ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಳೆಯುಳಿಕೆಗಳು

-ನಾ.ಬಾಲಕೃಷ್ಣ

1
ದ್ವಾಪರದಿ ವಿದುರ ನೆಟ್ಟ ಅಶ್ವತ್ಥ
ಒಣ ಒಣಗಿ ಲೊಡ್ಡಾಗಿ
ನೊಣ ಮುತ್ತ ನಾಗಬನ ಜಡ್ಡಾಗಿ
ಗೋಳಿಟ್ಟ ಗಾಳಿ;
ಮನದಿಚ್ಛೆ ಪೂರೈಸದೆಯೆ ಬಯಬಯಸಿ
ಹರಕೆ ಹೊತ್ತರು ಗಬ್ಬ ಕಟ್ಟದು
ಬಂಜೆ ಬದುಕಿಗೆ;
ನಾಯಿ ನರಿ ಊಳಿಟ್ಟ ಮೇಳ
ಕುಟು ಕುಟುಕು ಮರಕುಟುಕದ ತಾಳ.
ಅತ್ತತ್ತ ಏಳು ಗಿರಿ ಉಪ್ಪರಿಗೆ ವಾಸಿಗೂ
ಕೊಪ್ಪರಿಗೆ ತುಂಬಿಸುವ ಮಹದಾಸೆ,
ಇತ್ತಿತ್ತ ಜೋಪಡಿಯ
ಉಂಬದ ಬಡತನಕ್ಕೆ
ಹೊತ್ತಿನ ತುತ್ತಿಲ್ಲದೆ ಹತಾಶೆ.
ಕಂಡವರ ಕಿಸೆಯಲ್ಲಿ ಕೈಯಿಟ್ಟು
ಬಾಗಿ ಹೊತ್ತವರ ತಲೆಮೇಲೆ ಕಾಲಿಟ್ಟು
ಗಿರಿಯೇರಿ ಮೆರೆವವರ
ನೆರೆದ ಸಿರಿ ನೆರೆಯಾಗಿ ಉಕ್ಕಿದರೂ
ನೆಲದಾಳದಲ್ಲಿ ಜಲವಿಲ್ಲ
ಜಲವಿಲ್ಲದಾ ನೆಲವೆಂತು ಉಗ್ಗೀತು
ಬರವಿಲ್ಲದಾ ಸುಗ್ಗಿ.
2
ಮೆರೆದ ಪವಾಡಗಳ
ಬಾಬಾಗಳೊಡಲು ಮುರು ಮುರುಟಿ
ಸುಡುಗಾಡ ಧೂಳಾಗಿ
ರಾಚುತ್ತ ಕಣ್ಣಕಿಸುರಾಯ್ತು
ಸತ್ತ ಯತಿಗಳ ಸುತ್ತ ಕಟ್ಟೆ ಕಟ್ಟಿ
ಧೂಪ ದೀಪಗಳ ಪ್ರೇತಾರಾಧನೆ;
ಭೂಯಿಷ್ಠ ನುಡಿಯ ಲೊಟಲೊಟದಲ್ಲಿ
ತಟ ವಟ ವಂಚನೆ
ಪುಕ್ಕಟ್ಟೆಯುಂಡ ಪಿಂಡಾನ್ನಗಳ
ಉಚ್ಛಿಷ್ಟದಲ್ಲಿ ಹೊರಹೊರಳಿ
ರೋಗರುಜಿನಗಳ ಕಳೆವ
ತಳವಿಲ್ಲದಾಸೆಗೂ ತತ್ವತಳವಾರಿಕೆಯ ಚೌಕಟ್ಟು.
ತಲೆತುಂಬ ಹೊತ್ತು ತಂಬಿಟ್ಟು
ಕಂಡ ದೈವಗಳಿಗೆಲ್ಲ ಎಡೆಯಿಟ್ಟು
ಪಳೆಯುಳಿಕೆ ಪರಂಪರೆಯ ಜತನವಾಗಿಸುವ
ಮುಗುದೆ ಪ್ರಮದೆಯರ ಸಾಲು
ಕಾಲ ಕಳೆದರೂ ಕಾಲಾನುಕಾಲಕ್ಕು
ಅಳಿಯದೇ ಉಳಿದು
ಮದವೇರಿ ಮಲೆತು
ಮಾನವತೆ ಮರೆತ
ಮನುವಾದದ ದುಂಬಾಲು.

‍ಲೇಖಕರು avadhi

24 March, 2013

3 Comments

  1. pravara

    ತುಂಬಾ ಚೆನ್ನಾಗಿದೆ ಸರ್, ಪಳೆಯುಳಿಕೆಗಳು

  2. na balakrishna

    ನಿಮಗೆ ನನ್ನ ಕವನ ಇಷ್ಟವಾಗಿದ್ದು ಸಂತೋಷ, ವಂದನೆಗಳು
    ನಾ.ಬಾಲಕೃಷ್ಣ, ಮೈಸೂರು

  3. Raghuveer

    my dear uncle
    language is very good and your writing style also , please write something about current politics ,you have lot of issues to write , please i beg u don’t write on any religion
    with best regards
    Raghuveer

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading