ಪೋಲಿಷ್ ಕವಿಯ ಐದು ಕವನಗಳು

ಕನ್ನಡಕ್ಕೆ: ಎಸ್ . ಜಯಶ್ರೀನಿವಾಸ ರಾವ್

ಸಮಕಾಲೀನ ಪೋಲಿಷ್ ಕಾವ್ಯಲೋಕದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು ಆಡಮ್ ಜಾಗಯೆವ್‌ಸ್ಕಿ. ಜಾಗಯೆವ್‌ಸ್ಕಿಯವರು ಪೋಲಿಷ್ ಸಾಹಿತ್ಯದ ‘ಹೊಸ ಅಲೆ’ಯ (ನೊವಾ ಫ಼ಲಾ) ಅಥವಾ ‘ಜೆನರೇಷನ್ ಆಫ಼ ‘68’ ರ ಪ್ರಧಾನ ಕವಿಯಾಗಿದ್ದರು. ಕವಿಯಲ್ಲದೇ, ಜಾಗಯೆವ್‌ಸ್ಕಿಯವರು ಕಾದಂಬರಿಕಾರ, ಪ್ರಬಂಧಕಾರ, ಹಾಗೂ ಅನುವಾದಕರೂ ಆಗಿದ್ದರು. 

ಜಾಗಯೆವ್‌ಸ್ಕಿಯವರ ಸುಮಾರು 13 ಕವನ ಸಂಕಲನಗಳು ಪ್ರಕಟವಾಗಿವೆ ಹಾಗೂ ಅವರ ಕವನಗಳು ಬೇರೆ ಬೇರೆ ಭಾಷೆಗೆ ಅನುವಾದವಾಗಿವೆ. ಅವರ ಸಾಹಿತ್ಯಕ್ಕೆ ಹಲವಾರು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು, ಮನ್ನಣೆಗಳು ಸಂದಿವೆ. ಜಾಗಯೆವ್‌ಸ್ಕಿಯವರ ಕವನಗಳಲ್ಲಿ ರಾತ್ರಿ, ಕನಸುಗಳು, ಇತಿಹಾಸ ಮತ್ತು ಸಮಯ, ಅನಂತತೆ ಮತ್ತು ನಿತ್ಯತೆ, ನಿಶ್ಶಬ್ಧ, ಮರಣ, ಇವು ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತುಗಳು. 

ಕಳೆದ ತಿಂಗಳು, ಅಂದರೆ 21 ಮಾರ್ಚ 2021 ರಂದು ಜಾಗಯೆವ್‌ಸ್ಕಿಯವರು ನಿಧನರಾದರು. ಕಾಕತಾಳಿಯವೆಂಬಂತೆ, 21 ಮಾರ್ಚ ವಿಶ್ವ ಕಾವ್ಯ ದಿನ. ಇಲ್ಲಿರುವ ಅವರ ಐದು ಕವನಗಳ ಕನ್ನಡಾನುವಾದ ಅವರ ನೆನಪಿಗೆ, ಕಾವ್ಯ ಪ್ರತಿಭೆಗೆ ಒಂದು ಸಣ್ಣ ಗೌರವ.

ಈ ಕವನಗಳನ್ನು ಕ್ಲೇರ್ ಕಾವಾನರವರು (Clare Cavanagh) ಪೋಲಿಷ್-ನಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ನಾನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವೆ.

1. ಮೆಟ್ಟುಗಳು (ಮೂಲ: Sandals)

ಹಲವು ವರ್ಷಗಳ ಹಿಂದೊಮ್ಮೆ ಕೊಂಡ ಮೆಟ್ಟುಗಳು
ಇಪ್ಪತ್ತು ಯೂರೊಗಳು ಕೊಟ್ಟು,
ತಿಯೊಲೊಗೊಸ್ ಎಂಬ ಒಂದು ಗ್ರೀಕ್ ಹಳ್ಳಿಯಲ್ಲಿ,
ತಾಗೊಸ್ ದ್ವೀಪದಲ್ಲಿದ್ದ ಹಳ್ಳಿ,
ಸವೆಯಲೇ ಇಲ್ಲ,
ಹೊಸದಂತೆಯೇ ಇದೆ.
ನನಗೆ ಆಕಸ್ಮಿಕವಾಗಿ
ಒಬ್ಬ ಜೋಗಿಯ, ಅಥವಾ ಸಂತನ
ಮೆಟ್ಟುಗಳು ದೊರಕಿರಬಹುದೋ ಏನೋ.
ಅವು ಎಷ್ಟು ನರಳಬಹುದು
ಒಬ್ಬ ಮಾಮೂಲಿ ಪಾಪಿಯನ್ನು ಹೊರಬೇಕಾದರೆ.

2. ರಾತ್ರಿ, ಕಡಲು (ಮೂಲ: Night, Sea)

ರಾತ್ರಿಯಲಿ ಕಡಲು ಕತ್ತಲು, ನೀರವ,
ಒರಟಾದ ಪಿಸುದನಿಯಲ್ಲಿ ಮಾತಾಡುತ್ತಿರುತ್ತೆ.
ಆಗ ನಾವರಿಯುತ್ತೇವೆ ಅದರ
ಮಾನ ಹೋಗುವ ಗುಟ್ಟು: ಅದು ಹೊಳೆಯುತ್ತದೆ
ಎರವಲು ಬೆಳಕಿನಿಂದ.

ರಾತ್ರಿಯಲಿ, ಅದೂ ನಮ್ಮಂತೆಯೇ ಬಡ,
ಕಾಳ, ಅನಾಥ:
ತಾಳ್ಮೆಯಿಂದ ಕಾಯುತಿರುತ್ತೆ
ಸೂರ್ಯ ಮರಳಿ ಬರುವನೆಂದು.

3. ಕಾವ್ಯ ಕಾಂತಿಯನ್ನರಸುತ್ತದೆ (ಮೂಲ: Poetry Searches for Radiance)

ಕಾವ್ಯ ಕಾಂತಿಯನ್ನರಸುತ್ತದೆ,
ಕಾವ್ಯವೊಂದು ರಾಜಮಾರ್ಗ
ನಮ್ಮನ್ನು ಬಹು ದೂರ
ಕೊಂಡೊಯ್ಯುವ ರಾಜಮಾರ್ಗ.
ನಾವು ಕಾಂತಿಯನ್ನರಸುತ್ತೇವೆ ಛಳಿಘಳಿಗೆಯಲ್ಲಿ,
ಮಧ್ಯಾಹ್ನದಲ್ಲಿ ಯಾ ಮುಂಜಾನೆಯ ಚಿಮಿಣಿಗಳಲ್ಲಿ,
ಬಸ್ಸಿನಲ್ಲಿಯೂ ಸಹ, ನವೆಂಬರ್-ನಲ್ಲಿ,
ಆಗ, ಪಾದ್ರಿಯೊಬ್ಬ ತೂಕಡಿಸುತ್ತಿದ್ದ ನಮ್ಮ ಪಕ್ಕದಲ್ಲಿ.

ಚೈನೀಸ್ ಹೋಟಲಿನ ವೆಯ್ಟರ್-ನೊಬ್ಬ ಬಿರಿ ಬಿರಿದು ಅಳಲಾರಂಭಿಸಿದ
ಯಾಕೇಂತ ಯಾರಿಗೂ ಹೊಳೆಯಲಿಲ್ಲ.
ಯಾರಿಗೆ ಗೊತ್ತು, ಇದೂ ಒಂದು ಹುಡುಕಾಟವಾಗಿರಬಹುದು,
ಸಮುದ್ರದಡದಲ್ಲಿ ಆ ಒಂದು ಕ್ಷಣದ ಹಾಗೆ,
ದರೋಡೆಕೋರ ಹಡದಗೊಂದು ಕ್ಷಿತಿಜದಲ್ಲಿ ಕಾಣಿಸಿಕೊಂಡು
ತಟ್ಟನೆ ನಿಂತಿತು, ಹಾಗೆಯೇ ನಿಂತಿತು ಬಹಳ ಹೊತ್ತು.
ಅತೀವ ಆನಂದದ ಕ್ಷಣಗಳೂ ಆಗಿದ್ದವು ಅವು

ಹಾಗೂ ಎಣಿಸಲಾರದಷ್ಟು ಅತಂಕದ ಕ್ಷಣಗಳಾಗಿದ್ದವು.
ನನ್ನನ್ನು ನೋಡಲು ಬಿಡಿ, ನಾ ಕೇಳುತ್ತೇನೆ.
ನನ್ನನ್ನು ನಿಲ್ಲಲು ಬಿಡಿ, ನಾ ಹೇಳುತ್ತೇನೆ.
ತಣ್ಣನೆಯ ಮಳೆ ಬೀಳುತ್ತಿದೆ ರಾತ್ರಿಯಲಿ.
ನನ್ನೂರಿನ ದಾರಿ ಹೆದ್ದಾರಿಗಳಲಿ
ನಿಶ್ಶಬ್ಧ ಕತ್ತಲು ಕಷ್ಟಪಟ್ಟು ಕೆಲಸ ಮಾಡುತ್ತಿದೆ.
ಕಾವ್ಯ ಕಾಂತಿಯನ್ನರಸುತ್ತಿದೆ.

4. ಮೂಕ ನಗರ (ಮೂಲ: Mute City)

ಒಂದು ಕತ್ತಲು ನಗರವನ್ನು ಕಲ್ಪಿಸಿಕೊಳ್ಳಿ.
ಅದಕ್ಕೇನೂ ಅರ್ಥವಾಗುವುದಿಲ್ಲ. ಮೌನ ವ್ಯಾಪಿಸಿದೆ.
ಆ ಮೌನದಲ್ಲಿ ಬಾವಲಿಗಳು, ಐಯೋನಿಯಾದ ದಾರ್ಶನಿಕರಂತೆ,
ತಟ್ಟನೆ, ತೀವ್ರವಾದ ನಿರ್ಧಾರಗಳನ್ನು ಹಾರಾಟದ ಮಧ್ಯದಲ್ಲಿ ತೆಗೆದುಕೊಳ್ಳುತ್ತವೆ,
ನಮ್ಮನ್ನು ಮೆಚ್ಚಿಸುತ್ತವೆ.
ಮೂಕ ನಗರ. ಮೋಡಗಳಿಂದ ಕವಿದಿದೆ.
ಸದ್ಯ ಏನೂ ಗೊತ್ತಾಗುತ್ತಿಲ್ಲ. ಏನೇನೂ ಇಲ್ಲ.


ತೀಕ್ಷ್ಣವಾದ ಮೀಂಚು ರಾತ್ರಿಯನ್ನು ಸೀಳುತ್ತದೆ.
ಪಾದ್ರಿಗಳು, ಕ್ಯಾಥಲಿಕರೂ ಆರ್ತಡಾಕ್ಸನವರೂ ಸಮವಾಗಿ, ಧಾವಿಸುತ್ತಾರೆ
ಜನ್ನಲುಗಳನ್ನು ಕಡು ನೀಲಿ ಬಣ್ಣದ ಮಖಮಲ್ಲಿನಲ್ಲಿ ಹೊದೆಯಲು,
ಆದರೆ ನಾವು ಹೊರಗಿಳಿಯುತ್ತೇವೆ
ಮಳೆಯ ಮರ್ಮರವನ್ನು,
ನಸುಕನ್ನು ಆಲಿಸಲು. ನಸುಕು ಯಾವಾಗಲೂ ಏನಾದರೊಂದನ್ನು ಹೇಳುತ್ತೆ,
ಯಾವಾಗಲೂ.

5. ವಿಮಾನದಲ್ಲಿ ಸ್ವಚಿತ್ರ – ಇಕಾನಮಿ ಕ್ಲಾಸಿನಲ್ಲಿ (ಮೂಲ: Self-Portrait in an Airplane – In Economy Class)

ಇಕ್ಕಟಾದ ಸೀಟಿನಲ್ಲಿ ನಜ್ಜುಗುಜ್ಜಾಗಿ,
ಭ್ರೂಣದಂತೆ ಮುದುರಿಕೂತು,
ನೆನಪಿಸಿಕೊಳ್ಳಲು ಯತ್ನಿಸಿದೆ
ಈಗಷ್ಟೇ ಕೊಯ್ದ ಒಣಹುಲ್ಲಿನ ಕಂಪನ್ನು
ಆಗಸ್ಟ್ ತಿಂಗಳಲ್ಲಿ ಗುಡ್ಡದ ಹುಲ್ಲುಗಾವಲುಗಳಿಂದ
ಕಚ್ಛಾ ರಸ್ತೆಗಳಲ್ಲಿ ಮುಗ್ಗರಿಸುತ್ತಾ ಇಳಿದು
ಬರುವ ಮರದ ಗಾಡಿಗಳಲ್ಲಿ,
ಆಗ ಗಾಡಿ ಹೊಡೆಯುವವ ಕಿರುಚುತ್ತಾನೆ
ಕಂಗಾಲಾದ ಗಂಡಸರು ಯಾವಾಗಲೂ ಕಿರುಚುವ ಹಾಗೆ
ಹೋಮರ್-ನ ಈಲಿಯಡ್-ನಲ್ಲಿ ಕೂಡ ಹೀಗೇ ಕಿರುಚಿದರು
ಆಗಿನಿಂದ ಅವರುಗಳು ಮೌನವೇ ತಾಳಿಲ್ಲ,
ಧರ್ಮಯುದ್ಧದ ಕಾಲದಲ್ಲೂ ಕೂಡ,
ಅದರ ನಂತರವೂ, ಬಹಳ ಕಾಲದವರೆಗೂ, ನಮ್ಮ ಸಮಯದಲ್ಲೂ,
ಯಾರೂ ಕೇಳಿಸಿಕೊಳ್ಳದಿದ್ದಾಗ ಕೂಡ.

ನನಗೆ ಆಯಾಸವಾಗಿದೆ, ಯಾವುದನ್ನು ಆಲೋಚಿಸಲಸಾಧ್ಯವೋ
ಅದರ ಬಗ್ಗೆ ಆಲೋಚಿಸುತ್ತೇನೆ – ಹಕ್ಕಿಗಳು ಮಲಗಿದಾಗ
ಅಡವಿಯಲ್ಲಿ ವ್ಯಾಪಿಸಿದ ನಿಶ್ಶಬ್ಧದ ಬಗ್ಗೆ,
ತ್ವರದಲ್ಲೇ ಮುಗಿಯುವ ಬೇಸಿಗೆಯ ಬಗ್ಗೆ,
ನನ್ನ ತಲೆಯನ್ನು ನನ್ನ ಕೈಗಳಲ್ಲಿ ಹಿಡಿದುಕೊಳ್ಳುತ್ತೇನೆ
ನಿರ್ನಾಮದಿಂದ ಕಾಪಾಡಿಸಲೆನುವಂತೆ.
ಹೊರಗಿನಿಂದ ನೋಡಿದಾಗ ನಾನು
ಜಡವಾಗಿ, ಬಹುತೇಕ ಸತ್ತಂತೆಯೇ, ಕಾಣಬಹುದು,
ಸೋಲನ್ನೊಪ್ಪಿಕೊಂಡವನಂತೆ, ಅನುಕಂಪಾರ್ಹನಂತೆ.
ಆದರೆ, ಹಾಗೇನೂಇಲ್ಲ – ನಾನುಮುಕ್ತನಾಗಿದ್ದೇನೆ,
ಬಹುಶಃಸಂತೋಷವಾಗಿದ್ದೇನೆಕೂಡ.
ಹೌದು, ನನ್ನಭಾರವಾದತಲೆಯನ್ನು
ನನ್ನಕೈಗಳಲ್ಲಿಹಿಡಿದುಕೊಂಡಿರುವೆ,
ಆದರೆ, ಅದರೊಳಗೆಒಂದುಕವನಹುಟ್ಟುತ್ತಿದೆ.

‍ಲೇಖಕರು Avadhi

April 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: