ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಲ್ಲಟ

ವಿದ್ಯಾ ಭರತನಹಳ್ಳಿ

ಕಾಣದ ವೈರಿಯೊಂದಿಗೆ
ಸೆಣಸುವ ಆಟ
ಕವಚ,ಗವುಸು
ತೋರದ ಕಣ್ಣ ಭಾವ.
ಕವಾಟದೊಳಗೆ
ಕುದಿಸಿಟ್ಟ ಹುಳಿರಸ
ಬಾಯಿಗೆ ಬಂದದ್ದು
ಕಾಣುವ ಭಯವಿಲ್ಲ.

ಸಪಾಟು ರಸ್ತೆಯಲ್ಲಿ
ಅತ್ತ ಇತ್ತ ನೋಡಿ
ಪಟ್ಟೆಂದು ಬಿಸಾಕಿ
ಒಡೆದು ಬಿದ್ದ ಕಸ.
ಮೂಗು ಮುಚ್ಚಿಕೊಂಡೇ
ಚದುರಿದಂತೆ ನಿಂತ ಜನ.

ಆಹಾಹ, ಓಹೊಹೊ, ಉಹುಹು
ಕೈಗೆ ಕೈ ತಟ್ಟಿ, ನಕ್ಕು ಹಗುರಾಗಿ 
ಬರುವ ಸಂಗತಿ ಇಲ್ಲ.
ಪಾರ್ಕಿನ ಕಲ್ಲು ಬೆಂಚುಗಳು
ನಿಟ್ಟುಸಿರ ಕತೆ ಕೇಳಿ
ಸಂಕಟ ಪಡುವ ಜರೂರಿಲ್ಲ.

ಕಾಫಿ ಕೊಡದ ಸೊಸೆ
ದುಡ್ಡು ಕೀಳುವ ಮಗ
ಮಗಳು  ಅಳಿಯನ
ವಾಟ್ಸಪ್ ಜಗಳ!
ದರ್ಪ ತೋರುವ ಅಪ್ಪ
ಸೊಂಟ ಬಾಗಿದವಳ ರಂಗೋಲಿ


ಬೇಕಿಲ್ಲ ಕತ್ತಿ ಗುರಾಣಿಗಳು
ಎಲ್ಲ ಮುಸುಕಿನ ಯುದ್ಧ.
ಒಂದಕ್ಕಿಂತ ಒಂದು 
ಎತ್ತರೆತ್ತರ ನಾನೆಂಬ
ಅಹಂಕಾರ 
ಮುಗಿಯದ ಮಮಕಾರ
ಮೇಲಿಂದ ಕೆಳಕ್ಕೂ
ಬಲದಿಂದ ಎಡಕ್ಕೂ
ವಿಭಜಿಸುವ ಗೆರೆ
ಎಲ್ಲ ತುಂಡು ತುಂಡಾಗಿಸುವ
ಬಂಧಗಳು
ಸುತ್ತ ಎದ್ದು ಬಿಡುವ ಗೋಡೆಗಳು
ಸದಾ ಮುಚ್ಚಿಯೇ ಇರುವ
ಬಾಗಿಲುಗಳು
ಮರಣ ಶಯ್ಯೆಯಲ್ಲಿರುವ
ಉಸಿರುಗಳು, ಪ್ರೀತಿಗಳು
ಎಲ್ಲ ಹಳೆ ಮುಖಗಳಿಗೂ
ಹೊಸ ಮುಖದ ಕನಸು!!



‍ಲೇಖಕರು Avadhi

10 November, 2020

2 Comments

  1. NarayanBhat

    Ishta aaytu

    • Vidya Bharatanahalli

      ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading