ಪರಮೇಶ್ವರ ಗುರುಸ್ವಾಮಿ
ಯಾರ ಕುಂಚದ ಸೃಷ್ಟಿ ಇದು?
ಎಂದು ಯೋಚಿಸುತ್ತಾ ಒಂಟಿಯಾಗಿ
ಒಬ್ಬನೇ ಅಲೆದಾಡುತ್ತಿದ್ದೇನೆ
ಒಂದು ಸುಂದರ ಚೇತೋಹಾರಿ
ಪೆಯಿಂಟಿಂಗಿನೊಳಗೆ ಇದ್ದೇನೆ
ಕನಸಿನೊಳಗೆ ಅನಿಸುತ್ತಿದೆ.
ಇದುವರೆಗೂ ನೋಡಿಲ್ಲದ
ಪೇಯಿಂಟಿಂಗಿನೊಳಗೆ
ಈ ಬೆಟ್ಟ ಗುಡ್ಡಗಳು
ಕಣಿವೆಯೊಳಗಿನ ಹಸಿರು
ಅಲ್ಲೆಲ್ಲೋ ದೂರದಲ್ಲಿ
ಗುಡ್ಡದ ಇಳಿಜಾರಿನ ಮನೆ
ಮನೆ ಮುಂದಿನ ಅಂಗಳ
ಮನುಷ್ಯರಾಗಲಿ ಪ್ರಾಣಿಗಳಾಗಲಿ
ಪಕ್ಷಿಗಳಾಗಲಿ ಜೀವವೊಂದೂ ಕಾಣುತ್ತಿಲ್ಲ
ಗಾಳಿಯೂ ಇಲ್ಲವೆ?
ಮರಗಿಡಗಳು ಸ್ತಬ್ಧವಾಗಿ ನಿಂತಿವೆ
ಗಂಭೀರವಾಗಿ.

ಮೇಲೆ
ಗುಡ್ಡದೊಂದು ಸಂಧಿಯಿಂದ
ನುಸುಳಿ ಹರಿದಿರುವ ನೀರು
ತೊರೆಯಾಗಿ ಆ ಮನೆಯ ಮಗ್ಗುಲು
ಹಾದು ನಾನಿಂತಿರುವ ಪಾವಟಿಗೆಗಳಲ್ಲಿ
ಕೆಲವನ್ನು ಮುಳುಗಿಸಿಕೊಂಡು ಶಾಂತ
ರೀತಿಯಲ್ಲಿ ಹರಿಯುತ್ತಿದೆ
ಕೆಲವೊಮ್ಮೆ
ನನ್ನ ಪಾದಗಳನ್ನು ಮುಟ್ಟುತ್ತಿದೆ.
ತೊರೆಯಲ್ಲಿ ಒಂದಾದರೂ ಮೀನು
ಸುತ್ತಾ ಒಂದಾದರೂ ನೊಣ ಕಾಣುತ್ತಿಲ್ಲ.
ತೊರೆಯ ನೀರು
ಮತ್ತು
ನಾನು ಮಾತ್ರ
ಚಲಿಸಬಲ್ಲವರಾಗಿದ್ದೇವೆ ಆ ಸ್ತಬ್ಧಚಿತ್ರದೊಳಗೆ.
ಅಕಿರಾ ಕುರೋಸಾವ, ತನ್ನ ‘ಡ್ರೀಮ್ಸ್’ ಸಿನೆ
ಗುಚ್ಛದೊಳಗಿನ ‘ಕಾಗೆಗಳು’ ಕಿರುಚಿತ್ರದಲ್ಲಿ
ವಿನ್ಸೆಂಟ್ ವ್ಯಾನ್ ಹೋಹ್‌ನ ಕುಂಚಲೋಕ
ಪ್ರವೇಶಿಸಿದಂತೆ ನಾನೂ ಯಾರಾದರೂ
ಕಲಾವಿದರ ಪೆಯಿಂಟಿಂಗ್ ಪ್ರವೇಶಿಸಿದ್ದೇನಾ?
ಭ್ರಮೆಗಳೂ
ಕನಸುಗಳೂ
ಕಲ್ಪನೆಗಳೂ
ಮರುಳುಗಳೂ
ನಿಜವಾದ ವಾಸ್ತವವೇ?
ವಾಸ್ತವ ಅಂದುಕೊಂಡಿರುವುದು
ಮೆಲಿನ ನಾಲ್ಕರಲ್ಲಿ ಒಂದೆ?
ಏನೆಂದೆ?
ಇಲ್ಲಿ ನಾನೇನಂದೆ?






0 Comments