Ego ಇಲ್ಲದ ಜೀವಿ(ಗೆ) ‘ಇಗೋ’ ನೂರು ವರುಷ

ನಾ ದಿವಾಕರ

ತಮ್ಮ ಇಗೋ ಕನ್ನಡ ಸಾಮಾಜಿಕ ನಿಘಂಟಿನ ಮೂಲಕ ಕನ್ನಡ ಭಾಷೆಯ ಸಮೃದ್ಧಿಗೆ ವಿನೂತನ ಕೊಡುಗೆ ನೀಡಿದ ಕನ್ನಡದ ಅತಿ ದೊಡ್ಡ ವಿದ್ವಾಂಸರೂ, ಸಂಶೋಧಕರೂ ಆದ ಪ್ರೊ ಜಿ ವೆಂಕಟಸುಬ್ಬಯ್ಯನವರು ತಮ್ಮ 108ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಿಘಂಟು ತಜ್ಞರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ನಾನು ಬರೆದಿದ್ದ ಲೇಖನ ಇಲ್ಲಿದೆ.

ನನ್ನ ಅಂಕಣ ಬರಹಗಳ ಸಂಗ್ರಹ ‘ಸಾಲುದೀಪ’ (ಪ್ರಗತಿ ಪ್ರಕಾಶನ ಮೈಸೂರು ಪು 286-288- 2012) ಪುಸ್ತಕದಲ್ಲಿ ಈ ಲೇಖನ ಲಭ್ಯವಿದೆ. ಇಲ್ಲಿ ನಾನು ಹೆಮ್ಮೆ ಪಡುವಂತಹ ವಿಚಾರವೂ ಒಂದಿದೆ. 2006 ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ನನ್ನ ಸುದೀರ್ಘ ಲೇಖನ ‘ಸುವರ್ಣ ಕರ್ನಾಟಕದ ಸವಿ ನೆನಪಿನಲಿ’ (ಒಳದನಿ- ನಾ ದಿವಾಕರ ರೂಪ ಪ್ರಕಾಶನ ಮೈಸೂರು ಪು 205-231 – 2008 )ಬಹುಮಾನ ಗಳಿಸಿತ್ತು.

ಈ ಲೇಖನವನ್ನು ಕುರಿತು ಮಾನ್ಯ ಶ್ರೀ ವೆಂಕಟಸುಬ್ಬಯ್ಯನವರು 2007ರ ಸಂಚಯ ಪತ್ರಿಕೆಯಲ್ಲಿ ಹೀಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು ‘ಈ ಸಲದ ಸಂಚಯ (72)ವನ್ನು ನಿಧಾನವಾಗಿ ಓದಿ ಇಂದು ಆಸ್ವಾದಿಸಿದ. ನಾ ದಿವಾಕರ ಅವರ ಲೇಖನದಲ್ಲಿ ಅನೇಕ ಸತ್ಯಗಳು ಅಡಗಿವೆ. ಸ್ವಲ್ಪ ಎಚ್ಚರಿಕೆಯಿಂದ ಗಮನಿಸಬೇಕಾದ ವಿವರಗಳಿವೆ. ಈ ಲೇಖನವನ್ನು ಎಲ್ಲ ಕನ್ನಡಿಗರೂ ಓದಲೆಂದು ನಾನು ಆಶಿಸುತ್ತೇನೆ. ಆತ ತುಂಬಾ ನಿಜವಾಗಿ ನಾಡುನುಡಿಗಳಲ್ಲಿ ಆಸಕ್ತರೆಂಬ ಬಗ್ಗೆ ಅನುಮಾನವಿಲ್ಲ’ ಪ್ರೊ ಜಿ ವೆಂಕಟಸುಬ್ಬಯ್ಯ (ಸಂಚಯ 73 ಮಾರ್ಚ್ 2007 ಪು 86-84).

ಇಂತಹ ಮೇರು ವ್ಯಕ್ತಿಯೊಬ್ಬರಿಂದ ಮೆಚ್ಚುಗೆ ಪಡೆಯುವುದೂ ಯಾವುದೇ ಬಹುಮಾನಕ್ಕೆ ಸಾಟಿ ಎನ್ನುವ ಹೆಮ್ಮೆಯ ನಡುವೆಯೇ ಅವರ ಅಗಲಿಕೆಯ ವಿಷಾದ ಭಾವವೂ ಮೂಡಿದೆ. ಅವರಿಗೆ ನೂರು ತುಂಬಿದ ಸಂದರ್ಭದ ಲೇಖನ ಇಂದಿಗೂ ಪ್ರಸ್ತುತ ಎಂದು ಭಾವಿಸಿ ಯಥಾವತ್ತಾಗಿ ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ.

ಅಗಲಿದ ಮಹಾನ್ ಚೇತನಕ್ಕೆ ಅಂತಿಮ ನಮನಗಳು

Ego ಇಲ್ಲದ ಜೀವಿ(ಗೆ) ಇಗೋ ನೂರು ವರುಷ

ಸಾರಸ್ವತ ಲೋಕ ಎಂದಾಕ್ಷಣ ನೆನಪಾಗುವುದು ಸಾಹಿತ್ಯ ಕೃಷಿ, ಕಾವ್ಯ, ಕಥನ, ಕಾದಂಬರಿ, ಪತ್ತೇದಾರಿ, ವಿಮರ್ಶೆ ಇತ್ಯಾದಿ ಇತ್ಯಾದಿ. ಸಾಹಿತ್ಯ ಕೃಷಿಯಲ್ಲಿ ನಾನಾ ಸ್ವರೂಪಗಳು. ನಾನಾ ಆಯಾಮಗಳು. ಸ್ವಾತಂತ್ರ್ಯಪೂರ್ವ ಭಾರತದ ಮತ್ತು ಕರ್ನಾಟಕದ ಸಾಹಿತ್ಯ ಲೋಕದ ಇತಿಹಾಸದಲ್ಲಿ ಉಗಮಿಸಿದ ಸಾಹಿತ್ಯ ದಿಗ್ಗಜರಲ್ಲಿ ಅನೇಕರು ಇಂದು ನಮ್ಮೊಡನಿಲ್ಲ. ಅವರ ನೆನಪುಗಳು, ಹೆಜ್ಜೆ ಗುರುತುಗಳು ಅಚ್ಚಳಿಯದೆ ಉಳಿದಿವೆ. ಕುವೆಂಪು, ಬೇಂದ್ರೆ, ಪುತಿನ ಇತ್ಯಾದಿ.

ಈ ಅವಧಿಯಲ್ಲಿ ತಮ್ಮ ಸಾರಸ್ವತ ಲೋಕದ ಪಯಣವನ್ನು ಮುಂಬರೆಸಿದ ಬೌದ್ಧಿಕ ಚಿಂತಕರು ಆಯ್ಕೆ ಮಾಡಿಕೊಂಡಿದ್ದು ಕಾವ್ಯ, ಕಾದಂಬರಿ ಅಥವಾ ವಿಮರ್ಶೆಯ ಕ್ಷೇತ್ರಗಳನ್ನು. ನವೋದಯ ಸಾಹಿತ್ಯದ ತಿರುಳು ಅಡಗಿದ್ದುದೇ ಈ ಸಾಹಿತ್ಯ ಪ್ರಕಾರಗಳಲ್ಲಿ. ಈ ಕಾಲಾವಧಿಯಲ್ಲಿ ಜನಿಸಿ (1913) ತಮ್ಮ ಯೌವ್ವನದಲ್ಲೇ ಸಾಹಿತ್ಯ ಕೃಷಿಯನ್ನು ಬಾಳಪಯಣದ ಸಂಗಾತಿಯನ್ನಾಗಿ ಮಾಡಿಕೊಂಡ ಜಿ.ವೆಂಕಟ ಸುಬ್ಬಯ್ಯ 1930ರ ದಶಕದ ಇತರ ಸಾಹಿತಿಗಳಿಂದ ಭಿನ್ನವಾಗಿ ತಮ್ಮದೇ ಆದ ಆಯ್ಕೆಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಎಂಟು ದಶಕಗಳನ್ನು ಪೂರೈಸಿ ಇಂದಿಗೆ ತಮ್ಮ ಬಾಳಿನ ನೂರನೆ ವರ್ಷವನ್ನು ಪೂರೈಸಿದ್ದಾರೆ.

ಇಗೋ ಎಂದರೆ ಇಲ್ಲಿದ್ದೇನೆ ಎಂದು ಹೇಳುವಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಇಗೋ ಎಂದರೆ ನೆನಪಾಗುವುದು ನಮ್ಮ ಶತಾಯುಷಿ ಜೀವಿಯವರೇ. ಯಾವುದೇ ಒಬ್ಬ ಸಾಹಿತಿ ಅಥವಾ ಬರಹಗಾರ ಒಂದು ಪತ್ರಿಕೆಗೆ 18 ವರ್ಷಗಳ ಕಾಲ ಸತತವಾಗಿ ಕಾಲಂ ಬರೆಯುವುದೆಂದರೆ ಅದು ಗಿನ್ನೆಸ್ ದಾಖಲೆಗೆ ಅರ್ಹವಾಗಬಹುದು. ಇಂತಹ ನಿದರ್ಶನಗಳು ಇತರ ಭಾಷಾ ಮಾಧ್ಯಮಗಳಲ್ಲಿ ಇರುವುದೋ ಇಲ್ಲವೋ ಆದರೆ ಕನ್ನಡದಲ್ಲಂತೂ ಮಾನ್ಯ ಜೀವಿ ಈ ಸಾಧನೆಯ ಹರಿಕಾರರಾಗಿದ್ದಾರೆ.

ಪ್ರಜಾವಾಣಿ ಪತ್ರಿಕೆಯಲ್ಲಿ ಕನ್ನಡಿಗರಿಗೆ ಕನ್ನಡ ಪದಕೋಶದ ಅಪರೂಪದ ಪದಗಳನ್ನು ಪರಿಚಯಿಸುವ ಇಗೋ ಕನ್ನಡ ಎಂಬ ಸರಣಿಯನ್ನು ಹದಿನೆಂಟು ವರ್ಷಗಳ ಕಾಲ ನೀಡಿದ ಕೀರ್ತಿ ಇಗೋ ಈ ಜೀವಿಗೆ ಮಾತ್ರ. ಸಂಸ್ಕೃತ ವಿದ್ವಾಂಸರಾದ ತಂದೆ ಗಂಜಾಂ ತಿಮ್ಮಯ್ಯನವರ ಪ್ರೇರಣೆಯಿಂದ ನಿಘಂಟು ರಚಿಸುವಲ್ಲಿ ಆಸಕ್ತಿ ವಹಿಸಿದ ಜೀವಿ ಕನ್ನಡ ನಿಘಂಟು ಲೋಕದ ಪಿತಾಮಹರೆಂದೇ ಪ್ರಸಿದ್ಧಿ. ಸಾಹಿತ್ಯ ಲೋಕದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಕ್ಷೇತ್ರಕ್ಕೆ ಮೆರುಗು ತಂದು ಕೊಟ್ಟವರು ಜೀವಿ. ಎಂಟು ಆವೃತ್ತಿಗಳ ಕನ್ನಡ ಕನ್ನಡ ನಿಘಂಟು ಸೇರಿದಂತೆ ಹತ್ತು ನಿಘಂಟುಗಳ ಕರ್ತೃವಾದ ಜಿವಿ 125ಕ್ಕೂ ಹೆಚ್ಚು ಕೃತಿಗಳ ರೂವಾರಿಯಾಗಿದ್ದಾರೆ. ವಿಮರ್ಶೆ, ಪ್ರಬಂಧ, ವ್ಯಕ್ತಿಚಿತ್ರ ಮತ್ತು ನಿಘಂಟು ಇವರ ಸಾಹಿತ್ಯ ಕೃಷಿಯ ಫಸಲುಗಳು.

ಕನ್ನಡದಲ್ಲಿರುವ ಕ್ಲಿಷ್ಟ ಪದಗಳ ಅರ್ಥವನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಜೀವಿ ಸಿದ್ಧಪಡಿಸಿದ ಕ್ಲಿಷ್ಟ ಪದಕೋಶ ಇಂದಿಗೂ ಕನ್ನಡ ಸಾಹಿತಿ ಬರಹಗಾರರ ಕೈಪಿಡಿಯಾಗಿದೆ. ಬಿ.ಎಂ.ಶ್ರೀ, ಟಿ.ಎಸ್. ವೆಂಕಣ್ಣಯ್ಯ, ಡಿ.ಎಲ್. ನರಸಿಂಹಾಚಾರ್ ಮತ್ತು ಎ.ಅರ್. ಕೃಷ್ಣ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ನಿಘಂಟು ರಚನೆಯತ್ತ ಸಾಗಿದ ಜಿವಿ 1970ರ ದಶಕದಲ್ಲಿ ಹೊರತಂದ 9000 ಪದಗಳ ಕನ್ನಡ ಕನ್ನಡ ನಿಘಂಟು ಇತಿಹಾಸದಲ್ಲಿ ಪ್ರಪ್ರಥಮ ಏಕಭಾಷಾ ವ್ಯುತ್ಪತ್ತಿಯ ಎನ್ ಸೈಕ್ಲೋಪಿಡಿಯಾ ಇದಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು.

ಈ ನಿಘಂಟು ದ್ವಿಭಾಷೆಯಲ್ಲಿದ್ದಿದ್ದರೆ ವಿಶ್ವದ ಅತಿ ದೊಡ್ಡ ದ್ವಿಭಾಷಾ ನಿಘಂಟು ಎಂದು ಹೆಸರಾಗುತ್ತಿತ್ತು. ಇದು ಜೀವಿಯವರ ಮಹತ್ತರ ಕೊಡುಗೆ.ಜೀವಿಯವರ ಸಾಹಿತ್ಯ ಕೃಷಿ ಕನ್ನಡ ಪದಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಅಥವಾ ತಮ್ಮ ಸುತ್ತಲೂ ಯಾವುದೇ ಚೌಕಟ್ಟು ಅಥವಾ ಪ್ರಭಾವಳಿಯನ್ನು ನಿರ್ಮಿಸಿಕೊಂಡು ಸಾಹಿತ್ಯ ಪ್ರಕಾರಗಳ ಅಸ್ಮಿತೆಗಳಿಗೆ ಜೀವಿ ಒಳಗಾಗಲಿಲ್ಲ. ಭಾಷಾ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸುವ ಪದ ಶೋಧದ ಮಹತ್ತರ ಕಾರ್ಯದಲ್ಲಿ ತೊಡಗಿದ ಈ ಮಹಾನ್ ಸಾಹಿತಿ ಚೆನ್ನೈನಲ್ಲಿರುವ ಇನ್ ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್ ಸಂಸ್ಥೆಯ ಬೃಹತ್ ಯೋಜನೆಯಾಗಿದ್ದ ಜಪಾನಿ, ಕನ್ನಡ, ಆಂಗ್ಲ ಮತ್ತು ತಮಿಳು ಭಾಷೆಯ ನಿಘಂಟು ರಚಿಸುವ ಸಮಿತಿಗೆ ಜೀವಿ ಸಲಹೆಗಾರರಾಗಿದ್ದರು.

ಆಂಧ್ರ ಪ್ರದೇಶ ಸರ್ಕಾರದ ನಿಘಂಟು ಯೋಜನೆಗೂ ಸಲಹಾಸಮಿತಿ ಸದಸ್ಯರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಸಂವಿಧಾನವನ್ನು ರೂಪಿಸಿದ್ದೇ ಅಲ್ಲದೆ ಸಂಸ್ಥೆಗೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿದ ಜೀವಿ ಕಳೆದ ವರ್ಷ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಪ್ರಪ್ರಥಮ ನಿಘಂಟು ತಜ್ಞರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ ಸ್ಥಿತಿಯನ್ನು ವಿಷಾದದ ಭಾವನೆಯಿಂದಲೇ ನೋಡುವ ಜೀವಿ 13 ಕೋಟಿ ರೂ ಠೇವಣಿ ಹೊಂದಿ, ಒಂದೂವರೆ ಲಕ್ಷ ಸದಸ್ಯರನ್ನು ಹೊಂದಿರುವ ಪರಿಷತ್ತು ತಾವು ಆರಂಭಿಸಿದ ನಿಘಂಟು ಕಚೇರಿಗೆ ಬೀಗ ಜಡಿದಿರುವುದನ್ನು ಖೇದದಿಂದ ನೆನೆಯುತ್ತಾರೆ.

175 ವರ್ಷಗಳ ಇತಿಹಾಸವಿರುವ ಆಕ್ಸ್ಫೇರ್ಡ್ ನಿಘಂಟಿನ ನಿರ್ವಹಣೆಗಾಗಿಯೇ ಒಂದು ಕಚೇರಿ ಇದ್ದು, ನಿಘಂಟಿಗಾಗಿಯೇ ಪ್ರತ್ಯೇಕ ಪ್ರೆಸ್, ಕಚೇರಿ ಇರುವುದನ್ನು ನೆನಪಿಸುವ ಜೀವಿ, ಸಾಹಿತ್ಯ ಪರಿಷತ್ತು ಮನಸ್ಸು ಮಾಡಿದ್ದರೆ ಕನ್ನಡ ನಿಘಂಟಿಗೂ ಇದೇ ಆಯಾಮವನ್ನು ನೀಡಬಹುದಿತ್ತು ಎಂದು ಹೇಳುತ್ತಾರೆ. ತಮ್ಮ ನೇರ ನುಡಿ ಮತ್ತು ವಸ್ತುನಿಷ್ಠ ಅಭಿಪ್ರಾಯಗಳಿಗೆ ಹೆಸರಾದ ಜೀವಿ ಕನ್ನಡ ನಶಿಸುತ್ತಿದೆ ಎಂದು ಹುಯಿಲೆಬ್ಬಿಸುವುದನ್ನು ಒಪ್ಪುವುದಿಲ್ಲ.

ಆಂಗ್ಲ ಮಾಧ್ಯಮ ಶಿಕ್ಷಣವನ್ನು ವಿರೋಧಿಸಿದರೂ ಆಂಗ್ಲ ಶಿಕ್ಷಣವನ್ನು ಬೆಂಬಲಿಸುವ ಜೀವಿ, ಕನ್ನಡ ಒಂದು ಭಾಷೆಯಾಗಿ ಗ್ರಾಮೀಣರ ನಡುವೆ ಇನ್ನೂ ಜೀವಂತವಾಗಿದೆ, ತನ್ನನ್ನು ರಕ್ಷಿಸಿಕೊಳ್ಳುವ ಅಂತರಿಕ ಶಕ್ತಿ ಕನ್ನಡ ಭಾಷೆಗಿದೆ ಎಂದು ದೃಢವಾಗಿ ನಂಬಿರುವವರು. ನೂರರ ಗಡಿ ದಾಟಿಯೂ ಇನ್ನೂ ತಮ್ಮ ಸಾಹಿತ್ಯ ರಚನೆಯ ಹಸಿವನ್ನು ಉಳಿಸಿಕೊಂಡಿರುವ ಜೀವಿ, ಪ್ರಾಚೀನ ಕನ್ನಡ ಸಾಹಿತ್ಯದ ದಿಗ್ಗಜರಾದ ನಾಗಚಂದ್ರ, ರುದ್ರಭಟ್ಟ, ಷಡಕ್ಷರದೇವ ಮೊದಲಾದವರನ್ನು ಕುರಿತ ಗ್ರಂಥ ರಚಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮಗೆ ಬಾಲ್ಯದಲ್ಲೇ ರನ್ನ, ಪಂಪ, ಹರಿಹರರನ್ನು ಪರಿಚಯಿಸಿ ಕೇಶಿರಾಜನ ಶಬ್ದಮಣಿ ದರ್ಪಣ ಕೃತಿಯನ್ನು ಓದಲು ಪ್ರೇರೇಪಿಸಿ ತಮ್ಮ ಸಾಹಿತ್ಯ ಕೃಷಿಯ ಪೈರನ್ನು ನಾಟಿ ಮಾಡಿದ ತಮ್ಮ ತಂದೆಯವರನ್ನು ಕುರಿತ ಗ್ರಂಥ ರಚಿಸಲು ಆಲೋಚಿಸಿದ್ದಾರೆ.

ನೂರು ವರ್ಷಗಳನ್ನು ಪೂರೈಸಿದ ನಂತರ ಯಾವುದೇ ಕ್ಷೇತ್ರದಲ್ಲಿದ್ದರೂ ವಿಶ್ರಾಂತ ಜೀವನ ನಡೆಸಲು ಆಲೋಚಿಸುವುದು ಮಾನವ ಸಹಜ ಗುಣ. ಆದರೆ ಜೀವಿ ವಿಶಿಷ್ಟ ಜೀವಿ. ಯಾವುದೇ ಇgo ಇಲ್ಲದ ಜೀವಿ. ಇಗೋ ಎಂದು ಕನ್ನಡಿಗರಿಗೆ ತಮ್ಮ ಭಾಷಾ ವೈವಿಧ್ಯತೆಯನ್ನೂ, ಭಾಷೆಯ ಕ್ಲಿಷ್ಟತೆಯನ್ನೂ ಪರಿಚಯಿಸಿದ ಜೀವಿ ಇನ್ನೂ ವಿಶ್ರಮಿಸಲು ಆಲೋಚಿಸಿಲ್ಲ. ಅವರ ಸಾಹಿತ್ಯ ಕೃಷಿ ಇನ್ನೂ ಮುಂದುವರೆಯಲಿದೆ. ಒಂದು ಪ್ರಶ್ನೆ ಪ್ರಜ್ಞಾವಂತ ಕನ್ನಡಿಗರನ್ನು ಕಾಡಲೇಬೇಕು. ಜೀವಿಗೆ ಕರ್ನಾಟಕ ರತ್ನ ಏಕೆ ನೀಡಲಾಗಿಲ್ಲ?

‍ಲೇಖಕರು Avadhi

April 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: