ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯದ ಚಕ್ರವರ್ತಿ ನಿಕೊಲಸ್ 1796 –1855

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

15

ಈ ವರದಿಯನ್ನು ಟಿಫ್ಲಿಸ್‍ನಿಂದ 24 ಡಿಸೆಂಬರ್ 1851ರಂದು ಕಳಿಸಲಾಯಿತು. ಹನ್ನೆರಡು ಕುದುರೆಗಳನ್ನು ಬದಲಾಯಿಸಿಕೊಂಡು, ಗಾಡಿ ಹೊಡೆಯುವ ಹನ್ನೆರಡು ಮಂದಿಗೆ ರಕ್ತ ಬರುವ ಹಾಗೆ ಹೊಡೆದು ದಬಾಯಿಸುತ್ತ, ಸುದ್ದಿ ವಾಹಕನು ಹೊಸ ವರ್ಷದ ಹಿಂದಿನ ದಿನ ಅದನ್ನು ಪ್ರಿನ್ಸ್ ಚೆರ್ನಿಶೋವ್‍ಗೆ ತಲುಪಿಸಿದ. ಯುದ್ಧ ಮಂತ್ರಿಯಾಗಿದ್ದ ಆತ ಅದನ್ನು ಇತರ ಪತ್ರಗಳೊಂದಿಗೆ 1 ಜನವರಿ 1852ರಂದು ಚಕ್ರವರ್ತಿ ನಿಕೋಲಸ್ ಅವರಿಗೆ ತಲುಪಿಸಿದ. ವರಾನ್ತಸೋವ್‍ನನ್ನು ಕಂಡರೆ ಮಂತಿ ಚೆರ್ನಿಶೋವ್‍ನಿಗೆ ಆಗುತ್ತಿರಲಿಲ್ಲ. ಏಕೆಂದರೆ ವರಾನ್ತಸೋವ್‍ ಎಲ್ಲರ ಗೌರವ ಗಳಿಸಿದ್ದ, ಅಪಾರವಾದ ಆಸ್ತಿಗೆ ಒಡೆಯನಾಗಿದ್ದ.

ಮುಖ್ಯವಾಗಿ ಅವನು ನಿಜವಾದ ಘನವಂತನೂ ಸಿರಿವಂತನೂ ಆಗಿದ್ದರೆ ಚೆರ್ನಿಶೋವ್‍ ಸಿರಿವಂತಿಕೆಯನ್ನು ಸಂಪಾದಿಸಿದ, ರಾಜಕೀಯ ಅನುಭವವಿರದ ಅನಾಮಧೇಯ. ಚಕ್ರವರ್ತಿಯು ವರಾನ್ತಸೋವ್‍ನ ಬಗ್ಗೆ ಸದಭಿಪ್ರಾಯ ಹೊಂದಿದ್ದು ಇನ್ನೊಂದು ಕಾರಣ. ಹಾಗಾಗಿ ಚೆರ್ನಿಶೋವ್ ಅವಕಾಶ ದೊರೆತಾಗಲೆಲ್ಲ ವರಾನ್ತಸೋವ್‍ಗೆ ತೊಂದೆಯಾಗುವಂತೆ ಮಾಡುತಿದ್ದ. ಕಕೇಶಿಯದ ವ್ಯವಹಾರಗಳ ಬಗೆಗೆ ಅವನು ಹಿಂದಿನ ವರದಿಯನ್ನು ಸಲ್ಲಿಸಿದ್ದಾಗ ಅದರಲ್ಲಿ ಚಕ್ರವರ್ತಿ ನಿಕೋಲಸ್‍ ಅವರಲ್ಲಿ ವರಾನ್ತಸೋವ್‍ನ ಬಗ್ಗೆ ಅಸಮಾಧಾನ ಹುಟ್ಟುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದ.

ಅಧಿಕಾರಿಗಳ ಬೇಜವಾಬ್ದಾರಿಯ ಕಾರಣದಿಂದ ಕಕೇಶಿಯದಲ್ಲಿದ್ದ ರಶಿಯನ್ ಪಡೆಗಳು ಬೆಟ್ಟಗಾಡಿನವರ ಕೈಯಲ್ಲಿ ನಾಶವಾಗಿವೆ ಎಂದು ಹೇಳಿದ್ದ. ವರಾನ್ತಸೋವ್‍ ಹಾಜಿ ಮುರಾದ್‍ನ ಬಗ್ಗೆ ಕೈಗೊಂಡ ಕ್ರಮವನ್ನು ಈಗ ಸಲ್ಲದ ರೀತಿಯಲ್ಲಿ ತೋರಿಸಲು ಬಯಸಿದ್ದ. ವರಾನ್ತಸೋವ್‍ ಸದಾ ಸ್ಥಳೀಯರನ್ನು ರಕ್ಷಿಸುತ್ತಾನೆ, ರಶಿಯನ್ನರ ಹಿತಾಸಕ್ತಿಗೆ ವಿರುದ್ಧವಾಗಿ ಇರುತ್ತಾನೆ ಎಂದು ಚಕ್ರವರ್ತಿಗೆ ಅನ್ನಿಸುವ ಹಾಗೆ ಮಾಡಬೇಕೆಂಬುದು ಅವನ ಬಯಕೆ.

ಹಾಜಿ ಮುರಾದ್ ಕಾಕಸಸ್‍ನಲ್ಲಿ ಉಳಿಯುವುದಕ್ಕೆ ವರಾನ್ತಸೋವ್ ಅವಕಾಶ ಕೊಟ್ಟದ್ದು ವಿವೇಚನೆಯ ಕೆಲಸವಲ್ಲ; ಯಾಕೆಂದರೆ ನಮ್ಮ ರಕ್ಷಣಾ ವ್ಯವಸ್ಥೆಯ ಬಗ್ಗೆ ಗುಟ್ಟುಗಳನ್ನು ತಿಳಿದುಕೊಳ್ಳುವುದಕ್ಕೆಂದೇ ಹಾಜಿ ಮುರಾದ್ ಬಂದಿದ್ದಾನೆ ಎನ್ನುವುದು ನನ್ನ ಭಾವನೆ; ಹಾಜಿ ಮುರಾದ್‍ನನ್ನು ಮಧ್ಯ ರಶಿಯಾದ ಪ್ರಾಂತ್ಯಕ್ಕೆ ಕಳುಹಿಸುವುದು ಸರಿಯಾದ ಕ್ರಮ; ಅವನ ಕುಟುಂಬದವರನ್ನು ಬೆಟ್ಟಗಾಡು ಜನರಿಂದ ಕಾಪಾಡಿದ ಮೇಲಷ್ಟೇ, ಅವನ ನಿಷ್ಠೆಯ ಬಗ್ಗೆ ನಮಗೆ ಮನವರಿಕೆ ಆದಮೇಲಷ್ಟೇ ಹಾಜಿ ಮುರಾದ್‍ನನ್ನು ನಮ್ಮ ಕಾರ್ಯಗಳಿಗೆ ಬಳಸಿಕೊಳ್ಳುವುದು ಸೂಕ್ತ ಎಂದು ಚಕ್ರವರ್ತಿಗೆ ಮನವರಿಕೆ ಮಾಡಲು ಯೋಜನೆ ಸಿದ್ಧ ಮಾಡಿಕೊಂಡಿದ್ದ.

ಹೊಸ ವರ್ಷದ ದಿನದಂದು ಚಕ್ರವರ್ತಿ ನಿಕೊಲಸ್ ಬಹಳ ಕೆಟ್ಟ ಮೂಡಿನಲ್ಲಿ ಇದ್ದುದರಿಂದಷ್ಟೇ ಚೆರ್ನಿಶೋವ್‍ನ ಯೋಜನೆ ಯಶಸ್ವಿಯಾಗಲಿಲ್ಲ. ಅಂದು ಯಾರು ಏನೇ ಸಲಹೆ ಕೊಟ್ಟಿದ್ದರೂ ಚಕ್ರವರ್ತಿ ನಿಕೋಲಸ್‍ ಅದನ್ನು ವಿರೋಧಿಸುವ ಮನಸ್ಥಿತಿಯಲ್ಲಿದ್ದರು, ಚೆರ್ನಿಶೋವ್‍ ತಾತ್ಕಾಲಿಕವಾಗಿಯಷ್ಟೇ ನಮಗೆ ಅನಿವಾರ್ಯವಾದವನು ಎಂದು ಚಕ್ರವರ್ತಿ ನಿಕೋಲಸ್ ಭಾವಿಸಿದ್ದರು. ಯಾಕೆಂದರೆ ಡಿಸೆಂಬರಿಸ್ಟರ ವಿಚಾರಣೆಯಲ್ಲಿ ಝಕಾರಿಗೆ ಶಿಕ್ಷೆಯಾಗಬೇಕು, ಅವನ ಆಸ್ತಿಯನ್ನೆಲ್ಲ ಹೊಡೆದುಕೊಳ್ಳಬೇಕು ಎಂದು ಚೆರ್ನಿಶೋವ್‍ ಪ್ರಯತ್ನಪಟ್ಟಿದ್ದರಿಂದ ಚಕ್ರವರ್ತಿ ನಿಕೋಲಸ್‍ ಅವರಿಗೆ ಅವನ ಮೇಲೆ ಅಸಹ್ಯ ಹುಟ್ಟಿತ್ತು. ಹಾಗಾಗಿ ಚೆರ್ನಿಶೋವ್‍ ಬೇರೆಯ ಸಂದರ್ಭದಲ್ಲಿ ವರದಿ ಒಪ್ಪಿಸಿದ್ದಿದ್ದರೆ ಏನಾಗಬಹುದಿತ್ತೋ ಅದೇ ಈಗಲು ಆಯಿತು—ಅಂದರೆ, ಹಾಜಿ ಮುರಾದ್ ಕಾಕಸಸ್‍ನಲ್ಲೇ ಉಳಿದ.

ಸಾರೋಟು ಓಡಿಸುವ ದಪ್ಪ ಮೈಯ, ಗಡ್ಡದ ಚೆರ್ನಿಶೋವ್‍ನ ಪುಟ್ಟ ಸ್ಲೆಜ್ ಗಾಡಿಯ (ಚಕ್ರವರ್ತಿ ನಿಕೋಲಸ್ ಅವರು ಬಳಸುತಿದ್ದಂಥದೇ ಗಾಡಿಯನ್ನು ಚೆರ್ನಿಶೋವ್ ಕೂಡ ಬಳಸುತಿದ್ದ) ಬಾಕ್ಸಿನ ಮೇಲೆ ಕೂತ ಸಾರೋಟನ್ನು ಓಡಿಸುವ ದಪ್ಪ ಮೈಯ ಮನುಷ್ಯ ಚಕ್ರವರ್ತಿಯವರ ಚಳಿಗಾಲದ ಅರಮನೆಯ ಮುಂದೆ ಗಾಡಿಯನ್ನು ನಿಲ್ಲಿಸಿದಾಗ ಬೆಳಗಿನ ಒಂಬತ್ತೂವರೆಯಾಗಿತ್ತು, ಉಷ್ಣಮಾಪಕವು ಸೊನ್ನೆಗಿಂತ 13 ಡಿಗ್ರಿ ಕಡಮೆ ಉಷ್ಣಾಂಷವನ್ನು ತೋರುತ್ತಿತ್ತು. ಚೂಪು ತುದಿಯ ತೆಳು ನೀಲಿ ಬಣ್ಣದ ವೆಲ್ವೆಟ್ ಟೋಪಿಯನ್ನು ತೊಟ್ಟಿದ್ದ ಗಾಡಿಯವನು ಪ್ರಿನ್ಸ್ ದೋಲ್ಗೊರುಕಿಯ ಸಾರೋಟಿನವನನ್ನು ಕಂಡು ಸ್ನೇಹಪೂರ್ವಕವಾಗಿ ತಲೆ ಬಾಗಿಸಿದ. ಆ ಗಾಡಿಯವನು ತನ್ನ ಒಡೆಯ ದೋಲ್ಗೊರುಕಿಯನ್ನು ಅರಮನೆಗೆ ತಲುಪಿಸಿ ತಾನು ಮಾತ್ರ ಹೊರಗೆ ಗಾಡಿಯಲ್ಲಿ, ಲಗಾಮಿನ ಮೇಲೆ ಕುಳಿತು, ಚಳಿಗೆ ಸೆಟೆದ ಕೈಗಳನ್ನು ಉಜ್ಜಿಕೊಳ್ಳುತ್ತ ಬಹಳ ಹೊತ್ತಿನಿಂದ ಕಾಯುತ್ತಿದ್ದ.

ಚೆರ್ನಿಶೋವ್‍ ಗ್ರೇಟ್ ಕೋಟು ತೊಟ್ಟಿದ್ದ, ಕೋಟಿಗೆ ಬಿಳಿಯ ತುಪ್ಪುಳದ ಅಗಲ ಕಾಲರ್ ಇತ್ತು. ಸಮವಸ್ತ್ರದ ಭಾಗವಾಗಿ ಗರಿಗಳನ್ನು ಸಿಕ್ಕಿಸಿದ ಮೂರು ಮೂಲೆಯ ಹ್ಯಾಟು ತಲೆಯ ಮೇಲಿತ್ತು. ಮೊಳಕಾಲ ಮೇಲೆ ಹರಡಿದ್ದ ಕರಡಿಯ ಚರ್ಮದ ಕಂಬಳಿಯನ್ನು ಗಾಡಿಯಲ್ಲೇ ಅತ್ತ ಎಸೆದು ಥಂಡಿ ಹಿಡಿದ ಕಾಲು ಹುಷಾರಾಗಿ ನೆಲಕ್ಕಿಳಿಸಿದ. ಅವನು ಹಿಮಗಾಲದಲ್ಲಿ ತೊಡುವ ಮೊಳಕಾಲವರೆಗಿನ ಗ್ಯಾಲೊಶೆ ಶೂ ತೊಟ್ಟಿರಲಿಲ್ಲ, ಅವನ್ನು ಎಂದೂ ತೊಟ್ಟವನಲ್ಲ ಅನ್ನುವುದೇ ಅವನಿಗೊಂಡು ಹೆಮ್ಮೆ. ಖುಷಿಯಾಗಿದ್ದೇನೆಂದು ತೋರಿಸಿಕೊಳ್ಳಲು ಪ್ರಯತ್ನಪಡುತ್ತಾ ಆಗಾಗ ಬೂಟುಗಳನ್ನು ಒಂದಕ್ಕೊಂದು ತಾಗಿಸಿ ಶಬ್ದ ಮಾಡುತ್ತ ಕಾರ್ಪೆಟ್ಟು ಹಾಸಿದ್ದ ಮೆಟ್ಟಿಲುಗಳನ್ನು ಏರಿ, ಕಾವಲುಗಾರ ಅತೀವ ಮರ್ಯಾದೆ ತೋರುತ್ತ ತೆರೆದು ಹಿಡಿದುಕೊಂಡ ಬಾಗಿಲನ್ನು ದಾಟಿ ಹಾಲ್‍ನೊಳಕ್ಕೆ ಕಾಲಿಟ್ಟ. ಕಳಚಿದ ಓವರ್ಕೋಟನ್ನು ತೆಗೆದುಕೊಳ್ಳಲು ಆತುರವಾಗಿ ಓಡಿಬಂದ ಸೇವಕನ ಕೈಗೆ ಕೊಟ್ಟು, ದೊಡ್ಡ ಕನ್ನಡಿಯ ಮುಂದೆ ನಿಂತು, ಗುಂಗುರು ಕೂದಲ ವಿಗ್‍ಗೆ ತೊಂದರೆಯಾಗದ ಹಾಗೆ ಹ್ಯಾಟನ್ನು ಹುಷಾರಾಗಿ ತೆಗೆದ. ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಕಣತಲೆಯ ಕೂದಲು ಸರಿಪಡಿಸಿ, ಅಭ್ಯಾಸಗತವಾದ ರೀತಿಯಲ್ಲಿ ಹಣೆಯ ಮೇಲಿನ ಕುರುಳನ್ನು ಅತ್ತಿತ್ತ ಸರಿಯಾಗಿ ಕೂರಿಸಿ, ಭುಜಪಟ್ಟಿ, ಭುಜಕ್ಕೆ ಅಲಂಕಾರವಾಗಿದ್ದ ಗಂಟು ಹಗ್ಗಗಳನ್ನು ಸರಿಮಾಡಿಕೊಂಡು, ಆಮೇಲೆ ತೀರ ನಿಧಾನವಾಗಿ, ಮುದಿ ಕಾಲುಗಳ ಮೇಲೆ ನಂಬಿಕೆ ಇಲ್ಲವೇನೋ ಅನ್ನುವ ಹಾಗೆ ಮಹಡಿಯ ಟೊಳ್ಳು ಮೆಟ್ಟಿಲು ನಿಧಾನವಾಗಿ ಏರಿದ. ಸಮವಸ್ತ್ರ ತೊಟ್ಟು, ಅತೀವ ಗೌರವದಿಂದ ತಲೆ ಬಾಗಿ ವಂದಿಸುತಿದ್ದ ಸೇವಕರನ್ನು ದಾಟಿ ಚೆರ್ನಿಶೋವ್‍ ವೇಟಿಂಗ್ ರೂಮಿಗೆ ಕಾಲಿಟ್ಟ. ಚಕ್ರವರ್ತಿಯ ಏಡ್ ಡಿ ಕ್ಯಾಂಪ್ ಆಗಿ ಹೊಸದಾಗಿ ಕೆಲಸಕ್ಕೆ ಸೇರಿದ್ದ, ಭುಜಪಟ್ಟಿ, ಗಂಟು ಹಗ್ಗಗಳಿದ್ದ ಹೊಸ ಹೊಳಪಿನ ಸಮವಸ್ತ್ರ ತೊಟ್ಟ, ಇನ್ನೂ ತಾಜಾ ಅನಿಸುವ ಕೆಂಪು ಕೆಂಪು ಮುಖದ, ಪುಟ್ಟ ಕರಿಯ ಮೀಸೆಯ ಯುವಕ, ಚಕ್ರವರ್ತಿ ನಿಕೋಲಸ್ ಅವರ ಶೈಲಿಯಲ್ಲೇ ತಲೆ ಬಾಚಿಕೊಂಡಿದ್ದ ಆಫೀಸರು ಅವನನ್ನು ಗೌರವಪೂರ್ವಕವಾಗಿ ಸ್ವಾಗತಿಸಿದ.

ಸಹಾಯ ಯುದ್ಧ ಸಚಿವ ಪ್ರಿನ್ಸ್ ವ್ಯಾಸಿಲಿದೋಲ್ಗೊರುಕಿ, ಚಕ್ರವರ್ತಿಯ ಶೈಲಿಯಲ್ಲೇ ತಲೆ ಬಾಚಿದ್ದವನು, ಮಂಕು ಮುಖದಲ್ಲಿ ಬೇಸತ್ತ ಭಾವ ತೋರುತ್ತ ಚೆರ್ನಿಶೋವ್‍ ನನ್ನು ಬರಮಾಡಿಕೊಂಡ. ‘ಪ್ರಭುಗಳು?’ ಚೆರ್ನಿಶೋವ್‍ ಫ್ರೆಂಚಿನಲ್ಲಿ ಏಡ್ ಡಿ ಕ್ಯಾಂಪನನ್ನು ಕೇಳುತ್ತ ಚಕ್ರವರ್ತಿಯ ಕೋಣೆಯತ್ತ ಪ್ರಶ್ನಾರ್ಥಕವಾಗಿ ನೋಡಿದ. ‘ಈಗ ತಾನೇ ವಾಪಸು ಬಂದರು,’ ಏಡ್ ಡಿ ಕ್ಯಾಂಪ್ ಫ್ರೆಂಚಿನಲ್ಲಿ ಉತ್ತರಕೊಟ್ಟ. ಅವನ ದನಿ ಕೇಳುವುದಕ್ಕೆ ಅವನಿಗೇ ಸಂತೋಷವಾಗುತ್ತಿದೆ ಅನಿಸುತ್ತಿತ್ತು. ತಲೆಯ ಮೇಲೆ ನೀರು ತುಂಬಿದ ಲೋಟ ಇರಿಸಿಕೊಂಡವನು ನೀರು ಚೆಲ್ಲದೆ ಹುಷಾರಾಗಿ ನಡೆಯುವ ಹಾಗೆ ಇವನೂ ಅತೀವ ಎಚ್ಚರಿಕೆಯಲ್ಲಿ ಹೆಜ್ಜೆ ಎತ್ತಿಡುತ್ತ ತಾನು ಮರು ಕ್ಷಣ ಕಾಲಿಡಲಿರುವ ಕೋಣೆಯ ಬಗ್ಗೆ ಅವನ ಇಡೀ ಮೈ ಗೌರವ ವ್ಯಕ್ತಪಡಿಸುತ್ತಾ ಬಾಗಿಲು ತೆರೆದು ಕೋಣೆಯೊಳಗೆ ಮಾಯವಾದ. ದೋಲ್ಗೊರುಕಿ ಕೈಯಲ್ಲಿದ್ದ ಕಡತವನ್ನು ತೆರೆದು ಅಗತ್ಯವಾದ ಕಾಗದ ಪತ್ರಗಳೆಲ್ಲ ಇವೆಯೇ ಎಂದು ನೋಡಿದ. ಚೆರ್ನಿಶೋವ್‍ ಹುಬ್ಬು ಗಂಟಿಕ್ಕಿ ಕೋಣೆಯೊಳಗೆ ಅತ್ತ ಇತ್ತ ಓಡಾಡುತ್ತ ಥಂಡಿಯ ಜೋಮು ಹಿಡಿದ ಪಾದಗಳಿಗೆ ರಕ್ತ ಸಂಚಾರವಾಗಲೆಂದು ಪ್ರಯತ್ನಪಡುತ್ತ ಚಕ್ರವರ್ತಿಯವರಿಗೆ ವರದಿ ಹೇಗೆ ಮಾಡಬೇಕೆಂದು ಯೋಚನೆ ಮಾಡುತಿದ್ದ. ಅವನು ಹಾಗೆ ಅಡ್ಡಾಡುತ್ತ ಚಕ್ರವರ್ತಿಯವರ ಕೋಣೆಯ ಬಾಗಿಲ ಹತ್ತಿರ ಬಂದಿದ್ದಾಗ ಬಾಗಿಲು ಮತ್ತೆ ತೆರೆಯಿತು, ಏಡ್ ಡಿ ಕ್ಯಾಂಪ್ ಮುಖದಲ್ಲಿ ಮೊದಲಿಗಿಂತ ಹೆಚ್ಚು ಹೊಳಪು, ಹೆಚ್ಚು ಗೌರವ ತೋರುತ್ತ ಹೊರ ಬಂದು ಮಂತ್ರಿಯೂ ಅವನ ಸಹಾಯಕನೂ ಒಳಕ್ಕೆ ಬರಬೇಕೇಂದು ಸನ್ನೆಯ ಮೂಲಕ ಆಹ್ವಾನಿಸಿದ.

ಕೆಲವು ವರ್ಷಗಳ ಹಿಂದೆ ಬೆಂಕಿ ಬಿದ್ದು ಹಾಳಾಗಿದ್ದ ಚಳಿಗಾಲದ ಅರಮನೆಯ ಮರು ನಿರ್ಮಾಣವಾಗಿತ್ತು. ಆದರೂ ಚಕ್ರವರ್ತಿ ನಿಕೋಲಸ್ ಇನ್ನೂ ಮಹಡಿಯ ಮೇಲಿನ ಕೋಣೆಗಳನ್ನೇ ಬಳಸುತಿದ್ದರು. ಪ್ರಭುಗಳು ಮಂತ್ರಿ, ಉನ್ನತ ಅಧಿಕಾರಿಗಳ ವರದಿಯನ್ನು ಆಲಿಸುವ ಕೋಣೆಗೆ ಎತ್ತರವಾದ ಚಾವಣಿ ಇತ್ತು, ನಾಲ್ಕು ದೊಡ್ಡ ಕಿಟಕಿ ಇದ್ದವು. ಚಕ್ರವರ್ತಿ ಮೊದಲನೆಯ ಅಲೆಕ್ಸಾಂಡರನ ಭಾವ ಚಿತ್ರ ಬಾಗಿಲಿಗೆ ಎದುರಾದ ಗೋಡೆಯ ಮೇಲಿತ್ತು. ಕಿಟಕಿಗಳ ನಡುವಿನ ಜಾಗದಲ್ಲಿ ಎರಡು ಬೀರುಗಳಿದ್ದವು. ಗೋಡೆಯ ಉದ್ದಕ್ಕೂ ಕುರ್ಚಿಗಳಿದ್ದವು.

ಕೋಣೆಯ ಮಧ್ಯದಲ್ಲಿ ಬೃಹದಾಕಾರದ ಮೇಜು ಇತ್ತು. ದೊಡ್ಡದೊಂದು ಆರಾಮ ಕುರ್ಚಿ ಇತ್ತು. ಮೇಜಿನ ಎದುರಿಗೆ ಚಕ್ರವರ್ತಿಯನ್ನು ಕಾಣಲು ಬಂದವರು ಕೂರಲು ಕುರ್ಚಿಗಳಿದ್ದವು. ನಿಕೊಲಸ್ ಕರಿಯ ಕೋಟು, ಭುಜಪಟ್ಟಿಗಳನ್ನು ತೊಟ್ಟು, ಬೃಹದಾಕಾರದ ದೇಹ, ಅದರಲ್ಲೂ ದೊಡ್ಡದಾಗಿ ಬೆಳೆದ ಹೊಟ್ಟೆಯನ್ನು ಮುಚ್ಚುವ ಹಾಗೆ ಬಿಗಿಯಾದ ಬಟ್ಟೆಯನ್ನು ತೊಟ್ಟು ಕುರ್ಚಿಯ ಮೇಲೆ ಹಿಂದಕ್ಕೊರಗಿ ಕೂತು ಹೊಸದಾಗಿ ಬಂದವರನ್ನು ನಿರ್ಜೀವವಾದ ದೃಷ್ಟಿಯಿಂದ ದಿಟ್ಟಿಸಿದರು. ಅವರ ಉದ್ದ ಬಿಳಿಚಿದ ಮುಖ, ಕೂದಲುದುರಿ ಹಿಗ್ಗಿದ ಹಣೆ, ಹಣೆಯ ಎರಡೂ ಪಕ್ಕಗಳನ್ನು ಮುಚ್ಚುವ ಹಾಗೆ ಬೆಳೆದಿದ್ದ ಕೂದಲನ್ನು ಬಹಳ ಜಾಣತನದಿಂದ ಬೋಳುತಲೆಯನ್ನು ಮುಚ್ಚಿದ್ದ ವಿಗ್‍ನೊಂದಿಗೆ ಹೊಂದಿಕೊಳ್ಳುವಂತೆ ಬಾಚಿ ಆಕಾರ ಕೊಡಲಾಗಿತ್ತು.

ಆ ಮುಖ ಅಂದಿನ ಬೆಳಗ್ಗೆ ತಣ್ಣನೆ ಬಂಡಗಲ್ಲಿನಂತಿತ್ತು. ಸದಾ ಮಂಕಾಗಿರುತಿದ್ದ ಕಣ್ಣು ಇಂದು ಮಾಮೂಲಿಗಿಂತ ಹೆಚ್ಚು ಮಂಕಾಗಿದ್ದವು. ಮೇಲ್ಮುಖವಾಗಿ ತಿರುವಿದ ಮೀಸೆಯ ಕೆಳಗೆ ಒತ್ತಿ ಹಿಡಿದ ತುಟಿ, ಕ್ಷೌರ ಮಾಡಿ ಚಪ್ಪಟೆಯಾಗಿದ್ದ ಕೆನ್ನೆ, ಕಪೋಲದ ಮೇಲೆ ಉಳಿದಿದ್ದ ಸಾಸೇಜು ಆಕಾರದ ಕಪೋಲ ಕೇಶ, ಕೊರಳಿಗಿದ್ದ ಎತ್ತರ ಕಾಲರನ್ನು ಕೆಳಕ್ಕೊತ್ತುತಿದ್ದ ಗಲ್ಲ, ಇವೆಲ್ಲ ಸೇರಿ ಚಕ್ರವರ್ತಿಯವರ ಮುಖದಲ್ಲಿ ಅತೃಪ್ತಿಯ ಭಾವ, ರೇಗಿದ್ದಾರೆ ಅನಿಸುವಂಥ ಭಾವ ಹುಟ್ಟುತ್ತಿತ್ತು. ಅವರ ಕೆಟ್ಟ ಮೂಡಿಗೆ ಕಾರಣ ಹಿಂದಿನ ರಾತ್ರಿ ಅವರು ಭಾಗವಹಿಸಿದ್ದ ಮೊಗವಾಡ ಮನರಂಜನೆಯ ಕಾರ್ಯಕ್ರಮ. ಮಾಮೂಲಿನ ಹಾಗೆ ಅಶ್ವದಳ ರಕ್ಷಕರ ಸಮವಸ್ತ್ರ ತೊಟ್ಟು ಹೆಲ್ಮೆಟ್ಟಿನ ಮೇಲೆ ಹಕ್ಕಿಯನ್ನು ಕೂರಿಸಿಕೊಂಡು ಅಗಾಧ ಆತ್ಮವಿಶ್ವಾಸದಲ್ಲಿ ಹೆಜ್ಜೆ ಹಾಕುತ್ತ, ಮುಂದೊತ್ತಿ ಬಂದ ಜನ ಚಕ್ರವರ್ತಿ ನಿಕೊಲಸ್ ಅವರಿಗೆ ಗೌರವ ತೋರಿ ದಾರಿ ಮಾಡಿಕೊಡುತ್ತಿದ್ದಂತೆ ಮೊಗವಾಡ ಮನರಂಜನೆಯ ಕಾರ್ಯಕ್ರಮದಲ್ಲಿ ಅಡ್ಡಾಡುತ್ತ ಇರುವಾಗ ಬಿಳಿಯ ವರ್ಣದ ಸುಂದರ ಕಾಯದ, ಸವಿದನಿಯ ತರುಣಿ, ಹಿಂದಿನ ಕಾರ್ಯಕ್ರಮದಲ್ಲಿ ಕಂಡಿದ್ದವಳು, ಈಗಲೂ ಪ್ರಭುಗಳಿಗೆ ಕಂಡಳು. ಅವಳು ಪ್ರಭುಗಳ ಮುದಿ ಕಾಮುಕತೆಯನ್ನು ಕೆರಳಿಸಿದ್ದಳು.

ಕಳೆದ ಬಾರಿ ಅವಳು ಮುಂದಿನ ಕಾರ್ಯಕ್ರಮದಲ್ಲಿ ಸಿಗುವುದಾಗಿ ಹೇಳಿ ಮಾಯವಾಗಿದ್ದಳು. ನಿನ್ನೆ ಸಿಕ್ಕಿದ್ದಳು. ಅವಳು ಮತ್ತೆ ಕಣ್ಮರೆಯಾಗಲು ಬಿಡದೆ ಅವಳನ್ನು ಇಂಥ ಕಾರ್ಯಗಳಿಗಾಗಿಯೇ ಮೀಸಲಾಗಿಟ್ಟಿದ್ದ ಏಕಾಂತದ ಕಿರು ಕೋಣೆಗೆ ಕರೆದೊಯ್ದ. ಸೇವಕನಿರುವುನೋ ಎಂದು ಸುತ್ತಲೂ ನೋಡಿ, ಕಾಣದೆ, ಮುಖ ಗಂಟಿಕ್ಕಿದ ಪ್ರಭಯ ನಿಕೋಲಸ್ ಅವರು ತಾವೇ ಬಾಗಿಲು ತೆರೆದು ಮಹಿಳೆಯನ್ನು ಮೊದಲು ಒಳಕ್ಕೆ ಕಳುಹಿಸಿದ್ದರು.

ಮೊಗವಾಡ ತೊಟ್ಟಿದ್ದವಳು ತಡೆದು ನಿಂತು, ‘ಯಾರೋ ಇದ್ದಾರೆ!’ ಎಂದು ಫ್ರೆಂಚಿನಲ್ಲಿ ಕೇಳಿದ್ದಳು. ಕೋಣೆಯಲ್ಲಿ ಯಾರೋ ಇದ್ದರು. ವೆಲ್ವೆಟ್ ಹೊದಿಕೆ ಇದ್ದ ಪುಟ್ಟ ಸೋಫಾದ ಮೇಲೆ ಒಬ್ಬ ಉಹ್ಲನ್ ಆಫೀಸರು ಮತ್ತೊಬ್ಬ ಮುದ್ದಾದ, ಗುಂಗುರು ಕೂದಲ ಸುಂದರ ಯುವತಿ ಕೂತು ಡಾಮಿನೋ ಆಡುತಿದ್ದರು. ಯುವತಿ ಮೊಗವಾಡ ತೆಗೆದಿದ್ದಳು. ಪ್ರಭು ನಿಕೋಲಸ್ ಕೋಪಗೊಂಡಿರುವುದನ್ನು ಕಂಡ ಯುವತಿ ತಕ್ಷಣವೇ ತನ್ನ ಮುಖವನ್ನು ಮೊಗವಾಡದ ಹಿಂದೆ ಮರೆಮಾಡಿಕೊಂಡಳು. ಬೆದರಿದ ಉಹ್ಲನ್ ಅಧಿಕಾರಿ ಸೋಫಾದಿಂದ ಏಳದೆ ಪ್ರಭುಗಳನ್ನು ನೆಟ್ಟ ದೃಷ್ಟಿಯಿಂದ ದಿಟ್ಟಿಸುತಿದ್ದ. ಪ್ರಭು ನಿಕೋಲಸ್ ಜನರಲ್ಲಿ ಭಯ ಹುಟ್ಟಿಸುತಿದ್ದರು. ಹಾಗೆ ಜನ ಭಯಗೊಂಡರೆ ಅವರಿಗೆ ಸಂತೊಷವಾಗುತ್ತಿತು. ತಮ್ಮನ್ನು ಕಂಡು ಬೆದರಿ ಕಂಗಾಲಾದವರನ್ನು ಕೆಲವೊಮ್ಮೆ ಮರುಕದಿಂದ ಮಾತಾಡಿಸಿ ಅಚ್ಚರಿ ಹುಟ್ಟಿಸುವುದೂ ಇತ್ತು. ಪ್ರಭುಗಳು ಈಗ ಹಾಗೇ ಮಾಡಿದರು. ಭಯಬಿದ್ದು ನಿಶ್ಚೇಷ್ಟಿತನಾಗಿದ್ದ ಅಧಿಕಾರಿಯನ್ನು ಕುರಿತು, ‘ಮಿತ್ರಾ! ನೀನು ನನಗಿಂತ ಕಿರಿಯ, ನನಗೆ ಜಾಗ ಬಿಟ್ಟು ಕೊಡುತ್ತೀಯಾ?’ ಎಂದು ಕೇಳಿದರು.

ಅಧಿಕಾರಿ ದಿಗ್ಗನೆದ್ದ, ಮುಖ ಬಿಳಿಚಿತು, ಮತ್ತೆ ಕೆಂಪಡರಿತು, ನೆಲ ಮುಟ್ಟುವ ಹಾಗೆ ಬಗ್ಗಿ ವಂದಿಸಿ ತನ್ನ ಜೊತೆಯಲ್ಲಿದ್ದವಳನ್ನೂ ಕರೆದುಕೊಂಡು ಕೋಣೆಯಿಂದ ಮರೆಯಾದ. ಪ್ರಭು ನಿಕೊಲಸ್ ತಾವು ಕರೆದುಕೊಂಡು ಬಂದಿದ್ದವಳ ಜೊತೆಯಲ್ಲಿ ಕೋಣೆಯಲ್ಲೇ ಉಳಿದರು. ಆಕೆ ಇಪ್ಪತ್ತ ನಾಲ್ಕು ವರ್ಷದ ಮುದ್ದು ಹುಡುಗಿ, ಸ್ವೀಡಿಶ್ ಗೌರ್ನೆಸ್ ಒಬ್ಬಳ ಮಗಳು. ‘ನಾನು ಪುಟ್ಟ ಹುಡುಗಿಯಾಗಿದ್ದಾಗಿನಿಂದಲೂ ಪ್ರಬು ನಿಕೋಲಸರ ಚಿತ್ರಗಳನ್ನು ನೋಡಿ ಆರಾಧಿಸುತ್ತಿದ್ದೆ, ಏನಾದರೂ ತಮ್ಮ ಮಾಡಿ ಗಮನ ಸೆಳೆಯಬೇಕೆಂದು ತೀರ್ಮಾನ ಮಾಡಿದ್ದೆ, ಈಗ ಗೆದ್ದೆ, ನನಗೆ ಮತ್ತೇನೂ ಬೇಕಾಗಿಲ್ಲ,’ ಎಂದಳು. ತಾವು ಮಹಿಳೆಯರನ್ನು ಭೇಟಿ ಮಾಡುತಿದ್ದ ಸ್ಥಳಕ್ಕೆ ಅವಳನ್ನು ಕರೆದುಕೊಂಡು ಹೋದ ಪ್ರಭುಗಳು ಅಲ್ಲಿ ಸಮಾರು ಒಂದು ಗಂಟೆಯಷ್ಟು ಹೊತ್ತು ಇದ್ದರು.

ಪ್ರಭು ನಿಕೋಲಸ್ ಅಂದು ರಾತ್ರಿ ತಮ್ಮ ಕೋಣೆಗೆ ಮರಳಿ, ಕಿರಿದಾದ ಗಟ್ಟಿ ಮಂಚದಮೇಲೆ ಮಲಗಿದರು (ಮಂಚ ಇಂಥದು ಅನ್ನುವುದೇ ಅವರಿಗೊಂದು ಹೆಮ್ಮೆ), ಉದ್ದ ನಿಲುವಂಗಿಯನ್ನು ಮೈ ಮೇಲೆ ಎಳೆದುಕೊಂಡು (ಈ ನಿಲುವಂಗಿ ನೆಪೋಲಿಯನ್ನನ ಹ್ಯಾಟಿನಷ್ಟೇ ಪ್ರಸಿದ್ಧ ಎಂದು ಪ್ರಭುಗಳು ಹೇಳಿಕೊಳ್ಳುತಿದ್ದರು) ಮಲಗಿದರೆ ಬಹಳ ಹೊತ್ತು ನಿದ್ರೆ ಬರಲಿಲ್ಲ. ಆ ಹುಡುಗಿಯ ಮುಖದಲ್ಲಿ ಎಷ್ಟು ಹೆದರಿಕೆ ಇತ್ತು ಎಷ್ಟು ಸಂತೋವಿತ್ತು ಎಂದು ನೆನಪು ಮಾಡಿಕೊಂಡರು. ತನ್ನ ಖಾಯಂ ಪ್ರೇಯಸಿ ನೆಲ್ದೋವಾಳ ದೃಢವಾದ ತೋಳು, ಭುಜಗಳನ್ನು ನೆನೆದು ಅವಳ ತೋಳನ್ನೂ ಈ ಹುಡುಗಿಯ ತೋಳು ಭುಜಗಳನ್ನೂ ಮನಸಿನಲ್ಲೇ ಹೋಲಿಸಿದರು. ವಿವಾಹಿತನ ಮನಸಿನಲ್ಲಿ ಇಂಥ ಯೋಚನೆ ಬರುವುದು ಸಲ್ಲದು ಅನ್ನುವುದು ಅವರಿಗೆ ಒಮ್ಮೆಯೂ ಅನಿಸಲಿಲ್ಲ. ಹೀಗೆ ಮಾಡುವುದು ತಪ್ಪು ಎಂದು ಯಾರಾದರೂ ಟೀಕಿಸಿದ್ದರೆ ಪ್ರಭುಗಳಿಗೆ ಆಶ್ಚರ್ಯವೇ ಆಗುತ್ತಿತ್ತು. ತಾವು ನಡೆದುಕೊಂಡ ರೀತಿ ಸರಿ ಎಂದು ಅವರಿಗೆ ನಂಬಿಕೆಯಿದ್ದರೂ ಎಂಥದೋ ಕೆಟ್ಟ ರುಚಿ ಬಾಯಲ್ಲಿ ಉಳಿದ ಹಾಗೆ ಅನ್ನಿಸುತ್ತಿತ್ತು. ಇಂಥ ಭಾವದ ಕತ್ತು ಹಿಸುಕಲೆಂದು ಪ್ರಭುಗಳು ತಮ್ಮ ಮನಸಿಗೆ ಸದಾ ಶಾಂತಿ ನೀಡುತಿದ್ದ ತಮ್ಮ ಖ್ಯಾತಿಯ ಬಗ್ಗೆ ನೆನೆಯಲು ತೊಡಗಿದರು.

| ಮುಂದುವರೆಯುವುದು |

‍ಲೇಖಕರು avadhi

January 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: