ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಯ ಮುಖ್ಯಮಂತ್ರಿಗಳೆ..

ಚೀ ಜ ರಾಜೀವ

ಪ್ರೀತಿಯ ಮುಖ್ಯಮಂತ್ರಿಗಳೆ,
ನೀವು ಯಾರ ಮುಲಾಜಿನಲ್ಲೂ ಇಲ್ಲ…

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲಿ ಸಾಲಮನ್ನಾ ಮಾಡುವೆ ಎಂಬುದಾಗಿ ಚುನಾವಣೆ ಪೂರ್ವದಲ್ಲಿ ನೀವು ಘೋಷಿಸಿದ್ದೀರಿ ಎಂಬುದನ್ನು ನೆನಪಿಸಿದ ಪತ್ರಕರ್ತರಿಗೆ ಪ್ರತ್ಯುತ್ತರವಾಗಿ
‘‘ನಿಜ, ನನಗೂ ಅದರ ನೆನಪಿದೆ. ಆದರೆ, ನಾನೀಗ ಸಂದರ್ಭದ ಕೂಸು. ಒಬ್ಬನೇ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ…’’ ಎಂಬ ಪೂರ್ವ ನಿರೀಕ್ಷಣಾ ಜಾಮೀನಿನ ನುಡಿಯನ್ನು ಬಹಳ ಅಸಹಾಯಕವಾಗಿ ಮುಂದಿಟ್ಟಿದ್ದೀರಿ. ನಿಮ್ಮ ಮಾತು ಪ್ರಾಮಾಣಿಕವಾಗಿಯೇ ಇದೆ.

ಕಾಂಗ್ರೆಸ್ ನೆರವಿನಿಂದಲೆ ನಿಮಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ ಎಂಬುದನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಈ ಕಾರಣಕ್ಕಾಗಿ ನೀವು ಕಾಂಗ್ರೆಸ್ ಹಾಗೂ ರಾಹುಲ್ ಬಗ್ಗೆ ಒಂದೆರಡು ಮೆಚ್ಚುಗೆ ಮಾತುಗಳನ್ನಾಡುವುದು (ರಾಹುಲ್ ಪುಣ್ಯಾತ್ಮ ಎಂದಿದ್ದೀರಿ) ಸಜ್ಜನಿಕೆಯೆ.

ಅದರೆ, ಈ ಎಲ್ಲಾ ಕಾರಣಗಳಿಗಾಗಿ ‘ಪರಿಸ್ಥಿತಿಯ ಕೂಸು’ ತಾನೆಂದು ನೀವು ತೀರಾ ಕೀಳರಿಮೆ ಪಡಬೇಕಿಲ್ಲ. ಅಸಹಾಯಕತೆಯನ್ನೂ ವ್ಯಕ್ತಪಡಿಸಬೇಕಿಲ್ಲ.

ಏಕೆಂದರೆ, ಆಳದಲ್ಲಿ, ಪರಿಸ್ಥಿತಿಯ ಕೂಸಾಗಿ ನೀವು ಸಿಎಂ ಆಗಿರುವುದರ ಹಿಂದೆ ಇರುವುದು- ನಮ್ಮ ಸಂವಿಧಾನದ ಶಕ್ತಿ ಮತ್ತು ಸೌಂದರ್ಯವೇ ಹೊರತು, ಕಾಂಗ್ರೆಸ್ ಕಾಣಿಕೆಯಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಇರುವ ಪಕ್ಷವೊಂದು ಆಡಳಿತ ನಡೆಸುವುದು ಎಲ್ಲರಿಗೂ ಗೊತ್ತಿರುವ ಸಹಜ ನಿಯಮ. ಆದರೆ, ಅದೇ ವ್ಯವಸ್ಥೆ ಅಲ್ಪಮತದ ಪಕ್ಷವೊಂದನ್ನು ಅಧಿಕಾರ ನಡೆಸಲು ಅವಕಾಶ ನೀಡುತ್ತೆ ಎಂದಾದರೆ, ಅದನ್ನು ‘ಸೊಬಗು’ ಎಂದೇ ಸ್ವಾಗತಿಸೋಣ.

ಕಡು ಬಡವನ ಮಗನೂ, ಸಿರಿ ಶ್ರೀಮಂತನ ಮಗನೂ ಪ್ರಧಾನಿಯಾಗಲು, ರಾಷ್ಟ್ರಪತಿಯಾಗಲು ಸಾಧ್ಯ ಮಾಡಿಕೊಟ್ಟಿರುವ ನಮ್ಮ ಸಂವಿಧಾನ, ಅಲ್ಪಮತ ಹೊಂದಿರುವ ಪಕ್ಷಕ್ಕೂ ಅಧಿಕಾರ ನಡೆಸುವ ಅವಕಾಶ ನೀಡಿದೆ.

ಹಾಗಾಗಿಯೇ, ಇಲ್ಲಿ ಕಡಿಮೆ ಸಂಸದರನ್ನು ಹೊಂದಿದ್ದ ಪಕ್ಷದ ನಾಯಕರಾದ ಎಚ್. ಡಿ. ದೇವೇಗೌಡ, ಐ. ಕೆ. ಗುಜ್ರಾಲ್, ಚಂದ್ರಶೇಖರ್ ಅವರು ಪ್ರಧಾನಿಯಾಗಲು ಸಾಧ್ಯವಾಗಿದೆ. ಬಿಜೆಪಿ ಕೂಡ ಈ ಪರಿಸ್ಥಿತಿಯ ಫಲಾನುಭವಿಯೇ !

ಅಲ್ಪಮತ ಇರುವ ಪಕ್ಷಕ್ಕೂ ಅಧಿಕಾರ ನಡೆಸಲು ಅವಕಾಶ ಸಿಗುವಂತಾಗಲು, ಇಂತಹ ಸಮಯ ಸೌಂದರ್ಯ ಸೃಷ್ಟಿಯಾಗಬೇಕು. ಬಹುಮತದ ಅಹಂಕಾರಕ್ಕೆ ಆಗಾಗ ಇಂತಹ ಪೆಟ್ಟು ಬೀಳುತ್ತಿರಬೇಕು. ಹೀಗೆ ಸಂದರ್ಭದ ಕೂಸೇ ಆಗಿ ಮುಖ್ಯಮಂತ್ರಿಯಾಗಿರುವ ನೀವು, ಈ ಬಗ್ಗೆ ಕನಿಷ್ಠವಾಗಿ ಯೋಚಿಸದೇ, ಆ ಸಂಗತಿಯಲ್ಲೇ ಅಡಗಿರುವ ಶಕ್ತಿ ಸಾಮರ್ಥ್ಯವನ್ನು ದುಡಿಸಿಕೊಳ್ಳಬೇಕಿದೆ.

ಸಂವಿಧಾನ ಕಲ್ಪಿಸುವ ಇಂತಹ ಸಮಯ ಸಂದರ್ಭದ ದೆಸೆಯಿಂದಲೇ ಸಬಲರಾಗಲು ಹಂಬಲಿಸುತ್ತಿರುವ ಹತ್ತಾರು ‘ಅಸಹಾಯಕ’ ಮಂದಿಗಳತ್ತ, ಪರಿಸ್ಥಿತಿಗಳತ್ತ ಅವರು ಕಣ್ತೆರೆಯಬೇಕಿದೆ. ತನ್ನಂತೆ ಇತರರು ಎಂದು ಎಣಿಸುವ ಹೊತ್ತಿದು.

ಪ್ರೀತಿಯೊಂದಿಗೆ
ಚೀ ಜ ರಾಜೀವ

‍ಲೇಖಕರು avadhi

31 May, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading