ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ನವಿಲುಕಲ್ಲಿನಲ್ಲಿ ಸೂರ್ಯೋದಯ…

(ಕಮ್ಮಟದಲ್ಲಿ ಕಡೆಯ ದಿನ)

ಪ್ರಿಯದರ್ಶಿನಿ ಶೆಟ್ಟರ್

ಕೊರೆಯುವ ಚಳಿಯಲ್ಲಿ ಹೇಗೋ ಬೇಗನೆ ಎದ್ದು ತಯಾರಾಗಿ 4 ಗಂಟೆಗೆ ಎಲ್ಲರೂ ಬಸ್‌ನಲ್ಲಿದ್ದೆವು. ಅದು ಸುಮಾರು ಏಳೆಂಟು ಕಿಲೋಮೀಟರ್ ಸಂಚರಿಸಿ ನವಿಲುಕಲ್ಲು ಗುಡ್ಡಕ್ಕೆ ಹೋಗಬೇಕಿದ್ದ ಜಾಗದಿಂದ ಕೊಂಚ ಮುಂದೆ ಸಾಗಿ ದಾರಿತಪ್ಪಿತು. ಹಿಂದಿನ ರಾತ್ರಿ ಮಳೆಯಾಗಿದ್ದ ಕಾರಣ ಬಸ್ ರಾಡಿಯಲ್ಲಿ ಸಿಕ್ಕಿ ಮುಂದೂ ಹೋಗದೆ, ಹಿಂದೆ ಬರಲೂ ಆಗದೆ, ಎಲ್ಲರೂ ಇಳಿದು ಸುಮಾರು ಎರಡೂವರೆ ಕಿಲೋಮೀಟರ್ ನಡೆದೆವು. ಡಾ. ಗುರುಪಾದ ಮರಿಗುದ್ದಿಯವರ ಮಾರ್ಗದರ್ಶನದಂತೆ ಕಾಡಿನ ಕಗ್ಗತ್ತಲಲ್ಲಿ ನಡೆಯುತ್ತ ಹೋದದ್ದನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ.

ಕತ್ತಲಲ್ಲಿ ಅಲ್ಲಿ ತಲುಪಿ ವಿಶಾಲವಾದ ಬಂಡೆಯ ಮೇಲೆ ಪೂರ್ವದಿಕ್ಕಿನೆಡೆಗೆ ದಿಟ್ಟಿನೆಟ್ಟು ಕುಳಿತೆವು. ಕೆಲವರಿಗೆ ಜಿಗಣೆ ಅಂಟಿಕೊಂಡವು. ಆ ಪ್ರಶಾಂತ ವಾತಾವರಣದಲ್ಲಿ ಧ್ಯಾನಸ್ಥ ಸ್ಥಿತಿಗೆ ಜಾರಿದೆವು. ಸಂಪೂರ್ಣ ಕತ್ತಲಿನಿಂದ ಕ್ರಮೇಣ ಬೆಳಕು ಹರಿಯುವ ಪ್ರಕ್ರಿಯೆಯನ್ನು ನೋಡಿದ ಅನುಭವ ನಮ್ಮಲ್ಲಿ ಹೆಚ್ಚಿನವರಿಗೆ ಇರಲಿಲ್ಲ. ಕೀಟಗಳ ಶಬ್ದ ಕಡಿಮೆಯಾಗಿ ಅಲ್ಲಲ್ಲಿ ಹಕ್ಕಿಗಳ ಚಿಲಿಪಿಲಿ ನಾದ ಕೇಳಿಸಿದ್ದು ನಮ್ಮ ಗಮನಕ್ಕೆ ಬಂತು. ನಿಧಾನವಾಗಿ ಬೆಳಕು ಹರಿಯುತ್ತಿದ್ದಂತೆ ಆಗಸದಲ್ಲಿ ದೊಡ್ಡದಾದ ಕೆಂಪುಗೆರೆಯೊಂದು ಮೂಡಿ ಸೂರ್ಯೋದಯಕ್ಕಾಗಿ ಕಾಯುತ್ತಿದ್ದ ನಮಗೆ ಕುತೂಹಲ ಮೂಡಿಸಿತು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಕೆಂಪುಮಿಶ್ರಿತ ಬಂಗಾರವರ್ಣದ ಬಾಲಭಾಸ್ಕರ ಗೋಚರಿಸಿದ.

ಈ ನೈಸರ್ಗಿಕ ಬೆಡಗನ್ನು ನಾವು ಸವಿಯುತ್ತಿರುವಾಗಲೇ ಪ್ರೊ. ಬಸವರಾಜ ಕಲ್ಗುಡಿಯವರು ಕುವೆಂಪು ವಿರಚಿತ ‘ನವಿಲುಕಲ್ಲಿನಲ್ಲಿ ಸೂರ್ಯೋದಯ’ ಮತ್ತು ‘ನವಿಲುಕಲ್ಲಿನಲ್ಲಿ ಉಷಃಕಾಲ’ ಎಂಬ ಕವಿತೆಗಳನ್ನು ವಾಚಿಸಿದ್ದು ನಮಗೆಲ್ಲ ಹೊಸ ಅನುಭವ ನೀಡಿತು. ಕವನಗಳ ವಾಚನ, ವಿವರಣೆಗಳ ನಂತರ ‘ಕನ್ನಡ ವಿಮರ್ಶೆಗೆ ಹೊಸ ತಾತ್ವಿಕತೆಯ ಅವಶ್ಯಕತೆ’ಯ ಬಗ್ಗೆ ತಮ್ಮ ಮಾತುಗಳನ್ನು ಮುಂದುವರೆಸಿದರು.

ಹೊಸ ತಾತ್ವಿಕತೆಯ ಅಗತ್ಯತೆ, ಕನ್ನಡದ ಮೇಲೆ ಸಂಸ್ಕೃತದ ಛಾಯೆ, ಮೀಮಾಂಸೆಯ ಕುರಿತಾದ ತಪ್ಪುಕಲ್ಪನೆಗಳು, ಕಾವ್ಯದ ಬಗೆಗಿನ ಕೆಲ ಪೂರ್ವಾಗ್ರಹಪೀಡಿತ ನಿಲುವುಗಳು, ಅವುಗಳನ್ನು ಮೀರುವ ಬಗೆಗಳನ್ನು ತಿಳಿಸಿದರು. ಶಂ. ಭಾ. ಜೋಶಿಯವರೊಡನೆ ತಮ್ಮ ಒಡನಾಟ ಹಾಗೂ ಅವರ ಸಾಹಿತ್ಯಕೃಷಿಯನ್ನು ನೆನೆಯುತ್ತ ವಿವಿಧ ಆಯಾಮಗಳನ್ನು ನಮ್ಮ ಮುಂದಿಟ್ಟರು. ಜಿ. ಎಸ್. ಅಮೂರ, ಗಿರಡ್ಡಿ ಗೋವಿಂದರಾಜ, ಎಂ. ಎಂ. ಕಲಬುರ್ಗಿ, ಜಿ. ಎಸ್. ಶಿವರುದ್ರಪ್ಪ, ಸದಾನಂದ ಕನವಳ್ಳಿ, ಶ್ರೀಮತಿ ವಜ್ರಜಂಘ, ಕುಂದಕುಂದಾಚಾರ್ಯರಂತಹ ಅನೇಕ ಸಾಹಿತಿಗಳನ್ನು ಉಲ್ಲೇಖಿಸುತ್ತ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಬಹಳ ವಿಶಿಷ್ಟವಾದ ಈ ಉಪನ್ಯಾಸದ ನಂತರ ನಡೆದ ಸಂವಾದದಲ್ಲಿ ಡಾ. ಬಿ. ವಿ. ವಸಂತಕುಮಾರ ಹಾಗೂ ಡಾ. ಗುರುಪಾದ ಮರಿಗುದ್ದಿಯವರು ಹೆಚ್ಚಿನ ಮಾಹಿತಿ ನೀಡಿದರು.

ಉಪನ್ಯಾಸ ಮುಗಿದು ಅನೇಕ ಹೊಸ ವಿಚಾರಗಳು ನಮ್ಮನ್ನಾವರಿಸುತ್ತಿದ್ದಂತೆ ಎಲ್ಲರಿಗೂ ಹಸಿವಿನ ಅರಿವಾಗತೊಡಗಿತು. ನಸುಕಿನಲ್ಲಿ ಏನನ್ನೂ ತಿನ್ನದೇ, ಕುಡಿಯದೇ ಬಂದಿದ್ದೆವು. ನನ್ನ ಬ್ಯಾಗಿನಲ್ಲಿದ್ದ ಬಿಸ್ಕಿಟ್, ಚೊಕೊಲೆಟ್, ಮನೆಯಲ್ಲಿ ತಯಾರಿಸಿದ ಲಡಕಿ ಉಂಡೆಗಳು ಅನೇಕರ ಹಸಿವನ್ನು ತಾತ್ಕಾಲಿಕವಾಗಿ ಹಿಂಗಿಸಿದವು. ನಾವೆಲ್ಲ ಹಸಿವೆಯ ತೀವ್ರತೆಯೆಂದರೆ ಏನೆಂಬುದನ್ನು ಕಲಿತೆವು. ಇನ್ನೂ ಅನೇಕರು ತಾವು ತಂದಿದ್ದ ಚೂಡಾ, ಚೊಕೊಲೆಟ್‌ಗಳನ್ನು ಹಂಚಿಕೊಂಡು ತಿಂದದ್ದು ವಿಶಿಷ್ಟ ಅನುಭವವಾಗಿ ನಮ್ಮ ನೆನಪುಗಳಲ್ಲಿ ದೀರ್ಘಕಾಲ ಉಳಿಯಲಿದೆ.

‘ಕೊನೆಯ ಒಂದು ಉಂಡಿಯನ್ನು ನಾಲ್ಕೈದು ಜನ ಹಂಚಿಕೊಂಡೆವು’ ಎಂದರೆ ಸಾಕಲ್ಲವೇ? ‘ಹಸಿವು- ನೀರಡಿಕೆ’ ಬರೀ ಶಬ್ದಗಳಷ್ಟೇ ಅಲ್ಲ, ಅವುಗಳ ಅನುಭವವೂ ಆಯಿತು. ಸ್ವಲ್ಪ ಸಾವರಿಸಿಕೊಂಡು, ಫೋಟೋ- ಸೆಲ್ಫಿ ಕ್ಲಿಕ್ಕಿಸಿಕೊಂಡು ವಾಪಸ್ ಹೊರಡಲನುವಾದೆವು. ‘ಕತ್ತಲಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಂದದ್ದು ಇದೇ ದಾರಿಯೇ!’ ಎಂದುಕೊಳ್ಳುತ್ತಾ ಹೆಜ್ಜೆ ಹಾಕಿದೆವು. ನಮ್ಮ ನಮ್ಮ ಗುಂಪುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಅನೇಕ ವಿಷಯಗಳನ್ನು ಚರ್ಚಿಸುತ್ತಾ ಬಸ್ ನಿಂತಿದ್ದ ಜಾಗ ತಲುಪಿದೆವು. ಅಲ್ಲಿಂದ ಸಿಬ್ಬಿಲಗುಡ್ಡದ ಗಣೇಶ ದೇವಸ್ಥಾನಕ್ಕೆ ಹೋದೆವು. ತುಂಗಾನದಿಯ ತೀರದಲ್ಲಿ ಸ್ವಲ್ಪ ಹೊತ್ತು ಕಳೆದು, ಅಲ್ಲಿರುವ ಮೀನುಗಳಿಗೆ ಚುರುಮುರಿ ಹಾಕಿದೆವು.

ಕುವೆಂಪುರವರ ಅನೇಕ ರಚನೆಗಳಲ್ಲೊಂದಾದ ‘ದೇವರ ರುಜು’ ಕವನವನ್ನು ಇಲ್ಲಿಯೇ ಬರೆದರೆಂದು ತಿಳಿಯಿತು. ಪ್ರತಿಷ್ಠಾನಕ್ಕೆ ತೆರಳಿ, ದಣಿವಾರಿಸಿಕೊಂಡು ತಯಾರಾಗಿ ಮುಂದಿನ ಉಪನ್ಯಾಸಕ್ಕೆ ಹಾಜರಾದೆವು. ಕಮ್ಮಟಕ್ಕೆ ಬಂದ ಸಂಪನ್ಮೂಲ ವ್ಯಕ್ತಿಗಳು ಒಂದೆರಡು ದಿನ ನಮ್ಮೆಲ್ಲರೊಂದಿಗೆ ಕಳೆಯುತ್ತಿದ್ದರು. ಹಾಗಾಗಿ ಉಪನ್ಯಾಸದಿಂದಷ್ಟೇ ಅಲ್ಲದೆ ಇಂತಹ ಅನೌಪಚಾರಿಕ ಮಾತುಕತೆಗಳಿಂದಲೂ ಸಾಕಷ್ಟು ವಿಷಯಗಳನ್ನು ಕಲಿಯುತ್ತಿದ್ದುದು ಕಮ್ಮಟದ ವಿಶೇಷತೆಯಾಗಿತ್ತು.

ಡಾ. ಜಿ. ಬಿ. ಹರೀಶ್ ಅವರು ಸಾಹಿತ್ಯ ಮತ್ತು ಅಂತರ್‌ಶಿಸ್ತೀಯ ಚಿಂತನೆಗಳು, ವಿಮರ್ಶೆಯ ವೈವಿಧ್ಯತೆಯ ಕುರಿತು ಉಪನ್ಯಾಸ ನೀಡಿದರು. ಮಾರ್ಕ್ಸವಾದಿ, ಸಮಾಜವಾದಿ ಹಾಗೂ ಮನೋವೈಜ್ಞಾನಿಕ ತಳಹದಿಯ ಮೇಲೆ ರೂಪಿಸಲ್ಪಟ್ಟಂತಹ ಚಿಂತನೆಗಳ ಬಗ್ಗೆ ಚರ್ಚಿಸಿದರು. ಸಿಗ್ಮಂಡ್ ಫ್ರೆöÊಡ್, ಚಾರ್ಲ್ಸ ಡಾರ್ವಿನ್, ಆರ್. ಕೆ. ಮಣಿಪಾಲ್, ರಾಮ್ ಮನೋಹರ ಲೋಹಿಯಾ, ದ. ರಾ. ಬೇಂದ್ರೆ, ರಹಮತ್ ತರೀಕೆರೆ, ಪೂರ್ಣಚಂದ್ರ ತೇಜಸ್ವಿ, ದೇ. ಜವರೇಗೌಡ, ಎಸ್. ಎಲ್. ಭೈರಪ್ಪ ಹೀಗೆ ಅನೇಕರ ಕೃತಿಗಳನ್ನು ಉಲ್ಲೇಖಿಸಿದರು.

ವಿಮರ್ಶಾ ಕಮ್ಮಟದ ಕೊನೆಯ ಗೋಷ್ಠಿಯಲ್ಲಿ ಶ್ರೀ ಚಿ. ಸು. ಕೃಷ್ಣಸೆಟ್ಟಿಯವರ ಉಪನ್ಯಾಸ ವಿಶೇಷವಾಗಿತ್ತು. ‘ಅಶಾಬ್ದಿಕ ಕಲಾ ವಿಮರ್ಶೆಯ ಹಲವು ಸಾಧ್ಯತೆ’ಗಳ ಬಗ್ಗೆ ಮಾತನಾಡಿದ ಅವರು ಸಿನಿಮಾ, ಸಂಗೀತ, ನಾಟಕ, ಚಿತ್ರಕಲೆಗಳಂತಹ ಕಲಾಮಾಧ್ಯಮಗಳಲ್ಲಿ ವಿಮರ್ಶೆಯ ಅವಶ್ಯಕತೆಗೆ ಹೆಚ್ಚು ಒತ್ತುಕೊಟ್ಟರು. ತಮ್ಮ ವಿವರಣೆಗಳಲ್ಲಿ ಅನೇಕ ಚಲನಚಿತ್ರಗಳು, ಪುಸ್ತಕಗಳನ್ನು ಹೆಸರಿಸಿ ಚಿತ್ರಕಲೆಯ ವ್ಯಾಪ್ತಿ, ಸಾಹಿತ್ಯ ಮತ್ತು ಕಲಾವಿಮರ್ಶೆಗಳಿಗಿರುವ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನೆಲ್ಲ ಪರಿಣಾಮಕಾರಿಯಾಗಿ ವಿವರಿಸಿದರು. ೧೯೮೪ರ ‘ಕಲಾಯಾತ್ರೆ’ ನೆನಪಿಸಿಕೊಳ್ಳುತ್ತಾ ಮಾಡರ್ನ್ ಆರ್ಟ್, ವಿಕೃತಕಲಾ ಮೀಮಾಂಸೆ, ಶುದ್ಧಕಲೆ, ಅಮೂರ್ತಕಲೆ (ಅಬ್ಸ್ಟ್ರ್ಯಾಕ್ಟ್), ಕೊಲಾಜ್‌ಗಳಂತಹ ವಿವಿಧ ಕಲಾಪ್ರಕಾರಗಳ ಬಗ್ಗೆ ಮಾತನಾಡಿದರು. ಅವರ ಕಂಚಿನಕಂಠ ಎಲ್ಲರನ್ನೂ ಹಿಡಿದಿಟ್ಟಿತ್ತು.

ಸಮಾರೋಪ ಸಮಾರಂಭದಲ್ಲಿ ಚಿ. ಸು. ಕೃಷ್ಣಸೆಟ್ಟಿಯವರು ಕೃತಿ, ಕರ್ತೃ, ಸಮಾಜ, ಓದುಗಕೇಂದ್ರಿತ ವಿಮರ್ಶೆಯ ಬಗ್ಗೆ ಮಾತನಾಡುತ್ತ, ಸಾಹಿತ್ಯಾಸಕ್ತರು ಇತರ ಕಲೆಗಳ ಬಗೆಗೂ ಅಭ್ಯಸಿಸಿ ಕಲಾವಿಮರ್ಶೆಗೆ ಯಾವ ರೀತಿಯ ಕೊಡುಗೆ ನೀಡಬಹುದೆಂದು ತಿಳಿಸಿದರು. ಐವರು ಶಿಬಿರಾರ್ಥಿಗಳಿಗೆ ಕಮ್ಮಟದ ಕುರಿತು ಅನಿಸಿಕೆ ಹಂಚಿಕೊಳ್ಳಲು ಅವಕಾಶ ಕೊಟ್ಟರು. ಅವರಲ್ಲಿ ನಾನೂ ಒಬ್ಬಳೆಂದು ತಿಳಿದಾಗ ಖುಷಿ ಮತ್ತು ಗಲಿಬಿಲಿಗಳೆರಡೂ ಆದವು! ಆದರೂ ನನ್ನ ಅನುಭವ- ಅನಿಸಿಕೆಗಳನ್ನು ಹಂಚಿಕೊಂಡೆ. ಕೆಲವರು ನನ್ನ ಅನಿಸಿಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಕಮ್ಮಟದಲ್ಲಿಯ ಅನೇಕ ಸಂವಾದಗಳು ಒಂದಕ್ಕೊಂದು ಪೂರಕವಾಗಿದ್ದವು. ಸಾಹಿತ್ಯದ ಬಗೆಗೆ ಒಲವಿರುವ ಹಾಗೂ ಸಂಶೋಧನಾ ವಿದ್ಯಾರ್ಥಿನಿಯಾದ ನನಗೆ ನನ್ನ ಸಾಹಿತ್ಯಿಕ ಮತ್ತು ವೈಜ್ಞಾನಿಕ ಲೇಖನಗಳ ಬರವಣಿಗೆ ಎರಡರಲ್ಲಿಯೂ ನಾನು ಅಳವಡಿಸಿಕೊಳ್ಳಬಹುದಾದ ಹಲವು ಹೊಳಹುಗಳು ದೊರೆತವು.

ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಸಮಾರೋಪ ನುಡಿಗಳನ್ನಾಡಿದರು, ಅತಿಥಿಗಳಾಗಿ ಪ್ರತಿಷ್ಠಾನದ ಖಜಾಂಚಿ ದೇವಂಗಿ ಮನುದೇವ್ ಅವರು ಆಗಮಿಸಿದ್ದರು. ಡಾ. ಬಿ. ವಿ. ವಸಂತಕುಮಾರ ಅವರು ಅಧ್ಯಕ್ಷತೆ ವಹಿಸಿದ್ದರು. ಛಾಯಾಗ್ರಾಹಕ ಸಿದ್ದು, ಅಕಾಡೆಮಿಯ ಜಾವೇದ್, ಪ್ರತಿಷ್ಠಾನದ ಹರೀಶ್ ಹಾಗೂ ಇತರ ಸಹಾಯಕ ಸಿಬ್ಬಂದಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ನಂತರ ಶಿಬಿರಾರ್ಥಿಗಳೆಲ್ಲರಿಗೂ ಪುಸ್ತಕಗಳೊಂದಿಗೆ ಪ್ರಮಾಣಪತ್ರ ನೀಡಿದರು. ಕೊನೆಯದಾಗಿ ಒಂದು ಗ್ರುಪ್ ಫೋಟೊ.

ನಾವು ನಮ್ಮ ನಮ್ಮ ಊರುಗಳಿಗೆ ಹೊರಡುವ ಧಾವಂತ ಒಂದೆಡೆಯಾದರೆ, ಐದು ದಿನಗಳಿಂದ ಒಂದೇ ಪರಿವಾರದ ಸದಸ್ಯರಂತಿದ್ದ ನಮಗೆಲ್ಲ ‘ಕಮ್ಮಟ ಮುಗಿಯಿತಲ್ಲ’ ಎನ್ನುವ ಹಳಹಳಿ ಮತ್ತೊಂದೆಡೆ. ನಾವು ತೀರ್ಥಹಳ್ಳಿ ತಲುಪಲು ಸಂಘಟಕರು ವ್ಯವಸ್ಥೆ ಮಾಡಿದ ಬಸ್‌ನಲ್ಲಿ ಕುಳಿತು ದಾರಿಯುದ್ದಕ್ಕೂ ಮಲೆನಾಡಿನ ಹಸಿರು ಐಸಿರಿ, ಹೊಲ-ಗದ್ದೆ, ತುಂಗಾ ನದಿ ನೋಡುತ್ತಾ ಶಿವಮೊಗ್ಗ ತಲುಪಿದೆವು. ಒಟ್ಟಾರೆಯಾಗಿ ವಿಮರ್ಶಾ ಕಮ್ಮಟದಲ್ಲಿ ಭಾಗವಹಿಸಿದ ನಮ್ಮೆಲ್ಲರಿಗೂ ಇದೊಂದು ಅದ್ಭುತ ಹಾಗೂ ಅವಿಸ್ಮರಣೀಯ ಅನುಭವ. ವಿಶೇಷವಾಗಿ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿನಿಯಾದ ನನಗೆ ಈ ಕಮ್ಮಟ ಹೊಸದೊಂದು ಜಗತ್ತನ್ನು ಪರಿಚಯಿಸಿತು.

| ಮುಕ್ತಾಯ |

‍ಲೇಖಕರು Admin

November 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: