
ಮ ಶ್ರೀ ಮುರಳಿ ಕೃಷ್ಣ
ಜನವರಿ 22ರ ಅವಧಿಯಲ್ಲಿ ಶ್ರೀಯುತ ಜಿ ಎನ್ ಮೋಹನ್ “ ಮಾಲೀಕರ ಮುಂದೆ ದನಿ ಎತ್ತುವ ಸಂಪಾದಕರು ಇದ್ದಿದ್ದರೆ…” ಎಂಬ ತಮ್ಮ ಬರೆಹದಲ್ಲಿ ಪತ್ರಿಕೋದ್ಯಮ ಎನ್ನುವುದು ಮತ್ತೆ ಮತ್ತೆ ಪುನರ್ ಪರಿಶೀಲನೆಗೆ ಒಳಪಡುವ ಕ್ರಿಯೆ…ಮಾಧ್ಯಮ ಎನ್ನವುದು ಉದ್ದಿಮೆ, ಆದರೆ ಪತ್ರಿಕಾ ಧರ್ಮ ಎನ್ನುವುದು ನಮ್ಮೊಳಗಿನ ಅಂತರಂಗದ ಕರೆ…ಎಂದ ಪಾಲ್ಗುಮ್ಮಿ ಸಾಯಿನಾಥ್ರವರ ಅಭಿಮತವನ್ನು ತಿಳಿಸಿದ್ದರು.
ನಿಜ, ಮಾಧ್ಯಮದ ಒಂದು ಭಾಗವಾದ ಪತ್ರಿಕೋದ್ಯಮದ ಬೆಳವಣಗೆಯ ಪರಿ ಅವಲೋಕಿಸಿದರೇ, ಅಷ್ಟೇನು ಸಕಾರಾತ್ಮಕವಾದ ಭಾವನೆಗಳು ಮೂಡುವುದಿಲ್ಲ. ಕೆಲವು ದಶಕಗಳ ಹಿಂದೆ ಯಾವ ಪ್ರಮುಖ ಸುದ್ದಿಗಳು ದಿನಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಬೇಕೆಂಬ ಅಲಿಖಿತ ನೀತಿಸಂಹಿತೆಯಿತ್ತು.
ಅಂತರರಾಷ್ಟ್ರೀಯ, ದೇಶದ, ರಾಜ್ಯಗಳ ಗಮನಾರ್ಹ ಬೆಳವಣ ಗೆಗಳು ಅಲ್ಲಿ ಸ್ಥಾನವನ್ನು ಪಡೆಯುತ್ತಿದ್ದವು. ಮೊದಮೊದಲು ರೋಚಕವಾದ ಶೀರ್ಷಿಕೆಗಳಿಗೆ ಆದ್ಯತೆಯಿರುತ್ತಿರಲಿಲ್ಲ. ಆದರೆ ಬರಬರುತ್ತ ಇದಕ್ಕೆ ವಿನಾಯಿತಿಯನ್ನು ನೀಡಲಾಯಿತು. ಈಗಂತೂ ಪ್ರಾಂತೀಯ ಭಾಷೆಗಳ ಪತ್ರಿಕೆಗಳಲ್ಲಿ ರೋಚಕ ಶೀರ್ಷಿಕೆಗಳು ಎಗ್ಗಿಲ್ಲದೆ ರಾರಾಗಿಸುತ್ತಿರುತ್ತವೆ. ಈ ವಿಷಯದಲ್ಲಿ ಪತ್ರಿಕೆಗಳ ನಡುವೆ ಪೈಪೋಟಿಯೂ ಇರುತ್ತದೆ.

ಈ ಕಾಲದ ಜಾಗತೀಕರಣ ನೀತೆಗಳು ಪ್ರಪಂಚಾದ್ಯಂತ ನೆಲೆವೂರಿದ ತರುವಾಯ ಪತ್ರಿಕೆಗಳ ಹೂರಣದಲ್ಲೂ ಬದಲಾವಣೆಗಳು ಕಂಡುಬಂದವು. ಜಾಹೀರಾತುಗಳ ಭರಾಟೆ ಶುರುವಾದವು. ಸುದ್ದಿಯೂ ಸರಕೀಕರಣಕ್ಕೆ ಒಳಗಾಯಿತು. ಪತ್ರಿಕೆಗಳಲ್ಲಿ ಪ್ರಸರಣದ ಮ್ಯಾನೇಜರನ ಪಾತ್ರ ಹಿರಿದಾಯಿತು. ಸಂಪಾದಕನ ಕತ್ತರಿ ಆತನ ಪಾಲಾಯಿತು.
ಹೀಗಾಗಿ ಮೂರನೇ ಪುಟದಲ್ಲಿ ಬರಬೇಕಿದ್ದ ಸುದ್ದಿಗಳು ಪ್ರಥಮ ಪುಟದಲ್ಲೇ ಮುದ್ರಣಗೊಳ್ಳತೊಡಗಿದವು. ಯಾರೋ ಚಲನಚಿತ್ರ ನಟಿ ಪೂಜಾಸ್ಥಳಕ್ಕೆ ಭೇಟಿ ನೀಡಿದರೇ, ಮಗುವಾದರೇ, ವಿಚ್ಛೇದನವಾದರೇ, ಅವುಗಳ ಸಂಕ್ಷಿಪ್ತ ವಿವರಗಳು, ಕೆಲವೊಮ್ಮೆ ದೀರ್ಘ ವರದಿಗಳು ಮುಖಪುಟದಲ್ಲಿ ಬರಲು ಶುರುವಾದವು. ಹೀಗೆ ಅನೇಕ ನಗಣ್ಯವಾದ ವಿಷಯಗಳು ಕಿರೀಟಪ್ರಾಯವಾದವು.
ಇತ್ತೀಚಿನ ವರ್ಷಗಳಲ್ಲಿ, ಪ್ರಥಮ ಮತ್ತು ದ್ವಿತೀಯ ಪುಟಪೂರ್ತಿ ಜಾಹೀರಾತು(ಜಾಕೆಟ್ ಯ್ಯಾಡುಗಳು) ಪ್ರಕಟವಾಗುವ ಪದ್ಧತಿ ಪ್ರಾರಂಭವಾಯಿತು. ಒಂದು ಮೂಲದ ಅನ್ವಯ ರಾಷ್ಟ್ರೀಯ ಮಟ್ಟದ ದಿನಪತ್ರಿಕೆಗೆ ಇದಕ್ಕೆ ರೂ 1.5 ಕೋಟಿ ಸಂದಾಯವಾಗುತ್ತದೆ. ಇತ್ತೀಚೆಗೆ ಕನ್ನಡದ ಪ್ರತಿಷ್ಠಿತ ಹಾಗೂ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಅದರ ಲಾಂಛನ ಹಿಂಬಡ್ತಿಯನ್ನು ಪಡೆಯಿತು!ಪ್ರಥಮಪುಟದ ಮಧ್ಯದಲ್ಲಿರುತ್ತಿದ್ದ ಅದರ ಜಾಗದಲ್ಲಿ ರಿಯಾಲಿಟಿ ಶೋವೊಂದರ ಚಿಹ್ನೆ ಮೆರೆಯಿತು.

ಪ್ರಥಮಪುಟ ಅರ್ಧರೂಪವನ್ನು ಪಡೆಯುತ್ತಿರುವ ರೀತಿಯನ್ನೂ ಕಾಣುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಪತ್ರಿಕೆಗಳಲ್ಲಿ ಅಂಚಿಗೆ ತಳ್ಳಲ್ಪಟ್ಟವರ ಸುದ್ದಿಗಳಿಗೆ ಸ್ಥಳಾವಕಾಶ ಕ್ಷೀಣ ಸುತ್ತಿದೆ. ರೈತರ, ಕಾರ್ಮಿಕರ, ದಲಿತರ, ದೀನರ ಪ್ರತಿಭಟನೆಗಳ ಸುದ್ದಿಗಳು ಪ್ರಕಟವಾಗುವುದು ಕಡಿಮೆಯಾಗುತ್ತಿದೆ. ಪ್ರಕಟವಾದರೂ, ಅವು ಎಲ್ಲೋ ಮೂಲೆಯಲ್ಲಿರುತ್ತವೆ.
ಸಾವು, ನೋವಾದರೆ ಮಾತ್ರ ಪ್ರಕಟನಾ ಭಾಗ್ಯ ಲಭ್ಯವಾಗುತ್ತದೆ. ಈ ಟ್ರೆಂಡ್ಗೆ ಅಪವಾದಗಳೂ ಇವೆ. ಆದರೆ ಅವುಗಳ ಸಂಖ್ಯೆ ತೀರಾ ಸಣ್ಣದು. ಮಹಾತ್ಮ ಗಾಂಧೀಜಿ ತಮ್ಮ ಪತ್ರಿಕೆಗಳನ್ನು ಬ್ರಿಟೀಷರ ವಿರುದ್ಧ ಹೋರಾಡುವ ಅಸ್ತ್ರಗಳನ್ನಾಗಿ ಪ್ರಯೋಗಿಸಿದರು. ಸಮಾಜದಲ್ಲಿದ್ದ ಪಿಡುಗುಗಳ ವಿರುದ್ಧ ಸಮರವನ್ನು ಸಾರಿದರು.
ಪತ್ರಿಕಾರಂಗ ಪತ್ರಿಕೋದ್ಯಮವಾದಾಗಿನಿಂದ ಅನೇಕ ನೇತ್ಯಾತ್ಮಕ ಬೆಳವಣ ಗೆಗಳು ತಲೆದೋರಿವೆ. ಇವೆಲ್ಲ ಗಮನಿಸಿದಾಗ, ಬಾಪು ಕಂಬನಿಗೆರೆಯುವ ದೃಶ್ಯ ನಮ್ಮ ಕಂಗಳ ಮುಂದೆ ಮೂಡಿದರೇ, ಅದಕ್ಕೆ ಅಚ್ಚರಿ ಪಡಬೇಕಿಲ್ಲ.






0 Comments