ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೌರ ಕಾರ್ಮಿಕರ ಹಾಡು

ತ್ರಿಪದಿಗಳು: ಕಾಯಕಕೆ ಕರ ಮುಗಿದು

ರಮೇಶ ಗಬ್ಬೂರ್

ಮುಸುಕು ಜಾರಿಸೆ ಮೋಡ ತುಸು ಇಣುಕಿ ನೋಡುತಾ
ಕಸ ಹೊಡೆಯೇ ಬರುವಾನು ಅಂಗಾಳಕೆ, ರವಿಯಂತೆ
ಹಸಿದೊಡಲು ಅಂಬರದಿ ಪುರಕಾಮರ್ಿಕ
 
ಪೊರಕೆ ಕೈಯಲ್ಲಿ ಹಿಡಿದು ಹರಕೆ ಅಂಗಳಕ್ಕೊತ್ತು
ನೆರವಾಗಿ ನೀ ಬರುವೇ ಗುಡಿಸೋದಕ, ನನ್ನಣ್ಣ
ತರವಲ್ಲ ನಿನ ಬಾಳು ಮರಿಯೋದಕ

ಕಲೆ : ಪುಂಡಲೀಕ ಕಲ್ಲಿಗನೂರು

ಕೊಳಚೆಗಿಳಿವಾ ಜೀವ ಕಳಚಿ ಮುಟ್ಟುವ ಭಾವ
ಬಳುಕ್ಯಾಡಿ ಹೊಲಸಾ ತೆಗೆವಾವ, ನನ್ನಣ್ಣ
ಮಲ್ಲೀಗಿ ಮನಿಮುಂದ ಹೊದಿಸಾವ
 
ಬಳಿಯಾಲು ಆಗಸಕೆ ಹೊಳೆದಾವು ಚುಕ್ಕಿಗಳು
ಇಳೆಯೆಲ್ಲ ಸಂಭ್ರಮವು ತುಳುಕ್ಯಾಡಿ, ದಿನದಿನ
ಕೊಳಚೆಯಲಿ ನಿನ ಬದುಕು ಚೆಲ್ಯಾಡಿ
 
ಮೈಯೆಲ್ಲ ಸರಿಯಿಲ್ಲ ಕೈಯೆಲ್ಲ ಕಸಬರಿಗೆ
ಬಾಯಲ್ಲಿ ಬರಿನೀರು ಹರಿಸಾವ, ನನ್ನಣ್ಣ
ಕಾಯದಲಿ ಕಮರೀ ಹೋಗಾವ
 
ಬೀದಿಗುಡಿಸುವ ಜೀವ ಹಾದಿಯಲ್ಲಿನ ಬದುಕು
ಬೇಧವಿಲ್ಲದೆ ಬೆವರ ಸುರಿಸ್ಯಾನೆ, ನನ್ನಣ್ಣ
ಮುದುರಿ ತಾ ಮುಖ ಮುಚ್ಚಿ ಅಳುತಾನೆ
 
ಹಬ್ಬ ಮನೆಯೊಳಗಿಲ್ಲ ಒಬ್ಬಟ್ಟು ಊಟಿಲ್ಲ
ಹುಬ್ಬೀನ ನಗುವಿಲ್ಲ ಉಪವಾಸ, ತಂಗಾಳು
ತಬ್ಬಿ ತಂಗಳು ತಿಂದು ಪ್ರತಿದಿವಸ
 
ನಿನ ಪಾದದಾ ಧೂಳು ನನ ಮೈಗೆ ಶ್ರೀಗಂಧ
ನಿನ ಕಾಲಿಗತ್ತೀದ ಆ ಕೆಸರು, ಗೊಜ್ಜಲು
ನಾನುಣುವ ಅಂಬಾಲಿಯಾಗಿ ಮೊಸರು
 
ಅವನುಟ್ಟ ಆ ಬಟ್ಟೆ ನನ ಮೈಯ ಸಿರಿಯುಡುಗೆ
ಅವ ಬಳಿವ ನೆಲವೆಲ್ಲಾ ನನ್ನಾಸಿಗೆ, ಎಂದೆಂದು
ಅವ ಬಳಿವಾ ಬಣ್ಣಾವು ನನ ಕನಸಿಗೆ
 
ಹಸಿವನ್ನು ಮರೆತವನು ಹಸಿರ ಅರಿಯಾದವನು
ಹೆಸರಾಗಿ ಊರೆಲ್ಲ ಪುರಕಾರ್ಮಿಕ, ನೀ ಬಾರೋ
ಕೆಸರ ಪಾದವ ತೋರೋ ಮುಗಿಯೋದಕ
 
ಪೌರ ಕಾರ್ಮಿಕನಲ್ಲ ಪುರದ ಒಡೆಯನು ಈತ
ಕರಮುಗಿದು ನಮಿಸುವೆ ನಿನ ಪಾದಕ, ಗೊಬ್ಬೂರ
ರಮೇಶ ನಾ ಹಾಡ್ವೆ ನಿನ ಕಾಯಕ
 

‍ಲೇಖಕರು G

29 October, 2014

3 Comments

  1. bmbasheer

    ಕಲಕುವ ಪದಗಳು !!

  2. Kiran

    Good Poetry…Great lines.

  3. lalithasiddabasavaiah

    ಹೀಗೆ ಎಂದೆಂದು ಕಥಾನಾಯಕರೊ ಕಾವ್ಯನಾಯಕರೊ ಆಗದವರನ್ನು ಆಗು ಮಾಡುವುದೆ ಕಾವ್ಯದ ಸವಾಲು. ಪದ್ಯಗಳು ಇಷ್ಟವಾದುವು ರಮೇಶ್ ಅವರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading