ಧರಣಿ ಮಂಡಲ ಮಧ್ಯದೊಳಗೆ

ಲಕ್ಷ್ಮಣ್
“ಪಪ್ಪಾ ನನಗೊಂದು ಚಿತ್ರ ಬರೆದುಕೊಡು”
ಎಂದು ಮಗ ರಚ್ಚೆ ಹಿಡಿದಾಗಲೆಲ್ಲಾ ನಾನು ತುಂಬ ಅಸ್ವಸ್ಥನಾಗುತ್ತೇನೆ.
ಚಿತ್ರ ಬರೆಯುದಷ್ಟೇ ಅಲ್ಲ ಅದಕ್ಕೆ ಪೂರಕ ಚಿತ್ರಕತೆಯನ್ನೂ ಹೆಣೆಯಬೇಕು
ರಾಜ, ರಾಣಿ, ಬರೆದರೆ ಅಲ್ಲಿ ಕೋಟೆ ಕೊತ್ತಲು
ಗುಪ್ತ ನಿಧಿ, ಅದನ್ನು ಕಾಯುವ ಏಳು ಹೆಡೆಯ ನಾಗರ.. ಇತ್ಯಾದಿ
ದೇವರಿದ್ದಲ್ಲಿ ಅಸುರರಿಲೇಬೇಕು .ದೇವಲೋಕ,
ಅಮೃತ, ಪುಷ್ಪಕ ವಿಮಾನ.. ಮತ್ತೆ ಅವನು ಕೇಳುವ ಪ್ರಶ್ನೆಗಳೋ..
ಬರೆಯಲು ಅವನ ಚಿತ್ರ ಪುಸ್ತಕದ ಪುಟ ತೆರೆದೆ.
ಅದೊಂದು ರಮ್ಯಲೋಕ
ಬಿಂದುವಿನಿಂದ ಅನಂತ ಆಕಾಶದವರೆಗೆ
ಪೆನ್ಸಿಲ್ ನಲ್ಲೆಳೆದ ಅಡ್ಡಾದಿಡ್ಡಿ ಗೆರೆಗಳು
ಎರಡು ಗುಡ್ಡಗಳ ನಡುವೆ
ಉದಯಿಸುತ್ತಿರುವ ಅಥವ ಅಸ್ತಮಿಸುತ್ತಿರುವ
ಸಿಗ್ನಲ್ ಲೈಟಿನಂತೆ ಕೆಂಡದಂತಿರುವ ಸೂರ್ಯ
ರನ್ ವೇ ಸಿಗದೆ ಎಷ್ಟೋ ದಿನಗಳಿಂದ
ಆಕಾಶದಲ್ಲೇ ಸ್ಟಿಲ್ ಆದಂತೆ ಕಾಣುವ ಲೋಹದ ಹಕ್ಕಿಗಳು
ಅದರ ಕೆಳಗಡೆ
ಒಂದು ಪುಟ್ಟ, ಕಂಪೌಡಿಲ್ಲದ, ಅರ್ಧ ಬಾಗಿಲು
ತೆರೆದಿರುವ ಅಥವ ಮುಚ್ಚಿದ
ಕನಸಿನ ಮನೆ
ಮೇಲೆ ಆಕಾಶದಲ್ಲಿ ಬಣ್ಣ ತುಂಬದೆ
ಖಾಲಿ ಬಿಟ್ಟ ಕಾಮನಬಿಲ್ಲು.
ನನಗೆ ಅಷ್ಟು ಚೆನ್ನಾಗಿ ಚಿತ್ರ ಬಿಡಿಸಲು ಬರುವುದಿಲ್ಲ .ಅಷ್ಟೋ ಇಷ್ಟೋ ಕತೆ ಹೇಳೇನು
ಕಾಲೇಜಿನಲ್ಲಿದ್ದಾಗ
ಸೂಕ್ಷ್ಮ ದರ್ಶಕದಲ್ಲಿ ಕಾಣುವ
ಮನುಷ್ಯನ, ಮೂಳೆ, ಮಾಂಸ, ರಕ್ತ, ವೀರ್ಯಾಣುವಿನ ಜೀವಕೋಶದ ಚಿತ್ರ
ಬಿಡಿಸಿದ್ದೇ ಕೊನೆ.
ಆಗಾಗ ಕನಸಿನಲ್ಲಿ ಬಂದು ಕಾಡುವ ನನ್ನ ಊರು ಆ ಕಾಡು, ಬಯಲು,
ಕಾಡುವ ಅವಳ ಹೊಕ್ಕಳ ತಿರುವು
ಮಾಯಿಯ ಮುಖದ ಸುಕ್ಕುಗಳು.
ಮಾವು, ಬೇಲ, ಆಲ, ಹುಣಸೆ,
ಕೆಳಗೆ ಹಚ್ಚಗಿನ ಹಾವಸೆ
ಹೂವಿಂದ ಹೂವಿಗೆ ಹಾರಿ ದಣಿದ ಚಿಟ್ಟೆ
-ಗಳ ಚಿತ್ರ ಬಿಡಿಸಲು ಹೋದರೆ ಅವು ಆಕಾರ ತಪ್ಪಿ ಏನೇನೋ ಆದಾಗ
ಚಿತ್ರ ಬಿಡಿಸುವ ಸಹವಾಸವೇ ಸಾಕೆಂದು ಬಿಟ್ಟುಬಿಟ್ಟೆ.
ಈಗ ಮಗನಿಗಾಗಿ ಚಿತ್ರ ಬಿಡಿಸಬೇಕು
ಈ ರಾಜ,ರಾಣಿ,ದೇವರು, ದೆವ್ವಗಳಕಾಟ ಸಾಕಾಗಿ
ಮನೆಯ ಮೂಲೆಯಲ್ಲಿ ಕುಳಿತ ಬೆಕ್ಕಿನ ಚಿತ್ರ
ಬಿಡಿಸಲು ಕುಳಿತೆ.
ಏಕೆಂದರೆ
ಅದರ ಕತೆ ಹೇಳುವುದು ಸುಲಭ.
ಬೆಕ್ಕಿನ ಚಿತ್ರ ಬರ ಬರುತ್ತ ಆಕಾರ ತಪ್ಪಿ
ಪಟ್ಟೆ ಪಟ್ಟೆಯ
ಹುಲಿಯಾದಂತೆ ತೋರತೊಡಗಿತು.
ಚಿತ್ರ ದೊಳಗಿನ್ನೊಂದು ವಿ-ಚಿತ್ರ.
ನಾನು ಫಜೀತಿಗೆ ಬಿದ್ದೆ
ಆ ಹುಲಿ ಎಷ್ಟೋ ದಿನಗಳ ಉಪವಾಸದಿಂದಾಗಿ ವ್ಯಘ್ರವಾಗಿ ಗರ್ಜಿಸತೊಡಗಿತು.
ಅದಕೆ ತಕ್ಷಣ ಆಹಾರ ಸಿಗದಿದ್ದರೆ ನಾನು, ನನ್ನ ಮಗ ಅದರ ಬಾಯಿಗೆ ಆಹಾರವಾಗಬೇಕು.
ಇವನು ಏನೂ ಆಗಿಲ್ಲವೆಂಬಂತೆ
ಚಿತ್ರ ದಲ್ಲಿ ಧ್ಯಾನಸ್ಥನಾಗಿದ್ದ
ನನಗೆ ಪುಣ್ಯ ಕೋಟಿಯ ಕರೆಯದೆ ಬೇರೆ ವಿಧಿಯಿರಲಿಲ್ಲ.
ಬನ್ನೇರುಘಟ್ಟ ಸಂರಕ್ಷಿತ ಕಾಡಿನ ಮುಳ್ಳುತಂತಿಯ ಬೇಲಿಗೆ ಗಾಯಗೊಂಡು
ತನ್ನ ಗಾಯವ ತಾನೇ ನೆಕ್ಕುತ್ತ ಕುಳಿತ ಹುಲಿ
ನೋಡಿದ್ದ ನೆನಪಾದ ಇವನಿಗೆ
ಪಪ್ಪಾ ಇದೇನಿದು ?
ಹೌದು ಮಗನೇ ಬೆಕ್ಕು ಹುಲಿಯಾಗಿದೆ
ಹುಲಿ ಹಸಿದಿದೆ ಅದಕ್ಕೆ ತಕ್ಷಣ ಗೋವು ಬೇಕು
ಅದಕ್ಕೆ ಗೋವು ಯಾಕೆ ಬೇಕು?
(ತಕ್ಷಣಕೆ ನನಗೆ ಪುಣ್ಯಕೋಟಿ ಕತೆ ನೆನಪಾಗಿದುದರಿಂದ ನಾನು ಗೋವು ತರುವುದು ಅನಿವಾರ್ಯವಾಯ್ತು)
ಮಗನೇ
ನಮಗೆ ಹಸಿವಾದಾಗ ಕುರಿ, ಕೋಳಿ, ಮೀನು ಮಾಂಸ ತಿನ್ನಲ್ವ?
ಹಾಗೆ.. ಹುಲಿ ಹುಲ್ಲು ತಿನ್ನುವುದಿಲ್ಲ.
ಸದ್ಯ ಪುಣ್ಯಕೋಟಿ ನನ್ನ ಬಚಾವು
ಮಾಡಿತು.. ಕತೆ ಮುಂದುವರೆದಿದೆ.





0 Comments