ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.
ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ
ಈ ಪ್ರತಿಕ್ರಿಯೆಗೆ ಪ್ರೊ ಸಿ ಎನ್ ಆರ್ ಕೊಟ್ಟ ಉತ್ತರ ಇಲ್ಲಿದೆ–
‘ಅವಧಿ’ ಓದುಗರಾದ ಪಲ್ಲವಿ ಹೆಗಡೆ ಅವರ ಅನಿಸಿಕೆ ಇಲ್ಲಿದೆ-
ಬಿ ಸುರೇಶ್ ಬರೆದಿರುವುದು ಇಲ್ಲಿದೆ-
ಜೋಗಿ ಹಾಗೂ ಸಿಎನ್ನಾರ್ ಅವರ ಚರ್ಚೆಯನ್ನು ಇಟ್ಟುಕೊಂಡು ಪ್ರತಿಭಾ ನಂದಕುಮಾರ್ ಅವರು ನೀಡಿದ ಪ್ರತಿಕ್ರಿಯೆ ಇದು
ಪ್ರೊ ಸಿಎನ್ನಾರ್ ಅವರು ಪ್ರತಿಭಾ ನಂದಕುಮಾರ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ಓದಿ
ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು
avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ
ಪ್ರೊ ಸಿ ಎನ್ ರಾಮಚಂದ್ರನ್
ಪ್ರಿಯ ಡಾ. ಪ್ರತಿಭಾ ನಂದಕುಮಾರ್ ಅವರಿಗೆ:
ನಮಸ್ಕಾರ. ನಿಮ್ಮ ಪತ್ರಕ್ಕೆ/ ಪ್ರತಿಕ್ರಿಯೆಗೆ ಕೃತಜ್ಞ.
ನಾನು ಜೋಗಿಯವರ ಮಾತುಗಳನ್ನು ಅರ್ಥಮಾಡಿಕೊಂಡಿಲ್ಲ ಎಂದು ನೀವು ಹೇಳಿರುವುದು ನಿಜವಿರಬಹುದು; ನಾನು ಅರ್ಥಮಾಡಿಕೊಳ್ಳದ ನೂರಾರು ಮಾತುಗಳು /ವಿಷಯಗಳು ಇವೆ; ಆದರೆ ಅರ್ಥಮಾಡಿಕೊಳ್ಳಬೇಕು ಎಂಬ ಆಸೆಯಿದೆ.
ಆ ಕಾರಣದಿಂದ, ನಮ್ರತೆಯಿಂದ, ನನ್ನ ಈ ಅನಿಸಿಕೆಗಳನ್ನು ನಿಮ್ಮ (ಹಾಗೂ ಇತರ ಓದುಗರ) ಗಮನಕ್ಕೆ ತರುತ್ತಿದ್ದೇನೆ.
೧) “ವೈಚಾರಿಕತೆ ಅಂದ ತಕ್ಷಣ ಅದು ಏಕರೂಪದ್ದು ಮತ್ತು ಬರಹದಲ್ಲಿರುವುದು ಎಂದುಕೊಂಡರೆ ಇಂತಹ ತೀರ್ಮಾನಗಳು ಉಂಟಾಗುತ್ತವೆ” ಎಂದು ತೀರ್ಮಾನಿಸಿದ್ದೀರಿ. ಶೇಷಾದ್ರಿ ಅವರ ಚಲನಚಿತ್ರಕ್ಕೆ ಸಂಬಂಧಪಟ್ಟ ಲೇಖನದಲ್ಲಾಗಲಿ ಅಥವಾ ನನ್ನ ಇತರ ಲೇಖನಗಳಲ್ಲಾಗಲಿ ನಾನಂತೂ ಎಲ್ಲಿಯೂ ಹೀಗೆ ಹೇಳಿಲ್ಲ ಎಂದು ಅಂದುಕೊಂಡಿದ್ದೇನೆ.
೨) ವೈಚಾರಿಕತೆ ನೇರವಾಗಿಯೇ ಚಲನಚಿತ್ರದಲ್ಲಿ ಬರಬೇಕೆಂದು ನಾನು ಹೇಳಿಲ್ಲ; ’ನೇರ ವೈಚಾರಿಕತೆಗೂ (ದಯವಿಟ್ಟು -ಗೂ ಎಂದಿರುವುದನ್ನು ಗಮನಿಸಿ) ದೃಶ್ಯಮಾಧ್ಯಮದಲ್ಲಿ ಸ್ಥಾನವಿದೆ’ ಎಂದು ವಾದಿಸಿದ್ದೇನೆ, ಅಷ್ಟೇ.
೩) ’ಗತಿ’ ಹಾಗೂ ’ಸ್ಥಿರತೆ’ ಇರುವ, ಚಲನಚಿತ್ರ ಎಂಬ ದೃಶ್ಯ-ಶ್ರವಣ ಮಾಧ್ಯಮವು ವೈಚಾರಿಕತೆಯನ್ನು ಅನೇಕ ಮಾರ್ಗಗಳಲ್ಲಿ ಸೂಚಿಸಬಹುದು; ಅವುಗಳಲ್ಲಿ ಒಂದು (ಒಂದೇ ಅಲ್ಲ) ಮಾತುಗಳ ಮೂಲಕ.
೪) ಸಾಹಿತ್ಯವೂ ವಾಸ್ತವವನ್ನು ನೇರವಾಗಿ ದರ್ಶಿಸುವುದಿಲ್ಲ, ಚಲನಚಿತ್ರವೂ ದರ್ಶಿಸುವುದಿಲ್ಲ. ಸಾಹಿತ್ಯವೂ ಸೇರಿದಂತೆ
ಎಲ್ಲಾ ಕಲೆಗಳು ಭಿನ್ನ ಭಿನ್ನ ತಂತ್ರಗಳ ಮೂಲಕ ವಾಸ್ತವವನ್ನು ’ಸೂಚಿಸಬಹುದು,’ ಅಷ್ಟೇ.
೫) ಜೋಗಿಯವರ ಒಂದು ಮಾತು (ಅವರ ಪ್ರತಿಕ್ರಿಯೆಯಲ್ಲಿ) ಹೀಗಿದೆ: “ಸಿನಿಮಾವನ್ನು ನಾವು ಬದುಕಿನ ಹಾಗೆ ಶಬ್ದ, ದೃಶ್ಯ, ಚಲನೆ ಮತ್ತು ವಾಸ್ತವದ ಮುಖಾಂತರ ಗ್ರಹಿಸುತ್ತೇವೆ” (’ಶಬ್ದ, ದೃಶ್ಯ, ಚಲನೆ’ ಇವುಗಳಿಂದ ಹೊರತಾದ ವಾಸ್ತವ ಯಾವುದು? ನನಗೆ ಗೊತ್ತಿಲ್ಲ.) ಈ ವಾಕ್ಯದಲ್ಲಿ ಬರುವ ’ಶಬ್ದ’ ಎಂದರೇನು? ಒಂದು ಭಾಷಿಕ ಸಮುದಾಯ ಯಾದೃಚ್ಛಿಕವಾಗಿ ಆಯ್ಕೆ ಮಾಡಿಕೊಂಡ ವಿಶಿಷ್ಟ ಶಬ್ದಗಳೇ ಅನಂತರ ಪದ-ವಾಕ್ಯಗಳೆಂದು ಪರಿಗಣಿಸಲ್ಪಟ್ಟು, ಅನಂತರ ಅವುಗಳಿಗೊಂದು ಯಾದೃಚ್ಛಿಕ
ಉಚ್ಚಾರ ಹಾಗೂ ಅರ್ಥವು ದೊರಕಿ, ಅವುಗಳ ಮೂಲಕ ನಾವು ನಮ್ಮ ವಿಚಾರಗಳನ್ನು ಮತ್ತೊಬ್ಬರಿಗೆ ತಿಳಿಸಲು ಪ್ರಯತ್ನಿಸುತ್ತೇವೆ. ಎಂದರೆ, ’ವಾಸ್ತವ’ವೆಂದು ನಾವು ಭಾವಿಸುವುದನ್ನು ’ಮಾತು’ಗಳ ಮೂಲಕವೂ ತಿಳಿಸಬಹುದು, ಎಂದಾಯಿತು; ಅಲ್ಲವೆ?
೬) ಕೊನೆಯದಾಗಿ, ’ಗ್ರಹಿಕೆ’ಯ ಸ್ವರೂಪ. ನಾವು ನಮ್ಮನ್ನು ಹಾಗೂ ನಮ್ಮ ಸುತ್ತಲೂ ಇರುವ ಇತರರನ್ನು/ ಇತರ ಚರಾಚರ ವಸ್ತುಗಳನ್ನು ಪಂಚೇಂದ್ರಿಯಗಳ ಮೂಲಕ ಗ್ರಹಿಸುತ್ತೇವೆ; ಈ ಪಂಚೇಂದ್ರಿಯಗಳು ಒಟ್ಟಾರೆಯಾಗಿ ಅಥವಾ ಒಂದೊಂದೂ ಸ್ವತಂತ್ರವಾಗಿ ಗ್ರಹಿಕೆಯ ಮಾರ್ಗವಾಗಬಹುದು. ಹಾಗಿದ್ದಾಗ, ಶ್ರವಣೇಂದ್ರಿಯದ ಮೂಲಕವೂ (ಎಂದರೆ ಮತೊಬ್ಬರ ಮಾತಿನ ಮೂಲಕವೂ) ನಾವು ಏನನ್ನಾದರೂ ಗ್ರಹಿಸಬಹುದು, ಅಲ್ಲವೆ? ಆದುದರಿಂದ ’ಮಾತಿನ ಮೂಲಕ ಬಂದದ್ದು ಶುಷ್ಕ-ನೀರಸ’ ಹೇಗಾಗುತ್ತದೆ? ಕೇವಲ ’ದೃಶ್ಯ’ದ ಮೂಲಕ ಮಾತ್ರ ಬಂದದ್ದು ಸತ್ಯ ಅಥವಾ ’ರಸಪೂರ್ಣ’ ಹೇಗೆ? ’ಶುಷ್ಕ’ ’ನೀರಸ’ ಇವೆಲ್ಲಾ ಗುಣವಾಚಕಗಳು ’ಸಾಪೇಕ್ಷ’ ಅಲ್ಲವೆ?
ಕ್ಷಮಿಸಿ, ಪತ್ರವು ದೀರ್ಘವಾಯಿತು ಹಾಗೂ ’ಶುಷ್ಕ’ ವಾಗಿರಬಹುದು. ವಂದನೆಗಳೊಡನೆ,
ನಿಮ್ಮ,
ರಾಮಚಂದ್ರನ್






ಸರ್ ನಮಸ್ಕಾರ
(ಕಂಸಗಳಲ್ಲಿರುವುದು ನಿಮ್ಮ ಮಾತು)
೧. ಈ ಮಾತು ನಾನು ಜೋಗಿಯವರಿಗೆ ಹೇಳಿದ್ದು (ಜೋಗಿ – ಅಂತ ಹಾಕಿದ್ದೇನೆ) ( “ವೈಚಾರಿಕತೆ ಅಂದ ತಕ್ಷಣ ಅದು ಏಕರೂಪದ್ದು ಮತ್ತು ಬರಹದಲ್ಲಿರುವುದು ಎಂದುಕೊಂಡರೆ ಇಂತಹ ತೀರ್ಮಾನಗಳು ಉಂಟಾಗುತ್ತವೆ” ಎಂದು ತೀರ್ಮಾನಿಸಿದ್ದೀರಿ….. ನಾನಂತೂ ಎಲ್ಲಿಯೂ ಹೀಗೆ ಹೇಳಿಲ್ಲ ಎಂದು ಅಂದುಕೊಂಡಿದ್ದೇನೆ.)
೨. ವಾಸ್ತವದಲ್ಲಿ ನಾನು ಅದರ ಬಗ್ಗೆಯೇ ಚಿಂತಿಸಲು ಯತ್ನಿಸಿದ್ದು. ನೀವು “ಚಲನಚಿತ್ರಗಳಲ್ಲಿಯೂ, ಹಿಂದಿನ ಕನ್ನಡ “ಬಭ್ರುವಾಹನ” ಚಿತ್ರದಿಂದ ಪ್ರಾರಂಭಿಸಿ ಇತ್ತೀಚಿನ “ಪಿಂಕ್” ಹಿಂದಿ ಚಿತ್ರದ ವರೆಗೆ ದೀರ್ಘ ಸಂಭಾಷಣೆಗಳು ಹಾಗೂ ’ಭಾಷಣ’ಗಳು ಇವುಗಳನ್ನು ಪ್ರೇಕ್ಷಕರು ಮೆಚ್ಚಿದ್ದರು, ಮೆಚ್ಚಿದ್ದಾರೆ…. ದೃಶ್ಯಮಾಧ್ಯಮವೇ ಆದ ನಾಟಕಗಳಲ್ಲಿಯೂ, “ಭಕ್ತ ಕಬೀರ್,” “ಭಕ್ತ ಪ್ರಹ್ಲಾದ” ಇತ್ಯಾದಿಗಳಲ್ಲಿ ದೀರ್ಘ ’ಭಾಷಣ’ಗಳಿರುವುದು ನಿಮಗೆ ಗೊತ್ತು.”…ಎಂದು ಹೇಳಿದಿರಿ. ದೀರ್ಘ ಸಂಭಾಷಣೆಗಳು ಮತ್ತು ಭಾಷಣಗಳು “ಮಾತ್ರವೇ” ನೇರ ವೈಚಾರಿಕತೆ ಯ ಪ್ರತಿಪಾದನೆಯಾ? – ಮಾತಿನಲ್ಲಿ ಹೇಳುವುದನ್ನು ದೃಶ್ಯದಲ್ಲಿ ಹೇಳುವುದೇ ಚಲನಚಿತ್ರದ ಅನುಕೂಲತೆ (ಮತ್ತು ಅನಾನುಕೂಲತೆ ಇನ್ನೊಂದು ಕೋನದಲ್ಲಿ). ಅಂದರೆ ದೃಶ್ಯವು ಚಿಂತನೆಯನ್ನು “ಹುಟ್ಟುಹಾಕುತ್ತದೆ” ಎಂದು ಅಂದುಕೊಂಡರೆ ಹೇಳುಗನ ತಲೆಯಲ್ಲಿ ಯಾವ ಚಿಂತನೆಯನ್ನು ದಾಟಿಸಬೇಕಾಗಿದೆಯೋ ಅದನ್ನು ಹಾಗೆಯೇ ದಾಟಿಸಲು ದೃಶ್ಯಕ್ಕೆ ಇರುವ ಸಾಧ್ಯತೆ ಅಸಾಧ್ಯತೆಗಳೇನು? ಜೋಗಿಯವರು ಈ ವಿಚಾರವನ್ನು ಕುರಿತು ಪ್ರಸ್ತಾಪಿಸಿದರು ಅಂದುಕೊಳ್ಳುತ್ತೇನೆ. ಸಂಭಾಷಣೆಯ ಮೂಲಕ ದಾಟಿಸುವುದರಲ್ಲಿ ಕೂಡಾ ಒಂದು ಮಿತಿ ಇರುತ್ತದೆ. ಆದರೆ ದೃಶ್ಯ ಮಾಧ್ಯಮಕ್ಕೆ ಇರುವ ಅಸಂಖ್ಯ ಸಾಧ್ಯತೆಗಳಲ್ಲಿ – ಬರಹ ಮಾಧ್ಯಮವನ್ನು ಪೂರಾ ಹೊರಗಿಟ್ಟು ನೋಡುವುದಾದರೆ – ವೈಚಾರಿಕತೆಯ ದೃಶ್ಯರೂಪವನ್ನು (ಸಂಭಾಷಣೆ ಅಲ್ಲ / ಮೌನದಲ್ಲಿ ಅಂತಿಟ್ಟುಕೊಳ್ಳಿ) ನೋಡುಗ ಹೇಗೆ ಗ್ರಹಿಸುತ್ತಾನೆ ಅನ್ನುವುದೇ ಈಗ ಪರಿಶೀಲಿಸಬೇಕಾದ ಅಂಶ. ನಾನು ಸಂಭಾಷಣೆಯ ಮೂಲಕ ವೈಚಾರಿಕತೆಯನ್ನು ದಾಟಿಸುವ ಮೂಲ ಹಂತವನ್ನು ಮೀರಿ ಮಾತಾಡುತ್ತಿದ್ದೇನೆ. ನೀವು ಸಹ ಈ ಮಾತನ್ನು ನಿಮ್ಮ ಈ ಟಿಪ್ಪಣಿಯಲ್ಲಿ ಒಪ್ಪಿದ್ದೀರಿ.
(“’ಗತಿ’ ಹಾಗೂ ’ಸ್ಥಿರತೆ’ ಇರುವ, ಚಲನಚಿತ್ರ ಎಂಬ ದೃಶ್ಯ-ಶ್ರವಣ ಮಾಧ್ಯಮವು ವೈಚಾರಿಕತೆಯನ್ನು ಅನೇಕ ಮಾರ್ಗಗಳಲ್ಲಿ ಸೂಚಿಸಬಹುದು; ಅವುಗಳಲ್ಲಿ ಒಂದು (ಒಂದೇ ಅಲ್ಲ) ಮಾತುಗಳ ಮೂಲಕ.”)
೩. ಕಲೆ ಮತ್ತು ‘ದರ್ಶನ’ದ ಮಾತು ಎತ್ತಿದ್ದೀರಿ. ಇದು ವೈಚಾರಿಕತೆಗೂ ಅನ್ವಯಿಸಬಹುದಾದ ಸಂಗತಿ. ನಾನು ಇದನ್ನೇ ವಿವರಿಸಲು ಚೀನಿ ಚಿತ್ರ “ಟು ಲಿವ್ ” ನ ಉದಾಹರಣೆ ಕೊಟ್ಟಿದ್ದೆ. ಒಂದು ಸಮಾಜವಾದದ ವಿಮರ್ಶೆಯನ್ನು ಯಾವುದೇ ಭಾಷಣದ ಹಂಗಿಲ್ಲದೇ ಸಾದರಪಡಿಸುವ ತಾಕತ್ತು ಚಲನಚಿತ್ರಕ್ಕಿದೆ ಎಂದು ತೋರಿಸುವ ಚಿತ್ರ ಅದು. ಕನ್ನಡದ ಚಿತ್ರವನ್ನೇ ಹೇಳಬೇಕೆಂದರೆ ಬೇಕಾದಷ್ಟಿವೆ. ಆದರೆ ವೈಚಾರಿಕತೆ ಮತ್ತು ವಾಸ್ತವವನ್ನು “ಸೂಚಿಸುವ” ಸಂಗತಿಗಳ ನಡುವೆ ವ್ಯತ್ಯಾಸವಿದೆ. ನಾನು ತಿಳಿದುಕೊಂಡಂತೆ ಎಲ್ಲಾ ಕಲೆಗಳು ವಾಸ್ತವವನ್ನು ಸೂಚಿಸುತ್ತಲೇ ಅದನ್ನು ಮೀರಿದ “ಸಾಧ್ಯತೆ” ಯ ಆಯಾಮವನ್ನು ಒಳಗೊಂಡಿರುತ್ತವೆ. ಸೃಜನಾತ್ಮಕ ವ್ಯಕ್ತಿಗೆ ಒಂದು ಕಲಾಕೃತಿಯ ರಚನೆ ಒಂದು ರೀತಿಯ “ಬಿಡುಗಡೆ” ಅನ್ನಿಸುವುದು ಇದೆ ಕಾರಣಕ್ಕೆ. ವಾಸ್ತವವನ್ನು ಮೀರಿದ ಕಾಲ್ಪನಿಕ “ಸತ್ಯ”ಗಳನ್ನೂ ಅದು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುತ್ತದೆ. ಸತ್ಯದ ಬದಲು ಆಶಯ ಅಂತ ಬೇಕಾದರೆ ಹಾಕಿಕೊಳ್ಳಬಹುದು.
(“ಸಾಹಿತ್ಯವೂ ವಾಸ್ತವವನ್ನು ನೇರವಾಗಿ ದರ್ಶಿಸುವುದಿಲ್ಲ, ಚಲನಚಿತ್ರವೂ ದರ್ಶಿಸುವುದಿಲ್ಲ. ಸಾಹಿತ್ಯವೂ ಸೇರಿದಂತೆ ಎಲ್ಲಾ ಕಲೆಗಳು ಭಿನ್ನ ಭಿನ್ನ ತಂತ್ರಗಳ ಮೂಲಕ ವಾಸ್ತವವನ್ನು ’ಸೂಚಿಸಬಹುದು,’ ಅಷ್ಟೇ.”)
೪) ಈ ಕೆಳಗಿನ ಮಾತು ತುಂಬಾ ಸಿದ್ಧಾಂತದ ನೆಲೆಯಲ್ಲಿದೆ – ಚಲನ ಚಿತ್ರ ನಿರ್ಮಿಸುವಾಗ ನಾವು ಆ ನೆಲೆಯಲ್ಲಿ ಚಿಂತಿಸುವುದಿಲ್ಲ. ಶಬ್ದ ಅಂದರೆ ಸೌಂಡ್ – ಮಾತು, ಹಿನ್ನೆಲೆ ಶಬ್ದ ಸಂಗೀತ -, ದೃಶ್ಯ ಅಂದರೆ ಒಂದು ಸೀನ್ ನಲ್ಲಿ ನಡೆಯುವ ಸಂಗತಿ, ಚಲನೆ ಅಂದರೆ ಪಾತ್ರಗಳು, ವಾಹನಗಳು ಪ್ರಾಣಿಗಳು ಜೊತೆಗೆ ಕ್ಯಾಮರಾ ಚಲನೆ. “ವಾಸ್ತವವನ್ನು ಮಾತುಗಳ ಮೂಲಕ..” ಎಂದಿರಲ್ಲಾ… ನಾನು ಇದುವರೆಗೆ ವಾದ ಮಾಡಿದ್ದು ಚಲನ ಚಿತ್ರದಲ್ಲಿ ವೈಚಾರಿಕತೆ ಮಾತಿನ ಮೂಲಕ ಮಾತ್ರ ದಾಟಬೇಕಿಲ್ಲ ಅನ್ನುವುದೇ ಆಗಿದೆ.
(” ಜೋಗಿಯವರ ಒಂದು ಮಾತು ಹೀಗಿದೆ: “ಸಿನಿಮಾವನ್ನು ನಾವು ಬದುಕಿನ ಹಾಗೆ ಶಬ್ದ, ದೃಶ್ಯ, ಚಲನೆ ಮತ್ತು ವಾಸ್ತವದ ಮುಖಾಂತರ ಗ್ರಹಿಸುತ್ತೇವೆ” (’ಶಬ್ದ, ದೃಶ್ಯ, ಚಲನೆ’ ಇವುಗಳಿಂದ ಹೊರತಾದ ವಾಸ್ತವ ಯಾವುದು? ನನಗೆ ಗೊತ್ತಿಲ್ಲ.) ಈ ವಾಕ್ಯದಲ್ಲಿ ಬರುವ ’ಶಬ್ದ’ ಎಂದರೇನು? ಒಂದು ಭಾಷಿಕ ಸಮುದಾಯ ಯಾದೃಚ್ಛಿಕವಾಗಿ ಆಯ್ಕೆ ಮಾಡಿಕೊಂಡ ವಿಶಿಷ್ಟ ಶಬ್ದಗಳೇ ಅನಂತರ ಪದ-ವಾಕ್ಯಗಳೆಂದು ಪರಿಗಣಿಸಲ್ಪಟ್ಟು, ಅನಂತರ ಅವುಗಳಿಗೊಂದು ಯಾದೃಚ್ಛಿಕ ಉಚ್ಚಾರ ಹಾಗೂ ಅರ್ಥವು ದೊರಕಿ, ಅವುಗಳ ಮೂಲಕ ನಾವು ನಮ್ಮ ವಿಚಾರಗಳನ್ನು ಮತ್ತೊಬ್ಬರಿಗೆ ತಿಳಿಸಲು ಪ್ರಯತ್ನಿಸುತ್ತೇವೆ. ಎಂದರೆ, ’ವಾಸ್ತವ’ವೆಂದು ನಾವು ಭಾವಿಸುವುದನ್ನು ’ಮಾತು’ಗಳ ಮೂಲಕವೂ ತಿಳಿಸಬಹುದು, ಎಂದಾಯಿತು; ಅಲ್ಲವೆ?”)
೫. ’ಮಾತಿನ ಮೂಲಕ ಬಂದದ್ದು ಶುಷ್ಕ-ನೀರಸ’ ಅಂತ ನಾನು ಹೇಳಿಲ್ಲ. ಒಂದು ಉತ್ತಮ ಚಲನಚಿತ್ರವು ದೃಶ್ಯವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತದೋ ಅಷ್ಟೇ ಪರಿಣಾಮಕಾರಿಯಾಗಿ ಮಾತನ್ನೂ ಬಳಸುತ್ತದೆ. ನಮ್ಮ ವಾದ ಇದ್ದಿದ್ದು ವೈಚಾರಿಕತೆಯನ್ನು ದೃಶ್ಯ ಮಾಧ್ಯಮದಲ್ಲಿ ಹೇಗೆ ತರುವುದು ಅನ್ನುವ ಬಗ್ಗೆ. ಜೋಗಿಯವರು ಎತ್ತಿದ ಪ್ರಶ್ನೆ ಅದು. ನಾನು ಅದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಚರ್ಚೆ ಮುಂದುವರಿಸಿದೆ. ನನಗೆ ಚರ್ಚೆ ಮತ್ತು ಪರಸ್ಪರ ವಿಷಯ ವಿನಿಮಯ ಇಂದಿಗೂ “ಶುಷ್ಕ” ಆಗುವುದಿಲ್ಲ.
(“.. ಆದುದರಿಂದ ’ಮಾತಿನ ಮೂಲಕ ಬಂದದ್ದು ಶುಷ್ಕ-ನೀರಸ’ ಹೇಗಾಗುತ್ತದೆ?)
೬. ನಿಮ್ಮ ಈ ಮಾತು ನನಗೆ ಕುತೂಹಲ ಎನ್ನಿಸುತ್ತದೆ – “ಕೇವಲ ’ದೃಶ್ಯ’ದ ಮೂಲಕ ಮಾತ್ರ ಬಂದದ್ದು ಸತ್ಯ ಅಥವಾ ’ರಸಪೂರ್ಣ’ ಹೇಗೆ?” – ಬರಹ ಸಾಹಿತ್ಯಕ್ಕೂ ದೃಶ್ಯ ಮಾಧ್ಯಮವಾದ ಚಲನಚಿತ್ರಕ್ಕೂ ಇರುವ ಮೂಲಭೂತ ವ್ಯತ್ಯಾಸವೇ ಇದು ಹೇಳುತ್ತಿದೆ. ಹಿಂದಿನ ಎಲ್ಲ ಚರ್ಚೆಗಳಿಗೆ ನೀವೇ ಉತ್ತರ ಕೊಡುವಂತಹ ವಾಕ್ಯ ಇದು. ನೀವು ಹೇಳುತ್ತಿದ್ದೀರಿ ಚಿತ್ರದಲ್ಲಿ ಮಾತು/ಭಾಷಣ ವೈಚಾರಿಕತೆಯನ್ನು ದಾಟಿಸುತ್ತದೆ. ನಾನು ಹೇಳಿದೆ ಚಿತ್ರದಲ್ಲಿ ಮಾತಿಲ್ಲದೆಯು ವೈಚಾರಿಕತೆ ದಾಟಿಸಲು ಸಾಧ್ಯ ಅಂತ. ಈಗ ನೀವು “ದೃಶ್ಯದ ಮೂಲಕ ಬಂದದ್ದು ಸತ್ಯ ಅಥವಾ ರಸಪೂರ್ಣ ಹೇಗೆ” ಎಂದು ಪ್ರಶ್ನಿಸುವ ಮೂಲಕ ಸಾಹಿತ್ಯಕ್ಕಿಂತ ದೃಶ್ಯ ಮಾಧ್ಯಮ ಸ್ವಲ್ಪ ಅಸತ್ಯ/ ರಸಪೂರ್ಣವಲ್ಲ ಎನ್ನುವ ವಾದ ಮುಂದಿಡುತ್ತಿದ್ದೀರಿ. ಒಬ್ಬ ಸಾಹಿತಿಗೂ ಒಬ್ಬ ಚಲನಚಿತ್ರಕಾರನಿಗೂ ಇರುವ ವ್ಯತ್ಯಾಸವೇ ಅದು. ಸಾಹಿತಿಗೆ ತಾನು ಬರಹದಲ್ಲಿ ಮಾತ್ರ ಸತ್ಯವನ್ನು ಅನಾವರಣಗೊಳಿಸುತ್ತೇನೆ, ರಸಪೂರ್ಣ ಮಾಡುತ್ತೇನೆ ಎನ್ನಿಸಿದರೆ ಚಿತ್ರನಿರ್ದೇಶಕನಿಗೆ ತಾನು ಸಾಹಿತಿಯನ್ನೂ ಮೀರಿ ದೃಶ್ಯದಲ್ಲಿ ಅದನ್ನು ತೋರಿಸುತ್ತೇನೆ ಅನ್ನಿಸುತ್ತದೆ. ದಿನಬೆಳಗಾದರೆ ನಾವು ಒಂದು ಸ್ಕ್ರೀನ್ ಪ್ಲೆ ನಲ್ಲಿ ಏನೆಲ್ಲಾ ಸಾಧ್ಯತೆಗಳನ್ನು ತರಬಹುದು ಅನ್ನುವ ಬಗ್ಗೆ ಚರ್ಚಿಸುತ್ತಿರುತ್ತೇವೆ. ನಾನು ಮೂರು ಪುಟ ಬರೆದ ಒಂದು ದೃಶ್ಯವನ್ನು ನನ್ನ ನಿರ್ದೇಶಕರು ಹತ್ತು ಸೆಕೆಂಡುಗಳಲ್ಲಿ ತೋರಿಸುತ್ತಾರೆ. ಅದು ದೃಶ್ಯ ಮಾಧ್ಯಮದ ಪಾಸಿಬಲಿಟೀಸ್.
ಕೊನೇಗೆ ಜೋಗಿ ಎತ್ತಿದ ಪ್ರಶ್ನೆಗೆ ಇದನ್ನು ಅನ್ವಯಿಸಿದರೆ – ಜೋಗಿ ನೀವು ಉಲ್ಲೇಖಿಸಿದ ಒಂದು ಪುಟವನ್ನು ಖಂಡಿತಾ ದೃಶ್ಯದಲ್ಲಿ ತರಲು ಸಕಲ ಸಾಧ್ಯತೆ ಇದೆ ಎಂದೇ ಸ್ಪಷ್ಠಪಡಿಸಬಯಸುತ್ತೇನೆ. ಅಲ್ಲೇ ಒಬ್ಬನ ಕೌಶಲ್ಯ, ನೈಪುಣ್ಯ ಇರುವುದು. ಒಬ್ಬ ಟೊರಾಂಟಿನೋಗು ಒಬ್ಬ ಸ್ಪಿಲ್ ಬರ್ಗ್ ಗು ನಿನ್ನೆ ನಾನು ನೋಡಿದ ಕಚಡಾ ಸಿನಿಮಾದ ನಿರ್ದೇಶಕನಿಗೂ ಇರುವ ವ್ಯತ್ಯಾಸ.
ಉತ್ತಮ ಚರ್ಚೆಗೆ ಸದಾ ಸಿದ್ಧ
ಪ್ರತಿಭಾ ನಂದಕುಮಾರ್