಕನ್ನಡ ಪ್ರಭ, ಈ ಟಿವಿ, ಯ ದೆಹಲಿ ಕರೆಸ್ಪಾಂಡೆಂಟ್ ಅಗಿ 27 ವರ್ಷಗಳ ಪರಿಣಾಮಕಾರಿ ವರದಿಗಳಿಂದ ಹೆಸರುಗಳಿಸಿದವರು.

ಪಾರ್ಲಿಮೆಂಟ್ ವರದಿ, ಚುನಾವಣಾ ವಿಶ್ಲೇಷಣೆಗಳು , ಸುಪ್ರೀಂ ಕೋರ್ಟು ನಲ್ಲಿನ ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು, ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಇವರದ್ದಾಗಿದೆ.

ದೆಹಲಿಯಲ್ಲಿದ್ದು ರಾಷ್ಟ್ರೀಯ ಪತ್ರಕರ್ತರಾಗಿರುವ ಉಮಾಪತಿ ಅವರು ಅಂದೋಲನ , ರೈತ ಚಳವಳಿ, ವಿಜಯಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ. ಪ್ರಸ್ತುತ ’ನ್ಯಾಯಪಥ(ಗೌರಿ ಮಿಡಿಯಾ)’ ಮತ್ತು ’ಈದಿನ’ ವೆಬ್ ಜರ‍್ನಲ್ ನ ಸಂದರ್ಶಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಸೇವೆ. ವಿದ್ವತ್ ಪೂರ್ಣ ಸಾಧನೆಯನ್ನು ಗುರುತಿಸಿ ಅನೇಕ ಪ್ರಶಸ್ತಿ – ಸಮ್ಮಾನಗಳು ಮುಡಿಗೇರಿವೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಅಂಬೇಡ್ಕರ್ ಪ್ರತಿಷ್ಠಾನದ ಭೋಧಿವರ್ಧನ ಪ್ರಶಸ್ತಿ, ಎಸ್ಸಿ/ಎಸ್ಟಿ ಎಡಿಟರ್ ಅಸೋಸಿಯೇಷನ್‌ನ ’ಬಿ. ರಾಚಯ್ಯ ಪ್ರಶಸ್ತಿ’ , ಪ್ರೆಸ್ ಕ್ಲಬ್ ಬೆಂಗಳೂರು ನ ಜೀವಮಾನಸಾಧನೆ ಪ್ರಶಸ್ತಿ, ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ನೀಡುವ ಸಂಪಾದಕ ಮಂಡಳಿ ಆಯ್ಕೆಯ ಅತ್ಯುತ್ತಮ ಶ್ರಮಜೀವಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ನ ನಾಡಿಗೇರಿ ಕಿಟ್ಟಪ್ಪ ದತ್ತಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸಿಗಳಿಂದ ಪುರಸ್ಕೃತರಾಗಿರುವುದು ಅವರ ಸಾಧನೆ ವಿದ್ವತ್ತಿಗೆ ವೃತ್ತಿಪರತೆಗೆ ಹಿಡಿದ ಕನ್ನಡಿಯಾಗಿವೆ.

’ದೆಹಲಿ ನೋಟ’ , ’ಪದಕುಸಿಯೇ ನೆಲವಿಲ್ಲ’ ಉಮಾಪತಿ ಅವರ ಎರಡು ಮಹತ್ವದ ಕೃತಿ ಪ್ರಕಟವಾಗಿವೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-23 ನೇ ಸಾಲಿನ ವಾರ್ಷಿಕ “ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ” ಗೆ ಆಯ್ಕೆಯಾಗಿರುವ ಡಿ. ಉಮಾಪತಿ ಅವರಿಗೆ ಅಭಿನಂದನೆಗಳು.

ಸದ್ಯದಲ್ಲೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

-ಶಿವಾನಂದ ತಗಡೂರು
ರಾಜ್ಯಾಧ್ಯಕ್ಷರು

ಜಿ.ಸಿ ಲೋಕೇಶ
ಪ್ರಧಾನಕಾರ್ಯದರ್ಶಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಬೆಂಗಳೂರು.

‍ಲೇಖಕರು Admin

February 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: