
ನನಗೆ ಬಹಳ ಪ್ರಿಯವಾದದ್ದು ಈ ಪರಿಸರ. ಈ ಪ್ರೀತಿಗೆ ಕಾರಣ ಪರಿಸರದ ಮೇಲೆ ನನಗೆ ಇರುವ ಗೌರವ. ನೆಲದ ಮೇಲೆ ಕೋಟ್ಯಾನು ಕೋಟಿ ಜೀವ ಜಂತುಗಳು ಇವೆ. ಅವುಗಳಲ್ಲಿ ಮಾನವ ಜೀವಿ ಕೂಡ ಒಬ್ಬ. ಪರಿಸರದಲ್ಲಿ ಅವನು ಶ್ರೇಷ್ಠ ಖಂಡಿತಾ ಅಲ್ಲ. ಇದ್ದುದರಲ್ಲಿ ಆತ ಬುದ್ಧಿವಂತ. ಬುಧ್ದಿವಂತ ಅಂದ ಕೂಡಲೇ ಇಡೀ ಪರಿಸರವನ್ನ ಆಳುವ, ಬದಲಾಯಿಸುವ, ಬೇಕಾ ಬಿಟ್ಟಿಯಾಗಿ ಬಳಸಿ ಕೊಳ್ಳುವ ಅಧಿಕಾರವನ್ನ ಈ ಮನುಷ್ಯನಿಗೆ ಯಾರೂ ಕೊಟ್ಟಿಲ್ಲ. ಆದರೆ ತನ್ನ ಕುತಂತ್ರದಿಂದ ಅವನು ಇದನ್ನ ಸಾಧಿಸಿದ್ದಾನೆ.
ಹೀಗೆ ಇಲ್ಲದ ಸಾಧನೆಗಳನ್ನ ಮಾಡಿ ತನಗೆ ತಾನೇ ಅಪಾಯ ತಂದು ಕೊಳ್ಳುತ್ತಿದ್ದಾನೆ. ಮೊನ್ನೆ ಮೊನ್ನೆ ಉತ್ತರಾಖಂಡದಲ್ಲಿ ಏನಾಯಿತು ನಮಗೆ ಗೊತ್ತಿದೆ. ಎಲ್ಲಿಯವರೆಗೆ ನಾವು ಪರಿಸರದ ನಿಯಮಗಳನ್ನ ಅರ್ಥ ಮಾಡಿಕೊಂಡು ನಮ್ಮ ಬದುಕನ್ನ ನಡೆಸುತ್ತೇವೆ, ಅಲ್ಲಿವರೆಗೆ ನಾವು ಸುರಕ್ಷಿತ. ನಾವು ಪರಿಸರದ ನಿಯಮಗಳನ್ನ ಮೀರಿದ ದಿನ ಅದು ನಮ್ಮ ಮೇಲೆ ಸೇಡು ತೀರಿಸಿ ಕೊಳ್ಳುತ್ತದೆ. ಸೇಡು ತೀರಿಸಿ ಕೊಳ್ಳುವ ಅದರ ಪ್ರಕ್ರಿಯೆಯನ್ನ ಅದು ಈಗಾಗಲೇ ಪ್ರಾರಂಭಿಸಿದೆ.
ಅಲ್ಲದೆ ಇದೀಗ ಮತ್ತೊಂದು ಮಾತು ಕೇಳಿಬರುತ್ತಿದೆ. ನೇತ್ರಾವತಿ ನದಿ ನೀರನ್ನ ಕೋಲಾರಕ್ಕೆ ತಿರುಗಿಸುವುದು, ಶರಾವತಿಯ ನೀರನ್ನ ಮತ್ತೆಲ್ಲಿಗೋ ಕೊಂಡೊಯ್ಯುವುದು. ಸಮುದ್ರ ಸೇರುವ ನೀರು ವ್ಯರ್ಥ ಎಂದು ಹೇಳುವುದು. ಈ ನೀರನ್ನ ಇಲ್ಲಿಂದ ಮತ್ತೆಲ್ಲಿಗೋ ಸಾಗಿಸುವ ಕೆಲಸ ನಕ್ಷೆಯ ಮೇಲೆ ಸುಲಭ. ಒಂದು ಗೆರೆ ಎಳೆದರಾಯಿತು. ಆದರೆ ಇದು ಕಾರ್ಯರೂಪಕ್ಕೆ ಇಳಿದಾಗ ಪರಿಣಾಮ ಏನಾದೀತು?
ನಾವು ಎಷ್ಟು ಅಣೆಕಟ್ಟುಗಳನ್ನ, ನಾಲೆಗಳನ್ನ ನಿರ್ಮಿಸಬೇಕು. ಕಾಡು ಮೇಡು ಎಂದು ನಷ್ಟವಾಗುವ ಪರಿಸರ ಎಷ್ಟು? ತೊಂದರೆಗೆ ಒಳಗಾಗುವ ಜನರ ಬವಣೆ ಯೋಚಿಸ ಬೇಡವೇ? ಹೊಸದಾಗಿ ತಲೆದೋರುವ ಸಮಸ್ಯೆಗಳ ಅರಿವು ನಮಗಿದೆಯೇ. ಶರಾವತಿಯಲ್ಲಿ ಒಂದು ನಾಲೆ ಕಟ್ಟಿಸಿದರು. ಅದರಲ್ಲಿ ಬಿಟ್ಟ ನೀರು ಅಕ್ಕಪಕ್ಕದ ಗದ್ದೆಗಳಲ್ಲಿ ಪುಟಿಯಿತು. ಕೊನೆಗೆ ಮತ್ತೊಂದು ಸುರಂಗ ತೆಗೆದರು. ಹೀಗೆ ಆಗಬಾರದಲ್ಲವೆ. ಆಸ್ಟ್ರೇಲಿಯಾದಲ್ಲಿ ನದಿ ತಿರುವಿಗೆಂದು ಕಟ್ಟಿದ ಅಣೆಕಟ್ಟುಗಳನ್ನ ಒಡೆದು ಹಾಕಿ ಮತ್ತೆ ಹಿಂದಿನಿಂದ ನದಿಗಳನ್ನ ಹರಿಯ ಬಿಡುತ್ತಿದ್ದಾರಂತೆ. ಅಲ್ಲಿ ಈ ಯೋಜನೆ ಹಲವು ಸಮಸ್ಯೆಗಳಿಗ ಕಾರಣವಾಗಿದೆಯಂತೆ. ಇಂತಹಾ ಯೋಜನೆಗಳು ಈ ದೇಶಕ್ಕೆ ಬೇಕೆ?
ಪರಿಸರವನ್ನು ಅದರ ಪಾಡಿಗೆ ಬಿಡೋಣ
ನಿಮಗೆ ಇವೂ ಇಷ್ಟವಾಗಬಹುದು…

0 Comments