ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರದೆಯ ಹಿಡಿಯೊಂದರ ಸ್ವಗತ…

ವಿವೇಕಾನಂದ ಕಾಮತ್ 

 

ನನ್ನ ಹಿಡಿದೆಳೆದರೆ ಪರದೆ ತೆರೆಯುತ್ತದೆ ಅಥವಾ ಮುಚ್ಚುತ್ತದೆ..
ಹೊರಗೆ ಮತ್ತು ಒಳಗಿನ ನಡುವಿನ ಅಂತರ್ಪಟ ನಾನು
ಹೊರಗೆ ತೆರೆದುಕೊಳ್ಳುವ ಮುನ್ನ ಒಳಗನ್ನು ಅರಿಯಬೇಕು
ಅವರೆರಡರ ಸಂಧಾನದ ರಾಯಭಾರಿ ನಾನು

ಒಳಗೆ,
ಮೌನವೇರಿಸಿಕೊಂಡ ಗೋಡೆಗಳ ನಡುವೆ
ಪಿಸುಗುಡುವ ಏಕಾಂತ
ಆಸೆಗಳು ಹರವಿಕೊಂಡ ನೆಲ, ಕವುಚಿಕೊಂಡ
ಚಾವಣಿಯಡಿಯಲಿ ನಿರ್ಬಂಧ.
ಒಳಗೇ ತಿರುಗಣಿ, ನಿಂತಲ್ಲೇ ಕಾಣುವಷ್ಟೇ ಪ್ರಪಂಚ
ಅದೇ ಗಾಳಿ, ಅದೇ ಉಸಿರು, ಅದೇ ಬಡಿತ
ಭಾವಗಳ ಹುಟ್ಟು ಸಾವು ಕೊಳೆತ

ಹೊರಗೆ,
ಪರದೆ ತೆರೆದರೆ ವಿಸ್ತಾರ ದಿಗಂತ
ಕಣ್ಣು ಹಾಯಿಸಿದೆಲ್ಲೆಡೆ ಚಿತ್ರಕೂಟ
ಮಾಯಕದ ಜೀವ ಜಾಲದ ಬೆರಗು
ಗಿಡ, ಹೂ, ಪ್ರಾಣಿ, ಮನುಷ್ಯ.. ಎಷ್ಟೆಲ್ಲಾ ಸೋಗು
ಅಲ್ಲಿನ ಮೌನಕ್ಕೆ ಇಲ್ಲಿ ಅಸ್ತಿತ್ವವೇ ಇಲ್ಲ
ಆತ್ಮದ ಹಕ್ಕಿಗೆ ಪಂಜರದ ಹಂಗಿಲ್ಲ

ಇಲ್ಲಿ ಮೌನ, ಅಲ್ಲಿ ದಿಬ್ಬಣ
ಇಲ್ಲಿ ಬಂಧನ, ಅಲ್ಲಿ ಮುಕ್ತ
ಹೊರಗಿನ ಬೆಳಕನು ಕೈ ಚಾಚಿ ಸೆಳೆಯಿತು ಒಳಗಿನ ಕೋಣೆ
ಕತ್ತಲು ಎದ್ದು ಪಯಣ ಹೊರಟಿತು..
ಲೀನವಾಗಲು ಅನಂತದತ್ತ
ತೆರೆದು ಮುಚ್ಚುವುದುಷ್ಟೇ ನನ್ನ ಕಾಯಕ
ಇಲ್ಲೇ  ನಾಕ, ಇಲ್ಲೇ ನರಕ

‍ಲೇಖಕರು avadhi

25 September, 2019

2 Comments

  1. Vishnu

    ಚಂದದ ಕವಿತೆ

  2. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading