ಪ್ರಭಾಕರ ಜೋಶಿ ಎಂಬ ರಂಗ ಸುನೇರಿ

ಮಹಿಪಾಲರೆಡ್ಡಿ ಮುನ್ನೂರ್ 

ತುಂಬ ಎತ್ತರಕ್ಕೆ ಬೆಳೆದ ವ್ಯಕ್ತಿಯ ಬಗ್ಗೆ ಬರೆಯುವಾಗ ಮತ್ತು ಮಾತನಾಡುವಾಗ ಗುಣವಾಚಕಗಳೆಲ್ಲ ಮುಗುಂ ಆಗಿ ಮಲಗಿ ಬಿಡುತ್ತವೆ.

ಯಾಕೆಂದರೆ, ಆ ಗುಣವಾಚಕಗಳು ಅಂಥ ವ್ಯಕ್ತಿತ್ವದ ಮುಂದೆ ಅತ್ಯಂತ ಪೇಲವವಾಗಿ ಕಾಣಬಹುದು. ಈ ದೃಷ್ಟಿಯಿಂದ ಪ್ರಭಾಕರ ಜೋಶಿ ಅವರಂಥ ಕ್ರಿಯಾಶೀಲ ರಂಗಕರ್ಮಿ ಬಗ್ಗೆ ಯಾವ ರೀತಿಯಲ್ಲಿ ಬರೆಯುವುದು ಎಂಬ ಪ್ರಶ್ನೆ ಮೂಡುತ್ತದೆ. ಆದರೂ, ಒಂದು ದೊಡ್ಡ ಸಮುದಾಯದಲ್ಲಿ ತುಂಬ ದೀರ್ಘ ಕಾಲದಿಂದ ಪ್ರಭಾಕರ ಜೋಶಿ ಅವರಂಥ ವೈವಿಧ್ಯಮಯವಾದ ವ್ಯಕ್ತಿತ್ವದ ಜತೆ ನಾನಿದ್ದೆ ಎನ್ನುವುದು ಅತ್ಯಂತ ಶ್ರೀಮಂತ ನೆನಪು ನನಗೆ.

ಪುಟ್ಟ ಗ್ರಾಮ ಚಂದಾಪುರದಲ್ಲಿ ಹುಟ್ಟಿಬೆಳೆದ ಪ್ರಭಾಕರ ಜೋಶಿ ಬೆಳೆದು ನಿಂತ ಕ್ರಮವೇ ಅದ್ಭುತವಾದುದು. ಈ ಬೆಳವಣಿಗೆಯ ಕಾಲಘಟ್ಟದಲ್ಲಿ ಅನುಭವಿಸಿದ ನೋವುಗಳು, ಅವಮಾನಗಳು ಹೇರಳವಾಗಿವೆ. ಆ ಅವಮಾನಗಳನ್ನು ಮರೆಯುವುದಕ್ಕಾಗಿಯೇ ಸದಾ ಮುಗುಳ್ನಗೆ ಮತ್ತು ಮೌನದ ಮೊರೆ ಹೋದರು. ಹಾಗಂತ ಹೇಳಿ ಎಲ್ಲವನ್ನೂ ನಿರಾಕರಿಸುವ ಅಥವಾ ಒಪ್ಪಿಕೊಳ್ಳುವ ಜಾಯಮಾನ ಅವರದಲ್ಲ.

ಸಮಾಜಕ್ಕೆ ಪೂರಕವಾಗದ ಮಾತು ಅಂತ ಅನ್ನಿಸಿದಾಗ, ತಮ್ಮ ಮನಸ್ಸಿಗೆ ಹಿಡಿಸದಿದ್ದಾಗ ತಕ್ಷಣವೇ ಮಾತಿನ ಚಾಟಿಯೇಟು ಕೊಡುತ್ತಾರೆ. ಯಾವ ಮುಲಾಜಿಗೂ ಮಣಿಯದ ಪ್ರಭಾಕರ ಜೋಶಿ ಅವರ ರಂಗ ಯಾತ್ರೆಯನ್ನು ತೀರಾ ಮಗ್ಗುಲಲ್ಲಿ ನಿಂತು ನೋಡಿಕೊಂಡೇ ಬಂದಿರುವೆನಾದ್ದರಿAದ ಅವರನ್ನು ರಂಗ ಸುನೇರಿ ಎಂದು ಕರೆಯುತ್ತೇನೆ.

ಈ ರಂಗೋತ್ಸಾಹಿಯ ಸಾಂಸ್ಕೃತಿಕ ಸಂವಹನ ಹವ್ಯಾಸಿ ರಂಗಭೂಮಿಯಿAದ ಆರಂಭವಾದರೂ, ಕಂಪನಿ ನಾಟಕಗಳ ಶೈಲಿ, ಪ್ರಾಯೋಗಿಕ ನಾಟಕಗಳ ಮಾರ್ಗ ಹಾಗೂ ಅದಕ್ಕಿಂತ ಭಿನ್ನವಾದ ರೂಪವೊಂದನ್ನು ಸಾಧಿಸಿಕೊಳ್ಳುವತ್ತ ಪ್ರಭಾಕರ ಜೋಶಿ ಶ್ರಮಿಸಿದ್ದಾರೆ. ತಾರುಣ್ಯಾವಸ್ಥೆಯಲ್ಲಿಯೇ ಪ್ರಬುದ್ಧವಾದ ರಂಗಭೂಮಿಯಲ್ಲಿ ವಿಶೇಷವಾದ ಚಲನಶೀಲತೆಯನ್ನು ಕಾಣಿಸುತ್ತಾ ಬೆಳೆದುಕೊಂಡು ಬಂದು ವರ್ತಮಾನಕ್ಕೆ ರಂಗಬಿAಬ ಹಿಡಿದು ಸ್ಥಳೀಯತೆಯನ್ನು ಲೋಕ ಗುರುತಿಸಬೇಕು ಎಂಬ ಅದಮ್ಯ ಚೇತನದಿಂದ ಚಟುವಟಿಕೆ ನಡೆಸುತ್ತಾ ಬಂದಿದ್ದಾರೆ.

ಕನ್ನಡ ರಂಗಭೂಮಿಯಲ್ಲಿ ಹೊಸ ಮಾದರಿಯ ರಂಗ ಶಿಕ್ಷಣ ಪರಿಕಲ್ಪನೆ ಹಿನ್ನೆಲೆಯಲ್ಲಿ ರಂಗಋಷಿ ಕೆ.ವಿ.ಸುಬ್ಬಣ್ಣ ರೂಪಿಸಿದ ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರ ನಾಡಿನ ರಂಗಕರ್ಮಿಗಳಿಗೆ ಚೇತೋಹಾರಿ ಕೇಂದ್ರವಾಗಿದೆ. ಅತ್ತ ದಕ್ಷಿಣ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪುಟ್ಟ ಊರು ಹೆಗ್ಗೋಡು. ಇತ್ತ ಉತ್ತರ ಕರ್ನಾಟಕದ ಗುಲ್ಬರ್ಗ (ಈಗ ಕಲಬುರಗಿ) ಜಿಲ್ಲೆಯ ಸೇಡಂ ತಾಲೂಕಿನ ಪುಟ್ಟ ಊರು ಚಂದಾಪುರ. ಎರಡು ಧ್ರುವಗಳ ನಡುವೆ ನಂಟು ಹಾಗಿದ್ದು ರಂಗ ಎಳೆ !

೧೯೮೪-೮೫ನೇ ಸಾಲಿನಲ್ಲಿ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗಶಿಕ್ಷಣ ಪಡೆಯಲು ಪ್ರಭಾಕರ ಜೋಶಿ ಹೆಗ್ಗೋಡಿಗೆ ಹೋದರು. ಹಾಗೆ ರಂಗ ಶಿಕ್ಷಣ ಪಡೆದು ಬಂದ ಅವರು ಅವಿಭಜಿತ ಕಲಬುರಗಿ-ಯಾದಗಿರಿ ಜಿಲ್ಲೆಯ ನೀನಾಸಮ್ ಪದವಿ ಪಡೆದ ಪ್ರಥಮ ವ್ಯಕ್ತಿ ಎಂಬ ಖ್ಯಾತಿಗೆ ಒಳಗಾದರು. ನೀನಾಸಮ್‌ನಿಂದ ಬಂದ ಮೇಲೆ ಸೇಡಂನಲ್ಲಿ ನವರಂಗ ಸ್ಥಾಪಿಸುವ ಮೂಲಕ ತಮ್ಮ ರಂಗಯಾತ್ರೆಯನ್ನು ನಿರಂತರ ಕೈಗೊಳ್ಳುತ್ತಾ ಬಂದಿದ್ದಾರೆ.

ಪ್ರಭಾಕರ ಜೋಶಿ ಅತ್ಯಂತ ಕ್ರಿಯಾಶೀಲ ರಂಗಕರ್ಮಿ. ರಂಗ ಸಂಘಟಕ ಮತ್ತು ರಂಗ ನಾಟಕಕಾರ, ವಿಮರ್ಶಕ ಇತ್ಯಾದಿ. ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಕ್ರಿಯಾಶೀಲ ಸಾಂಸ್ಕೃತಿಕ ಚಟುವಟಿಕೆ ಶುರುವಾಗಿz್ದೆÃ ಇವರಿಂದ. ಇವರು ಬರೀ ರಂಗಕರ್ಮಿ ಅಂತ ಹೇಳಿ ಸುಮ್ಮನಾದರೆ ಸರಿಯಾದ ಪದಬಳಕೆಯಾಗಿಲ್ಲ ಎಂಬಂತಾಗುತ್ತದೆ. ರಂಗಭೂಮಿಯನ್ನು ಕುರಿತು ಚಿಂತಿಸುವ, ಧ್ಯೇನಿಸುವ, ಬರೆಯುವ ವ್ಯಕ್ತಿಯೂ ಆಗಿದ್ದರಿಂದ ಅವರನ್ನು ರಂಗ ಸುನೇರಿ ಎಂದಿದ್ದೇನೆ.

ಸುನೇರಿ ಅಂದರೆ ಚಿನ್ನದ ಬಣ್ಣ ಎಂದರ್ಥ. ಇದು ಹೊಳೆಯುವ ಬಣ್ಣ. ರಂಗದಲ್ಲಿ ಹೆಚ್ಚು ಬಳಕೆಯಾಗುತ್ತದೆ. ತನ್ನ ಪ್ರತಿಫಲನ ಗುಣದಿಂದಲೇ ರಂಗುರಂಗಿನ ಸನ್ನಿವೇಶ ಸೃಷ್ಟಿಸಿ, ಆಕರ್ಷಿಸುವ ಗುಣವಿದೆ. ಬಡತನಕ್ಕೆ ಈ ಬಣ್ಣ ಬಳಿದರೆ ಶ್ರೀಮಂತವಾಗಿ ಕಾಣುತ್ತದೆ. ಇಡೀ ರಂಗಭೂಮಿಯೇ `ಸುನೇರಿ’ಯ ಪ್ರತೀಕ.

ಹೊಳೆಯುವುದೆಲ್ಲಾ ಚಿನ್ನವಲ್ಲ ಎಂಬ ಮಾತಿದ್ದರೂ ಹೊಳೆಯುವ ಮೂಲಕ ಕೆಲಕಾಲ ಚಿನ್ನದ ಭ್ರಮೆ ಹುಟ್ಟಿಸುವುದು ಸಾಮಾನ್ಯ ಕೆಲಸವಲ್ಲ. ಇಂಥ ಮಾಂತ್ರಿಕ ಗಳಿಗೆಗಳ ಸವಿ ನೀಡುವುದರಿಂದಲೇ ನಾಟಕಗಳಿಗೆ ಮಹತ್ವ ಬಂದಿದೆ. ರಂಗಭೂಮಿಯ ಇಂಥ ಅನೇಕ ಮಾಂತ್ರಿಕ ಗಳಿಗೆಗಳನ್ನು ಕಂಡವರು ಪ್ರಭಾಕರ ಜೋಶಿಯವರು.

ಚಂದಾಪುರದ ಚೆಲುವು, ಹೆಗ್ಗೋಡಿನ ಸುನೇರಿ ಪ್ರವಾಹ. ಸೇಡಂನ ಗತ್ತು. ಕಲಬುರಗಿಯ ಧಿಮಾಕು. ಜತೆಗೆ ಜೀವನದಿ ಕಮಲಾವತಿಯ ಕಣ್ಣೀರು, ಕಾಗಿಣೆಯ ಸಡಗರ ಇವೆಲ್ಲವೂ ಪ್ರತಿಫಲಿಸುವುದು ಪ್ರಭಾಕರ ಜೋಶಿ ಅವರ ಮುಖದಲ್ಲಿ. ತನ್ನದು ಕವಿರಾಜ ಮಾರ್ಗಕಾರನ ತಾಲೂಕು ಎಂಬ ಉಮೇದು ಇವರಿಗಿದೆ. ಇಂಥ ದೇಸಿಪ್ರತಿಭೆಯ ಜೋಶಿ, ಮಾತೆತ್ತಿದರೆ ಹಾಸ್ಯಪ್ರಜ್ಞೆಯ ಝಲಕುಗಳನ್ನು ಸುರಿಸುವ ರಂಗೋತ್ಸಾಹಿ.

ತನ್ನ ತಂದೆ ಅದೊಂದು ದಿನ ತಿರುಪತಿಯಿಂದ ತಂದಿದ್ದ ಹನುಮಾನ ದೇವರ ಪಂಚಲೋಹದ ಮೂರ್ತಿಯ ಉತ್ಸವದ ಸಂದರ್ಭದಲ್ಲಿ ಸೇರಿದ್ದ ಜನಸ್ತೋಮ, ಹಾಡು, ಭಜನೆ, ಕುಣಿತ, ಪಂಜೆ ಬೆಳಕು ಮುಂತಾದವುಗಳ ರಂಗದೃಶ್ಯ ಮನದ ತುಂಬಾ ಬನದ ಹಾಗೆ ತುಂಬಿಕೊಂಡು ಸಾಂಸ್ಕೃತಿಕ ಸಂವಹನಕ್ಕೆ ಬಳಸಿಕೊಂಡಿದ್ದು ಜೋಶಿಯವರ ಹೆಚ್ಚುಗಾರಿಕೆ.

ಹೈಸ್ಕೂಲಿನಲ್ಲಿದ್ದಾಗ ಚಿಕ್ಕಪ್ಪ ಶಂಕರಭಟ್ಟರು ನಿರ್ದೇಶಿಸಿದ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ `ಭರಮರೆಡ್ಡಿ’ ಪಾತ್ರ ಮಾಡಿದಾಗ ದೃಷ್ಟಿ ತಗುಲಿ ಮೂರು ದಿನ ಜ್ವರದಿಂದ ಬಳಲಿ ಮಲಗಿದ್ದ ಜೋಶಿಯವರು ಇನ್ನೆಂದೂ ಮಲಗಲಿಲ್ಲ. ರಂಗಭೂಮಿಯಲ್ಲಿ ಜಾಗೃತರಾದರು. ಇವರನ್ನು ಕಾಡಿದ್ದು ಕಾವ್ಯ ಮತ್ತು ಸಮಾನ ಸಿದ್ದಾಂತ. ರಂಗದ ಕ್ರಿಯಾಶೀಲತೆಗೆ ಈ ಪರಿಭಾಷೆಯನ್ನೇ ಸೊಗಸಾಗಿ ದುಡಿಸಿಕೊಂಡಿದ್ದಾರೆ. ಹೈದರಾಬಾದ್‌ಕರ್ನಾಟಕ ನೆಲೆದ ಗಟ್ಟಿಮುಟ್ಟಾದ ಜವಾರಿ ಗುಣ ಇವರ ಬರಹದ ಹೂರಣ.

ಅಂತೆಯೇ ರಂಗಭೂಮಿಯ ಅಂತರAಗಕ್ಕಿಳಿದು ಆಪ್ತತೆಯಿಂದ ಅಳೆದು ತೂಗಿ ಇಳಿದು ಹತ್ತಿ ನೋಡುವ ಜೀವಮುಖಿ ಪ್ರೀತಿ ಈ ರಂಗ ಸುನೇರಿಯದು. ಕಲಬುರಗಿ ನಗರ ಹೊರತಾಗಿ ತಾಲೂಕು ಕೇಂದ್ರದಲ್ಲಿ ಆಧುನಿಕ ರಂಗಚಟುವಟಿಕೆಯನ್ನು ಪ್ರಾರಂಭಿಸಿದ ಮೊಟ್ಟ ಮೊದಲ ತಾಲೂಕು ಎಂದರೆ ಸೇಡಂ. ಅದಕ್ಕೆ ಕಾರಣರಾದವರು ಪ್ರಭಾಕರ ಜೋಶಿ.

ಅದು ೧೯೮೫. ನಾನಾಗ ೯ನೇ ತರಗತಿಯಲ್ಲಿದ್ದೆ. ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಹಿಂದಿನ ಭಾಗದಲ್ಲಿ ವಿಶಾಲವಾದ ಮೈದಾನದ ಮೂಲೆಗಿರುವ ಕಟ್ಟೆಯ ಮೇಲೆ, ಗೇಣುದ್ದ ದಾಡಿ ಹಚ್ಚಿಕೊಂಡು, ಕುರ್ತಾ ಪೈಜಾಮ ಹಾಕಿಕೊಂಡು ಸಂಜೆ ಆರೂವರೆ-ಏಳಕ್ಕೆ ಕಟ್ಟೆಯನ್ನೇ ರಂಗಸ್ಥಳವನ್ನಾಗಿ ಮಾಡಿಕೊಂಡು ಆಡಿ-ಆಡಿಸಿದ ಮೋಟು-ಕಿಟ್ಟು ನಾಟಕವನ್ನು ಅಲ್ಲಿನ ನೂಕುನುಗ್ಗಲು ದಾಟಿಕೊಂಡು ಮುಂದೆ ಹೋಗಿ ಕೂತು ನೋಡಿದವನು ನಾನು.

