
ಇಂಗ್ಲಿಷ್ ಮೂಲ: ಶೇಖರ್ ಬ್ಯಾನರ್ಜಿ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
1.ಮನೆತನ
ನಾವು ಎಲ್ಲಾ ಕೋಣೆಗಳನ್ನೂ ಪ್ರವೇಶಿಸುವಂತಿರಲಿಲ್ಲ, ಹೌದು
ಕೆಲವು ಕೋಣೆಗಳಿಗೆ ಸದಾ ಬೀಗ ಹಾಕಿರುತ್ತಿದ್ದವು, ಹೌದು
ಕೆಲವು ಕೋಣೆಗಳಿಗೆ ಒಳಗಿನಿಂದ ತಾಪಾಲು ಹಾಕಿರುತ್ತಿದ್ದವು,
ನಮ್ಮ ಜಡ್ಡುಗಟ್ಟಿದ ಮನಸ್ಸುಗಳಂತೆ, ಹೌದು
ಎಲ್ಲರೂ ಹೇಳುತ್ತಿದ್ದರು:
ಎಲ್ಲಾ ಕೋಣೆಗಳೂ ನಿನ್ನದೇ – ಹೌದು, ಹೌದು
ಆದರೆ, ಯಾಕೆ ಕೆಲವು ಕೋಣೆಗಳನ್ನು ಮುಚ್ಚಲಾಗಿವೆ? – ಇಲ್ಲ, ಇಲ್ಲ
ಆಗ ಅದರ ಬಗ್ಗೆ ನಾವು ಕೇಳುವಂತಿರಲಿಲ್ಲ, ಆದರೆ
ನನಗೆ ನೆನಪಿದೆ
ಬಾಗಿಲ ಕಾಲೊರಸುಗಳು – ವಿವಿಧ ಆಕಾರಗಳು ಮತ್ತು ಬಣ್ಣಗಳು: ಕೆಲವು ನಕ್ಷತ್ರಗಳಂತೆ
ಕೆಲವು ಕುಡುಗೋಲಿನಂತೆ, ಕೆಲವು ಚೌಕಾಕಾರ, ಕೆಲವು ಸುತ್ತಿಗೆಗಳು, ಒಂದು ಸಲ ಒಂದು
ಚಂದ್ರನೂ ಕಾಣಿಸಿದ ಹೌದು ನಮ್ಮ ಅಜ್ಜಿಯ ಕೋಣೆಯ ಹತ್ತಿರ.
ಅವಳೊಂದು ಪುರಾತನ ಅಡಕೆ ತೋಪು,
ನಾವು ಬೆಳೆದಂತೆ, ದಿನದಿಂದ ದಿನಕ್ಕೆ, ಅಂಗುಲ ಅಂಗುಲ
ಬೇರುಗಳನ್ನು ಕಳೆದುಕೊಂಡ ಮರವಾದಳು.

ಓಹ್ ಇಲ್ಲ
ನಾವು ಕೊಂಬೆಯೊಡೆಯುವುದಕ್ಕೆ ಮೊದಲು.
ಅವಳು ತನ್ನ ಎಲೆ ಅಡಿಕೆ, ಸುಣ್ಣ ಮತ್ತು ಚಿಕ್ಕ ಹಿತ್ತಾಳೆ
ಅಡಕತ್ತರಿಯನ್ನು ಮಲಗುವಾಗಲೂ ಪಕ್ಕದಲ್ಲಿಟ್ಟುಕೊಂಡು
ನಟ್ಟನಡುರಾತ್ರಿ ಎದ್ದು ಮನೆಯ ಎಲ್ಲಾ ಕೋಣೆಗಳಲ್ಲೂ ಎಲ್ಲಾ ಸರಿಯಾಗಿದೆಯೇ
ಎಂದು ತಪಾಸಣೆ ಮಾಡುತ್ತಿದ್ದಳು
ಅವಳ ಕವಳದ ಎಲೆ, ಹೂ, ಚಕ್ಕೆ
ಮತ್ತು ಒಣ ಬಾದಾಮಿ
ಪ್ರತಿದಿನ ಸೂರ್ಯ ಬೆಚ್ಚಗಿನ ಸೂಜಿ ಚುಚ್ಚಿ
ಚುಚ್ಚಿ ನಮ್ಮ ಮುಖಗಳನ್ನು ಹೊಲಿಯುತ್ತಿದ್ದ – ನೀಲಿ, ಬಿಳಿ, ಹಸಿರು ಮತ್ತು ಗುಲಾಬಿ ಮತ್ತು ಕಡುಗೆಂಪು
ಒಹ್ ಹೌದು
ಕೋಣೆಗಳಿಗೆ ಮೊದಲೇ ಗೊತ್ತಿತ್ತು ಯಾವ ಕೋಣೆಗೆ
ಯಾರಿಗೆ ಪ್ರವೇಶವಿದೆ ಎಂದು, ಹೌದು ಹೌದು
ಮತ್ತು ಪ್ರತಿ ಕೋಣೆಯ ವಾಸನೆ ಬೇರೆ, ಹೌದು
ನಾವೆಲ್ಲಾ ಟಿಸಿಲಾಗಿ ಇನ್ನೇನು ತೆರಳಲು ಸಿದ್ಧವಾಗಿರುವ ಭೂಖಂಡಗಳಂತೆ
2. ಕಣ್ಣಿನ ಗುಣಲಕ್ಷಣ
ಪ್ರೀತಿ ಅಥವಾ ಸಾವಿನ ಬಗ್ಗೆ
ಅತಿಯಾಗಿ ತಿಳಿಯುವ ಮತ್ತು ನಿಮ್ಮ ಸುತ್ತಲೂ
ಸೀಮೆಸುಣ್ಣದಿಂದ ಗೆರೆ ಎಳೆದುಕೊಳ್ಳುವ ಕಾಲವಿದು.
ಈಗ ನೀವೊಂದು ಭೂಖಂಡ.
ಹೆದ್ದಾರಿಯ ಬದಿಯ ಸಣ್ಣ ಗಲ್ಲಿಯೊಂದರಿಂದ
ಒಂದು ಗುರುವಾರ ಮುದ್ದು ಹೆಂಗಸೊಬ್ಬಳು ಬಂದು
ಚಿತ್ರಪಟದಂತೆ ಸುಂದರವಾಗಿ ಮುಗುಳ್ನಕ್ಕು
ನಿಮ್ಮನ್ನು ಹಳಗನ್ನಡದಲ್ಲಿ ಶುಭ ಕೋರಿ
ಬೇರೇನಿಲ್ಲ, ಬರೀ ಶುಭ ಕೋರಿ,
ಹೋಗುತ್ತಾಳೆಂದು ನೀವು
ಗೋಪ್ಯವಾಗಿ
ಬಯಸುತ್ತಿರುತ್ತೀರಿ.
ಈಗ ನೀವು ಬೇರೆ ಯಾರನ್ನೂ ಸ್ಪರ್ಶಿಸಲೂ
ಇಷ್ಟಪಡುವುದಿಲ್ಲ
ನಿಮಗೆ ಕಣ್ಣುಗಳಿವೆ ಮರಗಳು, ಮನೆಗಳನ್ನು,
ಕತ್ತಲೆಯನ್ನು ಮತ್ತು ನಿಮ್ಮ ತಲೆಯೊಳಗೆ ಬೆಳೆಯುತ್ತಿರುವ
ಕಥೆಗಳನ್ನು ಸ್ಪರ್ಶಿಸಲು.
ರಾತ್ರಿಯಿಡೀ ನೀವು ರೇಷ್ಮೆ ದಾರ ನೂಲುತ್ತೀರಿ ಮತ್ತು ಹೊದಿಸುತ್ತೀರಿ
ಪ್ರತಿ ಬೆತ್ತಲೆ ದೀಪಕಂಭಕ್ಕೆ, ರಸ್ತೆಗೆ ಮತ್ತು ಕಟ್ಟಡಕ್ಕೆ
ಹೊಸ ಸೀರೆ, ಫ್ರಾಕು, ಒಂದು ಷರಟು ಅಥವಾ
ಹೊಸ ಪ್ಯಾಂಟುಗಳನ್ನು
ಮತ್ತು ನಿಮ್ಮ ಬೆಳಗ್ಗೆ ವೃತ್ತಪತ್ರಿಕೆ ಹಾಕುವ ಹರಟೆಮಲ್ಲ
ಕಳೆದ ಮೂರೂ ಗುರುವಾರ ಯಾಕೆ ಬಂದಿಲ್ಲ ಎಂದು ವಿಶ್ಲೇಷಿಸುವುದನ್ನು
ನೀವು ನಿಲ್ಲಿಸುತ್ತೀರಿ.
3. ಕಳೆದುಹೋದ ಪತ್ರಗಳ ಬಾಕ್ಸ್ ಗಳು
ರಾತ್ರಿ ತಡಕಾಡುತ್ತೇನೆ, ಬೆಡ್ ರೂಮು, ಬಾಲ್ಕನಿ,
ಹಾಲ್ ಮತ್ತು ಅಡಿಗೆಮನೆಗಳಲ್ಲಿ.
ಮತ್ತೆ ಮರಳುತ್ತೇನೆ ಬೆಡ್ ರೂಮು, ಬಾಲ್ಕನಿ, ಹಾಲ್, ಅಡಿಗೆಮನೆಗೆ
ಅಪ್ರೆಂಟಿಸ್ ಪೋಸ್ಟ್ ಮ್ಯಾನ್ ನಂತೆ.
ಮುಂದಿನ ಮುಚ್ಚಿದ ರಸ್ತೆಯಲ್ಲಿ
ಬ್ಲಾಕ್ ಮಾಡಿದ ಮನೆಗಳು ಕಾಣಿಸುತ್ತಿವೆ
ಪ್ರತಿ ಮರದಲ್ಲಿ ಕೆಂಪು ಅಂಚೆಪೆಟ್ಟಿಗೆಗಳು
ನೇತಾಡುತ್ತಿವೆ
ಎಷ್ಟು ವಿಳಾಸಗಳನ್ನು ಸೃಷ್ಟಿಸಿದ್ದೇವೆ ನಾವು?
ನಿರ್ದಿಷ್ಟ ಗುರಿ ಎನ್ನುವುದೀಗ ಸತ್ತಿದೆ.

ಕಾಡಿನಲ್ಲಿ ಕಳೆದುಹೋಗಿ
ಚಿಟ್ಟೆಗಳ ಬಗ್ಗೆ ದೂರುತ್ತಾ
ಜೂನ್ ತಿಂಗಳಲ್ಲಿ ಕಳೆದುಹೋದ ಪತ್ರಗಳ
ಬಾಕ್ಸ್ ಗಳನ್ನು ಹಳಿಯುತ್ತಾ
ಸುತ್ತುತ್ತಿರುವ ಪೋಸ್ಟ್ ಮ್ಯಾನ್ ನನ್ನು ನೆನೆಯುತ್ತಾ
ನಿಟ್ಟುಸಿರು ಬಿಡುತ್ತೇನೆ.
ಯಾವುದೂ ಹಿಂದಿನಂತಿಲ್ಲ
ಅನ್ನಿಸುತ್ತಿದೆ.
ಅದಕ್ಕೇ ಈಗ ಕತ್ತಲಲ್ಲಿ
ಒಂಟಿಯಾಗಿ ನಿಂತಿದ್ದೇನೆ
ವಿಳಾಸವೊಂದನ್ನು ಹುಡುಕುತ್ತಾ.
4. ಉದಾರ ಸಂಪ್ರದಾಯವಾದಿ
ನನ್ನ ವೈದ್ಯರ ಕೊಠಡಿಯೊಳಗೆ ಕೂತು ಆಕಳಿಸುತ್ತೇನೆ
ಮತ್ತೆ ಎಲ್ಲವೂ ಯಥಾಪ್ರಕಾರ
ಅವರು ನನ್ನ ಚಿಕಿತ್ಸೆ ಮಾಡುತ್ತಾರೆ
ಎಲ್ಲ ಬರಬಾರದ ಕಾಯಿಲೆಗಳಿಗೆ.
ಕಾಗದದಂತಹ ನನ್ನ ಚರ್ಮ, ನಿದ್ರಾಹೀನತೆ
ಮತ್ತು ಕಡುಗೆಂಪು ಮೂಳೆಗಳು ಮತ್ತು ನೀಲಿ ಬೆರಳ ತುದಿಗಳು
ಮತ್ತು ನನ್ನ ದುರ್ಬಲ ಎದೆಗೂಡು

ಈಚೆಗೆ ಗಮನಿಸಿದ್ದೇನೆ
ಅವರಿಗೆ ನನ್ನ ಕಾಯಿಲೆಗಳ ಕುರಿತು ದಣಿವಾಗುವುದೇ ಇಲ್ಲ
ಅವರೊಬ್ಬ ಹಿರಿಯ, ಉದಾರ ಸಂಪ್ರದಾಯವಾದಿ
ಪ್ರತಿವಾರ ತಮ್ಮ ಹ್ಯಾಂಡ್ ವಾಷ್ ಗಳ, ಮಾಸ್ಕುಗಳ ಮತ್ತು ಕಾಯಿಲೆಗಳ
ಡಿಸ್ಪೆನ್ಸರಿಯಲ್ಲಿ ಅವರು ಮಾಗುತ್ತಾ ಬಂದಿದ್ದನ್ನು ನಾನು
ಕೆಲವು ವಾರಗಳಿಂದ ಗಮನಿಸಿದ್ದೇನೆ.
ನನಗೆ ಗೊತ್ತು
ಅವರು ಈಗ ನನ್ನ ಕಳೆದುಹೋದ ನೆರಳಿಗೆ
ಚಿಕಿತ್ಸೆ ಮಾಡುತ್ತಿದ್ದಾರೆ






0 Comments