ಪಿ ಪಿ ಉಪಾಧ್ಯ
ಕೋಳಿ ಕೂಗುವುದಿಲ್ಲ, ಬೆಳ್ಳಿ ಮೂಡುವುದಿಲ್ಲ
ಪಟ್ಟಣದ ಕೊತ್ತಲದ ಆ ಮೂಲೆ ಮನೆಯಲ್ಲಿ
ಅಡಿಗೆ ಮನೆಯಲಿ ಕುಣ ವ ಪಾತ್ರೆ ಸದ್ದಿಗೆ ಬೆಳಗು
ಕಾಫಿ ಪುಡಿಯಿಲ್ಲ ಸಕ್ಕರೆಯ ಸುಳಿವಿಲ್ಲ ಎನ್ನುವ
ನಿತ್ಯ ರಾಗದ ಸೊಲ್ಲಿಗೆ ಎದ್ದು ಹೊರ ಬರುವ
ಈ ಶಕ್ತಿ ಹೀನ, ದೇಶ ನಡೆಸುವ ನಮ್ಮ ಕಾರಕೂನ
ತಿಂಗಳಲಿ ಮೊದಲೇನು ಕೊನೆಯೇನು ಹೊಟ್ಟೆ ಕೇಳುವುದೇನು
ಇದೆಯಲ್ಲ ಅಕ್ಕ ಪಕ್ಕ- ಸಕ್ಕರೆಯ ಸಾಲಕ್ಕೆ ಕಾಫಿ ಪುಡಿ ಸೋಲಕ್ಕೆ
ಹಿಂದೆಂದೋ ಕುಡಿದ ಕೆನೆ ಹಾಲ ನೆನೆಯುತ್ತ
ಕುಡಿಯುವನು ಮಡದಿ ತಂದಿತ್ತ ಈ ಕರೀ ಕಾಫಿ
ಮತ್ತೆ ಪೇಸ್ಟಿಲ್ಲ ಸೋಪಿಲ್ಲ… ಕೆಲವೊಮ್ಮೆ ನೀರೇ ಇಲ್ಲ
ಈ ಇಲ್ಲಗಳ ನಡುವೆ ಸಮಸ್ಯೆಯೇ ತೀರಿತಲ್ಲ
ಜಾಣನಿವ ಎಂಥಲ್ಲೂ ಮೆನೇಜು ಮಾಡಬಲ್ಲ
ಮತ್ತೆ ಬಸ್ಸು ನಿಲ್ದಾಣದಲಿ ಕಾದು ಜನಗಳನು ಹಾದು
ತಲುಪುವನು ಆಫೀಸು
ತಪ್ಪಿಸುವನಲ್ಲಿ ಸಾಹೇಬನುರಿಗಣ್ಣು
ತಡಮಾಡಿ ಬಂದದ್ದ ವಿವರಿಸುವ ಭಯವಲ್ಲ
ಕಳೆದ ತಿಂಗಳ ಸಾಲ ತಿರುಗಿ ಕೇಳುವರೆಂದು
ಮತ್ತೆಲ್ಲ ಮಾಮೂಲಿ. ಗೆಳೆಯರೊಡೆ ಹರಟೆ
ಗಿರಾಕಿಗಳೊಡೆ ಜಗಳ
ನಡು ನಡುವೆ ಬಿಡುವೆಂದು ಒಂದೊಂದು ಕಾಫಿ
ಪಂಕ್ಚುವಾಲಿಟಿ ಬಗ್ಗೆ ಭಾಷಣವ ಬಿಗಿವ
ತಾಸೆರಡು ತಾಸು ತಾ ತಡವಾಗಿ ಬಂದದ್ದ ಮರೆವ
ಜನರಲ್ಲಿ ಸತ್ತ ಒಳ್ಳೆಯತನಕೆ ಅಳುತ್ತ ತಾ
ಮಾತ್ರ ತಪ್ಪದೇ ಕೈಚಾಚುವ ಮೇಜಿನಡಿ.
ಬಸ್ಸಿನಲಿ ಪಾರ್ಕಿನಲಿ ಮತ್ತೆ ಫುಟ್ ಪಾತಿನಲಿ ಹೆಣ್ಣುಗಳ
ಕಾಡಿಸುವ ಬೀದಿ ಕಾಮಣ್ಣರ ಜರೆಯುತ್ತ ಪಕ್ಕದಲ್ಲೇ
ಕುಳಿತ ಟೈಪಿಣಿಯ ಸೆರಗಿನೆಡೆ ಕಣ್ಣು ಹಾಯಿಸುವ
ಆಕೆಯ ನಳಿದೋಳ ನೋಡುತ್ತ ಓಬವ್ವ ನೆನಪಾಗಿ
ನಡುಗುವನು ಅಡಿಯಿಂದ ಮುಡಿಯವರೆಗೆ
ಹೀಗೆ ವಿಧವಿಧವಾಗಿ ಅರೆಗಂಟೆ ಕಾಫಿ
ಅರೆ ಗಂಟೆ ಚರ್ಚೆ
ಮತ್ತರ್ಧ ಗಂಟೆ ಬೇಡವೇ ಪೇಪರಿಗೆ?
ಉಳಿದಂತೆ ಒಂದೇ ನಿಮಿಷ ಬಚ್ಚಲಿಗೆ
ನಿಮಿಷ ನಿಮಿಷಗಳುರುಳಿ ಗಂಟೆ ಕಳೆದರು ಕೂಡ
ಕಾರಕೂನನ ಸುಳಿವಿಲ್ಲ- ಆದರವನ ಕೋಟಿದೆ
ಹೊರಗೆಲ್ಲೋ ಹೋದನೇ… ಇಲ್ಲ ಒಳಗಡೆ ರೂಮಿದೆ
ಗೆಳೆಯರಿದ್ದಾರೆ ಇಸ್ಪೀಟಾಡಲು.
ಗಂಟೆ ಕಳೆದಾಗ ಲಂಚು
ಲಂಚವಿಲ್ಲದೆ ಮಾಡುವ ಒಂದೇ ಕೆಲಸ.
ಮಧ್ಯಾಹ್ನ ಮೇಲೆಲ್ಲ ಬೆಳಗಿನದೇ ಸುಸ್ತು
ಫೈಲು ಮಡಚುವ ವೇಳೆ ಬಾಗಿಲು ಮುಚ್ಚುವ ಹೊತ್ತು
ಕಾಲನ್ನು ಹೊರಗಿಡುವ ಕೋಟಿನ ಜೇಬನ್ನು ಸವರುತ್ತ
ಭಾರವಿದೆಯೆಂದಾಗ ಬಾರುಂಟು ಬೀರುಂಟು
ಮತ್ತೆ ಕ್ಲಬ್ಬು !
ಯಾವಾಗಲೋ ನೆನಪಾಗಿ ಮನೆ ಮಡದಿ ಕಾಡಿದರೆ
ಕಾಲೆಳೆದು ಬರುವ… ಕೆಲವೊಮ್ಮೆ ಬೆಳ್ಳಿ ಮೂಡುವ ಹೊತ್ತು
ನಾಳೆ ಕೆಲಸದ ಚಿಂತೆ ಚಿತೆಯಂತೆ ಹೊತ್ತುವುದು
ಮಲಗಿ ಮರೆಯುವ ಮುನ್ನ ಪುನರಾವಲೋಕನ
ಯಾವ ಫೈಲಿಗೆ ಎಷ್ಟು ಕೊಕ್ಕೆ ಕೊಂಕಿನ ಅಳತೆ
ಮರು ಸಂಜೆ ಬೇಕಲ್ಲ ಮತ್ತೆ ಕೈತುಂಬ!
ದಿನ ಕಳೆದು ಮರಳುವುದು ಇನ್ನೊಂದು ಬೆಳಗು
ಕೋಳಿ ಕೂಗುವುದಿಲ್ಲ… ಬೆಳ್ಳಿ ಮೂಡುವುದಿಲ್ಲ
ಪಟ್ಟಣದ ಕೊತ್ತಲದ ಮೂಲೆ ಮನೆಯಲ್ಲಿ
ಕಾಫಿ ಪುಡಿಯಿಲ್ಲ… ಸಕ್ಕರೆಯ ಸುಳಿವಿಲ್ಲ
ಎನ್ನುವ ನಿತ್ಯರಾಗದ ಸೊಲ್ಲಿಗೆ ಎದ್ದು ಬರುವ
ಈ ಶಕ್ತಿ ಹೀನ. ದೇಶ ನಡೆಸುವ ನಮ್ಮ ಕಾರಕೂನ !!!
0 ಪ್ರತಿಕ್ರಿಯೆಗಳು