ಪ್ರಸೂತಿ ಗೃಹದಿಂದ ಹೊರಬಂದ ಕಾದಂಬರಿಗಳು

ಸ ರಘುನಾಥ

ಕನ್ನಡದಲ್ಲಿ ಕಾದಂಬರಿ ಪ್ರಕಾರ ಆಬಾದು ನೆಲೆದಲ್ಲಿ ಮೊಳಕೆಯೊಡೆದು ಬೆಳೆಯಿತು. ಸಾರವಂತ ನವೋದಯ ಹೊಲದ ಫಲವತ್ತೆಯನ್ನು ಪ್ರಗತಿಶೀಲ, ನವ್ಯ ಮಾರ್ಗಗಳು ಉಳಿಸಿಕೊಂಡು, ಹೊಸ ಸಂವೇದನೆ, ಪ್ರಜ್ಞಾಪ್ರವಾಹದಂತೆ ಗಟ್ಟಿ ಕಾಳಿನ ರಾಶಿಯ ಸುಗ್ಗಿಯನ್ನೇ ಓದುಗರಿಗೆ ನೀಡಿದವು. ನಂತರ ಬಂದ ಬೆಳವಣಿಗೆಗಳಿಗೆ ನವ್ಯಯುಗ ಹತ್ತಿರದ್ದಾಗಿದ್ದುದರಿಂದ ನವ್ಯೋತ್ತರವೆಂದು ಗುರುತಿಸಲಾಯಿತು. ಇದನ್ನೇ ಕೆಲವರು ಬಂಡಾಯ, ದಲಿತವೆಂದು ಕರೆದರು.

ಕಾಲಘಟ್ಟದ ಈ ಹಣೆಪಟ್ಟಿಗಳು ಏನೇ ಆದರೂ ಕನ್ನಡ ಸಾಹಿತ್ಯ ಎಂದಾಗಿಸಿಕೊಂಡಾಗ ಈ ಸಕಲವೂ ಕನ್ನಡ ಕಾದಂಬರಿಗಳೇ. ಇದರಲ್ಲಿ ಸ್ತ್ರೀವಾದ ಕೃತಿಗಳೂ ಇವೆ. ಆಯಾ ಮನೋಭಾವದ ವಿಮರ್ಶಕರು ಇವುಗಳ ನೆಲೆಗಳನ್ನು ಹುಡುಕಿ ಕೊಟ್ಟು, ಓದುಗರ ಗ್ರಹಿಕೆಯ ಸಾಮರ್ಥ್ಯ ಹೆಚ್ಚಕೆಗೆ ನೆರವಾದರು. ಎಡಬಲ ಪಂಥಗಳೆಂಬುದು ಪ್ರಚಾರಕ್ಕೆ ಬಂದುದು ಹೀಗೆಯೇ. ಚರ್ಚಾ ವೇದಿಕಗಳು ಪೂರಕವಾಗಿ ನಿಂತವು. ಈ ಎಲ್ಲವೂ ಕಾದಂಬರಿಗಳನ್ನು ಓದಲು ಪ್ರೇರಕವಾದವು. ವಾದ ವಿವಾದಗಳು ಓದುಗರನ್ನು ಕುತೂಹಲಿಗಳನ್ನಾಗಿಸಿ ಓದಿನತ್ತ ಸೆಳೆದವು. ಅನುವಾದಿತ ಕಾದಂಬರಿಗಳು ಇವುಗಳ ನಡುವೆ ಎಡೆ ಪಡೆದುಕೊಂಡವು. ಈ ಕಾದಂಬರಿಗಳ ನಡುವೆ ಪತ್ತೆದಾರಿ, ವೈಜ್ಞಾನಿಕ ಕಾದಂಬರಿಗಳು ಇರುತ್ತವೆ.

ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸುವ ಭೂಮಿಕೆಯಲ್ಲಿ ಪತ್ರಿಕೆಗಳ ಪಾತ್ರಕ್ಕೆ ಪ್ರಾಮುಖ್ಯತೆಯಿದೆ. ಧಾರವಾಹಿಗಳನ್ನು ಪ್ರಾರಂಭಿಸಿ, ಆ ಮೂಲಕ ಗಂಭೀರವೆನಿಸುವ ಕಾಂಬರಿಗಳ ಓದಿನತ್ತ ಇವು ನಡೆಸಿದವು. ಈ ನಿಟ್ಟಿನಲ್ಲಿ ವಿಮರ್ಶೆಯ ಪಾತ್ರ ಮುಖ್ಯವಾದುದು. ಓದುಗನಲ್ಲಿ ಆಸಕ್ತಿ ಕುಗ್ಗತೊಡಗುವವರೆಗೆ ಈ ಪರಿಸ್ಥಿತಿ ಇತ್ತು. ಹೀಗಿರುತ್ತಿರುವಾಗಲೇ ಕೊರೋನಾ ಪತ್ರಿಕೆಗಳ ಉಸಿರಾಟವನ್ನು ಕುಗ್ಗಿಸಿದರೂ ಅವು ಧಾರಾವಾಹಿಗಳಾಗಿ ಕಾದಂಬರಿಗಳನ್ನು ಕೊಡುತ್ತಲೇ ಇವೆ. ಅಂದರೆ ಪತ್ರಿಕೆಗಳು ತಮ್ಮ ಪ್ರೋತ್ಸಾವನ್ನು ಮುಂದುವರೆಸಿವೆ.

ಕಾಲದ ಚಲನೆಯಲ್ಲಿ ಬದಲಾವಣೆ ಸಾಧ್ಯವಿಲ್ಲದ್ದು. ಆದರೆ ಅದು ಸಮಾಜದಲ್ಲಾಗುವ ಬದಲಾವಣೆ, ಆಲೋಚನೆ, ಆದರ್ಶಗಳ ಮಾರ್ಗದಲ್ಲಿನ ತಿರುವುಗಳಿಗೆ ಚಾರಿತ್ರಿಕ ಸಾಕ್ಷಿಯಾಗಿಯೇ ಇದೆ. ಈ ಸಾಕ್ಷಿತ್ವದ ಮುನ್ನೆಲೆಯಲ್ಲಿ ಒಂದು ದಶಕದಿಂದ ನನ್ನ ಓದಿಗೆ ಸಿಕ್ಕಿದ ಹೊಸ ತಲೆಮಾರಿನ ಲೇಖಕರ ಕಾದಂಬರಿಗಳನ್ನು ಒಂದು ಹಣೆಪಟ್ಟಯಡಿಗೆ ತರಲು ಇಷ್ಟವಿಲ್ಲದಿದ್ದರೂ ಹಿಂದಿನಂತೆ ಗುರುತಿಸಬೇಕೇನೊ ಅನ್ನಿಸಿ ಬಂಡಾಯ – ದಲಿತೋತ್ತರ ಕಾದಂಬರಿಗಳೆಂದು ಹೆಸರಿಸಿಕೊಂಡು ಓದಿದ್ದೇನೆ. ಗುರುತಿಸಬೇಕೇನೊ ಅನ್ನಿಸಿದ್ದೇಕೆಂದರೆ ಈ ವಿಷಯದಲ್ಲಿ ನನಗೆ ವಿದ್ವತ್ತು ಇಲ್ಲ ಮತ್ತು ಅದರ ಪರಿಭಾಷೆ ತಿಳಿದಿಲ್ಲ.

ಸಾಮಾಜಿಕ, ಆರ್ಥಿಕ, ರಾಜಕೀಯ ಚಳುವಳಿಗಳಿಲ್ಲದ ಕಾಲದಲ್ಲಿ ಬಂದ ಈ ದಶಕದ ಹೊಸಬರ ಕಾದಂಬರಿಗಳಲ್ಲಿ ನನ್ನ ಗಮನಕ್ಕೆ ಬಂದವುಗಳನ್ನು ಓದಿದ ಗ್ರಹಿಕೆಯಲ್ಲಿ ಅವುಗಳ ಗುಣಶೀಲಗಳ ಮುಖೇನ ಲಕ್ಷಣಗಳನ್ನು ಕಾಣುವ ಪ್ರಯತ್ನ ಮಾಡಿರುವೆ. ಮಾರ್ಗ ಲಕ್ಷಣಗಳಲ್ಲಿ ಅಂತಹ ಬದಲಾವಣೆ ತಂದುಕೊಳ್ಳದಿದ್ದರು, ವಸ್ತುವಿನ ವಿಷಯದಲ್ಲಿ ಭಿನ್ನತೆ ಕಾಣಿಸುತ್ತದೆ. ಜನರ ಮಧ್ಯದಿಂದ ಹೋರಾಟವಿರದಿದ್ದರೂ ತಾನು ಪ್ರತಿನಿಧಿಯೊಂದು ಕಂಡುಕೊಂಡ ವರ್ಗವನ್ನು ಚಿತ್ರಿಸಿದೆ. ತಮ್ಮ ಪೂರ್ವದ ಲೇಖಕರಂತೆ ಬೇರನ್ನು ಹಿಡಿದು ಮರಕ್ಕೆ ಬರುವ ಕ್ರಮ ಕಡಿಮೆ. ಆದರೆ ಕಂಡಿದ್ದು, ತಮಗೆ ಲಭ್ಯ ಮಾಧ್ಯಮಗಳಿಂದ ಪಡೆದುದನ್ನು ಬಳಸಿಕೊಳ್ಳುವುದರಲ್ಲಿ ಪ್ರಾಮಾಣಿಕತೆ ಇದೆ. ವಿಸ್ತರವಿಲ್ಲದ ಶಿಕ್ಷಣ ರೀತಿಯ ಪ್ರಭಾವ, ಅದಕ್ಕೆ ತಕ್ಕಂತೆ ಇರುವ ಅನುಕೂಲ ಇದಕ್ಕೆ ಕಾರಣ ಅನ್ನಿಸದಿರದು.

ಕೆಲವು ಕಾದಂಬರಿಗಳು ವ್ಯವಸ್ಥೆಯನ್ನು ಪ್ರಶ್ನಿಸದೆ ಸಮಾಜವನ್ನು ಪ್ರಶ್ನಾರ್ಥಕವಾಗಿ ನೋಡಿರುವುದುಂಟು. ಈ ಎರಡನ್ನೂ ಹಿಡಿತದಲ್ಲಿಟ್ಟುಕೊಂಡ ರಾಜಕೀಯದತ್ತ ಬೆರಳಿಟ್ಟಿರುವುದಿದ್ದರೂ ಅದು ನೇರಮಾಡಿದ ತರ‍್ಬೆರಳಾಗುವುದು ವಿರಳ. ಕಾದಂಬರಿಕಾರನ ಜಾತಿಯ ಮೂಲಕ ಕೃತಿಯನ್ನು ಗುರುತಿಸುವುದಾದಾಗ ಹೀಗಾಗುವುದು. ಇದನ್ನು ಮೀರಿ ವಸ್ತು ಮತ್ತು ಕಥನದ ಗಟ್ಟಿತನವಿರುವ ಕಾದಂಬರಿಗಳು ಬರುತ್ತಿರುವುದಕ್ಕೆ ಕಾರಣ ನಮ್ಮಲ್ಲಿನ ಸಶಕ್ತ ಕಾದಂಬರಿಕಾರರ ವಾಸರಸುದಾರಿಕೆ ಪಡೆದಿಕೊಂಡಿರುದು.

ರುಚಿ ವೈವಿಧ್ಯತೆ ಇರದ, ಕೆಲವೇ ನಿಮಿಷಗಳಲ್ಲಿ ತಿನಿಸುಗಳನ್ನು ತಯಾರಿಸುವ ವಸ್ತುಗಳ ಸೆಳೆತವಿರುವ ಕಾಲದಲ್ಲಿ, ಸಂತೆ ಭಿನ್ನವೆನಿಸುತ್ತದೆ. ಸಂತೆತನ ಕೆಲವು ಕಾದಂಬರಿಕಾರರಲ್ಲಿದೆ. ಇಂತಹವರು ಈ ಪ್ರಕಾರದಲ್ಲಿ ತಮ್ಮ ಬೆಳವಣಿಗೆಯನ್ನು ತೋರಿಸುತ್ತಿದ್ದಾರೆ.

ಕಥಾವಸ್ತುವಿನತ್ತ ಗಮನ ಹರಿಸಿದಾಗ ಚರಿತ್ರೆ, ಪುರಾಣಗಳಿಂದಲೂ ವಸ್ತುವಿನ ಆಯ್ಕೆ ಇದೆ. ಅಲ್ಲಿನ ಪಾತ್ರಗಳನ್ನು ಈಗಿನ ವೈಚಾರಿಕ, ಸಾಮಾಜಿಕ ನೆಲೆಯಲ್ಲಿ ಚಿತ್ರಿಸುವಾಗ ತೋರುವ ನೈಪುಣ್ಯತೆಯನ್ನು ಚರ್ಚಿಸುವುದಕ್ಕೆ ಅಂತಹ ಇನ್ನಷ್ಟು ಕೃತಿಗಳ ಬೆಂಬಲಬೇಕಾಗುತ್ತದೆ. ಅದಕ್ಕಾಗಿ ನಿರೀಕ್ಷೆಯೂ ಇದೆ.

ನಾವು ಯಾವುದನ್ನು ಸ್ಥಾವರ, ಜಂಗಮ ಎನ್ನವೆವೋ ಆ ಎರಡೂ ಅರ್ಥವಾಗಬೇಕು. ಅಸ್ಥಿರ ಆರ್ಥಿಕತೆ, ವ್ಯಕ್ತಿಯು ತನ್ನನ್ನು ತಾನೇ ಸಮಷ್ಟಿ ಅಂದುಕೊಳ್ಳುವ ಭ್ರಮೆಯ ಪರಿಭ್ರಮಣದಲ್ಲಿ ಸಿಕ್ಕಿಕೊಳ್ಳುತ್ತಿರುವಾಗ ಕಾದಂಬರಿಕಾರ ತನ್ನ ರಚನೆಯ ದಿಕ್ಕನ್ನು ಗುರುತಿಸುವಲ್ಲಿ ಗೊಂದಲಗೊಂಡಿರುವುದುಂಟು. ಈ ಗೊಂದಲ ಕೃತಿಯಲ್ಲಿ ಕಾಣುವುದು ಓದುಗನ ದೃಷ್ಟಿಯಲ್ಲಿ ಒಪ್ಪಿತವಾಗದು. ಇದನ್ನು ನಿವಾರಿಸಿಕೊಳ್ಳಬೇಕಾದವನು ಲೇಖಕನೇ.

ನಾನು ಓದಿದ ಕಾದಂಬರಿಗಳಲ್ಲಿ ಕೆಲವು ಅಲ್ಲಲ್ಲಿ ಗೊಬ್ಬರಗುಡ್ಡೆ ಅಡಿಯ ಪೈರಿನಂತೆ ಗೋಚರಿಸಿವೆ. ಒಂದು ಭಾಗವೋ ಪ್ರಸಂಗವೋ ಎಷ್ಟು ಚೆನ್ನಾಗಿ ಮೂಡಿದೆ ಅನ್ನಿಸಿದ್ದು ಗೊಬ್ಬರದುಡ್ಡೆ ಅಡಿಯ ಪೈರಿನಂತೆ. ಅದರ ಹೊರತಾದುದು ಅಷ್ಟು ಸಾರ ಸಿಗದ ಪೈರಿನಂತೆ. ಅಂದರೆ ಒಂದು ಮಟ್ಟಸವಾದ ಬೆಳೆಯಿರದ ಹೊಲದಂತೆ. ಸಾಹಿತ್ಯ ಪರಿಭಾಷೆಯಲ್ಲಿ ಇದು ಬಂಧ. ‘ಸೆಬ್ಬಿ’ ಎಂಬುದು ಬೇಸಾಯದ ಪರಿಭಾಷೆ.

ಸರಿಯಾದ ಉಳುಮೆ, ಗೊಬ್ಬರ, ತೇವಾಂಶ ಇರುವುದು ಸೆಬ್ಬಿ. ಈ ಎಲ್ಲ ಸರಿಕ್ರಮದಲ್ಲಿ ಇದ್ದರೆ ‘ಹದ’. ಹದನರಿತ ಬಿತ್ತನೆ ಬೆಳೆಗೆ ಮುಖ್ಯ. ಕಥೆ, ಕಾದಂಬರಿ, ಕಾವ್ಯ, ನಾಟಕಕ್ಕೆ ಹದಬೇಕು. ಶಿಶುನಾಳ ಶರೀಫರು ‘ಪದ ಬರಕೊ’ ಅಂದಿದ್ದರ ಧ್ವನಿ ಈ ಹದದ್ದು. ಹದಗೊಂಡ ಕಾದಂಬರಿಗಳು ಈ ದಶಕದಲ್ಲಿ ಬಂದಿದ್ದರೂ ಸಿದ್ಧ ಕಾರಣಗಳಿಂದ ನಿರ್ಲಕ್ಷ್ಯಕ್ಕೆ ಸಿಲುಕ್ಕಿದ್ದು ನಿಜ. ಕನ್ನಡ ಸಾರಸ್ವತ ಲೋಕದಲ್ಲಿ ಈ ನಿರ್ಲಕ್ಷ್ಯ ಇಂದಿನ ನಡವಳಿಕಯೇನಲ್ಲ.

ಕಥೆ, ಕಾದಂಬರಿ ಪಾತ್ರಗಳ ಮೂಲಕ ನಡೆಯುವ ಕಥನ ಬಿತ್ತನೆಯ ಕಾರ್ಯ. ಬಿತ್ತಿಸುವವನು ಲೇಖಕ. ಯಾವ ರೀತಿಯ ಬಿತ್ತನೆಯಾಗಬೇಕೆಂದು ನಿರ್ದೇಶಿಸುವವನು ಇವನೆ. ಬಿತ್ತನೆಯಲ್ಲಿ ಕೈಬಿತ್ತನೆ, ಕೂರಿಗೆ ಬಿತ್ತನೆ, ಯಂತ್ರಬಿತ್ತನೆ, ಪೈರು ನಾಟಿ ಎಂದೆಲ್ಲ ಇದೆ. ಕೈ ಬಿತ್ತನೆಗೆ ಪರಿಣತಿ ಇರಬೇಕು. ಕೂರಿಗೆ ಬಿತ್ತನೆಗೆ ಬೀಜ ಬಿಡುವ ಕ್ರಮದ ಅರಿವಿರಬೇಕು. ಯಂತ್ರ ಬಿತ್ತನೆ ತಂತ್ರಜ್ಞಾನ ನಿಯಂತ್ರಿತ. ಪೈರು ನಾಟಿ ಸುಭತರ.

ಯಂತ್ರ ಬಿತ್ತನೆಗಿಂತ ಉಳಿದವು ಉತ್ತಮ. ಒತ್ತಾದ ಪೈರನ್ನು ತೆಗೆಯಲು, ಕಳೆಯನ್ನು ಕಡಿಮೆ ಮಾಡಲು ಗುಂಟವೆ ಹಾಕುತ್ತಾರೆ. ಉಳಿದ ಕಳೆ ತೆಗೆಯುವುದು ಕೈ ಬಳಕೆಯಲ್ಲಿ. ಕಳೆ ನಾಶಕವಾಗಿ ರಾಸಾಯನಿಕಗಳುಂಟು. ಇವು ನೆಲದ ಸಾವಯವಗಳನ್ನು ಕೊಲ್ಲುತ್ತವೆ. ಇವು ಪರವಸ್ತುಗಳು. ಗುಂಟವೆ ಹಾಕುವುದು, ಕೈಯಿಂದ ಕಳೆ ತೆಗೆಯುವುದು ಅನ್ನುವುದರ ಅರ್ಥ ಲೇಖಕ ತನ್ನ ಕೃತಿಯನ್ನು ಸ್ವಯಂ ತಿದ್ದಿ ಚೊಕ್ಕಗಟ್ಟಿಸುವುದು.

ಇಂತು ರೂಪವನಾಂತ ಕಾದಂಬರಿ ಒಂದು ಸುಂದರ ಗದ್ಯಕಾವ್ಯ ಕೃತಿ ಎನಿಸಿಕೊಳ್ಳುವುದು. ಇಂತಹುದನ್ನು ಹುಡುಕಿ ಓದಿ, ಮರು ಓದಿಗೆ ಜೋಪಾನ ಮಾಡುವುದಾಗಿರುತ್ತೆ. ಈ ಹುಡುಕಿಗೆ ಸಿಕ್ಕಿವು ಕಡಿಮೆ ಎಂದರೆ ಇದನ್ನು ಪೂರ್ವಾಗ್ರಹ ಪೀಡಿತ ಅನ್ನುವ ಬದಲು, ತಮ್ಮ ಕೃತಿಯನ್ನು ನಿರ್ಮೋಹಿತರಾಗಿ ಓದಿ, ಓದಿಸಿ ಆರೋಪಿಯನ್ನಾಗಿಸುವುದೊ, ವಿರೋಧಿಸುವುದೊ ಆಗಬೇಕು. ಕೃತಿಯನ್ನು ತಿರಸ್ಕರಿಸದೆ, ಅಲಕ್ಷಿಸದೆ ಮಾತು ಆಡಿದವನಿಗೆ ಮುನಿದರೆ ಕೃತಿಗೆ ಮುನಿದಂತೆ. ನಷ್ಟ ಅವನದಲ್ಲ ಕೃತಿಕಾರನದು.

ಕೃತಿಯನ್ನು ಸಮಾಜಕ್ಕೆ ಬಿಟ್ಟ ಲೇಖಕ ಆನೆ, ಕುದುರೆಯನ್ನೇರಿರಬಾರದು. ಕುಂಕುಮ ಕಸ್ತೂರಿ ಪೂಸಿಕೊಂಡಿರಬಾರದು. ಆಗ ಸಮಾಜ ತನ್ನ ಕೃತಿಯಿಂದ ಪಡೆದ ಅನುಭವ, ಪ್ರೇರಣೆ, ಕೃತಿಕಾರನಾಗಿ ತನ್ನ ಸ್ಥಾನವನ್ನು ಅರಿಯಲು ಸಾಧ್ಯ. ಈ ಸಂದರ್ಭದಲ್ಲಿ ಈ ಮಾತನ್ನು ಆಡಿಸಿದ್ದು ಬಸವಣ್ಣನ ‘ಕುದುರೆಯನೇರಿಕೊಂಡು ಹೋದಿರೆ ಅಯ್ಯಾ… ಎಂಬ ವಚನ. ಇದರ ಧ್ವನಿ ಮನಸ್ಸಿಗೆ ಸಿಕ್ಕಿದರೆ ಆಡಿರುವ ಮಾತು ಅರ್ಥಕ್ಕೆ ಬರುತ್ತದೆ.

‘ಮಾತು ಮಾತು ಮಥಿಸಿ ಬಂತು ನಾದದ ನವನೀತ’ ಎಂದರು ಬೇಂದ್ರೆ. ಗದ್ಯದಲ್ಲಿಯೂ ಇದು ಅಪೇಕ್ಷಿತ. ಇಲ್ಲಿ ತೊಗಲಿನ ತಮಟೆ ರೂಪಕವಾಗಿ ಕಣ್ಣಿನಲ್ಲಿ ನಿಲ್ಲುತ್ತದೆ. ತಮಟೆಗೆ ಆ ಅದ್ಭುತ ನಾದ, ಅದಕ್ಕೆ ತಕ್ಕ ಲಯ ಬರುವುದು ‘ಕಾಕು’ ಹಾಕುವುದರಿಂದ. ತಮಟೆಯನ್ನು ಬೆಂಕಿ ಉರಿಗೆ ಹಿಡಿದು ಕಾಕಿಗೆ ತರುವುದು. ಅಂದರೆ ನಾದಗೊಳಸುವುದು. ಪಾತ್ರಗಳು, ಘಟನೆಗಳು, ಭಾಷೆ ಲೇಕಕನ ಒಳಗೆ ಕಾಕುಗೊಂಡಾಗ ಆ ಕಾದಂಬರಿ ಕೊಡುವ ಅನುಭೂತಿ ಅತೀತ. ಕಾದಂಬರಿಯ ಗೆಲುವಿನ ಕಾರಣಗಳಲ್ಲಿ ಇದೂ ಒಂದು. ಇಂಥ ನಾಕಾರು ಕಾದಂಬರಿಗಳ ಓದು ನನ್ನೊಳಗೆ ಸಂತೋಷವನ್ನು ಕುಣಿಸಿವೆ.

ಓದಿ, ಓದಿದ ಮೇಲೆ ಅದು ಉಳಿಸಿದ್ದು ಏನನ್ನು ಎಂದು ಇಡೀ ಕಾದಂಬರಿಯ ಹೆಣಿಗೆಯನ್ನು ಮೆಲುಕು ಹಾಕಿದಾಗ, ಕೆಲವು ಮನ ಓದಿನವು, ಕೆಲವು ಕಣ್ಣೋದಿನವು ಆಗಿ ವಿಂಗಡಣೆಗೊಂಡವು. ನನ್ನ ಓದುವಿಕೆಯಲ್ಲಿ ಕೆಲವು ತಂಗಾಳಿ ಬೀಸಿದರೆ, ಕೆಲವು ಬಿಸಿಗಾಳಿ, ಒಣಗಾಳಿ ಬೀಸಿದವು. ಇಲ್ಲ ಸ್ಪಷ್ಟವಾದುದೇನೆಂದರೆ, ಕೆಲವರು ಕೃಷಿಯಲ್ಲಿ ಸೋತಿಲ್ಲ, ಆಬಾದು ಮಾಡಿಕೊಳ್ಳುವುದರಲ್ಲಿ ಸೋಲಿದೆ. ಆಬಾದು ಲೇಖಕನಿಂದಲೇ ಆಗಬೇಕು ಅನ್ನುವಾಗ ಹಳೆರಾಗಿ ತಿಂಬುದು ಎಂಬ ಲೋಕದ ನುಡಿಗಟ್ಟು ನೆನಪಾಗುದು.

ಹೆತ್ತ ಕೂಸನ್ನು ಎತ್ತಿಕೊಳ್ಳುವುದಕ್ಕೆ ಹೆರಿಗೆ ನೋವನ್ನು ಅನುಭವಿಸಬೇಕಿಲ್ಲ. ಹೆರುವಾಗಿನ ನೋವು ಇನ್ನೊಂದು ಕೂಸಿಗೆ ಬಸುರಾಗುವಾಗ ಮರೆತಿರುತ್ತದೆ. ಈ ಹೆರಿಗೆಯ ನೋವನ್ನು ಅನುಭವಿಸಲು ಬಸುರಿ ಎಲ್ಲ ರೀತಿಯಿಂದ ಸಿದ್ಧಳಾಗುತ್ತಾಳೆ. ಆರೋಗ್ಯವಂತ ಶಿಶುವಿಗಾಗಿ ಅವಳ ಹಂಬಲವಿರುತ್ತದೆ. ಇದು ಲೇಖಕನ ಪರಿಯೂ ಆಗಿರುವುದರಿಂದ ಮುಂದಿನ ಕೃತಿಗಾಗಿ ಅವನ ಮನ ಬಸಿರಾಗಲೇಬೇಕು. ಇದು ಸಕ್ರಿಯತೆ.

ಸಾಕಷ್ಟು ಹಿಂದಿನ ವರ್ಷಗಳಲ್ಲಿಯೇ ವಿಮರ್ಶೆಯ ದಿಕ್ಕಿನ ಬಗ್ಗೆ ಚರ್ಚೆಗಳು ನಡೆದುದನ್ನು ನೆನೆಯಬೇಕು. ಹಿತ್ತಲಿಗೆ ಹೋಗಬೇಕಿದೆ ಎಂಬಂಥ ಮಾತು ರಚನೆಗೆ ಮಾತ್ರವೆಂದಲ್ಲ, ವಿಮರ್ಶೆಗೂ ಕೂಡ ಎಂಬುದು ಇದರ ಅರ್ಥ. ಆಮದು ವಿಮರ್ಶಾ ಪರಿಭಾಷೆ ಕೆಲವು ಘಟ್ಟಗಳಲ್ಲಿ ಅಗತ್ಯವಾಗಿತ್ತು. ‘ಮಣ್ಣಿನ ವಾಸನೆ’ ಎಂಬ ಪರಿಭಾಷೆಯ ಭಾವದಲ್ಲಿರುವುದು ಹಿತ್ತಲು ಅನ್ನಿಸುತ್ತದೆ.

ವಿಮರ್ಶ ಕೃತಿಯ ನೇರ್ಪುತನವನ್ನು ತಿಳಿಸುತ್ತಲೆ, ಗಾಳಿಯ ಒತ್ತು ಮತ್ತು ತೆಳುವಿನಂತೆ ತೂರಬೇಕು. ತೂರಿದಾಗ ಆಗುವುದೇನು, ಊಳಿಯುದೇನು ಎಂದು ಸೂಚಿತವಾಗಲು ‘ತೂರಿಕೆ’ ಪಾರಿಭಾಷಿಕ ಶಬ್ದ ಆಗದೆ? ಚೊಕ್ಕ ‘ಒಕ್ಕಲುತನ’ ಕಾಣಿಸುವುದು ಎಂದರೆ ಅರ್ಥವಾಗದ್ದು ಯಾರಿಗೆ? ಮಳೆ ಕಂಡ ಬೆಳೆ, ಮೆಣಸಿನ ಕಾರ, ಜಾತ್ರೆಯ ಸಂದಣಿ, ಗಡ್ಡೆಬಿಟ್ಟ ಉಳುಮೆ, ಬೇಸಗೆಯ ಬೆಳದಿಂಗಳು, ಎತ್ತಾಗಿಸುವುದು, ಹೆಗಲಾಗುವುದು, ನಾದಿದ ಕಣಕ, ಕಡೆಯದ ಮೊಸರು, ಕಾವಿಗೆ ಕುಳಿತ ಹಕ್ಕಿ, ಹೂಳು ಮೊಟ್ಟೆ, ಕಂದು ಹಾಕುವುದು, ಹಕ್ಕಿ ಹಿಕ್ಕೆಯಲ್ಲಿನ ಬೀಜ, ಚಿಟ್ಟೆಗೆ ಕಾದ ಹುವ್ವು, ಬೂರುಗಕಾಯಿ, ಹುಲ್ಲಿನಡಿ ಮಾಗಿದ ಮಾವು, ಗುಲಗಂಜಿ, ಬೆಟ್ಟ ಹತ್ತದ ಬೆಂಕಿ, ಸಿಗದ ಲಗಾಮು, ಕಾಗೆಗೂಡಿನ ಕೋಗಿಲೆಯ ಮೊಟ್ಟೆ, ಶ್ರೀಗಂಧದ ಬೇರು, ಹೀಗೆ ಪಾರಿಭಾಷಿಕ ಶಬ್ದಗಳ ನೆರವಿಯೇ ಸಿಗುವುದು.

ನನ್ನ ಈ ಮಾತಿಗೆ ತೇಲಿಕೆಯ ನಗೆ ಬಂದೀತು. ಇಂದಿಗೆ ಇದು. ಮುಂದೊಂದು ದಿನ ಇತ್ತ ಚಿಂತೆನೆ ಹರಿದಾಗ ಈ ನಗೆ ಇರದಾಗುವುದು. ಇಲ್ಲಿ ಅನ್ವಯ ಹೇಗೆ ಎಂಬುದನ್ನು ಆಲೋಚಿಸಬೇಕಿದೆ ಎಂಬ ಅರಿವು ನನ್ನಲ್ಲಿದೆ. ನಾವೇ ಅನ್ವಯವನ್ನು ಕಂಡುಕೊಳ್ಳಬೇಕು. ಈಗ ಪ್ರಯೋಗದಲ್ಲಿರುವ ಅನೇಕ ಪಾರಿಭಾಷಿಕ ಶಬ್ದಗಳು ಅನ್ವಯಕ್ಕೆ ಬಂದ ಕ್ರಮ ಈ ತೆರನಾದುದು. ಇಂದು ನನ್ನ ಅಭಿಪ್ರಾಯಕ್ಕೆ ಸಮರ್ಥನೆ ಸಾಲದಿದ್ದೀತು. ಆದರೆ ಅಚ್ಚಗನ್ನಡ ವಿಮರ್ಶಾ ಪರಿಭಾಷೆಯ ಕೋಶಕ್ಕಾಗಿ ನಾಳೆ ನಡಿಗೆ ಆರಂಭವಾಗದಿರದು.

ಇಷ್ಟು ಹೇಳುವಾಗ ‘ಹನ್ನೊಂದು ಹೆತ್ತವಳಿಗೆ ಒಂದು ಹೆತ್ತವಳು ಹೆರಿಗೆ ನೋವಿನ ಭಯ ಹಿಡಿಸಿದಳಂತೆ’ ಎಂಬ ಗಾದೆಯನ್ನು ಮರೆತುದಿಲ್ಲ.

‍ಲೇಖಕರು Avadhi

June 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: