ಸಿನೆಮಾ ಕುರಿತು ಇನ್ನಿಲ್ಲದ ಆಸಕ್ತಿ ಹೊಂದಿರುವ ಎ ಎನ್ ಪ್ರಸನ್ನ ಈ ಕ್ಷೇತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಅದರ ಸಾಲಿಗೆ ಹೊಸ ಸೇರ್ಪಡೆ ‘ಚಿತ್ರಕಥೆಯ ಸ್ವರೂಪ’
೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಈ ಕೃತಿಗೆ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರು ಬರೆದಿರುವ ಮುನ್ನುಡಿಯನ್ನು ಪ್ರಕಟಿಸುತ್ತಿದ್ದೇವೆ.
ಈ ಕೃತಿ ಚಿತ್ರೋತ್ಸವದ ಅಂಗಳದಲ್ಲಿ ಲಭ್ಯವಿದೆ. ಕೊಂಡುಕೊಳ್ಳಿ
ಗಿರೀಶ್ ಕಾಸರವಳ್ಳಿ
“ಚಿತ್ರಕಥೆ ಎನ್ನುವುದು ಅಸ್ತಿಭಾರ ಶಿಲೆ ಇದ್ದಂತೆ”, “ಚಿತ್ರಕೃತಿಗೆ ಬುನಾದಿಯೇ ಅದು”, “ಒಳ್ಳೆಯ ಚಿತ್ರಕಥೆ ಇದ್ದರೆ ಅರ್ಧ ಸಿನಿಮಾ ಆದಂತೆ”, “ಕೆಟ್ಟ ಚಿತ್ರಕಥೆಯಿಂದ ಎಂದೂ ಒಳ್ಳೆಯ ಸಿನಿಮಾ ಮಾಡಲಾಗುವುದಿಲ್ಲ” ಇತ್ಯಾದಿ ಹೇಳಿಕೆಗಳನ್ನು ಕೇಳಿ ಕೇಳಿ ದಣಿವು ಬಂದಿದೆಯಾದರೂ ಒಳ್ಳೆಯ ಚಿತ್ರಕತೆಯ ಲಕ್ಷಣಗಳೇನು, ಒಳ್ಳೆಯ ಚಿತ್ರಕಥೆಯ ಅಂಗಾಂಶಗಳೇನು ಎಂದು ವಿವರಿಸುವ ಲೇಖನಗಳು, ಪುಸ್ತಕಗಳು ಸಿಗುವುದು ವಿರಳ.
ಈ ಮಾತನ್ನು ಹೇಳುತ್ತಲೇ ಒಳ್ಳಯ ಚಿತ್ರಕಥೆ ಬರೆಯಲು ಸೂತ್ರವಿದೆಯೇ ಎಂದು ಯಾರಾದರೂ ಪ್ರಶ್ನಿಸಿದರೆ “ಇಲ್ಲ” ಎನ್ನುವುದೇ ನನ್ನ ಉತ್ತರವಾಗಿರುತ್ತದೆ. ಈ ಮೇಲಿನ ಎರಡೂ ಹೇಳಿಕೆಗಳಲ್ಲೇ ಪರಸ್ಪರ ವಿರೋಧಾಭಾಸ ಇದೆ ಎಂದು ಮೇಲು ಸ್ತರದಲ್ಲೇ ಅನ್ನಿಸುತ್ತದೆಯಾದರೂ ಸ್ವಲ್ಪ ಆಳಕ್ಕಿಳಿದು ಯೋಚಿಸಿದರೆ ಎರಡೂ ಬೇರೆ ಬೇರೆ ನೆಲೆಯಿಂದ ಹುಟ್ಟಿದ ಹೇಳಿಕೆಗಳು ಎನ್ನುವುದು ಸ್ಪಷ್ಟವಾಗುತ್ತದೆ.
ಇಂದು ಸಾಹಿತ್ಯ ಕೃತಿ – ಕಥೆಯನ್ನೋ, ಕಾದಂಬರಿಯನ್ನೋ ರಚಿಸಲು ಸಿದ್ಧ ಸೂತ್ರ ಇದೆಯಾ ಎಂದು ಯಾರಾದರೂ ಪ್ರಶ್ನಿಸಿದರೆ ಅದೊಂದು ನಗೆಪಾಟಲಾಗುವ ಪ್ರಶ್ನೆಯಾಗುತ್ತದೆ. ಹಾಗಿರುವಾಗ ಚಿತ್ರಕಥೆಗೆ ಸಿದ್ಧ ಮಾದರಿ ಹೇಗೆ ಸಾಧ್ಯ ಎನ್ನುವುದಾದರೆ ಅದಕ್ಕೆ ಹೀಗೆ ಉತ್ತರಿಸಬಹುದೇನೋ. ಕತೆ, ಕಾದಂಬರಿಗಳ `ದರ್ಶನ’ಕ್ಕೆ ಸಂಬಂಧಿಸಿದಂತೆ ಚಿತ್ರದ `ದರ್ಶನ’ಕ್ಕೂ ಸೂತ್ರಗಳು ಹೇಳಲಾಗುವುದಿಲ್ಲ.
ಈ `ದರ್ಶನ’ ಆಯಾ ಕರ್ತೃವಿನ ಚಿಂತನೆಯಿಂದ, ಆತನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾಳಜಿಗಳಿಂದ ಹುಟ್ಟುವಂತಹುದು. ಅರ್ಥಾತ್ ಒಡಲಾಳದಿಂದ ಬರುವಂತಹುದು. ಹೊರಗಿನಿಂದ ಕರ್ತೃವಿನ ಮೇಲೆ ಹೇರಿದಾಗ ಆ ಕೃತಿಗೆ ಕೃತಕತೆ ಬರುತ್ತದೆ. ಆದರೆ ಸಿನಿಮಾಗಳಲ್ಲಿ `ಆಕೃತಿ’ಗೆ ಸಂಬಂಧಿಸಿದಂತೆ ಕೆಲವು ಮೂಲ ಮಾದರಿಗಳನ್ನು ಸೂತ್ರೀಕರಿಸಬಹುದು. ಅದಕ್ಕೆ ಕಾರಣ ಸಿನಿಮಾ ಕೃತಿ ಮತ್ತು ಸಾಹಿತ್ಯ ಕೃತಿ `ಕಾಲ’ವನ್ನು ನಿಭಾಯಿಸುವ ಕ್ರಮ ಭಿನ್ನವಾಗಿರುವುದೇ ಆಗಿರುತ್ತದೆ.
ಸತ್ಯಜಿತ್ ರೇಯವರು `ಆನ್ ಸ್ಕ್ರಿಪ್ಟ್ ರೈಟಿಂಗ್’ ಎಂಬ ಲೇಖನವೊಂದರಲ್ಲಿ ಚಿತ್ರಕಥೆಯಲ್ಲಿ `ಸಮಯ’ವನ್ನು ಸಂಬಾಳಿಸುವುದಕ್ಕೆ ಸಾಹಿತ್ಯ ಮಾದರಿ ಆಗಲಾರದು. ಸಂಗೀತ ಮಾದರಿಯಾಗುತ್ತದೆ ಎಂದಿದ್ದಾರೆ. ಅದರಲ್ಲೂ ಪಾಶ್ಚಿಮಾತ್ಯ ಸಂಗೀತ ಮಾದರಿ ಒದಗಿಸುತ್ತದೆ ಎನ್ನುತ್ತಾರೆ. ಪೂರ್ವನಿರ್ದಿಷ್ಟವಾದ ವಿನ್ಯಾಸ ಆ ಸಂಗೀತಕ್ಕೊಂದು ಬಿಗಿಯಾದ ಬಂಧ ತಂದು ಕೊಡುತ್ತದೆ ಎಂಬುದು ಅವರ ಅಭಿಪ್ರಾಯ. ತಮ್ಮ ಆ ಅಭಿಪ್ರಾಯಕ್ಕೆ ಪೂರಕವಾಗುವಂತೆ ಒಂದು `ರೋಂಡೋ’ದಲ್ಲೋ, ಒಂದು `ಸೊನಾಟಾ’ದಲ್ಲೋ ಹೇಗೆ ಆಕೃತಿ ಸೃಷ್ಟಿಗೊಳ್ಳುತ್ತದೆ ಎಂದು ಉಲ್ಲೇಖಿಸಿ, ಆ ಕ್ರಮದಲ್ಲೇ ಸಿನಿಮಾದಲ್ಲೂ `ಆಕೃತಿ’ ಸೃಷ್ಟಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ವಾದಿಸುತ್ತಾರೆ.
ತಮ್ಮ ವೃತ್ತಿ ಜೀವನ ಆರಂಭವಾಗುವ ಮೊದಲು, ಯಾವುದಾದರೂ ಕತೆ, ಕಾದಂಬರಿ ಆಧರಿಸಿ ಒಂದು ಸಿನಿಮಾ ಆಗುತ್ತಿದೆ ಎಂದು ಅವರಿಗೆ ತಿಳಿದು ಬಂದರೆ, ತಕ್ಷಣವೇ ತಾವೂ ಅದನ್ನು ಆಧರಿಸಿ ಚಿತ್ರಕತೆ ಬರೆಯುತ್ತಿದ್ದರಂತೆ. ಆ ಚಿತ್ರ ಬಿಡುಗಡೆಯಾದ ನಂತರ ಆ ಚಿತ್ರಕ್ಕೂ, ತಾವು ಬರೆದ ಚಿತ್ರಕಥೆಗೂ ತಾಳೆ ಹಾಕಿ, ತಮ್ಮ ಚಿತ್ರಕಥೆಯ ಗಟ್ಟಿತನ ಯಾವುದು, ದೌರ್ಬಲ್ಯ ಯಾವುದು ಎಂದು ಅರ್ಥಮಾಡಿಕೊಳ್ಳುತ್ತಿದ್ದರಂತೆ.
ಜಾಗತಿಕ ಸಿನಿಮಾದ ಖ್ಯಾತನಾಮರಾದ ಜಪಾನಿನ ಅಕಿರಾ ಕುರೊಸಾವ ಹಾಗೂ ಪೋಲೆಂಡಿನ ಆಂದ್ರೆ ವಾಝ್ಡಾ ಕೂಡ ಇಂತಹದೇ ಅಭಿಪ್ರಾಯ ಪಡುತ್ತಾರೆ. ಹಾಗಾಗಿ ಚಿತ್ರಕಥೆ ಎನ್ನುವುದು ಕತೆ ಅಥವಾ ಕಾದಂಬರಿಗಳ ವಿನ್ಯಾಸಕ್ರಮಕ್ಕಿಂತ ಭಿನ್ನವಾಗಿರುತ್ತದೆ. ಹಾಗೂ `ರಂಗಕೃತಿ’ಯ ವಿನ್ಯಾಸಕ್ಕೆ ಸಮೀಪವಾಗಿರುತ್ತದೆ. ಸಿನಿಮಾವೊಂದಕ್ಕೆ `ಚಿತ್ರಕಥೆ’ ಬರೆಯುವಾಗಲೇ ಲೇಖಕ ಇದನ್ನು ಗಮನದಲ್ಲಿಟ್ಟುಕೊಂಡೇ `ಕಾಲ ಮತ್ತು ಅವಕಾಶ’ ಎರಡನ್ನೂ ವಿನ್ಯಾಸ ಮಾಡುತ್ತಿರಬೇಕಾಗುತ್ತದೆ.
ಈ ಅನಿವಾರ್ಯತೆ ಕಥಾಲೇಖಕರಿಗೆ ಇರುವುದಿಲ್ಲ. ಚಿತ್ರಕಥಾ ಲೇಖಕನಿಗೆ ಇರಬೇಕಾದ ಇನ್ನೊಂದು ಎಚ್ಚರ ತಾನು ಕಾಗದದ ಮೇಲೆ ಬರೆದ ಅಂಶಗಳು ತೆರೆಯ ಮೇಲೆ ಸಿನಿಮಾ ಪರಿಕರಗಳಾದ ಬಿಂಬ, ಶಬ್ದ, ಸಂಕಲನಗಳ ಮೂಲಕ ಹೇಗೆ ಪರಿವರ್ತಿತವಾಗಬಲ್ಲದು ಎನ್ನುವ ಸಾಧ್ಯತೆಯ ಅರಿವು. ಹಾಗಾಗಿ ಕೇವಲ `ದರ್ಶನ’ ಅಥವಾ `ಆಶಯ’ಯದ ಸ್ಪಷ್ಟತೆ ಇದ್ದರೆ ಸಾಲದು. ವಿನ್ಯಾಸ ಆಕೃತಿಯಾಗಿ ಅದು ಮಾರ್ಪಡುವ ಸಾಧ್ಯತೆಗಳ ಅರಿವೂ ಇರಬೇಕು. ಅಂದರೆ ಆತ ಬರಹಗಾರನಾಗಿದ್ದರಷ್ಟೆ ಸಾಲದು, ಸಿನಿಮಾ ತಂತ್ರಜ್ಞನೂ ಆಗಿರಬೇಕು.
ಆತ್ಮೀಯ ಗೆಳೆಯ ಎ. ಎನ್. ಪ್ರಸನ್ನರ ಈ ಪುಸ್ತಕ ಅಂತಹ ಅನೇಕ ಒಳನೋಟಗಳನ್ನು/ಸಾಧ್ಯತೆಗಳನ್ನು ನಿವೇದಿಸುತ್ತಾ ಹೋಗುವುದರಿಂದಲೇ ಇದೊಂದು ಅಮೂಲ್ಯ ಪುಸ್ತಕವಾಗುತ್ತದೆ. ಸಿನಿಮಾ ಒಂದರಲ್ಲಿ `ನಾಟಕೀಯತೆ’ಯನ್ನು, ಭಾವತೀವ್ರತೆಯನ್ನು ಯಾವ ಹದದಲ್ಲಿ, ಯಾವ ಬಿಗಿಬಂಧದಲ್ಲಿ ಹಿಡಿಯಬೇಕೆನ್ನುವುದು ಪ್ರತಿ ಚಿತ್ರಕಥಾ ಲೇಖಕ/ನಿರ್ದೇಶಕನ ಎದುರಿಗಿರುವ ಸಮಸ್ಯೆ. ಸಾಂಪ್ರದಾಯಿಕ ಚಿತ್ರಶೈಲಿಯಲ್ಲಿ ಅನುಕರಿಸುವ ಮೂರು ಅಂಕದ ಅಥವ ಐದು ಅಂಕದ ವಿನ್ಯಾಸ ಕ್ರಮವನ್ನು ವಿವರಿಸುವ ಮೂಲಕ ಆ ಸಮಸ್ಯೆಗೆ `ಒಂದು’ ಪರಿಹಾರ ಸೂಚಿಸುತ್ತಾರೆ.
`ಒಂದು’ ಪರಿಹಾರ ಎಂದು ಹೇಳುವುದಕ್ಕೂ ಕಾರಣವಿದೆ. ಇದಕ್ಕೆ ಪರ್ಯಾಯವಾಗಿಯೂ ಚಿತ್ರ ಕಟ್ಟಬಹುದು. ಏಕೆಂದರೆ ಫ್ರೆಂಚ್ ಚಿತ್ರ ನಿರ್ದೇಶಕ ಜಾನ್ ಲುಕ್ ಗೊಡಾರ್ಡ್ ಹೇಳುವ ಮಾತನ್ನು ಗಮನಿಸಿ. `ಎವ್ರಿ ಸ್ಟೋರಿ ಶುಡ್ ಹ್ಯಾವ್ ಎ ಬಿಗಿನಿಂಗ್, ಮಿಡಲ್ ಅಂಡ್ ಅನ ಎಂಡ್, ಬಟ್ ನಾಟ್ ನೆಸಸರಿಲಿ ಇನ್ ದ ಸೇಮ್ ಆರ್ಡರ್’. ಇವತ್ತಿನ ಆಧುನಿಕೋತ್ತರ ಸಿನಿಮಾದಲ್ಲಿ ಮೂರಂಕಿನ ವಿನ್ಯಾಸ ಕ್ರಮವನ್ನು ಕೈ ಬಿಟ್ಟಿರಬಹುದು ಅಥವಾ ಅದನ್ನು ಬೇರೊಂದು ರೀತಿಯಲ್ಲಿ ನಿರ್ವಹಿಸುತ್ತಿರಬಹುದು. ಆದರೆ ಹಾಗೆ ಮಾಡಬೇಕಾಗಿದ್ದರೂ ಒಂದು ಶಾಸ್ತ್ರೀಯ ವಿನ್ಯಾಸದ ಮಾದರಿ ಗೊತ್ತಿದ್ದು ಅದನ್ನು ಕೈಬಿಟ್ಟು ಹೊಸ ವಿನ್ಯಾಸ ಕಂಡುಕೊಂಡರೆ ಅದಕ್ಕೂ `ಸಾಂಸ್ಕೃತಿಕ ಸಾತತ್ಯ’ ಇರುತ್ತದೆ.
ಪ್ರಸನ್ನ ಅವರು ಪ್ರಸ್ತಾಸಿರುವ ಮೂಲ ಮಾದರಿಯನ್ನು ಮನನ ಮಾಡಿಕೊಳ್ಳಬೇಕಾದದ್ದು ಆ ಕಾರಣಕ್ಕೆ ತೀರ ಅಗತ್ಯ. ಇವತ್ತಿಗೂ ಪ್ರತಿಶ: 70-80ರಷ್ಟು ಚಿತ್ರಗಳ ಮೂಲ ಮಾದರಿ ಈ ಮೂರಂಕದ ವಿನ್ಯಾಸ ಕ್ರಮ ಎನ್ನುವುದನ್ನು ಗಮನಿಸಿದರೆ ಅದರ ಮಹತ್ವ ಅಂದಾಜಾಗುತ್ತದೆ.
ಪ್ರಸನ್ನರ ಈ ಕೃತಿಯ ಇನ್ನೊಂದು ಹೆಗ್ಗಳಿಕೆ ಅವರು `ದೃಶ್ಯ’ಗಳನ್ನು ಬಗೆದ ಬಗೆ. (ಅನಂತಮೂರ್ತಿಯವರು `ಪದ್ಯ ಬಗೆವ ಬಗೆ’ ಎಂದು ಬಳಸಿದಂತೆ) ಪುಸ್ತಕದುದ್ದಕ್ಕೂ ಅವರು ಯಾವ ಕನ್ಸೆಪ್ಟ್ ಗಳನ್ನೂ ಕೇವಲ ಅಮೂರ್ತ ರೂಪದಲ್ಲಿ ಗ್ರಹಿಸಿ, ವಿವರಿಸಿಲ್ಲ. ಅದು ಸಿನಿಮಾದಲ್ಲಿ ಪಡಿಮೂಡಿದ ರೀತಿಯಲ್ಲಿ ತೋರಿಸಿ, ವಿಶ್ಲೇಷಿಸಿದ್ದಾರೆ. ಇದು ಬಹಳ ಮುಖ್ಯವಾದ ಕ್ರಮ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಸಿನಿಮಾದ ಎಲ್ಲ `ಆಶಯಗಳೂ’ ಸಾರ್ಥಕ್ಯ ಪಡೆಯಬೇಕಾದರೆ ಅವು ಅನುಭವಜನ್ಯವಾಗಬೇಕು. ಅವು ಅನುಭವಜನ್ಯವಾಗಬೇಕಿದ್ದರೆ, ಅವು ಮೂರ್ತ ರೂಪದಲ್ಲಿ ಮೂಡಿರಬೇಕು.
ಪ್ರಸನ್ನ ಅವರು ತಮ್ಮ ವಿಷಯ ಮಂಡನೆಗೆ ಪೂರಕವಾದಂತಹ ಉದಾಹರಣೆಗಳನ್ನು ಕನ್ನಡ, ಭಾರತ, ವಿಶ್ವ ಚಿತ್ರರಂಗಗಳಿಂದ ಆರಿಸಿ, ಅದನ್ನೆ ಬಗೆದು ವಿವರಿಸುತ್ತಾರೆ. ಹೀಗೆ ಮಾಡುವಾಗ ಯಾವ ವಿಂಗಡಣೆಗೂ ಸೀಮಿತವಾಗದೇ ಜನಪ್ರಿಯ, ಗಂಭೀರ, ಸಮಕಾಲೀನ, ಕ್ಲಾಸಿಕ್ಸ್ ಎಲ್ಲ ರೀತಿಯ ಚಿತ್ರಗಳಿಂದಲೂ ಉದಾಹರಣೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಅವರು ಸಿನಿಮಾ ನಿರ್ದೇಶಕರೂ ಆಗಿರುವುದರಿಂದ ಯಾವ ತಾಂತ್ರಿಕ, ಪರಿಕರ, ಆ `ಆಶಯ’ವನ್ನು ಅನುಭವಜನ್ಯವಾಗಿಸಿದೆ ಎಂದು ವಿಶ್ಲೇಷಿಸಬಲ್ಲವರಾಗಿದ್ದಾರೆ.
ಅವರು ವಿಷಯ ವಿಂಗಡಿಸಿದ ಕ್ರಮದಲ್ಲೇ ಚಿತ್ರಕಥೆಯ ಮುಖ್ಯ ಲಕ್ಷಣಗಳೇನಿರಬೇಕೆಂದು ಸ್ಪಷ್ಟವಾಗುತ್ತದೆ. ಕಥೆ, ನಿರೂಪಣೆ, ಪಾತ್ರ, ಎಂದು ವಿಂಗಡಿಸಿದ್ದಾರೆ. ನಮ್ಮ ಅನೇಕ ಚಿತ್ರಕಥಾ ಲೇಖಕರು ಗಮನ ಕೊಡದ ಕೆಲವು ಅಂಶಗಳಿಗೆ ಇಲ್ಲಿ ಒತ್ತು ಸಿಕ್ಕಿರುವುದನ್ನು ಗಮನಿಸಬಹುದು. ಉದಾ : ಕಥೆಯ ಚಲನೆ, ವಾತಾವರಣಸೃಷ್ಟಿ, ಕ್ರಿಯೆಯೇ ಪಾತ್ರ, ಕಾಲ ಮತ್ತು ಅವಕಾಶ ಇವುಗಳತ್ತ ನಮ್ಮ ಗಮನ ಸೆಳೆಯುವ ಮೂಲಕ ಆತುರದಿಂದ ಕಥೆ ಹೇಳುವುದಷ್ಟೇ ಉದ್ದೇಶವಾಗಿರಬೇಕೆಂದು ನಂಬಿದ ಚಿತ್ರಕಥಾ ಲೇಖಕರನ್ನು ಚಿಂತಿಸುವಂತೆ ಮಾಡುತ್ತಾರೆ.
ಕೊನೆಯ ಅಧ್ಯಾಯಗಳಲ್ಲಿ ತಾಂತ್ರಿಕ ಅಂಶಗಳನ್ನೂ ವಿವರಿಸುತ್ತಾರೆ. ಕಥೆಗೂ, ಚಿತ್ರಕಥೆಗೂ ಇರುವ ವ್ಯತ್ಯಾಸ, ಚಿತ್ರಕಥೆಗೂ ಶೂಟಿಂಗ್ ಸ್ಕ್ರಿಪ್ಟ್ಗೂ ಇರುವ ವ್ಯತ್ಯಾಸ ಇದರತ್ತೆಲ್ಲ ಗಮನ ಸೆಳೆಯುವಂತೆ ಮಾಡುವ ಮೂಲಕ ಚಿತ್ರಕಥೆ ಎಷ್ಟು ಸಾಂದ್ರವಾಗಿರಬೇಕೆಂದು ತಿಳಿಸುತ್ತಾರೆ. `ಚಿತ್ರಕಥೆ’ಯ ಸ್ವರೂಪದ ಬಗ್ಗೆ ವಿವರವಾದ ಪುಸ್ತಕವೊಂದರ ಅಗತ್ಯ ಕನ್ನಡದಲ್ಲಿದೆ. ಈ ಪುಸ್ತಕ ಆ ದಿಕ್ಕಿನಲ್ಲಿಟ್ಟ ಒಂದು ಮೌಲಿಕ ಹೆಜ್ಜೆ.
ಈ ಪುಸ್ತಕ ಇನ್ನೂ ಹೆಚ್ಚಿನ ಪೀಠಿಕೆ ಅಪೇಕ್ಷಿಸುತ್ತದೆ. ಚರ್ಚೆಗಳ ಮೂಲಕ, ಸಂಕಿರಣಗಳ ಮೂಲಕ ಈ ಪುಸ್ತಕ ಹೆಚ್ಚು ಚಿಂತನೆಗೆ ಗ್ರಾಸವಾಗಲಿ. ಅಲ್ಲಿಂದ ಮೂಡಿದ ಹೊಳಹು ಕನ್ನಡ ಚಿತ್ರರಂಗಕ್ಕೆ ಹೊಸ ಪುಷ್ಠಿ ನೀಡಲಿ ಎಂದು ಆಶಿಸುತ್ತೇನೆ.



ಸಿನೆಮಾ ಕುರಿತು ಇನ್ನಿಲ್ಲದ ಆಸಕ್ತಿ ಹೊಂದಿರುವ ಎ ಎನ್ ಪ್ರಸನ್ನ ಈ ಕ್ಷೇತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಅದರ ಸಾಲಿಗೆ ಹೊಸ ಸೇರ್ಪಡೆ ‘ಚಿತ್ರಕಥೆಯ ಸ್ವರೂಪ’


0 Comments