ಅವತ್ತಿಗೆ ಪ್ರಭಾಕರ ಜೋಶಿ ಎಂದರೆ ನನಗೇನೂ ಗೊತ್ತಿರಲಿಲ್ಲ. ಆ ಮೇಲೆ ಶುರುವಾದ ಅವರ ರಂಗಯಾತ್ರೆ, ಗ್ರಾಮೀಣ ರಂಗಭೂಮಿಯ ಮಟ್ಟಿಗೆ ನಿಜಕ್ಕೂ ಚರಿತ್ರಾರ್ಹ ಸಂಗತಿ. ಹಾಗೆ ಮರ‍್ನಾಕು ವರ್ಷ ಅವರ ರಂಗ ಚಟುವಟಿಕೆಗಳನ್ನು ದೂರದಿಂದ ನಿಂತು ನೋಡುತ್ತಿದ್ದೆ. ಅದೊಮ್ಮೆ ಪತ್ರಿಕೆಯಲ್ಲಿ ರಂಗ ತರಬೇತಿ ಶಿಬಿರಕ್ಕೆ ಆಹ್ವಾನ ಎಂಬ ಪ್ರಕಟಣೆ ಬಂತು. ನಾನೂ ಹೆಸರು ಬರೆಸಿದ್ದೆ.

ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶಿಬಿರ ಆರಂಭವಾಗಿತ್ತು. ಸತ್ತವರ ಹಾದಿ ಎಂಬ ನಾಟಕವನ್ನು ಶಿಬಿರದಲ್ಲಿ ತಯಾರಿಸಿದ್ದರು. ಈ ನಾಟಕವನ್ನು ನೆಲದ ಮೇಲೆ ಕುಳಿತು ನೋಡಿದ ಪ್ರೇಕ್ಷಕರಲ್ಲಿ ಅಂದಿನ ಸಹಾಯಕ ಆಯುಕ್ತರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಂದಿನ ನಿವೃತ್ತ ಆಯುಕ್ತರೂ ಆದ ಕೆ.ಆರ್.ರಾಮಕೃಷ್ಣ ಹಾಗೂ ನಗರದ ಗಣ್ಯರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು…

ಮಕ್ಕಳ ರಂಗ ತರಬೇತಿ ಶಿಬಿರದ ಶಿಬಿರಾರ್ಥಿಯಾಗಿ ಸೇರಿದ ನಾನು, ಕ್ರಮೇಣ ಅವರ ಇಡೀ ರಂಗಯಾತ್ರೆಯಲ್ಲಿ ಜತೆಜತೆಯಾಗಿ ನಡೆದು ಬಂದಿದ್ದೇನೆ. ಪ್ರಭಾಕರ ಜೋಶಿ ಸ್ಥಾಪಿಸಿದ ನವರಂಗ ನಾಟ್ಯನಿಕೇತನಕ್ಕೆ ಈಗ ಭರ್ತಿ ಮೂವತ್ತರ ಹರೆಯ. ಅವರೊಟ್ಟಿಗೆ ೨೫ವರ್ಷಗಳಿಂದ ಜತೆದ್ದೇನೆ ಎಂಬುದೇ ನನಗಿರುವ ದೌಲತ್ತು.

ನೋಡಿಸ್ವಾಮಿ ನಾವಿರೋದೇ ಹೀಗೆ, ಸಂಗ್ಯಾಬಾಳ್ಯಾ, ಬಂದೂಕು, ಹೀಂಗೊAದೂರಾಗ, ಅನ್ಯಥಾ ಶರಣಂ ನಾಸ್ತಿ, ಕತ್ತಲೆ ದಾರಿ ದೂರ, ನಾಯಿಕತೆ, ಕಫನ್, ಜೋಕುಮಾರ ಸ್ವಾಮಿ,ಮಹಿಮಾಪುರ, ವಾಸವಿ ವಿಜಯ, ಗಂಧರ್ವ ಲೋಕದಲ್ಲಿ ಗರುಡ (ಮಿಡ್ಸ್ ಸಮ್ಮರ್ ನೈಟ್ಸ್ ಡ್ರೀಮ್)ಮುಂತಾದ ನಾಟಕಗಳನ್ನು  ನಿರ್ದೇಶಿಸಿದ್ದಾರೆ.

ಹೆಗಲು ಮೀರಿದ ಹೊರೆ, ಸುಳಿಯಲ್ಲಿ ಸಿಕ್ಕವನು, ಸತ್ತ ಮೇಲೆ ಜಯತೆ, ಗಡಿರೇಖೆಯ ಮೇಲೆ, ನೆರಳಿನಾಚೆಯ ಬದುಕು, ಒಂದು ಊರಿನ ಕಥೆ, ಪರಿಹಾರ, ಶಿವ ಮತ್ತು ಸಿಂಗಳೀಕ, ಮಾನ್ಯಖೇಟದ ಮುಕುಟ, ಪತ್ರಕರ್ತರಿದ್ದಾರೆ ಎಚ್ಚರಿಕೆ, ಯಾರಿಗೆ ಶಿಕ್ಷೆ, ಕವಿ ಸಮ್ಮಾನ, ಅರುಂಧತಿ ಆಸ್ಪತ್ರೆ, ಶಯನ ಗೃಹದ ಶನಿ, ಕಾಡಿನಲ್ಲೊಂದು ದಿನ, ಮೋಟು ಕಿಟ್ಟು, ಹಳ್ಳಿರಾಮನ ದಿಲ್ಲಿ ಹೆಂಡತಿ, ಪಂಜರ, ಸ್ವರ್ಗದ ಬದುಕು ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಕಲಬುರಗಿ ಆಕಾಶವಾಣಿ ನಾಟಕ ಕಲಾವಿದರಾಗಿ ಮೂವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಆಕಾಶವಾಣಿಗಾಗಿಯೇ ನಾಟಕ ರಚಿಸಿ ನಿರ್ದೇಶಿಸಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಿಸಿದ ಶಾಲಾ ಅಂಗಳಕ್ಕೆ ನೂರೈವತ್ತು ನಾಟಕಗಳ ಮಾಲಿಕೆಯಡಿ ಜೋಶಿಯವರ ಎರಡು ಮಕ್ಕಳ ನಾಟಕಗಳು ಪ್ರಕಟವಾಗಿದ್ದು, ವಿಮರ್ಶಕರ ಮೆಚ್ಚುಗೆ ಗಳಿಸಿವೆ.

ಸರ್ಕಾರದ ಅನುದಾನವಿದ್ದರೆ ಮಾತ್ರ ಇತ್ತೀಚೆಗೆ ನಾಟಕೋತ್ಸವಗಳು ಆಗುತ್ತಿವೆ. ಆದರೆ, ೧೯೮೬ರ ಸಂದರ್ಭದಲ್ಲಿಯೇ ಯಾವುದೇ ರೀತಿಯ ಸರ್ಕಾರದ ಸಹಾಯವಿಲ್ಲದೆ, ಅನುದಾನವಿಲ್ಲದೆ, ಕೇವಲ ಆಸಕ್ತ ಯುವಕರನ್ನು ಸೇರಿಸಿಕೊಂಡು ಮೂರು ದಿನ ಮೂರು ವಿಭಿನ್ನ ನಾಟಕಗಳನ್ನು ಪ್ರದರ್ಶಿಸಿ ನಾಟಕೋತ್ಸವ ಆಯೋಜಿಸಿದ್ದು ಜೋಶಿ ಅವರ ಸಂಘಟನಾ ಸಾಮರ್ಥ್ಯ ಎತ್ತಿ ತೋರುತ್ತದೆ.

ಹವ್ಯಾಸಿ ರಂಗಭೂಮಿಗೆ ಮಾತ್ರ ಇವರ ಶ್ರಮ ಮೀಸಲಾಗಿಲ್ಲ. ವೃತ್ತಿ ರಂಗಭೂಮಿಗೂ ಶ್ರೇಯಸ್ಸು ಒದಗಿಸಿಕೊಟ್ಟಿದ್ದಾರೆ. ಅವರು ಬರೆದ ಮೊಟ್ಟಮೊದಲ ನಾಟಕ ಗುಂಡಾಗಿರಿ ಎಂಬ ವೃತ್ತಿಶೈಲಿಯ ನಾಟಕವಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಿಂದ ಸೇಡಂನಲ್ಲಿ ಮೂರು ದಿನದ ಪೌರಾಣಿಕ ವೃತ್ತಿ ನಾಟಕೋತ್ಸವ ಆಯೋಜಿಸಿದ್ದರು.

ನೀನಾಸಮ್ ತಿರುಗಾಟ, ಧಾರವಾಡದ ಆಟ-ಮಾಟ, ಹೆಗ್ಗೋಡಿನ ಥಿಯೇಟರ್ ಸಮುರಾಯ್, ಮುಂಬೈನ ಸ್ಮಿತಾ ಪಾಟೀಲ ಥಿಯೇಟರ‍್ಸ್, ಯಶವಂತ ಸರದೇಶಪಾಂಡೆ ನಾಟಕ ಕಂಪನಿ, ಮೈಸೂರು ರಮಾನಂದರ ಗೆಜ್ಜೆ ಹೆಜ್ಜೆ ಮುಂತಾದ ರಂಗತAಡಗಳನ್ನು ಸೇಡಂಗೆ ಆಹ್ವಾನಿಸಿ, ನಾಟಕಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಹೊಸ ರಂಗ ಆಲೋಚನೆಗಳಿಗೆ ಈಡು ಮಾಡುವ ಕ್ರಿಯೆ ಪ್ರಭಾಕರ ಜೋಶಿ ಅವರಿಂದ ನಿರಂತರ ನಡೆದಿದೆ.

ಸರ್ಕಾರಿ ಕನ್ಯಾಪ್ರೌಢಶಾಲೆಯ ೪೦ ಬಾಲಕಿಯರಿಗೆ ಒಂದು ರಂಗ ತರಬೇತಿ ಶಿಬಿರ ಏರ್ಪಡಿಸಿ ಅವರಿಂದ ಗಂಧರ್ವ ಲೋಕದಲ್ಲಿ ಗರುಡ ಎಂಬ ನಾಟಕವನ್ನು ಮಾಡಿಸಿದ್ದರು. ೧೯೮೭ರ ಸುಮಾರಿನಲ್ಲಿಯೇ ಶಿವ-ಸಿಂಗಳೀಕ ಎಂಬ ಟೆಲಿ ಫಿಲ್ಮ್ ಮಾಡಿದ್ದರು. ಟೆಲಿಫಿಲ್ಮ್ಗಳ ಬಗ್ಗೆ ಏನೇನೂ ಗೊತ್ತಿರದಿದ್ದ ಸೇಡಂನಂಥ ಪರಿಸರದಲ್ಲಿ ಚಿತ್ರೀಕರಣ ಮಾಡುವ ಮೂಲಕ ಹೊಸ ಬಗೆಯ ವಾತಾವರಣ ಅವಲೋಕಿಸುವಂತೆ ಮಾಡಿದ್ದರು.

ಕನ್ನಡದ ಮೇರು ನಟರಾಗಿದ್ದ ಶಂಕರನಾಗ್‌ರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಪ್ರಭಾಕರ ಜೋಶಿಗೆ, ಓವರ್‌ಟೇಕ್ ಮಾಡುವ ಆಲೋಚನೆ ಒಂದು ವೇಳೆ ಇದ್ದಿದ್ದರೆ ಇವತ್ತು ಬೆಂಗಳೂರಿನ ಪ್ರಕಾಶ ರೈ, ಪಿ.ಶೇಷಾದ್ರಿ, ನಾಸಿರುದ್ದೀನ್ ಶಾ, ನಾನಾ ಪಾಟೇಕರ್‌ನ್ನು ಕಾಣುವ ರೀತಿಯಲ್ಲಿ ಕಾಣಬೇಕಾಗುತ್ತಿತ್ತು.

ವಿಶ್ವವಿಖ್ಯಾತಿಗಿಂತ ಸ್ಥಳೀಯ ಗುರುತಿಸುವಿಕೆ ಮುಖ್ಯ ಎಂಬ ಸಿದ್ಧಾಂತವನ್ನಿಟ್ಟುಕೊಂಡು ಅದಕ್ಕೇ ಬದ್ಧರಾಗಿ ಸ್ಥಳೀಯತೆ ಮೂಲಕವೇ ಜಗತ್ತನ್ನು ನೋಡುವ ಮತ್ತು ತಾವಿರುವೆಡೆ ಜಗತ್ತು ಎಡತಾಕಬೇಕು ಎಂಬ ನಿಲುವಿನಿಂದ ಕ್ರಿಯಾಶೀಲರಾಗಿದ್ದಾರೆ.

ಗುರುತಿಸಿಕೊಳ್ಳುವುದಕ್ಕಿಂತ ಗುರುತಿಸಲ್ಪಡಬೇಕು ಎಂಬ ಉದ್ಧೇಶದಿಂದಲೇ ತಮ್ಮ ಪಾಡಿಗೆ ತಾವು ರಂಗಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ.  ಕಲಬುರಗಿ ಜಿಲ್ಲೆಯ ರಂಗಭೂಮಿ ಬಗ್ಗೆ ಚರ್ಚೆ ಬಂದಾಗಲೆಲ್ಲಾ ನಾಡಿನ ಅನೇಕ ಹಿರಿಯ ರಂಗಚಿಂತಕರು ಪ್ರಭಾಕರ ಜೋಶಿ ಅವರ ಬಗ್ಗೆ ಪ್ರಸ್ತಾಪಿಸುತ್ತಾರೆ.

ಇಂತಹ ಪ್ರಭಾಕರ ಜೋಶಿ ನನಗೆ, ಎಸ್ ನನಗೆ `ಸಾಹಿತ್ಯ, ರಂಗಭೂಮಿ ಹಾಗೂ ಪತ್ರಿಕಾರಂಗ’ಕ್ಕೆ ಪರಿಚಯಿಸಿದ ಗಾಡ್‌ಫಾದರ್ ! ನನ್ನ ಎಲ್ಲ ಸಾಂಸ್ಕೃತಿಕ ಲೋಕದ ನಡೆಯನ್ನು ಗಮನಿಸುತ್ತಾ, ಎಡವಿ ಬೀಳುವಾಗ ಎಚ್ಚರಿಸುತ್ತಾ, ತಪ್ಪಿದ ಹೆಜ್ಜೆಗೆ ಚಾಟಿ ಬೀಸುತ್ತಾ, ತಪ್ಪದ ದಾರಿಯಲ್ಲಿ ಮೆಚ್ಚುಗೆ ಮಾತನಾಡುತ್ತಾ ಪ್ರೋತ್ಸಾಹಿಸುತ್ತಾರೆ.

ಪ್ರಭಾಕರ ಜೋಶಿಯವರ ರಂಗಯಾತ್ರೆಯ ರಂಗನಡೆಯನ್ನು , ಸಾಂಸ್ಕೃತಿಕ ದಿಟ್ಟ ಹೆಜ್ಜೆಗಳನ್ನು ಅವಲೋಕಿಸಿದ ಈ ಕ್ಷಣಕ್ಕೆ ಹ್ಯಾಟ್ಸಾಫ್ ಹೇಳುತ್ತೇನೆ. ಕಳೆದ ಮೂರು ತಿಂಗಳ ಹಿಂದೆ ಕಲಬುರಗಿ ರಂಗಾಯಣ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಪ್ರಭಾಕರ ಜೋಶಿ ಅವರ ಜನುಮ ದಿನ ಇವತ್ತು.

‍ಲೇಖಕರು avadhi

April 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Kavyashree Mahagaonkar (sika)

  ಪ್ರಭಾಕರ ಜೋಷಿಯವರೊಂದಿಗಿನ ಸುಂದರ ಒಡನಾಟದ ಆಪ್ತ ಬರಹ

  ಪ್ರತಿಕ್ರಿಯೆ
 2. D.M.NAADAF.

  ಪ್ರಭಾಕರ ಜೋಷಿ ಯಾರೆಂದು ಕಲಬುರ್ಗಿಯಷ್ವೇ ಅಲ್ಲ, ಕರುನಾಡಿಗು ಗೊತ್ತಿತ್ತು. ಪ್ರಭಾಕರ ಜೋಷಿ “ಏನು”ಎಂದು ತೋರಿಸುವಂತೆ ಬರೆದಿದ್ದೀರಿ,ಮಹಿಪಾಲರೆಡ್ಡಿ ಸರ್,
  ತಾನು ಗುರತಿಸಿ’ಕೊಳ್ಳು’ವವರಾಗದೇ ಗುರುತಿಸಲ್ಪಡುವವರಾಗಿದ್ದು ಜೋಷಿ ಯವರ ಹಿರಿಮೆ.ಎಂಬ ತಮ್ಮ ಮಾತು ಅವರ ಇಡೀ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
  ಪರಿಚಯಿಸಿದ “ಅವಧಿ”ಗೆ ಧನ್ಯವಾದಗಳು.
  ಡಿ.ಎಮ್.ನದಾಫ್.
  ಅಫಜಲಪುರ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: