ಶ್ವೇತಾ ಮಂಡ್ಯ
ಹೊನಲೆಂಬ ಮದುವೆಗೆ
ಹೂ ಮನದ ದಿಬ್ಬಣ
ಹರಿವ ನೀರ ಸಲ್ಲಾಪ
ಪೈರು ಪಚ್ಚೆಯ ತೋರಣ
ಧ್ಯಾನಸ್ಥ ನಿಂತ ಗಿರಿ ಪಂಕ್ತಿ
ಹೊಸ ಬದುಕಿನ ಹೂರಣ
ಜೋಡಿ ಕೂಡಿ ಬಾಳ ಬಂಡಿ
ನೂರು ಕನಸು ನೂರು ಚಿಂತೆ
ಬಯಸಿದಂತ ಬದುಕು ಎಂದು
ಎಲ್ಲರಿಗೂ ಸಿಗುವುದೆಂತು
ಸಾಗಬೇಕು ಈ ಬಾಳು
ಮುಂದೆ ನರಕದಂತೆ ಕಂಡರೂ
ದೇಹ ಮಾಂಸ ಆಸೆಪಟ್ಟು
ಗಂಡು ಹದ್ದು ಕಾದಿದೆ
ದೇಹ ಭವದ ನಂಟು
ಹಸಿದ ರಣ ಹದ್ದಿಗೆ
ದೇಹಕ್ಕೆಂದೆ ಬಿಗಿದ ಸರಪಳಿ
ಮದುವೆ ಪೇಟೆಂಟು ಮದುಮಗನಿಗೆ

ಹಸಿವೆಯೆಂಬ ಹಸಿವೆಯನ್ನು
ತಣಿಸಬಹುದು ಅನ್ನ ನೀರಿನಿಂದಲೇ
ಎಲ್ಲೆಯೆಂಬುದೆಲ್ಲಿದೆ ಆಸೆಯೆಂಬ ದಾಹಕೆ?
ಹೆಣ್ಣೊಡಲೇನು ಔತಣದೂಟವೇ
ಹದ್ದಿನಸಿವ ನಿತ್ಯ ನೀಗಲು
ಎಂತು ಕೊನೆ ಈ ಅತ್ಯಾಚಾರ ಅನಾಚಾರಕೆ?
ಪ್ರೀತಿ ಪ್ರೇಮ ಮರೆತ ಹಾಡು
ನಿತ್ಯ ಮೌನ ಮುರಿವ ಪಾಡಿಗೆ
ತಾಳಮೇಳಗಳಿಲ್ಲದ ಗಟ್ಟಿಮೇಳ
ಅರಳುವುದನು ಸಹಿಸದ ಪಾಪದ ಜಾಡಿಗೆ
ಪುಣ್ಯಕೋಟಿ ನಾಡಿನಲ್ಲಿ ಪಾಪ ಕೂಪಕೆ
ಕೊನೆ ಬೇಕಿದೆ ಈ ಹೆಣ್ತನದ ಕಣ್ಣೀರಿಗೆ,






0 Comments