
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.
ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
24
ನನಗೆ ಬಲವಂತ ಮಾಡಿ ಊಟ ಮಾಡಿಸಿದ ಅತ್ತೆ ತಾವು ಮಾತ್ರ ಊಟ ಮಾಡಲಿಲ್ಲ. ಮನೆಗೆ ಬಂದ ಮಾವನಿಗೆ ಸತೀಶ ಮತ್ತೆ ಚಿಕ್ಕೋಳಿಯ ಮನೆಗೆ ಹೋಗಿದ್ದನ್ನು ಅವರು ವಿಸ್ತಾರವಾಗಿ ಹೇಳುತ್ತಿದ್ದರೆ, ʻಯಾಕೆ ಬೇಕು ಉಸಾಬರಿ? ಅವರು ಸರಿಯಾಗಲ್ಲ, ಇವನು ಬಿಡಲ್ಲ. ನನ್ನ ಮಗ ಸೋತಿದ್ದು ಬಹುಶಃ ಈ ವಿಷಯದಲ್ಲಿ ಮಾತ್ರʼ ಎಂದಿದ್ದರು ಮಾವ. ಅತ್ತೆ, ʻಹಾಗೇ ಹೋಗಿ ನೋಡಿ ಬರೋಣವೇ?ʼ ಎಂದರು. ಪೇಟೆಯಿಂದ ಆಗ ತಾನೆ ಬಂದಿದ್ದರಿಂದ ಸುಸ್ತಾಗಿದ್ದ ಮಾವ, ʻಬರ್ತಾನೆ ಬಿಡು, ಎಲ್ಲಾ ಮಾಮೂಲಿʼ ಎಂದು ಊಟಕ್ಕೆ ಕೂತರು. ದೂರದಲ್ಲೆಲ್ಲೋ ಆಗಲೇ ಗುಂಡಿನ ಶಬ್ದ ಕೇಳಿದ್ದು, ಒಂದು ಸುತ್ತು, ಎರಡು ಸುತ್ತು.. ʻಈ ಹೊತ್ತಲ್ಲಿ ಯಾರು ಶಿಕಾರಿ ಮಾಡ್ತಾ ಇದ್ದಾರೆ?ʼ ಎಂದು ಮಾವ ಗೊಣಗಿದರು. ಅತ್ತೆ, ʻಅಲ್ಲ ಈ ಹುಡುಗ ಈಗಲೇ ಹೋಗಬೇಕಿತ್ತಾ? ನಾಳೆ ಚಿಕ್ಕೋಳಿ ಬರ್ಲಿ, ಇನ್ನು ಮುಂದೆ ಸತೀಶನ್ನ ಹೀಗೆಲ್ಲಾ ಕರಕೊಂಡು ಹೋಗಬೇಡ ಅಂತ ಹೇಳಿಬಿಡುತ್ತೇನೆʼ ಎಂದರು.
ಸಮಾಧಾನ ಆಗದೆ ಮಾವ ಆ ಕತ್ತಲಲ್ಲೇ ಬೆಟ್ಟಯ್ಯನ ಮನೆಗೂ ಹೋಗಿಬಂದರು. ʻರಾತ್ರಿ ಸತೀಶಪ್ಪ ಬಂದು ಎಲ್ಲರನ್ನೂ ಸಮಾಧಾನ ಮಾಡಿ ತಲೆ ಒಡೆದ ಬೆಟ್ಟಯ್ಯನನ್ನು ಆಸ್ಪತ್ರೆಗೆ ಕರೆದೊಯ್ದರಲ್ಲಾ? ಯಾಕ್ರಯ್ಯಾ ಬರಲಿಲ್ಲವಾ?ʼ ಎಂದಿದ್ದರಂತೆ ಅಕ್ಕಪಕ್ಕದ ಮನೆಯವರು. ಮನೆಗೆ ಬಂದ ಮಾವ ಹೀಗೆ ಇವನೂ ಆಸ್ಪತ್ರೆಗೆ ಹೋಗಿರಬೇಕು ಎಂದೆಲ್ಲಾ ಗೊಣಗಿಕೊಂಡರು.
ಮಾರನೆಯ ದಿನ ಚಿಕ್ಕೋಳಿ ಬಂದಾಗಲೇ ಸತೀಶ ಅವರ ಜೊತೆ ಹೋಗಲಿಲ್ಲ ಎನ್ನುವ ಸುದ್ದಿ ಗೊತ್ತಾಗಿದ್ದು, ಎಲ್ಲರಿಗೂ ಭಯ ಆವರಿಸಿದ್ದು. ಯಾವುದಾದರೂ ಕಾಡುಪ್ರಾಣಿ ಅಟ್ಯಾಕ್ ಮಾಡಿರಬಹುದಾ? ಅಥವಾ ಕಳ್ಳರು ಅಥವಾ ಇನ್ಯಾರಿಂದಲಾದರೂ ತೊಂದರೆ ಆಗಿರಬಹುದಾ? ಸತೀಶನ ಕಣ್ಮರೆ ಊರ ತುಂಬಾ ದೊಡ್ಡ ಸುದ್ದಿಯಾಗಿ ಹರಿದಾಡಿತು.
ಬೆಳಗೂ ಆಗಿಹೋಯಿತು. ಅತ್ತೆ ಕಣ್ಣು ಮೂಗು ಒರೆಸಿಕೊಳ್ಳುತ್ತಾ ನೆನಪಿಗೆ ಸಾವಿಲ್ಲ ನೋಡು. ಯಾವತ್ತಾದರೂ ಹೀಗೆ ಎಲ್ಲವನ್ನೂ ನೆನಪು ಮಾಡಿಕೊಂಡು, ʻಏನಿದು ಜೀವನ ಅರ್ಥವಿಲ್ಲದ್ದು. ಮೋಡ ಕಟ್ಟಿದ ಆಕಾಶ ಸಿಡಿಲು ಗುಡುಗಿನ ಆರ್ಭಟಕ್ಕೆ ಮಳೆ ಸುರಿದು ಬಿಡುತ್ತೆ. ಆದರೆ ಆಗಲೇ ಎಲ್ಲಿಂದಲೋ ಬೀಸಿದ ಗಾಳಿ ಮೋಡವನ್ನು ತಳ್ಳಿ ಮುಂದಕ್ಕೆ ದೂಡುವ ಹಾಗೆ, ಚಿಕ್ಕೋಳು ಕಾಟ್ರಿ, ಬೆಟ್ಟಯ್ಯ ಎಲ್ಲರೂ ನಮ್ಮನ್ನ ಸುತ್ತುವರೀತಾರೆ. ಇವರ್ಯಾರೂ ನಮ್ಮ ಜವಾಬ್ದಾರಿ ಅಲ್ಲ. ಆದರೆ ಪ್ರೀತಿ. ಅದರಿಂದಲೇ ನಮ್ಮನ್ನು ಕಟ್ಟಿ ಹಾಕುತ್ತಾರೆ. ಮತ್ತೆ ಅದೇ ಜೀವನ. ಇರುವವರೆಗೂ ಇರಬೇಕು ಎನ್ನುವುದಷ್ಟೇ ನಮ್ಮ ಪಾಲಿನದ್ದು ಅನ್ನಿಸಿ ಹಗುರವಾಗುತ್ತೇವೆʼ. ಹಾಗೆ ಹೇಳುತ್ತಲೇ ಏನನ್ನೋ ನೆನೆಸಿಕೊಂಡವರಂತೆ, ʻಇನ್ನೇನು ಸಾರ್ ನಿನ್ನ ಕರಕೊಂಡು ಹೋಗಲಿಕ್ಕೆ ಬರುತ್ತಾರೆ ಅನ್ನಿಸುತ್ತೆ.
ನಾನು ಬೇಗ ತಿಂಡಿ ಮಾಡುತ್ತೇನೆ, ನೀನು ರೆಡಿಯಾಗುʼ ಎಂದರು. ನಾನಿರುವುದು ಇವತ್ತಿನಲ್ಲೋ, ಅವತ್ತಿನಲ್ಲೋ ಗೊತ್ತಾಗದೆ ಹೋದೆ. ಸಾವರಿಸಿಕೊಂಡು, ʻಬಂದರೆ ಕಾಯುತ್ತಾರೆ, ತುಂಬಾ ಅವಸರಬೇಡʼ ಎಂದೆ ಸಂಕೋಚದಿಂದ. ಅತ್ತೆ, ʻನಾವಿಲ್ಲಿ ಕೆಲಸ ಇಲ್ಲದವರು ಹೇಗೆ ಬೇಕಾದರೂ ಇರಬಹುದು. ಆದರೆ ಅವರನ್ನ ಕಾಯಿಸಬಾರದು. ಅವರಿಗಾಗಿ ಇಡೀ ಜಗತ್ತೇ ಕಾಯುತ್ತದೆʼ ಎಂದರು. ʻಅತ್ತೆ ನಾನು ಹೋಗಬೇಕಾ? ಇಲ್ಲೇ ಇದ್ದುಬಿಡಬೇಕು ಅನ್ನಿಸುತ್ತಿದೆʼ ಎಂದೆ ಸಂಕಟದಿಂದ. ಅತ್ತೆಯ ಕಣ್ಣುಗಳಲ್ಲಿ ನೋವು ಹಣಕಿ ಹಾಕಿತು. ʻಈ ಮನೆ ನಿನ್ನದು, ಯಾವಾಗ ಬೇಕಾದರೂ ಬರಬಹುದು. ಎಷ್ಟು ದಿನ ಬೇಕಾದರೂ ಇರಬಹುದು. ಆದರೆ ಈಗ ಅಲ್ಲ, ನಿನ್ನ ಜವಾಬ್ದಾರಿ ಈ ಹುಡುಗಿ. ಇದನ್ನ ಒಂದು ದಾರಿ ಹತ್ತಿಸಿಬಿಟ್ಟರೆ ನಿನ್ನ ಕೆಲಸ ಆದ ಹಾಗೇ. ನಿನ್ನ ಮೇಲೆ ನನಗೆ ತುಂಬಾ ಹೆಮ್ಮೆ ಇದೆ ಮಗೂ, ನೀನು ಸತೀಶನ ದಾರಿಯಲ್ಲೇ ಇದ್ದೀಯಾ, ಅವನ ಕೆಲಸಗಳನ್ನು ಮುಂದುವರೆಸುತ್ತಿದ್ದೀಯಾ. ನಮ್ಮ ಭಾವನಾತ್ಮಕತೆ ನಿನ್ನ ಕೆಲಸಕ್ಕೆ ಅಡ್ಡಿಯಾಗಬಾರದು. ನನಗೆ ಸತೀಶನೂ ಒಂದೇ, ನೀನೂ ಒಂದೆʼ ಎಂದರು.
ಚಿಕ್ಕೋಳು ಆಶಾಗೆ ಎಂದು ಕೇದಿಗೆಯ ಹೂವನ್ನು ತಂದುಕೊಟ್ಟಳು. ಇದನ್ನ ಮುಡಿಯುವುದು ಹೇಗೆ ಎಂದು ಅವಳನ್ನೇ ಕೇಳಿದ ಆಶಾಗೆ ದಳಗಳನ್ನು ಬಿಡಿಸಿ ಅದರಲ್ಲೇ ಹೂವಿನಾಕಾರವನ್ನು ಮಾಡಿ, ಜಡೆಯ ಮಧ್ಯಕ್ಕೆ ಇಟ್ಟು ತನ್ನ ಸರದಲ್ಲಿದ್ದ ಬಟ್ಟೆಯ ಪಿನ್ನನ್ನು ತೆಗೆದು ಮುಡಿಸಿದಳು. ಆಶಾ ಕನ್ನಡಿಯ ಮುಂದೆ ನಿಂತು ತಿರುತಿರುಗಿ ನೋಡಿಕೊಂಡಳು. ಚಿಕ್ಕೋಳಿ ಅವಳನ್ನು ನೋಡಿ ನಕ್ಕಳು. ʻಯಾಕೆ ನಗ್ತಾ ಇದೀಯಾ?ʼ ಎಂದು ಚಿಕ್ಕೋಳಿಯನ್ನು ಕೇಳಿದ ಅವಳಿಗೆ, ʻಪೇಟೆ ಹುಡುಗಿ ಜಡೆಯಲ್ಲಿ ನಮ್ಮ ಕಾಡಿನ ಕೇದಿಗೆ ಎಷ್ಟು ಚೆನ್ನಾಗಿ ಕಾಣ್ತಾ ಇದೆಯಲ್ಲಾ ಅದಕ್ಕೆʼ ಎಂದಳು ಚಿಕ್ಕೋಳಿ. ಆಶಾಗೆ ಮಾತ್ರ ಅವಳನ್ನು ಏನು ಕರೀಬೇಕು ಎನ್ನುವ ಗೊಂದಲ. ಕಡೆಗೆ ಯಾವುದೋ ಒಂದು ನಿರ್ಧಾರಕ್ಕೆ ಬಂದು, ʻಥ್ಯಾಂಕ್ಸ್ ಆಂಟಿʼ ಎಂದಳು. ʻಯವ್ವಾ, ಮಗಾ ನನ್ನ ಆಂಟಿ ಅಂತಾ ಇದೆʼ ಎಂದು ನಾಚಿಕೆ ಪಟ್ಟುಕೊಂಡಳು ಚಿಕ್ಕೋಳಿ.

ಆಶಾಗೆ ಏನನ್ನಿಸಿತೋ ಏನೋ ಇದ್ದಕ್ಕಿದ್ದ ಹಾಗೇ ಅವಳನ್ನ, ʻಆಂಟಿ ನಮ್ಮಪ್ಪನ್ನ ನೀವು ಎತ್ತಿ ಆಡಿಸಿದ್ರಂತೆ. ನಮ್ಮಪ್ಪನಿಗೆ ಏನು ಇಷ್ಟ ಆಗ್ತಾ ಇತ್ತುʼ ಎಂದಳು. ಏನೋ ಕಥೆ ಹೇಳುವವಳ ಹಾಗೆ ಗಂಟಲನ್ನ ಸರಿ ಮಾಡಿಕೊಂಡು, ʻಆಗ ನಿಮ್ಮಪ್ಪ ಆರನೇ ಕಳಾಸ್ನಲ್ಲಿ ಇದ್ದ ಅನ್ಸುತ್ತೆ. ಇಲ್ಲೇ ಸ್ವಲ್ಪ ದೂರದಲ್ಲಿ ಹೊಲ ಅದೆ. ಅಲ್ಲಿ ಒಂದು ಕಡೆ ಬಾವಿ ತೋಡ್ತಾ ಇದ್ರು. ಮಣ್ಣು ಗುಡ್ಡೆಯಾಗಿ ಬಿದ್ದಿತ್ತು. ಒಂದಿನ ನಿಮ್ಮಪ್ಪ ಕಾಟ್ರಿಯನ್ನ ಕರಕೊಂಡು ಹೋಗಿ, ನಾನು ಸೈನಿಕ ನೀನು ಸತ್ರು ಅಂತ ಹೇಳಿ ಕಾಯಿ ಮಟ್ಟೆಯನ್ನ ತುಪಾಕಿಯ ಥರ ಹಿಡಿದು ಗುಂಡಿನಿಂದ ತಪ್ಪಿಸ್ಕೊಳ್ಳುವಂತೆ ಹೇಳುತ್ತಿದ್ದ.
ಮಣ್ಣ ಗುಡ್ಡೆಯ ಹಿಂದೆ ನಿಮ್ಮಪ್ಪ ಕಾಯಿ ಮಟ್ಟೆಯನ್ನು ತುಪಾಕಿಯ ಹಾಗೆ ಟಿಶ್ಶುಂ ಅಂತ ಹೊಡೀತಾ ಇದ್ದರೆ, ಕಾಟ್ರಿ ಅದರಿಂದ ತಪ್ಪಿಸಿಕೊಂಡು ನೆಲಕ್ಕೆ ಬೀಳಬೇಕಿತ್ತು. ಆಟ ಆಡಿ ಮಂಡಿ ಕಿತ್ತು ಅವತ್ತು ಕಾಟ್ರಿ ಅಳುತ್ತಾ ಬಂದಿದ್ದ.ನಿಮ್ಮ ತಾತ ಅವತ್ತು ನಿಮ್ಮಪ್ಪಯ್ಯನ್ನ ಹಿಡಿದು ಹೊಡಿದಿತ್ತುʼ ಎಂದಳು. ʻಓ ಅಪ್ಪ ಹಾಗೆಲ್ಲಾ ಮಾಡ್ತಾ ಇದ್ರಾ? ಆಮೇಲೇನಾಯ್ತುʼ ಎಂದಳು ಆಶಾ ಕುತೂಹಲದಿಂದ. ʻನಿಮ್ಮಪ್ಪಯ್ಯನಿಗೆ ಅವತ್ತು ತಾನು ಮಾಡಿದ್ದು ತಪ್ಪು ಅಂತ ಗೊತ್ತಾಗಿ ನಾಕ್ಮೈಲಿ ದೂರದಲ್ಲಿದ್ದ ಗೌರ್ಮೆಂಟ್ ಆಸ್ಪತ್ರೆಗೆ ನಡಕೊಂಡು ಹೋಗಿ ಅಲ್ಲಿಂದ ಮುಲಾಮು ತಂದು ಹಚ್ಚಿದ್ದ.
ಅವತ್ತೆಲ್ಲಾ ಕಾಟ್ರಿ ಅತ್ರಾನೇ ಇದ್ದು, ಇನ್ಮೇಲೆ ಗಾಯ ಎಲ್ಲಾ ಆಗದ ಹಾಗೆ ಆಟ ಆಡೋನ ಅಂತ ಸಮಾದಾನ ಏಳಿದ್ದʼ ಎಂದಿದ್ದಳು. ಒಳಗಿದ್ದ ಅತ್ತೆ ಈ ಕಥೆಯನ್ನು ಕೇಳಿ ಹೊರಗೆ ಬಂದು, ನಗುತ್ತಾ, ʻಅಲ್ಲ ಚಿಕ್ಕೋಳಿ ಇದು ನನಗೆ ಮರೆತೇ ಹೋಗಿತ್ತಲ್ಲೇ!ʼ ಎಂದು ಆಶ್ಚಯಪಟ್ಟಿದ್ದರು. ಆಶಾ ಮಾತ್ರ ಆ ಕಥೆಯಲ್ಲಿ ಮುಳುಗಿದವಳ ಹಾಗೆ, ʻಹಾಗಾದರೆ ಅಪ್ಪನಿಗೆ ಫೈರ್ ಮಾಡೋದು ಇಷ್ಟಾ ಆಗ್ತಾ ಇತ್ತಾ?ʼ ಎಂದಳು. ಅದಕ್ಕೆ ಅತ್ತೆ, ʻಅವನಿಗೆ ಸೈನ್ಯಕ್ಕೆ ಸೇರ್ಬೇಕು ಅಂತ ತುಂಬಾ ಆಸೆ ಇತ್ತು. ನಾನೇ ಬೇಡ, ನಮ್ಮಿಂದ ದೂರ ಹೋಗ್ತೀಯ ಅಂತ ಅಂದಿದ್ದೆ… ಹೋಗಲು ಬಿಟ್ಟಿದ್ದಿದ್ದರೆ…ʼ ಎಂದು ತಮ್ಮ ಮಾತನ್ನು ಅರ್ಧಕ್ಕೆ ನಿಲ್ಲಿಸಿದರು.
ಅವರಿಗೆ ಆಶಾ ಇಂಥಾ ಮಾತುಗಳನ್ನು ಕೇಳುವುದು ಬೇಕಿರಲಿಲ್ಲ. ದೂರದಲ್ಲೆಲ್ಲೋ ಢಂ ಎನ್ನುವ ಸದ್ದು ಕೇಳಿತು. ಆಶಾ ಏನದು ಸದ್ದು ಎಂದಳು. ಚಿಕ್ಕೋಳಿ, ʻಅಯ್ಯಾ ಯಾರೋ ಈರೆ ಹಕ್ಕಿಯನ್ನ ಹೊಡೀತಿದ್ದಾರೆʼ ಎಂದಳು. ಅದರ ಹೆಸರನ್ನೇ ಕೇಳದ ಆಶಾ, ʻಅದು ಏನು ಮಾಡಲಿಕ್ಕೆ?ʼ ಎಂದಳು. ಚಿಕ್ಕೋಳಿ ತಿನ್ನಲಿಕ್ಕೆ ಎಂದು ನಕ್ಕಳು. ಮನುಷ್ಯ ಎಷ್ಟು ಕೆಟ್ಟವ ತನ್ನ ಉಳಿವಿಗಾಗಿ ಏನು ಮಾಡಲಿಕ್ಕೆ ಬೇಕಾದರೂ ತಯಾರಾಗುತ್ತಾನೆ. ನಿಜ ಅವತ್ತು ಒಂದಾದ ಎಲ್ಲಾ ಜಮೀನುದಾದರೂ ಈ ಹೋರಾಟಕ್ಕೆ ಸಪೋರ್ಟ್ ಸಿಕ್ತಾ ಇರೋದೇ ನಕ್ಸಲರಿಂದ. ಇಲ್ಲದಿದ್ದರೆ ಮುರುಕುಲು ಗುಡಿಸಲಲ್ಲಿ ಇರುವ ಇವರಿಗೆ ಎಲ್ಲಿಂದ ಹಣ ಬರುತ್ತೆ? ಎಂದು ಸರಕಾರಕ್ಕೆ ಪತ್ರ ಬರೆದಿದ್ದರು. ಪರಿಣಾಮ ಪೊಲೀಸರು ಮನೆಯನ್ನು ಜಪ್ತಿ ಮಾಡಲಿಕ್ಕೆ ಬಂದಿದ್ದರು.
ʻರಾತ್ರಿ ಆದರೆ ಜನ ಇಲ್ಲಿ ಸೇರ್ತಾರಂತೆ, ಬ್ಯಾರಲ್ ಗಟ್ಟಲೆ ಕಳ್ಳಭಟ್ಟಿ ಬರುತ್ತಂತೆ? ತುಂಬಾ ಮಾತುಕತೆ ನಡೆಯುತ್ತಂತೆ? ನಮಗೆಲ್ಲಾ ರಿಪೋರ್ಟ್ ಬಂದಿದೆʼ ಎಂದೆಲ್ಲಾ ಕೇಳುತ್ತಿದ್ದರೆ, ಸತೀಶ ಮಾತ್ರ ಏನೊಂದೂ ಮಾತಾಡಲಿಲ್ಲ. ಹುಬ್ಬುಗಂಟು ಹಾಕಿಕೊಂಡು, ʻನಿಮಗೆ ಏನು ಸಿಗುತ್ತೋ ಅದನ್ನ ಜಪ್ತಿ ಮಾಡಿಕೊಳ್ಳಿʼ ಎಂದಿದ್ದ. ಪೊಲೀಸರು ಮನೆ ಎಲ್ಲ ಕಿತ್ತು ಹರಡಿದರು, ಹಂಚಿನ ಮಾಡನ್ನು ಕೆದಕಿದರು. ಅತ್ತೆ ಮಾವ, ʻಅಯ್ಯೋ ಎಲ್ಲಾ ಹಳೆಯದು. ಹಾಗೆ ಮಾಡಬೇಡಿ. ಹಂಚೆಲ್ಲಾ ಒಡೆದೀತುʼ ಎಂದರು. ಕೇಳಲಿಲ್ಲ ಎನ್ನುವಂತೆ ಹಿತ್ತಲಿನ ಗಿಡಗಳನ್ನೆಲ್ಲಾ ನಾಶಮಾಡಿದರು. ಅತ್ತೆ ಪ್ರೀತಿಯಿಂದ ಹಾಕಿದ ಗಿಡಗಳವು. ಸಿಕ್ಕಿದ್ದೆಲ್ಲಾ ಒಂದಿಷ್ಟು ಪುಸ್ತಕಗಳು.
ಸತೀಶನೇ ಬರೆದಿದ್ದ ಒಂದಿಷ್ಟು ಬರಹಗಳು. ಬಂದ ಪೊಲೀಸರು ಮಾತ್ರ ಸರಕಾರಕ್ಕೆ ನಿಮ್ಮ ಮೇಲೆ ಕಣ್ಣಿದೆ ಹುಷಾರು ಎಂದರು. ಸತೀಶ ಜೋರಾಗಿ ನಕ್ಕು, ʻನಿಮಗೇನು ಸಿಗಲಿಲ್ಲ ತಾನೆ? ಇಷ್ಟು ದೂರ ಬಂದಿದ್ದೀರಾ, ಹುಡುಕಿ ದಣಿದಿದ್ದೀರಾ. ಪಾನಕ ಮಾಡಿಸಲೇ?ʼ ಎಂದಿದ್ದ. ಬಂದ ಪೊಲೀಸರಲ್ಲಿ ಒಬ್ಬ ಮಾತ್ರ ಕಪಾಟಿನಲ್ಲಿಟ್ಟಿದ್ದ ಗಾಂಧಿಯ ನನ್ನ ಸತ್ಯಕಥೆಯನ್ನು ಒಯ್ದಿದ್ದ. ನಂತರ ದುಗುಡದಿಂದಲೇ ನಾನು ಮನೆಯನ್ನು ಶುಭ್ರಗೊಳಿಸುತ್ತಿದ್ದೆ. ಅತ್ತೆ ಕಿತ್ತೆಸೆದ ತಮ್ಮ ಪ್ರೀತಿಯ ಗಿಡಗಳನ್ನು ಮತ್ತೆ ನೆಡುವ ಪ್ರಯತ್ನದಲ್ಲಿದ್ದರು. ಮಾವ ಸಹಾಯ ಮಾಡುತ್ತಿದ್ದರು. ಇದ್ದೊಬ್ಬ ಮಗನ ವಿಷಯದಲ್ಲಿ ಈಗ ಅವರಿಬ್ಬರೂ ಏನು ಯೋಚಿಸುತ್ತಿದ್ದಿರಬಹುದು?

ಅಂದು ಮಧ್ಯಾಹ್ನ ಆದರೂ ಸತೀಶನ ಸುಳಿವು ಸಿಗಲಿಲ್ಲ. ಎಲ್ಲಿದ್ದಾನೆ ಎಂದು ಮಾಮೂಲಾಗಿ ಅವನಿರುತ್ತಿದ್ದ ಜಾಗಗಳಿಗೆ ಹೋಗಿ ವಿಚಾರಿಸಿ ಬಂದರು ಮಾವ. ಅತ್ತೆ ಒಂದೇ ಸಮನೆ ಅಳುತ್ತಾ ಕೂತರು. ನನಗೆ ದೊಡ್ಡ ವಿಶ್ವಾಸ ಸತೀಶನನ್ನು ಯಾರು ಏನು ಮಾಡಲು ಸಾಧ್ಯ? ಎಂದು. ಮಧ್ಯಾಹ್ನದ ಬಿಸಿಲು ಇಳಿಮುಖವಾಗುವ ಹೊತ್ತಿಗೆ ನನ್ನ ವಿಶ್ವಾಸವೂ ಕುಂದುತ್ತಾ ಬಂದಿತ್ತು. ಮನೆಗೆ ಜನ ಬರಲಾರಂಭಿಸಿದರು. ನಿಜಾನಾ? ಎಂದು ತಿಳಿದುಕೊಳ್ಳುವ ಕುತೂಹಲಕ್ಕೆ ಕೆಲವರು, ನಿಜವಾದ ಕಾಳಜಿಯಿಂದ ಕೆಲವರು. ಇಳಿ ಮಧ್ಯಾಹ್ನದ ಹೊತ್ತಿಗೆ, ʻರಾತ್ರಿ ಪೊಲೀಸರು ನಕ್ಸಲರನ್ನು ಎನ್ಕೌಂಟರ್ ಮಾಡಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಸ್ಪಾಟ್ ಮಹಜರ್, ಪಂಚನಾಮೆ ಎಲ್ಲಾ ಮುಗಿಸಿ ದೇಹವನ್ನು ಜಿಲ್ಲಾಸ್ಪತ್ರೆಯ ಮಾರ್ಚರಿಯಲ್ಲಿ ಇಟ್ಟಿದ್ದಾರಂತೆ ಎನ್ನುವ ಸುದ್ದಿ ಬಂತುʼ ಎಂದು.
ನನ್ನ ಸತೀಶ ನಕ್ಸಲ್ ಅಲ್ಲ. ಹಾಗಾಗಿ ಅದಕ್ಕೂ ಇದಕ್ಕೂ ತಾಳೆ ಹಾಕಲು ಮನಸ್ಸು ಒಪ್ಪಲಿಲ್ಲ. ಜನ ತಲೆಗೊಂದರಂತೆ ಮಾತಾಡಿದರು. ಮಾವ ತಾವು ಪೊಲೀಸ್ ಸ್ಟೇಷನ್ಗೆ ಹೋಗಿ ವಿಚಾರಿಸಿ ಬರುವುದಾಗಿ ಹೊರಟರು. ನನ್ನ ಹೃದಯ ಬಡಕೊಳ್ಳುವ ಶಬ್ದ ಎದುರಿಗಿರುವವರಿಗೂ ಕೇಳುವಷ್ಟು ಜೋರಾಗಿತ್ತು. ಅಳುತ್ತಿದ್ದ ಅತ್ತೆಗೆ, ರಾತ್ರಿಯಿಂದ ಏನೂ ತಿಂದಿಲ್ಲ ಎಂದು ಒಂದು ತುತ್ತು ಅನ್ನ ಹಾಕಿಕೊಟ್ಟೆ. ಅವರು ತಿನ್ನಲಿಲ್ಲ. ಅದನ್ನೇ ಕಲಿಸಿ ಆರು ತಿಂಗಳ ಕಂದಮ್ಮನಿಗೆ ತಿನ್ನಿಸಿದೆ. ಒಂದು ಕಡೆ ಕೂತು ಅವಳಿಗೆ ಹಾಲನ್ನೂ ಕುಡಿಸಲಾಗದ ಸ್ಥಿತಿ ನನ್ನದಾಗಿತ್ತು. ಒಳಮನೆಯಿಂದ ಬಾಗಿಲಿಗೆ, ಬಾಗಿಲಿನಿಂದ ಒಳಮನೆಗೆ ತಾರಾಡಿದೆ. ಸಮಾಧಾನವಾಗದೆ ಹಾಗೆ ಜಗುಲಿಗೆ ಒರಗಿ ಕುಳಿತೆಬಿಟ್ಟೆ.
ಮಾವ ತಂದ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿತ್ತು. ಸತೀಶನ ಎನ್ಕೌಂಟರ್ ಈಗ ಬರಿಯ ಊಹೆಯಾಗಿರಲಿಲ್ಲ. ʻದೇಹ ನಿಮ್ಮ ಮಗನದ್ದೆ ಎಂದು ಕ್ಲೇಮ್ ಮಾಡಿ ಫಾರ್ಮಾಲಿಟೀಸ್ ಮುಗಿದ ಮೇಲೆ ಕೊಡುತ್ತೇವೆʼ ಎಂದರಂತೆ. ʻನೀವು ಕಣ್ಣಾರೆ ನೋಡಿದ್ರಾ ಮಾವಾ? ಇಲ್ಲ ಇದೆಲ್ಲಾ ಸುಳ್ಳು. ಸುಮ್ಮನೆ ಯಾರೋ ಏನೋ ಹೇಳುತ್ತಿದ್ದಾರೆ. ಸತೀಶ ಸಾಯುವುದು ಎಂದರೇನು?ʼ ಎಂದು ನಾನು ಭೋರಿಟ್ಟು ಅಳಲು ಶುರು ಮಾಡಿದೆ. ಯಾರು ಯಾರನ್ನು ಸಮಾಧಾನ ಮಾಡುವ ಸ್ಥಿತಿಯಲ್ಲಿರಲಿಲ್ಲ. ಜಿಲ್ಲಾಸ್ಪತ್ರೆಗೆ ಹೆಣ ಸಾಗಿಸಿದ್ದಾರೆ. ಆದರೆ ಅಂದು ಶನಿವಾರ ಆದ್ದರಿಂದ ಅಷ್ಟು ಹೊತ್ತಿಗೆ ಡಾಕ್ಟರ್ ತಮ್ಮ ಕೆಲಸ ಮುಗಿಸಿ ಹೊರಟಿದ್ದರಿಂದ ಹೆಣವನ್ನು ಮಾರ್ಚರಿಯಲ್ಲಿರಿಸಲಾಗಿದೆ. ನಾಳೆ ಭಾನುವಾರ ಡಾಕ್ಟರ್ ಬರಲೂಬಹುದು. ಆದರೆ ಎಲ್ಲವನ್ನೂ ನಿರ್ಧಾರ ತೆಗೆದುಕೊಳ್ಳಬೇಕಿರುವುದು ಡಿಸಿ. ಅವರು ಈಗ ಟೂರ್ನಲ್ಲಿದ್ದಾರೆ. ಆದ್ದರಿಂದ ಸೋಮುವಾರದ ತನಕ ಕಾಯದೆ ಬೇರೆ ದಾರಿಯೇ ಇಲ್ಲ ಎಂದು ತಿಳಿಸಿದ್ದರಂತೆ.
ಅಮ್ಮ ಅಜ್ಜಿ ಎಲ್ಲ ಬಂದರು. ಅಳುವವರು ಒಂದಷ್ಟು ಮಂದಿಯಾದರೆ ಸಮಾಧಾನ ಮಾಡುವವರು ಇನ್ನೊಂದಷ್ಟು ಮಂದಿ. ಚಿಕ್ಕೋಳಮ್ಮನಂತೂ, ʻಎಲ್ಲಾ ಆಗಿದ್ದೂ ನನ್ನಿಂದಲೇ. ಹಾಳು ಮುಂಡೆ ನಾನು, ನಮ್ಮನೆ ಜಗಳಕ್ಕೆ ಸತೀಸಪ್ಪನ್ನ ಕರಕೊಂಡು ಹೋಗಿಲ್ಲ ಅಂದಿದ್ರ್ರ ಈ ಅನಾವುತ ಆಗ್ತಾ ಇರಲಿಲ್ಲʼ ಎಂದು ಗೋಳಾಡಿದಳು. ಅಂಥಾ ನೋವಿನ ನಡುವೆಯೂ ಅತ್ತೆ ಮಾತಾಡಲಿಲ್ಲ, ಬೈಯ್ಯಲಿಲ್ಲ. ಅವರಿಗಿದ್ದ ನೋವೆಲ್ಲ, ಮಗ ತಟ್ಟೆಯಲ್ಲಿನ ಅನ್ನವನ್ನು ಅರ್ಧಕ್ಕೆ ಬಿಟ್ಟು ಹೋದ ಹಾಗೇ ಜೀವನವನ್ನೂ ಕೂಡಾ ಎನ್ನುವುದಾಗಿತ್ತು. ಅವನನ್ನು ಸಾಯಿಸಲೇ ಬೇಕು ಅಂಥ ಹಟ ತೊಟ್ಟಿರೋರು ಈಗಲ್ಲದಿದ್ದರೆ ಇನ್ನೊಮ್ಮೆಯಾದರೂ ಕೊಲ್ಲುತ್ತಿದ್ದರು. ಒಟ್ಟಿನಲ್ಲಿ ನಮ್ಮ ವಿಧಿ ಅನ್ನದೆ ಬೇರೆ ದಾರಿಯಿಲ್ಲ ಎಂದು ವೇದನೆಯಿಂದ ಮಾತಾಡಿದ್ದರು ಮಾವ. ಇನ್ನು ಸತೀಶ ಇಲ್ಲ ಎನ್ನುವ ಸತ್ಯವನ್ನು ಹೇಗೆ ಅರಗಿಸಿಕೊಳ್ಳಲಿ? ಯಾವ ಪಾಪ ಮಾಡಿದ್ದೆ ಎಂದು ನನಗೀ ಶಿಕ್ಷೆ? ಏನೂ ಗೊತ್ತಿಲ್ಲದ ಮಗು ಹಾಲಿಗಾಗಿ ತಡಕುತ್ತಿದ್ದರೆ, ದುಃಖದಿಂದ ಬತ್ತಿಹೋದ ಎದೆಯಲ್ಲಿ ಹಾಲೂ ಇಂಗುತ್ತಿತ್ತು.
0 ಪ್ರತಿಕ್ರಿಯೆಗಳು