ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾರ್ವತಮ್ಮ ಇನ್ನಿಲ್ಲ..

ರೇಖಾರಾಣಿ 

ಪಾರ್ವತಮ್ಮ ಇನ್ನಿಲ್ಲ…

ಅಗ್ನಿಪರ್ವತವೊಂದು ಒಡಲೊಳಗೆ ಜೀವನದುದ್ದಕ್ಕೂ ಲಾವಾತುಂಬಿಕೊಂಡು…ಸ್ಪೋಟಗೊಳ್ಳದೆ ತಣ್ಣಗೆ ಮಲಗಿತ್ತು.

ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ನಿರ್ಮಾಪಕರಾದ ತಕ್ಷಣ ಪ್ರೀತಿಯಿಂದ ಕೆಲವೊಮ್ಮೆ ಗೇಲಿಮಾಡಲು ಏನಕ್ಕಾವ್ರು ಚೆನ್ನಾಗಿದ್ದೀರಾ?” ಅಂತಲೋ “ಏನಮ್ಮಾ ನೀನೂ ದೊಡ್ಡಮನೆ ಕಂಪನಿ ಕಟ್ಟಲು ಹೋರಟಿದ್ದೀಯಾ” ಅಂತಲೋ ಒಂದಲ್ಲ ಒಂದು ಕೇಳೇ ಕೇಳುತ್ತಾರೆ. ಈ ದೊಡ್ಮನೆ, ಕಂಪನಿ, ಅಕ್ಕಾವ್ರು, ಅಣ್ಣಾವ್ರು, ಹೆಡ್ಡಾಪೀಸು..ಇತ್ಯಾದಿ ಪದಗಳ ಕೊನೆಯ ಕೊಂಡಿ ಪಾರ್ವತಮ್ಮ ರಾಜ್ ಕುಮಾರ್.

ಪಾರ್ವತಮ್ಮನವರಿಗೆ ಪತ್ರಕರ್ತರ ಬಗ್ಗೆ ಅಂತಹ ಒಲವೇನೂ ಇರಲಿಲ್ಲ…ಆದರೆ ಕೆಲವರನ್ನು ಕಂಡರೆ ವಿಶೇಷ ಪ್ರೀತಿಯಿತ್ತು. . ಹಾಗೆಂದೂ ಯಾವ ಸಂದರ್ಭದಲ್ಲಿಯೂ ಹುಡುಕಿ ಪತ್ರಕರ್ತ/ಪತ್ರಕರ್ತೆಯರ ಹೆಗಲ ಕೈ ಹಾಕಿ ನಗುನಗುತ್ತಾ ಮಾತನಾಡಿದ್ದನ್ನು ಯಾರೂ ಕಂಡಿಲ್ಲ. ಕಥೆ ಕಾದಂಬರಿ ಬರೆಯುತೇನೆಂದು ನನ್ನ ಬಳಿ ಒಂದೆರಡು ಮಾತುಗಳನ್ನು ಹೆಚ್ಚಿಗೆ ಆಡುತ್ತಿದ್ದರು. ಕನ್ನಡದ ಎಲ್ಲಾ ಕಾದಂಬರಿಗಳನ್ನು ಓದಿ ಕಥಾವಸುವಿನ ಬಗ್ಗೆ ನನ್ನಲ್ಲಿ ಸಿಕ್ಕಾಗ ಹೇಳುತ್ತಿದ್ದರು. (ಚರ್ಚಿಸುತ್ತಿದ್ದರು ಎಂಬುದು ಅಪ್ಪಟ ಸುಳ್ಳು). ನೂರಾರು ಸಾಮಾಜಿಕ ಕಾದಂಬರಿಗಳ ಹಕ್ಕನ್ನು ಸಿನೆಮಾ ಮಾಡಲು ತೆಗೆದಿಟ್ಟುಕೊಂಡಿದ್ದರು. ಎಲ್ಲಿ ಸಿಕ್ಕರೂ ಸಣ್ಣ ನಗುವಿನೊಂದಿಗೆ ಪ್ರೀತಿ, ಗೆಳೆತನ ಎಲ್ಲಾ ಮುಗಿಸಿಬಿಡುತ್ತಿದ್ದರು.

ಡಾ.ರಾಜ್ ಕುಮಾರ್ ಅವರು ಬಹಳ ವರ್ಷಗಳ ಕಾಲ (ಬಹುಶ: 6 ವರ್ಷಗಳ ಕಾಲ) ಯಾವ ಪತ್ರಿಕೆಗಳವರ ಬಳಿ ಮಾತನಾಡಿರಲಿಲ್ಲ. ಅದೇ ಸಮಯದಲ್ಲಿ ಜೀವನ ಚೈತ್ರ ಸಿನೆಮಾ ಮಾಡಲು ತಯಾರಿ ನಡೆಸುತ್ತಿದ್ದಾರೆಂದು ಸುದ್ದಿಬಂತು. ಲಂಕೇಶರು ಡಾ. ರಾಜ್ ಅವರನ್ನು ನೋಡಿ ಮುಖಪುಟ ಸುದ್ದಿಮಾಡಲು ಹೇಳಿದರು. ನನ್ನಪ್ಪನಾಣೆಯಾಗಿಯೂ ಪಾರ್ವತಮ್ಮನವರು ಒಪ್ಪಿಗೆ ಕೊಡುವುದಿಲ್ಲ ಎಂದೇ ನನ್ನ ನಂಬಿಕೆಯಾಗಿತ್ತು. ಆದರೆ ಸಂಪಾದಕರ ಮಾತು ಮೀರುವ ಹಾಗಿಲ್ಲ. ನಮ್ಮ ಪತ್ರಿಕೆಯ ಆಫೀಸಿನಿಂದ ಕರೆ ಮಾಡಿದ ತಕ್ಷಣ “ಸಂದರ್ಶನ ಮಾಡಲು ಯಾರು ಬರುತ್ತಿದ್ದೀರಾ? ” ಎಂದರು “ನಾನೇ ಬರುತ್ತಿದ್ದೇನಮ್ಮ” ಎಂದೆ. ಕಂಠೀರವ ಸ್ಟುಡಿಯೋದಲ್ಲಿ ನೆಲದ ಮೇಲೆ ಕುಳಿತು, ಬಹಳ ವರ್ಷಗಳ ನಂತರ ಡಾ. ರಾಜ್ ಲಂಕೇಶ್ ಪತ್ರಿಕೆಗೆ ಅದ್ಭುತ ಸಂದರ್ಶನ ನೀಡಿದರು. “ತಮಗೆ ರಸ್ತೆ ಬದಿಯಲ್ಲಿ ಪಾನಿಪೂರಿ ತಿನ್ನಲು ಆಸೆ ” ಎನ್ನುವವರೆಗೂ ಸರಳವಾಗಿ ಮನಬಿಚ್ಚಿ ಮಾತನಾಡಿದರು.

ದೂರದಲ್ಲಿ ಕುಳಿತು ಯಾವುದಕ್ಕೂ ಬಾಯಿಹಾಕದೆ ಪಾರ್ವತಮ್ಮನವರು ಸುಮ್ಮನೆ ಕುಳಿತಿದ್ದರು. ಇದರ ಮಧ್ಯೆ ಅಪಾಯಿಂಟ್ಮೆಂಟ್ ಇಲ್ಲದೆ ಪತ್ರಕರ್ತನೊಬ್ಬ ನಿಧಿ ಸಿಕ್ಕಂತೆ ಮಧ್ಯೆ ಬಂದು ಏನೇನೋ ಪ್ರಶ್ನೆಗಳನ್ನು ಕೇಳಲು ಶುರುಮಾಡಿದ. ಪಾರ್ವತಮ್ಮ ತಕ್ಷಣ ಪ್ರವೀಣ್ ನಾಯಕ್ ಎಂಬ ಕಂಪನಿಯ ಹಾಗೂ ಪತ್ರಿಕೆಗಳ ಪೋಟೋಗ್ರಾಫರ್ ನನ್ನು ಕರೆದು “ಮಾನಿಟರ್” ಮಾಡಲು ಕಳುಹಿಸಿದರು. ಆ ಮಧ್ಯೆಬಂದ ಪತ್ರಕರ್ತನಿಂದ ಸಂದರ್ಶನದ ಹಾದಿ ತಪ್ಪಿಹೋಯಿತು. ಪ್ರವೀಣ್ ನಾಯಕ್ ನನ್ನ ಬಾಲ್ಯ ಸ್ನೇಹಿತ. ಪಾಪ ಆತ ಹಾಗೂ ಹೀಗೂ ಅಣ್ಣಾವರು ನನ್ನ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿವಂತೆ ಎಳೆದು ಎಳೆದು ಅಣ್ಣಾವರನ್ನು ತರುತ್ತಿದ್ದ. ಆದರೆ ಆ ಪತ್ರಕರ್ತರು ಬಿಡಬೇಕಲ್ಲ..ಹಾದಿ ತಪ್ಪಿಸಿದ್ದೇ ತಪ್ಪಿಸಿದ್ದು

ಪಾರ್ವತಮ್ಮನವರು ದೂರದಿಂದಲೇ ಸಭೆ ಮುಗಿಸಲು ಫರ್ಮಾನು ನೀಡಿದರು.. ಅದೃಷ್ಟವಶಾತ್ ನನಗೆ ಬೇಕಾದ ಮಾಹಿತಿಗಳೆಲ್ಲಾ ಸಿಕ್ಕಿತ್ತು.. ಹೀಗಾಗಿ ಒಳ್ಳೆಯ, ಅಪರೂಪದ ಸಂದರ್ಶನ ನನಗೆ ಸಿಕ್ಕಿತ್ತು.

ಒಮ್ಮೆ ನೋಡಿದರೆ ಎಂದೆಂದೂ ಮರೆಯದ ಅಪರೂಪದ ಗುಣ ಪಾರ್ವತಮ್ಮನವರಿಗಿತ್ತು. ತಾವು ಓದಿದ ಯಾವುದೇ ಕಾದಂಬರಿಯ ಕಥೆ, ಲೇಖಕಿ ಇತ್ಯಾದಿಗಳ ಬಗ್ಗೆ ಎಷ್ಟು ವರ್ಷಗಳ ನಂತರವೂ ವಿವರಗಳನ್ನು ನೀಡುತ್ತಿದರು. ಬಡತನದ, ಗ್ರಾಮೀಣ ಹಿನ್ನಲೆಯಿಂದ ಬಂದ ಎಲ್ಲರೂ “ಸಾಮಾನ್ಯ” ಎಂದುಕೊಂಡ ಹೆಣ್ಣು ಮಗಳೊಬ್ಬಳು ಪ್ರತಿದಿನ ನೂರಾರು ಅಡ್ಡಿಆತಂಕಗಳ ಮಧ್ಯೆ “ಅಕ್ಕಾವ್ರು” “ಅಮ್ಮಾವ್ರು” ಆಗಿ ಬೆಳೆದು ಕಂಪನಿ ಕಟ್ಟಿ ಮನೆ ನಿರ್ವಹಿಸಿದ ರೀತಿ ಅದ್ಭುತ ಎಂಬುದು ಬಲ್ಲವರಿಗೆ ಗೊತ್ತು, ಆಶ್ಚರ್ಯ ಎಂಬುದು ಜನಸಾಮಾನ್ಯರಿಗೂ ಗೊತ್ತು.

ಇನ್ನಾದರೂ ಆ ಲೋಕದಲ್ಲಿ ಅಣ್ಣಾವ್ರ ಜೊತೆ ನೆಮ್ಮದಿಯಾಗಿ ನಗುನಗುತ್ತಾ ಇರಿ ಅಮ್ಮ.

‍ಲೇಖಕರು avadhi

31 May, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading