ಪಿ ಬಿ ಪ್ರಸನ್ನ
ಮುಂಜಾನೆ ಮಬ್ಬಲ್ಲಿ ಮುಖಗವಸು ತೊಟ್ಟವನು
ವಾಕಿಂಗು ಹೊರಟಾಗ
`ಓ ಹೋಯ್ ನಿಲ್ಲಿ’ ಎಂಬ ದನಿ
ಹೊರಳಿದರೆ ಅವನೂ ಮುಸುಗುಧಾರಿ
ನೀ…. ನೀವು ಅವರಲ್ಲವೇ
ಆ ಅವರ ಮಗ?
ಓ ಇವರ ಮೊಮ್ಮಗ?
ಗೊತ್ತು ಈಗ ಇಂಥ ಕಾಲದ ಕಷ್ಟ
ನಂಬುವಂತೆಯೇ ಇಲ್ಲ ಯಾರನ್ನೂ
ಎಲ್ಲರೂ ನುಂಗುವಂತೆಯೇ ಕಾಣುವರು
ಮುಸುಕಿನ ಹಿಂದೆ ಎಂಥ ಬಾಯಿ ಇದೆಯೋ
ಅದೆಷ್ಟು ಅಗಲ ತೆರೆದಿದೆಯೋ

ನಾನೀಗ ಸುಳಿಯ ನಡುವಿಂದ
ಅಲೆಯ ಒಡಲಿಂದ
ದಡವ ಹತ್ತಿದವ
ಯಾವ ಶ್ರುತಿಯಾದರೂ ಸೈ
ಒಮ್ಮೆ ಬಿಗಿದರೆ ಹರಿಯಲಾರದು ತಂತಿ
ತಾಸುಗಟ್ಟಲೆ ನನ್ನದು
ಅಪಸ್ವರವಿಲ್ಲದ ಗಾಯನ
ನೀವೀಗ ನಡು ನೀರಿನಲ್ಲಿ
ಸುಳಿಗೆ ಸಿಕ್ಕಿದವರಂತೆ ?
ಈಜಲೂ ಬಾರದವರಂತೆ ?
ಏನು ಮಾಡಿದರೂ
ತಂತಿ ಬಿಗಿಯಾಗುವುದೇ ಇಲ್ಲವಂತೆ?
ಬೇಕಾದರೆ ಕೇಳಿ
ಕಲಿಸಿ ಕೊಡುವೆ ನಿಮಗೂ
ಸುಳಿಯ ನಡುವಿಂದ
ಅಲೆಯ ಒಡಲಿಂದಪಾರಾಗುವ
ತಂತಿ ಬಿಗಿಮಾಡಿ ಹಾಡುವ ಹಿಕ್ಮತ್ತು
ಇದು
ಎಲ್ಲರನು ದಾಟಿಸುವುದು
ಎಂದವನೇ ದಂಡವನು ತೋರಿದ

ಮಾತುಗಳ ಕೇಳುತ್ತ ನನಗೋ ಗೊಂದಲ
ಯಾರೀತ ಮುಸುಗುಧಾರಿ?
ಎಲ್ಲವನು ತೆರೆದಿಡುವ ಪಾತ್ರಧಾರಿ?
ಬೆವರು ಏದುಸಿರು
ಸರಿಯಾದ ದನಿಗೆಂದು ಮಖಗವಸು ತೆಗೆದಾಗ
ನಾನು ಅಂದುಕೊಂಡವರಲ್ಲನೀವು !
ನಾನೇ ಮುಳುಗಿದವ
ನೀವೇ ತೇಲಿದವರು
ದಡದಲ್ಲಿ ಇರುವವರು
ಸಮಶ್ರುತಿಯಲ್ಲಿ ಹಾಡುವವರು
ಎಂದವನೆ
ತೇಲಿಸೋ ಇಲ್ಲಾ ಮುಳುಗಿಸೋ
ಗುನುಗುತ್ತ ಮಬ್ಬಲ್ಲಿ ಕರಗಿದ.






0 Comments