ಪಾರಿಜಾತ
ಸ್ವರ್ಣ ಎನ್ ಪಿ
ಒಬ್ಬ ರಾಜಗೊಬ್ಬ ಮಗಳು, ವಯಸಿಗೆ ಬಂದಳು.
ಸೂರ್ಯನನ್ನೇ ಪ್ರೇಮಿಸಿದಳು !
ಅವನೂ ಇವಳನ್ನ ಮೋಹಿಸಿದ
ಆದರೆ, ತಂದೆಗೆ ಉರಿವ ಸೂರ್ಯ ಬೇಡವಾದ.
ನಾ ಬೇಕೆಂದಾದರೆ ತಂದೆಯ ಬಿಡೆಂದ ತಮ ವೈರಿ
ಹುಡುಗಿಯ ಮುಂದೆ ಇದ್ದುದೊಂದೇ ದಾರಿ .
ಸೂರ್ಯನೊಡನೆ ಹೊರಟಳು ಕನ್ಯೆ
ಮೂರು ಲೋಕ ಮಾನ್ಯೆ.
ತಂದೆ ತಾಯ ಮರೆಯದಾದಳು.
ಬಂಧು ಬಂಧವ ತೊರೆಯದಾದಳು.
ಸೂರ್ಯ ಕೆಂಪಾಗಿ ಉರಿದ.
ಹುಡುಗಿಯ ಮತ್ತೆ ತವರಿಗಟ್ಟಿದ.
ಬಾಲೆ ಬೆಂದಳು ಅರುಣನುರಿಯಲ್ಲಿ.
ಕಂಬನಿಯು ಆವಿಯಾಗಿತ್ತಲ್ಲಿ ,
ಕೆನ್ನೆಗೆ ಜಾರುವ ಮುಂಚೆ
ಇದು ವಿಧಿಯ ಕ್ರೂರ ಸಂಚೇ ?
ಹುಡುಗಿ ಒಣಗಿ ಪ್ರಾಣ ಬಿಟ್ಟಳು
ಉರಿವ ಸೂರ್ಯನಿಗಾಗಿ ಉರಿದು ಹೋದಳು.
ತಂದೆ ನೆಟ್ಟನೊಂದು ಗಿಡ ಅವಳ ಗೋರಿಯ ಮೇಲೆ
ಅಲ್ಲೊಂದು ಗಿಡ ಚಿಗುರಿತ್ತು, ಇದಾವ ಶಿವ ಲೀಲೆ ?
ನಸುಕಲ್ಲಿ ಹೂವೊಂದು ಅರಳಿತ್ತು
ಸೂರ್ಯನ ಕಂಡೊಡನೆ ಬಾಡಿತ್ತು .
ಲೋಕ ಅದಕಿತ್ತ ಹೆಸರು ಪಾರಿಜಾತ
ಅದು ‘ಅವಳ’ ಸುನೀತ ಪ್ರೇಮ ಗೀತ .
(ಮೈಸೂರಿನ ವಸ್ತು ಪ್ರದರ್ಶನದಲ್ಲಿ ಓದಿದ ‘ ಪಾರಿಜಾತ’ ಜನಪದ ಕಥೆಯನ್ನಾಧಾರಿಸಿ ಬರೆದದ್ದು )






nice madam..
beautifulll
Very nicely written!
ಬಹಳ ಚೆನ್ನಾಗಿದೆ ಸ್ವರ್ಣಾ ಅವರೇ