ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಇನ್ನು ಮುಂದೆ…

ಸಬಿತಾ ಸಚ್ಚಿ

ಪ್ರತಿಭಾ ನಂದಕುಮಾರ್

ಸಬಿತಾ ಸಚ್ಚಿ ಅವರ ಇಂಗ್ಲಿಷ್ ಕವನ ಸಂಕಲನ “ಹಿಯರ್ ಆಫ್ಟರ್” 1, ಶಾಂತಿ ರೋಡ್ ನಲ್ಲಿ ಬಿಡುಗಡೆ ಆಯಿತು.

ಅರುಂಧತಿ ಘೋಷ್, ಎಚ್ ಎಸ್ ಶಿವಪ್ರಕಾಶ್ ಮತ್ತು ಪ್ರತಿಭಾ ನಂದಕುಮಾರ್ ಅತಿಥಿಗಳಾಗಿದ್ದರು. ಸಬಿತಾ ಮಲಯಾಳಂ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕವನ ಬರೆಯುತ್ತಾರೆ.

ಪ್ರತಿಭಾ ನಂದಕುಮಾರ್ ಸಬಿತಾ ಅವರ ಐದು ಕವನಗಳ ಕನ್ನಡ ಅನುವಾದ ಮಾಡಿದ್ದಾರೆ.

1. ಸಮಾಧಿಭೂಮಿ – ರಾಜರುಗಳ ಕಣಿವೆ

ಯಾವೊಬ್ಬ ಮನುಷ್ಯ ಅಥವಾ
ಒಂದು ಕಾಗೆ ಕೂಡಾ ಬರಲಾರದಂತಹ ಕಡೆ
ಕಟ್ಟಿದರು ಇದನ್ನು.
ಪ್ರೀತಿ, ಕಾಳಜಿ, ಪರಿಶ್ರಮಗಳಿಂದ
ಬಿಲ ಕೊರೆದು
ಸಾವಿಗೆ ಸಾವಿನ ಪಣತೊಡುತ್ತಾ
ದೈವೀಕ ಕೈಗಳು
ಮಿತಿಯಿಲ್ಲದ ಲಕ್ಷ್ಯ ಕೊಟ್ಟು ಚಿತ್ರಿಸಿದವು
ಪ್ರತಿ ಅರಸ ಮತ್ತು ದೇವತೆ
ಮರ ಮತ್ತು ಎಲೆ ಮತ್ತು ಹಕ್ಕಿ.
ಹೆಸರೇ ವಸ್ತುವಾಗಿ
ಚಿತ್ರಲಿಪಿಯ ಈ ಸುರಂಗ ಬಿಂಬಿಸಿದೆ
ಇಲ್ಲಿಯ ಬದುಕು
ಮತ್ತು ನಂತರದ ಇತಿಹಾಸ.

2. ಪಿರಮಿಡ್ ಗಳು ಜ್ಯಾಮಿತಿ

ಮೊದಲ ಆಯಾಮ:
ನೆಲಕಚ್ಚಿದ ಸಾವನ್ನು ಮುಟ್ಟುವುದು.
ಎರಡನೆಯದು, ವಿಸ್ಮೃತಿ ಸಮುದ್ರದ
ಯಾನ ಮಾಡುವುದು.
ಮೂರನೆಯದು, ಶಿಲೆಗಳ ಮೇಲೆ ನಿಮ್ಮನ್ನು
ಕಾಪಿಟ್ಟುಕೊಳ್ಳುವುದು, ಈ
ಶಾಶ್ವತ ಶಿಲೆಗಳು,
ಅಮರತ್ವದ ಜ್ಯಾಮಿತಿಯ
ಕೀಲಿಗಳು.

3. ರಾಜನಾಗಿರಬಹುದಾದ ರಾಣಿ

ದೇವಾಲಯದ ದ್ವಾರದಲ್ಲಿ ದೇವರುಗಳಿಗೆ
ಕಾವಲು ನಿಂತಿದ್ದಾಳೆ
ಗಡ್ಡಧಾರೀ ಹೆಣ್ಣು.
ಹಲವಾರು ಗಡ್ಡಧಾರೀ ಹೆಣ್ಣುಗಳು
ಶಿಲೆಯ ಅದ್ದೂರಿ ನಿಗೂಢ ರಹಸ್ಯಗಳು,
ಸೊಗಸಾದ ಭವ್ಯತೆಗೆ ಪಕ್ಕಾಗಿ
ದಿಗ್ಭ್ರಮೆಗೊಳಗಾದವರನ್ನು ತೃಣೀಕರಿಸುತ್ತಾ ನಿಂತವರು

ಓ ಹ್ಯಾಟ್ಶೆಪ್ಸೂಟ್
ರಾಜನಾಗಿರಬಹುದಾದ ರಾಣಿ
ಲೇಖನಿ ಕಂಠಗಳ ಮತ್ತು ಖಡ್ಗಗಳ ಹೆಣ್ಣು
ತನ್ನಿಚ್ಛೆಯಿಂದ, ರಾಜರುಗಳನ್ನು ಮಾತ್ರ ಪರಿಗಣಿಸಿದ ಆಳ್ವಿಕೆಯ
ನಿಯಮಾವಳಿಗಳಿಗೆ ಬದ್ಧಳಾಗಿರುವಂತೆ ಹೆಸರಾದಳು.
ಆದರೂ ಹ್ಯಾಟ್ಶೆಪ್ಸೂಟ್, ನಿನಗೆ ಸಾಧ್ಯವಾಗಲಿಲ್ಲ
ನಿಷ್ಟುರ ವಾಸ್ತವವನ್ನು ಮಣಿಸಲು
ನಿನ್ನ ಪೌರಾಣಿಕ ಸ್ಥೈರ್ಯ ಕಾರಣ.

ನಿನ್ನ ನಂತರದವನ ಅಪ್ಪಣೆಯಂತೆ
ವಿಶ್ವಾಸಘಾತಕರು ಶಿಲಾಸ್ಥಂಭಗಳ ಮೇಲಿಂದ
ನಿನ್ನ ಹೆಸರನ್ನು ಅಳಿಸಿಹಾಕಿಸಿದ್ದು
ಆಜ್ಞಾಪಿಸುವ ನಿನ್ನ ವಿಲಕ್ಷಣ ಧೋರಣೆಯನ್ನು ಸಹಿಸಲಾಗದೇ
ಅಸಹಾಯ ಕೋಪ ಮತ್ತು ದುರಾಸೆಯಲ್ಲಿ ಸೆಟೆಯುತ್ತಿರುವ
ನಿನ್ನ ವಿನಾಶಕ ಅಸ್ತಿಶಸ್ತ್ರ, ನಿನ್ನ ಗಂಡನ ಮಗ.

4. ಈಜಿಪ್ಟಿಗೆ ಪಲಾಯನ

ಈ ವಂಚಕ ಮರುಭೂಮಿಯ ಕಳ್ಳುಸುಕಿನಲ್ಲಿ
ತಡಮಾಡುವುದಿಲ್ಲ ನಾವು
ದೇಶಭ್ರಷ್ಠರ ನಾಡಿನತ್ತ ಕಷ್ಟಪಟ್ಟು ಸಾಗುವಾಗ –
ಇದೀಗ ಉಬ್ಬಿದ ನನ್ನ ಹೊತ್ತ ಕತ್ತೆ
ನೋಯುವ ಹೊಟ್ಟೆ ಮೇಲಿನ ನನ್ನ ಊದಿಕೊಂಡ ಎದೆಯ ಮೇಲೊರಗಿ
ನಮ್ಮ ಇದೇ ಹುಟ್ಟಿದ ಶಿಶುವಿನ ನಿರಂತರ ಅಳು.
ಜೊತೆಗೆ ಆ ದೈವಿಕ ಕನಸುಗಳನ್ನು ನಂಬಿದ
ಈ ನನ್ನ ಮುಗ್ಧ ಪತಿ.

ಕ್ಯಾಕ್ಟಸ್ಸಿನಂತೆ ನಮ್ಮ ಗಂಟಲನ್ನು ಚುಚ್ಚುವ ದಾಹ
ಆವರಿಸಿಕೊಳ್ಳುತ್ತಿದೆ. ಶೀತಲ ಗಾಳಿ ತುಂಡರಿಸುತ್ತಿದೆ
ಬೆಳುದಿಂಗಳಲ್ಲಿ ಸರಸರನೆ ಸರಿಯುವ ಕುಟುಕುವ ಚೇಳಿನ ಬಾಲದಂತೆ.
ಮನ್ನಾ ಮತ್ತು ಜೇನು ಹಾಗು ಮಹ್ ಗಳ ಪರಿಮಳದ
ಕನಸು ಕಾಣುತ್ತಿರುವ ನನ್ನ ಅರಕ್ಷಿತ ಶಿಶುವಿನ
ಹೃದಯದ ಬಡಿತದಂತೆ ನನ್ನ ಹೆರಿಗೆಯ ಗಾಯ ಮಿಡಿಯುತ್ತಿದೆ.
ಬುದ್ಧಿವಂತ ಗಂಡಸರಿಗೇನು ಗೊತ್ತು ತಾಯಿಯ ಅಳಲಿನ ಬಗ್ಗೆ?

ಗುಹೆಯೊಳಗೆ ಮಂಜು ಕರಗಿ ತೊಟ್ಟಿಕ್ಕುವಂತೆ ಸುದ್ದಿ ಬಂದಿತು
ಕೋಪದಲ್ಲಿ, ಅರಿಯದ ನನ್ನ ಮಗನ ಬದಲು, ಮಕ್ಕಳ ಹತ್ಯಾಕಾಂಡ ನಡೆಯಿತೆಂದು
ಎಳೇ ತಾಯಿಗೆ ಮಾತ್ರ ಸಾಧ್ಯವಾಗುವ ನಿಷ್ಠುರ ಕಣ್ಣೀರು ಸುರಿಸಿದೆ ನಾನು –
ಪಶ್ಚಾತ್ತಾಪದಲ್ಲಿ ಜೊತೆಗೆ ಬೇಗೆಯ ಸಾಂತ್ವನದಲ್ಲಿ.
ನಿದ್ದೆಯಲ್ಲೂ ರೇಚಲ್ಲಳ ಬಸಿರು ರೋಧಿಸುತ್ತದೆ – ಇಲ್ಲದ ಮಕ್ಕಳಿಗಾಗಿ.
ತಣ್ಣನೆಯ ಗುಹೆ ನನ್ನನ್ನು ಗಾಬರಿ ಮತ್ತು ಭಯದ ನಡುಕದಲ್ಲಿ ಮುಳುಗಿಸುತ್ತದೆ.
ನನ್ನ ಕನಸಿನಲ್ಲೂ ಗುಡುಗುತ್ತಿದೆ, ಸಂತಾನವಿದ್ದೂ ಅಭದ್ರನಾದ ಹೆರೋಡ್
ಧಾವಿಸುತ್ತಿರುವುದರ ಮುನ್ಸೂಚನೆ ಕೊಡುವ ನಿರ್ದಯಿ ಖುರಪುಟದ ಸದ್ದು.

ಹೀಗೆ, ನನ್ನ ಪ್ರಿಯಜನರೇ, ನಾನು ನನ್ನ ಹೃದಯ ಗಟ್ಟಿಮಾಡಿಕೊಂಡೆ
ತಿಳಿದಿತ್ತು ನನಗೆ, ಈ ಮಗು ಎಚ್ಚರಗೊಂಡಾಗ ಬಂದೆರಗುತ್ತದೆ ದುಃಖದ ಮೇಲೆ ದುಃಖ
ಗ್ಯಾಲಿಲಿ, ಜೆರುಸಲೇಮ್, ಮತ್ತು ನಜರೆತ್ ಗಳಲ್ಲಿ ಹಿಂಬಾಲಿಸುತ್ತದೆ
ಗಾಯಗೊಂಡ ಅವನ ದೇಹವನ್ನು ನನ್ನ ಖಾಲಿ ಮಡಿಲಲ್ಲಿ ತೂಗುತಿರುವಷ್ಟು ಕಾಲ.

5. ನೀನಿರಲಿಲ್ಲ ಇಲ್ಲಿ

(ನಗೀಬ್ ಮಹ್ ಫೂಸ್ ಗೆ)

ನಾನು ಬೀದಿಯ ಮಕ್ಕಳಿಗಾಗಿ ಹುಡುಕಿದೆ
ನೆರಳುಗಳ ಅಪಾಯಕಾರಿ ಓಣಿಯಲ್ಲಿ ಕೆಣಕುತ್ತ
ಅವಸರದಲ್ಲಿ ಓಡುತ್ತ ಒದ್ದಾಡುತ್ತ
ನಡುಗುವ ಚಾಕುಗಳ,
ಕಲ್ಲಿನ ಮೆಟ್ಟಿಲುಗಳ,
ಹರಿಯುವ ಹುಕ್ಕಾಗಳ ನಶೆಯ
ಸದಾ ತೇಲಿಬರುವ
ಗಾಜಿಗೆ ಗಾಜು ಬಡಿಯುವ ಸದ್ದು,
ನಿಂಬೆ ಮರಗಳು, ಉನ್ಮತ್ತ, ಸಂಗೀತಮಯ
ಮರುಭೂಮಿಯ ಅಮಲೇರಿದ ಚಂದ್ರ
ದಡಬಡಿಸಿ ಹುಡುಕುತ್ತ
ಜಗಳದ ಚೂಪು ಅಂಚು
ಅಥವಾ ಬರಿ ಮತ್ತೊಬ್ಬನ
ಹೆಂಡತಿಯ ಮುಸುಕು.

ಆದರೆ ಋಷಿಗಳು ಮತ್ತು ಕಟ್ಟುಕಥೆಗಳ
ಈ ಪುರಾತನ ನಗರದಲ್ಲಿ,
ಮ್ಹಫುಜ್, ಇನ್ನೂ ಪುರಾತನ,
ಕೈರೋದ ಚರಿತ್ರೆಕಾರ,
ಇರಲಿಲ್ಲ ನೀನು ಇಲ್ಲಿ.

‍ಲೇಖಕರು Admin

7 September, 2022

2 Comments

  1. ನಾ ದಿವಾಕರ

    ಅದ್ಭುತವಾದ ಕವಿತೆಗಳು ಅಷ್ಟೇ ಹೃದಯಸ್ಪರ್ಶಿ ಅನುವಾದ. ಪಿರಮಿಡ್ ಗಳು ಕವಿತೆಯಂತೂ‌ ಮನಕಲಕುವಂತಹುದು. ಅಭಿನಂದನೆಗಳು ಮೇಡಂ.

  2. ನಾ ದಿವಾಕರ

    ಅದ್ಭುತವಾದ ಕವಿತೆಗಳು ಮೇಡಂ. ಅಷ್ಟೇ ಸುಂದರ ಅನುವಾದ. ಮನಮುಟ್ಟುವಂತಿದೆ. ವಿಶೇಷವಾಗಿ ಪಿರಮಿಡ್ಸ್‌ಗಳು ಮತ್ತು ಜ್ಯಾಮಿತಿ ಹೃದಯ ತಟ್ಟುತ್ತದೆ. ಹೃದಯಸ್ಪರ್ಶಿ ಕವಿತೆಗಳ ಅನುವಾದಕ್ಕೆ ನಿಮಗೆ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading