ಪ್ರಭಾವತಿ ದೇಸಾಯಿ
ಐದು ಗಜಲ್ ಸಂಕಲನ ಪ್ರಕಟಿಸಿರುವ ಹಿರಿಯ ಕವಯಿತ್ರಿ ಪ್ರಭಾವತಿ ದೇಸಾಯಿ ಅವರದು ವಿಜಯಪುರ. ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಗೃಹಿಣಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಗಣನೀಯ ಕೊಡುಗೆಯನ್ನು ಕೊಟ್ಟಿದ್ದಾರೆ.
ಕೊಳಲ ದನಿಯಿಲ್ಲದೆ ಬೃಂದಾವನ ಮೌನವಾಗಿದೆ ನಲ್ಲ
ರಾಸ ಕ್ರೀಡೆಯಿಲ್ಲದೆ ಯಮುನೆ ನೊಂದು ಬಿಕ್ಕುತಿದೆ ನಲ್ಲ
ಕಿಟಕಿಯಲಿ ಇಣಿಕಿದ ಶಶಿಯು ಕಚಗುಳಿಟ್ಟು ಕಾಡುತಿರುವನು
ಜಗವ ಮರೆತು ಕಣ್ಣ ದೃಷ್ಟಿಯು ಬಾಗಿಲಿಗೆ ನೆಟ್ಟಿದೆ ನಲ್ಲ
ತೂಗಿದ ಕಂದೀಲ ಬೆಳಕಿಗೆ ಪತಂಗಗಳು ಮುತ್ತಿಡುತಿವೆ
ಕನಸ ಕಂಬನಿ ಜಾರಿ ತಲೆದಿಂಬು ಒದ್ದೆಯಾಗಿದೆ ನಲ್ಲ
ಮುಂಗಾರು ಮೋಡ ಅರ್ಭಟದಲಿ ಮಿಂಚಿ ಗುಡುಗುತಿದೆ ಬಾನಲಿ
ಸಾವಿರ ಕಣ್ಣಿನ ನವಿಲು ಹೆಜ್ಜೆ ಹಾಕಿ ಕರೆಯುತಿದೆ ನಲ್ಲ
ಜೊತೆ ಇರುವಿಕೆ ಜಡ ಬದುಕಿಗೆ ಉತ್ಸಾಹವ ತುಂಬುತ್ತಿತ್ತು
ಏಕಾಂಗಿ ಬಿಸಿ ಉಸಿರಿಗೆ ಮುಡಿದ ಮೊಗ್ಗು ಕಮರಿದೆ ನಲ್ಲ
ಬಳಲಿದ ದೇಹಕೆ ಒಲವ ಮುತ್ತಲ್ಲದೆ ಮತ್ತೇನು ಬೇಕು
ಅಗಲಿಕೆಯ ಚಿಂತೆ ಚಿತೆಯಾಗಿ”ಪ್ರಭೆ”ಯ ದಹಿಸುತಿದೆ ನಲ್ಲ
0 ಪ್ರತಿಕ್ರಿಯೆಗಳು