ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿ ಭಟ್ ಕವಿತೆ- ನೀನು…

ಪ್ರೀತಿ ಭಟ್

ನೀನು,
ನಿನ್ನ ದಟ್ಟ ಕೂದಲಲ್ಲ
ಜಿಮ್ಮಲ್ಲಿ ದೇಹ ದಂಡಿಸಿ ಪಡೆದ
ಅಂಗ ಸೌಷ್ಟವವಲ್ಲ
ನಿನ್ನ ಸಂಕೋಚವಲ್ಲ
ನಿನ್ನ ಅಳುಕಲ್ಲ
ನೀನು ಧರಿಸುವ ಮಾಸಲು ಬಣ್ಣದ ಕಂದು ಉಡುಪೂ ಅಲ್ಲ,

ನೀನು ನಿನ್ನ ಹೆಸರಲ್ಲ ದಾರಿಹೋಕನೂ ಅಲ್ಲ
ನಿನ್ನ ಕೆನ್ನೆಯಲಿ ಎಂದಿಗೂ ಬೀಳದ ಗುಳಿಯೂ ಅಲ್ಲ

ಆದರೆ ನೀನು,

ನೀನು ಇನ್ನೂ ಪೂರ್ತಿ ಓದದ, ಓದಲೆಂದು ಕಳೆದೆರಡು ದಶಕಗಳಿಂದ ಎತ್ತಿಟ್ಟಿರುವ ಎಲ್ಲ ಪುಸ್ತಕಗಳು,
ನೀನು ಆಡದ, ಆಡಲೆಂದಿದ್ದ, ಆಡಲಾಗದ ಎಲ್ಲ ಮಾತುಗಳು,
ನಿನ್ನ ಇಳಿ ಸಂಜೆಯ ಗರ ಗರ ದನಿ ಮತ್ತು,
ನೀನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವ
ಮಗುವಿನಷ್ಟೇ ಮುಗ್ಧ ನಗು.

ನೀನು,
ಅಪರಿಚಿತ ಕಂದನ ನಗೆಯೊಳಗಿನ ಮಾಯೆ ಮತ್ತು,
ನೀನು ಸಪ್ತ ಸಾಗರಗಳ ಎಲ್ಲ ಕಣ್ಣೀರು.

ನೀನು,
ಮೆಲು ದನಿಯಲ್ಲಿ ನನಗೆಂದೇ ನೀನು ಹಾಡುವ ಹಾಡುಗಳು,
ನಿನಗೆ ಮಾತ್ರ ಗೊತ್ತಿರುವ ನಿನ್ನ ಧ್ಯಾನಸ್ಥ ಏಕಾಂತ,
ನೀನು ಭೇಟಿ ಮಾಡಬೇಕೆಂದು ಕನಸಿದ ಎಲ್ಲ ಸ್ಥಳಗಳು ಮತ್ತು ಹಾದಿಗಳು

ನೀನು,
ನೀನು ಅನುಭವಿಸಬೇಕೆಂದಿರುವ ಪುಟ್ಟ ಸಂಗತಿಗಳು,
ನಿನ್ನ ಮನದ ಗ್ಯಾಲರಿಯಲ್ಲಿ ಕಾಪಿಟ್ಟ ಎಲ್ಲ ಫೋಟೋಗಳು ಮತ್ತು
ಎಂದಿಗೂ ನನಸಾಗದ, ನನಸಾಗಬೇಕಿಲ್ಲದ ಚಂದದ ಕನಸುಗಳು

ಎಷ್ಟೊಂದು ನಾವೀನ್ಯತೆಯಿಂದ
ಸೃಷ್ಟಿಯಾಗಿರುವೆ ನೀನು
ಆದರೂ
ಎಲ್ಲ ಮರೆತಿರುವೆ ಬಹುಶಃ,
ಮರೆಯಬೇಕಾಗಿರುವುದು ನಿನ್ನ
ಅನಿವಾರ್ಯತೆಯಿರಬಹುದು…

‍ಲೇಖಕರು avadhi

23 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading