– ವೈಶಾಲಿ ಹೆಗಡೆ, ಬಾಸ್ಟನ್
ಹೌದು ಪಪ್ಪನ ಮುದ್ದಿನ ಮಕ್ಕಳ ಕತೆಯಿದು. ಅಂದರೆ ನಾಯಿಯೆಂಬ ನಾಯಿಯ ದಶಾವತಾರದ ಕಥೆಯಿದು. ಇದು ಆರಂಭವಾಗಿದ್ದು ನನಗೆ ನೆನಪಿರುವಂತೆ ನಾನು ಸುಮಾರು ಬಾಲವಾಡಿಯಲ್ಲಿದ್ದ ಸಮಯ. ಮನೆಗೆ ಅಮ್ಮನ ಹಣಾಹಣಿ ನಕಾರದ ನಡುವೆಯೂ ಕಾಲಿಟ್ಟವಳು ಬೆಳ್ಳನೆಯ ಜೂಳುಕೂದಲಿನ ರೊಣೆರಾಣಿ ಚಿಮ್ಮಿ. ಚಿಮ್ಮಿ ಸಹಜವಾಗೇ ಪಪ್ಪನ ಬಳಿ ಮುದ್ದುಗರೆಸಿಕೊಳ್ಳುತ್ತ ಬೆಳೆಯತೊಡಗಿದಳು. ಆಗ ತಂಗಿ ಅಂಬೆಹರೆಯುವ ಪಾಪು. ಮನೆಯಲ್ಲೆಲ್ಲ ರೊಣೆ ಉದುರಿಸುವ ನಾಯಿ, ಜೊತೆಗೆ ಅದರಷ್ಟೇ ಗಾತ್ರದ ಕಂಡದ್ದ ಹೆಕ್ಕಿ ತಿನ್ನುವ ಮಗಳು. ಅಮ್ಮ ಕೊನಗೂ ಒಂದು ದಿನ ಪಪ್ಪನಿಗೆ ಅಲ್ಟಿಮೇಟಂ ಕೊಟ್ಟೆ ಬಿಟ್ಟಳು. ಪಪ್ಪಾ ಭಾರದ ಹೃದಯದಿಂದ ಚಿಮ್ಮಿಯನ್ನು ಊರಲ್ಲಿ ಚಿಕ್ಕಪ್ಪನ ಬಳಿ ಬಿಟ್ಟು ಬಂದ. ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗೆಲ್ಲ ಚಿಮ್ಮಿ ನಮ್ಮನ್ನು ನೋಡಿದ ತಕ್ಷಣ ಪಪ್ಪನನ್ನು ಹುಡುಕುತ್ತಿತ್ತು. ಆದರೆ ಚಿಕ್ಕಪ್ಪನೂ ನಾಯಿಪ್ರಿಯನೆ ಆದ್ದರಿಂದ ಮುದ್ದಿಗೇನೂ ಕಡಿಮೆಯಾಗಿರದೆ ಮುದುಕಿಯಾಗಿ ಮರೆಯಾಯಿತು. ಆಗ ನಾವು ಬಾಡಿಗೆ ಮನೆಯಲ್ಲಿದ್ದ ಸಮಯ. ಮನೆಯೂ ಚಿಕ್ಕದು, ಊರಿನ ನಡುವೆ ಬೇರೆ. ಈಗಾಗಲೇ ನಡೆದ ನಾಯಿಪ್ರಸಂಗದಿಂದಾಗಿ ಪಪ್ಪಾ ಮತ್ತೊಮ್ಮೆ ಆ ಮನೆಯಲ್ಲಿ ನಾಯಿ ಸಾಕುವ ಧೈರ್ಯವಹಿಸಲಿಲ್ಲ.

ಅದಾಗಿ ಸುಮಾರು ವರ್ಷಗಳ ಮೇಲೆ ಸ್ವಂತ ಮನೆಕಟ್ಟಿಸಿಕೊಂಡು ಮನೆ ಬದಲಾಯಿಸಿದ ಮೇಲೆ ಮಾಡಿದ ಮೊದಲ ಕೆಲಸ ಎಂದರೆ ಮನೆಗೆ ಬರಮಾಡಿಕೊಂಡ ಡಾಬರ್ಮನ್ ನಾಯಿ. ಆಗ ಟಿ. ಏನ್. ಶೇಷನ್ ಇಲೆಕ್ಷನ್ ಕಮೀಷನರ್ ಆಗಿದ್ದ ಕಾಲ. ದೇಶದ ಕಾವಲಿಗಿದ್ದ ಶೇಷನ್ ನಂತೆ ಈ ಕೆಚ್ಚೆದೆಯ ಬಂಟ ಎನ್ನುತ್ತಾ ನಮ್ಮನೆ ನಾಯಿ ಶೇಷನ್ ಎಂದು ನಾಮಾಂಕಿತಗೊಂಡಿತು. ಶೇಷನ್ ನಿಜಕ್ಕೂ ಹೆಸರಿಗೆ ತಕ್ಕಂತಿದ್ದ. ಎಂತ ಭಯಂಕರ ಬೊಗಳುತ್ತಿದ್ದ ಎಂದರೆ, ರಾತ್ರಿ ಹೊತ್ತಿನಲ್ಲಿ ಬರುತ್ತಿದ್ದ ಪೇಶೆಂಟುಗಳು ಕೂಡ ಗೇಟಿನಾಚೆ ನಿಂತು ಡಾಕ್ತ್ರೆ ಡಾಕ್ತ್ರೆ ಎಂದು ಊರೆಲ್ಲ ಕೇಳುವಂತೆ ಅರಚಿಕೊಳ್ಳುತ್ತಿದ್ದರು. ಡಾಕ್ತರಾಗಿ ನೀವು ಇಂತ ಭಯಂಕರ ನಾಯಿ ಸಾಕಬೇಡಿ ಎಂದೆಲ್ಲ ಅಲವತ್ತುಕೊಳ್ಳುತ್ತಿದ್ದರು. ಪಪ್ಪಾ ಪೇಶೆಂಟುಗಳ ಪ್ಲೀಡಿಂಗ್, ಪೀಡಿಸಿಂಗಿಗೆ ಮಣಿದು ಮತ್ತೆ ಚಿಕ್ಕಪ್ಪನ ಅಡಿಕೆ ತೋಟದ ಕಾವಲಿಗೆ ಶೇಷನ್ನನ್ನು ಬಿಟ್ಟು ಬಂದ. ಆಗ ಪಪ್ಪನ ಸಂಕಟ ಹೇಳತೀರದು. ಯಾಕೆಂದರೆ ಇದೆ ಸಮಯಕ್ಕೆ ಅವನ ನಾಯೀಸ್ಥಾನದ ವಂಶವಾಹಿನಿಯ ಗುಣ ವಿಶೇಷಗಳನೆಲ್ಲ ಹಿಂಡಿತೆಗೆದು ದಾಟಿಸಿದಂತೆ ಹುಟ್ಟಿದ ಕಿರಿಯ ತಂಗಿಯು ಇನ್ನಿಲ್ಲದ ನಾಯಿ ಪ್ರೀತಿಯಲ್ಲಿ ಬೆಳೆಯುತ್ತಿದ್ದಳು. ಶೇಷನ್ ಹೋದ ಮೇಲೆ ಅವಳ ಹಟವೂ ಹೆಚ್ಚಾಯಿತು. ಮೊದಲ ಮಕ್ಕಳಿಬ್ಬರಿಗೂ ಬರದ ಅದಮ್ಯ ನಾಯಿಪ್ರೀತಿ ಕೊನೆಗೊಬ್ಬಳಲ್ಲಾದರೂ ಬಂತಲ್ಲ ಎಂದು ಪಪ್ಪನಿಗೆ ಒಳಗೊಳಗೇ ಆನಂದ. ಇಂಥ ನಾಯಿ ನಿರ್ವಾತದ ಸಮಯದಲ್ಲಿ, “ಕರಾವಳಿ ಮುಂಜಾವು” ಪತ್ರಿಕೆಯಲ್ಲಿ ಬಂದ ಜಾಹೀರತೊಂದನ್ನು ನೋಡಿ, ಪಪ್ಪಾ, ಮಗಳು ಕಾರವಾರಕ್ಕೆ ಹೋಗಿ ಅಪ್ಪಿಕೊಂಡು ಬಂದರು ಚಿಮ್ಮಿಯಂತದ್ದೆ ಸುಂದರಿಯೊಂದನ್ನು. ಆಹಾ ಬಿಳಿಬೆಣ್ಣೆಮುದ್ದೆಯ ಆ ಕೆಂಪು ಕಣ್ಣಿನ ಅಂದಕ್ಕೆ ಅವಳನ್ನು ರೂಬಿಯೆಂದು ನಾಮಕರಣ ಮಾಡಿದ್ದು. ರೂಬಿ ಮನೆಯವಳಾಗಿ ಮೆರೆದು, ತಂಗಿಯಿಂದಲೂ ಸಿಕ್ಕಾಪಟ್ಟೆ ಸೇವೆ ಮಾಡಿಸಿಕೊಂಡಳು. ಕೆಲವರ್ಷಗಳಲ್ಲೇ ಮಿದುಳುಜ್ವರಕ್ಕೆ ತುತ್ತಾಗಿ ಕೊನೆಯುಸಿರೆಳೆದಳು.
ಈ ಹೊತ್ತಿನಲ್ಲೇ, ತಂಗಿಯನ್ನು ಶಾಲೆಯಿಂದ ಬಂದ ಮೇಲೆ ನೋಡಿಕೊಳಲು ಮನೆಗೆ ಹೊಸ ಹಾಲಕ್ಕಿ ಹುಡುಗಿಯೊಬ್ಬಳು ಬರುತ್ತಿದ್ದಳು. ಅವಳೋ ಕೇರಿಯಲ್ಲಿ ಬಿದ್ದುಕೊಂಡಿದ್ದ ನಾಯಿಯೊಂದಕೆ ಆಗಾಗ ರೊಟ್ಟಿ, ಅಂಬಲಿ ತಿನ್ನಿಸಿದ ಕಾರಣ ಅದು ಈಕೆ ಹೋದಲ್ಲಿ ಹಿಂಬಾಲಿಸಿಕೊಂಡು ಬೀದಿಯಲ್ಲೆಲ್ಲೋ ಮಲಗಿ ಎದ್ದು ಅಡ್ಡಾಡಿಕೊಂಡಿತ್ತು. ಅಂತೆಯೇ ದಿನವೂ ಕೆಲ್ಸಕ್ಕೆ ಬರುತ್ತಿದ್ದ ಇವಳನ್ನು ಹಿಂಬಾಲಿಸಿಕೊಂಡು ನಮ್ಮನೆಗೆ ಬಂದು ಅಪ್ಪ ಮಗಳ ಪ್ರೀತಿಯನ್ನುಂಡು, ಅಮ್ಮನ ಕೈಲಿ ಒಂದಿಷ್ಟು ಹಚ ಹುಚಾ ಎನ್ನಿಸಿಕೊಂಡು ಸಂಜೆ ಆಕೆಯೊಂದಿಗೆ ಹಿಂದಿರುಗುತ್ತಿತ್ತು. ಒಂದಿನ ಹೀಗೆ ಬೆಳಿಗ್ಗೆ ಬಂದ ಶ್ವಾನಮಹಾಶಯ ಸಂಜೆ ಆ ಹುಡುಗಿಯನ್ನು ಹಿಂಬಾಲಿಸಲೇ ಇಲ್ಲ. ಅಂತ ಶಕ್ತಿ ನಮ್ಮಪ್ಪನ ನಾಯಿಪ್ರೀತಿಯದು. ಹಾಗೆ ಮನೆಗೆ ಬಂದವ ವಿಶ್ವ. ಅವಾ ಡಾಬರ್ಮನ್ ಮತ್ತು ಬೀದಿನಾಯಿಯ ಕ್ರಾಸ್ ಬ್ರೀಡ್ ಆಗಿದ್ದ. ಹಾಗಾಗಿ ಕಪ್ಪು ಬಿಳುಪಿನ ಸುಂದರನೂ, ಅಷ್ಟೇ ಉಡಾಳನೂ, ಬೊಗಳುವಿಕೆಯಲ್ಲಿ ಅಸಾಮಾನ್ಯನೂ ಆಗಿದ್ದ. ಆಗ ನಮ್ಮ ಹೊಸಮನೆ ಹಳತಾಗಿ ಮನೆಸುತ್ತ ನೆಟ್ಟಿದ್ದ ಪುಟ್ಟ ತೆಂಗಿನ ಸಸಿಗಳು ಮರವಾಗಿ ಕಾಯಿಬಿಡತೊಡಗಿದ್ದ ಸಮಯ. ವಿಶ್ವ ಹೆಸರಿಗೆ ತಕ್ಕಂತೆ ಕಾಯಿಕಳ್ಳರಿಗೆ ವಿಶ್ವದರ್ಶನ ಮಾಡಿಸುತ್ತಿದ್ದ. ಒದರಿ ಹೋರಾಡಿ ಕೊನೆಗೊಮ್ಮೆ ಅಂತರ್ಧಾನವಾಗಿ ಹೋದ. ಯಾವ ಪಾಪಿಗಳ ಕರಾಮತ್ತೋ, ರಾತ್ರಿ ಬೆಳಗಾಗುವುದರೊಳಗೆ ವಿಶ್ವನ ಕಳ್ಳತನವಾಗಿ ಹೋಗಿತ್ತು.
ನಾಯಿಗಳ ಮುಗಿಯದ ನಂಟು, ಎಲ್ಲ ಮೋಹ ಕೊನೆಗೆ ಸಂಕಟದ ಕೂಪೆಯಾಗಿ ಕೊನೆಗೊಳ್ಳುವ ಬಗೆಬಗೆಯ ಪರಿ. ಒಬ್ಬನೇ ಅನುಭವಿಸುತ್ತಿದ್ದ ಉರಿಗೆ ಈಗ ತಂಗಿ ಬೇರೆ ಸೇರಿ ನಾಯಿಪಾಶದ ವೇದನೆ ದುಪ್ಪಟ್ಟು. ಅಮ್ಮ ಬಾಯಲ್ಲಿ ಬೈದರೂ ಸಕಲ ಸೇವೆ ಮಾಡಿ ಹಚ್ಚಿಕೊಂಡುಬಿಡುತ್ತಿದ್ದ ಜೀವ. ಅಮ್ಮ, ನೀವು ನಾಯಿ ಸಾಕುವುದೂ ಬೇಡ ಆಮೇಲೆ ಮನಸ್ಸು ಮುರಿದುಕೊಳ್ಳುವುದೂ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಳು.
ಪಪ್ಪನೇನೋ ತಾಳಹಾಕಿದ . ಪಪ್ಪನ ಮಗಳೆಲ್ಲಿ ಕೇಳಬೇಕು. ಶಾಲೆಯಿಂದ ಬಂದ ಮೇಲೆ ಒಂದಿನ ಕಂಡ,ಚರಂಡಿಯಲ್ಲಿದ್ದ ಎರಡು ಮರಿಗಳಿಗೆ ಕುರ್ಕುರ್ ಕುರ ಎಂದು ಕರೆದು ಅಲ್ಲೇ ಹೋಗಿ ತಿಂಡಿ ಎಸೆಯುತ್ತಿದ್ದಳು. ಅದು ಆಗ ಅಮ್ಮ ಕೆಲಸದಲ್ಲಿರುತ್ತಿದ್ದ ಸಮಯ. ಅಲ್ಲೇ ಆಡಿಕೊಂಡಿರುವ ಮರಿಗಳು, ಅಮ್ಮನ ಕೈನೆಟಿಕ್ ಸದ್ದು ಭರ್ರ್ ಎಂದು ಕೇಳಿದ ತಕ್ಷಣ ಗೇಟಿನಾಚೆ ಮತ್ತೆ ಚರಂಡಿಯಲ್ಲಿ. ಬಹುದಿನಗಳವರೆಗೆ ಮುಂದುವರಿದ ಈ ಕುರ್ರ್ ತಿಂಡಿ ಆಟ ಕೊನೆಗೆ ಅಧಿಕೃತವಾಗಿ ಬದಲಾಗಿ ಅವು ಕುರುರ್ ಎಂದು ಕರೆದಾಗ ಅಂಗಳಕ್ಕೆ ಬರುವ “ಕಾರು” ‘ಜೀಪು” ಗಳೆಂಬ ನಾಯಿಗಳಾಗಿ ನನ್ನಂತೆ ನಾಯಿಮೋಹ ಸಂಘದ ಪ್ರೇಕ್ಷಕರಷ್ಟೇ ಆಗಿದ್ದ ನನ್ನ ಮತ್ತೊಬ್ಬ ತಂಗಿಯಿಂದನಾಮಕರಣಗೊಂಡವು. ಇವು ಅಪ್ಪಟ, ಟೋಟಲ್ ಬೀದಿ ನಾಯಿಗಳ ಜಾತಿ. ಎಲ್ಲೆಲ್ಲೋ ಗಲಾಟೆ ಮಾಡಿಕೊಂಡು ಬಂದು ನಮ್ಮ ಶೆಡ್ಡಿನಲ್ಲಿ ಅಡಗಿಕೊಳ್ಳುತ್ತಿದ್ದವು.ಹೊಡೆದಾಡಿ ಮೈಯೆಲ್ಲಾ ರಕ್ತಸಿಕ್ತವಾಗಿಸ್ಕೊಂಡು ತಂಗಿ, ಪಪ್ಪನಿಂದ ಶುಶ್ರೂಷೆ ಮಾಡಿಸಿಕೊಂಡು ಬೈಯಿಸಿಕೊಳ್ಳುತ್ತಿದ್ದವು, ಮತ್ತೆ ಕಣ್ಣು ತಪ್ಪಿಸಿ, ಮನೆ ಬಿಟ್ಟು ಓಡುತ್ತಿದ್ದವು. ಒಮ್ಮೆ ಹೀಗೆಯೇ ಬೀದಿಸುತ್ತಲು ಹೋದ “ಕಾರು, ಜೀಪು”, ಮುನಿಸಿಪಾಲಿಟಿಯವರ ವಿಷಪ್ರಾಶನಕ್ಕೆ ತುತ್ತಾಗಿ ಬಂದು ನಮ್ಮ ಶೆಡ್ಡಿನಲ್ಲೇ ಪ್ರಾಣಬಿಟ್ಟವು. ಪುಣ್ಯಕ್ಕೆ ಈ ವಿಚಿತ್ರ ನಾಯಿಪ್ರೇಮದ ಘಟ್ಟದ ಕೆಲವು ಝಲಕ್ ಗಳಷ್ಟೇ ನನಗೆ ಲಭ್ಯವಾಗಿದ್ದು ಆಗ ನಾನು ಮನೆಯಿಂದ ದೂರ ಕಾಲೇಜಿನಲ್ಲಿದ್ದ ಕಾರಣದಿಂದ.
ಮುಂದಿನ ಆಗಮನ ಈ ನಾಯಿ ಅವತಾರ ಪುರಾಣದ ಪ್ರಮುಖ ಘಟ್ಟ. ಮತ್ತೊಮ್ಮೆ ಮೂಲಕ್ಕೆ ಮರಳು ಎಂಬಂತೆ ಪಪ್ಪ ಸ್ನೇಹಿತರೊಬ್ಬರ ಮನೆಯಿಂದ ಪುಟ್ಟ ಪಮೇರಿಯನ್ ಮರಿ ತಂದು ಅದೇ ಆ ಚಿಮ್ಮಿಯನ್ತಿದ್ದ ಬಿಳಿ ಮರಿಗೆ ಚಿಮ್ಮಿ ಎಂದೇ ಕರೆದ. ಅದು ಬೆಳೆಯುತ್ತ ಬೆಳೆಯುತ್ತ ಭಾರೀ ಡೌಲು ಹಾರಿಸುತ್ತ ಮನೆಯೆಲ್ಲ ಅಡ್ಡಾಡಿಕೊಂಡು ಅಂದಗಾತಿಯಾಗುತ್ತಿರುವಾಗ, ಆಕೆಗೊಬ್ಬ ಗಂಡನ ತರುವೆನಯ್ಯಾ ಎನ್ನುತ್ತಾ ಊರು ಬಿಟ್ಟು ಹೊರಟಿದ್ದ ಸ್ನೇಹಿತರೊಬ್ಬರ ಮನೆಯಿಂದ ಕಪ್ಪು ಬಿಳಿ ಮಿಶ್ರಿತ ಬೂದು ಬಣ್ಣದ ಪಮೇರಿಯನ್ “ಮೋನು” ವನ್ನು ಪಪ್ಪ ಮನೆ ಅಳಿಯನನ್ನಾಗಿಸಿಕೊಂಡ. ಆ ಮೋನುವಿಗೆ ಚಿಮ್ಮಿಯನ್ನು ಕಂಡಾಗಲೇ “ಲವ್ ಅಟ್ ಫಸ್ಟ್ ಸೈಟ್”. ಈ ಚಿಮ್ಮಿ ಜಂಬ ಹಾರಿಸಿ ಕುಂಡೆ ಕುಣಿಸಿ ಅವನನ್ನು ಆಡಿಸಿದ್ದೇ ಆಡಿಸಿದ್ದು, ಆದರೆ ಒಮ್ಮೆ ಕೂಡ ಮೂಸಲೂ ಬಿಡಲಿಲ್ಲ. ಇವನೋ ಆರಾಧಿಸುವುದನ್ನು ಬಿಡಲಿಲ್ಲ. ಒಟ್ಟಿಗೆ ಎಷ್ಟೊಂದು ವರುಷ ಇದ್ದರು ಅವರಿಬ್ಬರೂ. ಒಂದು ದಿನ ಕೂಡ ಚಿಮ್ಮಿ ಊಟ ಮಾಡದೆ ಮೋನು ಆಹಾರ ಮುಟ್ಟುತ್ತಿರಲಿಲ್ಲ. ಅವಳೋ, “ಲೆಟ್ಸ್ ಬಿ ಗುಡ್ ಫ್ರೆಂಡ್ಸ್ ಓಕೆ” ಎಂಬಂತೆ ಇದ್ದಿದ್ದಳು. ಇವ ಒಂದಿನ ಅವಳ ಮನ ಬದಲಾಗಬಹುದು ಎಂಬ ಆಸೆಯಲ್ಲಿದ್ದ. ೮ ವರ್ಷಗಳ ಕಾಲ ನಿರಂತರ ಭಗ್ನವಾಗಿ ಪ್ರೇಮಿಸಿದ ಮೋನುವಂತ ದೇವದಾಸನನ್ನೇ ಕಾಣೆ ನಾ.

ಚಿಮ್ಮಿ ಒಂದು ಬಗೆಯ ರಾಜಕುಮಾರಿಯ ಗತ್ತಿನಲ್ಲೇ ಆಡಿದವಳು ಕೂಡ. ಮನೆಯಲ್ಲಿದ್ದ ಬೆಕ್ಕು “ಚುಕ್ಕಿ” ಮತ್ತು ಎಲ್ಲೆಂದೆರಲ್ಲಿ ಹಾರಿಕೊಂಡಿದ್ದ “ದುಷ್ಯಂತ” ಎಂಬ ನವಿಲು, ಚಿಮ್ಮಿಯ ಜೊತೆ ಆಟಕ್ಕೆಂದೇ ಕಾದುಕೊಂಡಿರುತ್ತಿದ್ದವು. ಬೆಕ್ಕಿನ ಜೊತೆ ಕೂಡ ಒಟ್ಟಿಗೆ ಆಡುವ ನಾಜೂಕು, ಹೊಂದಾಣಿಕೆ ಚಿಮ್ಮಿಯಲ್ಲಿತ್ತು. ೨೦೦೭ರಲ್ಲಿ ನನ್ನ ಬಾಣಂತನಕ್ಕೆಂದು ಪಪ್ಪಾ ಅಮ್ಮ ಅಮೆರಿಕೆಗೆ ಬರುವ ತಯಾರಿ ನಡೆಸಿದ್ದ ಸಮಯ. ಚಿಮ್ಮಿ ಎರಡು ಬೀದಿಯಾಚೆಗಿನ ಬಲಿಬಲಿಷ್ಠನೋಬ್ಬನ ಪ್ರೇಮಕ್ಕೆ ಸಿಕ್ಕಿ ಬಿದ್ದಿದ್ದಳು. ಅವರಿಬ್ಬರೂ ಕದ್ದು ಭೇಟಿಯಾಗುತ್ತಿದ್ದರು. ಆಕೆ ರಸ್ತೆ ದಾಟದಂತೆ ಪಪ್ಪಾ ಬಹಳ ಎಚ್ಚರವಹಿಸುತ್ತಿದ್ದ. ಪ್ರೇಮ ಕುರುಡು. . ಅಮ್ಮ ಗಾಢನಿದ್ದೆಯಲ್ಲಿದ್ದ,ಬೆಳಕಿನ್ನೂ ಹರಿಯದ ಹೊತ್ತು. ನಸುಕಿನಲ್ಲಿ ವಾಕಿಂಗ್ ಹೊರಟ ಪಪ್ಪಾ ಒಮ್ಮೆ ಅರೆಕ್ಷಣ ಗೇಟು ತೆರೆದಿಟ್ಟ ಸಮಯ ನೋಡಿ ಧಾವಿಸಿದ ಚಿಮ್ಮಿ ಟೆಂಪೋವೊಂದರ ಗಾಲಿಗೆ ಸಿಕ್ಕಿಹೋದಳು. ಪಪ್ಪನನ್ನು ಕಾಣದ ಮೋನು ಪಕ್ಕದ ಮನೆಯಲ್ಲಿ ಎಚ್ಚರವಿದ್ದ ದೊಡ್ಡಮ್ಮನನ್ನು ಸೀರೆ ಜಗ್ಗುತ್ತ ರಸ್ತೆಗೆ ಎಳೆತಂದ. ಆದರೆ ಚಿಮ್ಮಿಯನ್ನು ಮುಟ್ಟಗೊಡಲಿಲ್ಲ. ದೊಡ್ಡಮ್ಮ ಅಮ್ಮನನ್ನು ಕರೆತಂದಾಯಿತು. ಅಮ್ಮನಿಗೂ ಚಿಮ್ಮಿಯನ್ನು ಮುಟ್ಟಲು ಮೋನು ಬಿಡಲಿಲ್ಲ. ರಸ್ತೆಯ ನಡುವೆ ಮೋನು, ಅಮ್ಮ, ದೊಡ್ಡಮ್ಮ ಚಿಮ್ಮಿಯ ಸುತ್ತ ಗೋಡೆ ಕಟ್ಟಿ ನಿಂತರು. ಪಪ್ಪನಿಗೆ ಯಾರೋ ಸುದ್ದಿಮುಟ್ಟಿಸಿ ಧಾವಿಸಿ ಬಂದ. ಕೊನೆಗೆ ಪಪ್ಪನಿಗೆ ಮಾತ್ರ ಚಿಮ್ಮಿಯನ್ನು ಎತ್ತಲು ಹ್ನೂ ಎಂದ ಮೋನು. ಮನೆಗೆ ಪೋನ್ ಮಾಡಿದರೂ ಮೋನು ನಿರಂತರ ಅಳುವುದು ಕೇಳಿಸುತ್ತಿತ್ತು. ಇಂಥಾ ಸಂಕಟದ ಹೊತ್ತಲ್ಲೇ, ಮೊನುವನ್ನು ಬಿಟ್ಟು ಅಮೆರಿಕೆಗೆ ಬರಬೇಕಾದ ಅನಿವಾರ್ಯತೆ. ಪಪ್ಪ ಅಮ್ಮ ಹೊರಟ ದಿನ ದಿನವಿಡೀ ಅತ್ತು ಸುಸ್ತಾದ ಮೋನು ಮೌನಿಯಾದ. ಪಪ್ಪನ ಪರಿಪರಿಯ ಪ್ರೀತಿಗೂ ಅವನ ಹೃದಯ ತಣಿಯಲಿಲ್ಲ. ಚಿಮ್ಮಿ ಉಣ್ಣದೇ ಉಂಡು ರೂಡಿಯಿಲ್ಲದ ಮೋನು ಸತತ ಕಣ್ಣೀರು ಸುರಿಸಿ ಅನ್ನ ನೀರು ಮುಟ್ಟದೆ ಒಂದು ವಾರ ಕಾಲ ಉಪವಾಸ ಕೈಗೊಂಡ. ಬೆಂಗಳೂರಿನಿಂದ ಧಾವಿಸಿ ಬಂದಳು ತಂಗಿ. ಪಪ್ಪ ಅಮ್ಮ ಚಿಮ್ಮಿ ಯಾರೂ ಇಲ್ಲದೆ ಒಬ್ಬಂಟಿಯಾದ ಮೋನು ತಂಗಿಯ ಕೈಯಲ್ಲಿ ಒಂದು ತುತ್ತು ತಿಂದು ಕಣ್ಮುಚ್ಚಿದವ ಮತ್ತೆ ಕಣ್ಬಿಡಲಿಲ್ಲ. ಅದಾಗಿಒಂದೆರಡು ದಿನಗಳಲ್ಲೇ ಪಪ್ಪನ ಕೈಯಲ್ಲಿದ್ದ ನವಜಾತ ಶಿಶು ಈಗ ದಿನವೂ “ನಾಯಿಮರಿ ನಾಯಿಮರಿ ನನಗೆ ಬೇಕು, ದೊಡ್ಡದೇನು ಬೇಡ ಪುಟ್ಟದೊಂದು ಸಾಕು’ ಎಂದು ಸದಾ ನನ್ನನ್ನು ಪೀಡಿಸುತಿರುವ.
ಅಮೆರಿಕೆಯಲ್ಲಿ ಪಪ್ಪ ಅಮ್ಮನಿಗೆ ಮೊನುವಿನ ಮರಣದ ಸುದ್ದಿಯನ್ನು ಕೂಡ ದೊಡ್ಡಮ್ಮ, ತಂಗಿ ಬಹುದಿನಗಳವರೆಗೆ ತಿಳಿಸಲಿಲ್ಲ. ಅದೊಂದು ಬಗೆಯ ಯಾತನಾಮಯ ಸಂದರ್ಭ. ಇಲ್ಲಿರುವಷ್ಟು ದಿನವೂ ಪಪ್ಪನ ಸುದ್ದಿಯಲ್ಲಿ ಮೋನುವಿನ ಅದಮ್ಯ ಪ್ರೀತಿಯ ಬಗೆಯ ಬೆರಗು ನಿತ್ಯಜಪದಂತೆಬಂದು ಹೋಗುತ್ತಿತ್ತು. ಇನ್ನೂ ಪಪ್ಪನಿಗೆ ಮೊನುವನ್ನು ಕೊನೆಗಳಿಗೆಯಲ್ಲಿ ಬಿಟ್ಟುಬಂದ ಯಾತನೆ ಆಗಾಗ ಕಾಡುತ್ತೆ. ಹಿಂತಿರುಗಿ ಹೋದ ಪಪ್ಪಾ,ಚಿಮ್ಮಿಯ ಪ್ರೇಮಪ್ರಕರಣದ ದುರ್ಮರಣ, ಮೋನುವಿನ ನಿರಶನ ಪ್ರಾಣತ್ಯಾಗದ ಆಘಾತದಿಂದ ಬಹಳ ಅಂತರ್ಮುಖಿಯಾದ. ಮಕ್ಕಳ್ಯಾರೂ ಇಲ್ಲದ ಖಾಲಿ ಮನೆ, ದೂರತೀರದಲ್ಲಿ ಬಿಟ್ಟುಬಂದ ಮೊಮ್ಮಕ್ಕಳು, ಚಿಮ್ಮಿ ಮೋನುವಿನ ಖಾಲಿಗೂಡು. ಪಪ್ಪನ ಖಾಲಿತನದಿಂದ ಹೊರತರುವ ಉಪಾಯವಾಗಿ ಬೆಂಗಳೂರಿನಲ್ಲಿ ಓದುತ್ತಿದ್ದ ನಾಯಿಗೆರೆಯ ಕಿರಿಯ ತಂಗಿ , ಲ್ಯಾಬ್ರಡಾರ್ ಮರಿಯೊಂದನ್ನು ಕೈಲಿ ಹಿಡಿದು ಚೌತಿಹಬ್ಬಕ್ಕೆಂದು ಬಸ್ಸಲ್ಲಿ ಮನೆಗೆ ಬಂದಿಳಿದಳು.
ಅದೇ “ದುಂಬಿ”. ಈಗ ಮನೆಯಲ್ಲಿ ನಾವ್ಯಾರೂ ಇಲ್ಲದ ನಿರ್ವಾತವನ್ನು ಗುಡುಗುಮ್ಮಿ ಡುಮ್ಮಿಯಾಗಿ ಮನೆತುಂಬಿಕೊಂಡಿರುವ ದುಂಬಿ. ಆಹಾ ಈ ದುಂಬಿಯ ಸಂಭ್ರಮವೋ ಸಂಭ್ರಮ. ಅದನ್ನು ದಿನವೂ ಪಪ್ಪಾ ವಾಕಿಂಗ್ ಕರೆದೊಯ್ಯುತ್ತಾರೆ. ಆ ಅಂದ ನೋಡಬೇಕು. ಬೆಳಗ್ಗೆ ದುಂಬಿ ಬಂದು ಮೂತಿ ನೆಕ್ಕಿ ಎಬ್ಬಿಸಿ ಪಪ್ಪಾ ಫ್ರೆಶ್ ಆಗಿ ಬಂದ ಮೇಲೆ ಪಪ್ಪನ ಹ್ಯಾಟ್ ಮತ್ತು ಕೂಲಿಂಗ್ ಗ್ಲಾಸ್ ಒಂದನ್ನು ಕಚ್ಚಿಹಿಡಿದು ಬರುವ ಸುಂದರಿ. ಪಪ್ಪಾ ಹ್ಯಾಟ್ ಏರಿಸಿ ಆ ಕೂಲಿಂಗ್ ಗ್ಲಾಸ್ ಊಹ್ನೂ ,, ತನಗಲ್ಲ, ಅವಳ ಮೂತಿಗೇರಿಸುತ್ತಾರೆ. ಆ ಕೂಲಿಂಗ್ ಗ್ಲಾಸಿಗೆ ಆಕೆಯ ಮೂತಿಗೆ ಸರಿಹೊಂದುವಂತೆ ತಾನೇ ಎಲಾಸ್ಟಿಕ್ ಜೋಡಿಸಿ ಮಾಡಿಟ್ಟಿಕೊಂಡಿದ್ದಾರೆ. ಪಪ್ಪನ ಪ್ರಕಾರ ನಾಜೂಕು ನಾರಿ ದುಂಬಿಗೆ ಬಿಸಿಲಿನಿಂದ ಕಷ್ಟವಾಗುತ್ತಂತೆ. ಅವಳು ಪಪ್ಪನ ಹಿಂದೆ ಮುಂದೆ ಅಕ್ಕ ಪಕ್ಕ ಜಂಬದ ಜಾಣೆ ಹೊರಡುತ್ತೆ ಸವಾರಿ.
ಓಲಾಡಿಕೊಂಡು ಹಿಂದಿನ ಹಳ್ಳಿ ದಾರಿಗಳಲ್ಲಿ ಎಲ್ಲರನ್ನೂ ಮಾತನಾಡಿಸ್ಕೊಂಡು ಚಪ್ಪಾಳೆ ಹೊಡೆಸಿಕೊಂಡು ಬರುತ್ತೆ ಇವರ ಪಲ್ಲಕ್ಕಿ ಉತ್ಸವ. ಈಗಂತೂ ಪಪ್ಪಾ ಅಮ್ಮ ಇಬ್ಬರೇ, ಆಹಾರಕ್ರಮ ಎಂದೆಲ್ಲ ತೀರ ತುಪ್ಪ ತಿನ್ನುವ ರೂಡಿಯಿಲ್ಲ. ಆದರೂ ಮನೆಯಲ್ಲಿ ಒಂದು ದಿನವೂ ತುಪ್ಪದ ಭರಣಿ ಖಾಲಿ ಇದ್ದ ದಾಖಲೆಯಿಲ್ಲ. ಯಾಕೆಂದರೆ ಹೀರೋಯಿನ್ ದುಂಬಿ ತುಪ್ಪ ಹಚ್ಚಿಕೊಡದೆ ದೋಸೆ, ರೊಟ್ಟಿ ತಿನ್ನುವುದಿಲ್ಲ. ದಿನವೂ ಬೆಳಿಗ್ಗೆ ವಾಕಿಂಗ್ ಹೊರಡುವ ಮೊದಲು ನಾಯಿಬಿಸ್ಕತ್ತುಗಳು, ಒಂದು ಮಿತ್ಕಾ ಬಾಳೆಹಣ್ಣು ಮತ್ತು ಎರಡು ಖರ್ಜೂರ ತಿನ್ನುತ್ತೆ. ಇದು ನಿತ್ಯದ ರೂಢಿ. ಊರಲ್ಲಿ ಎಲ್ಲಿ ಖರ್ಜೂರ ಸಿಗದಿದ್ದರೂ ಪಪ್ಪನ ದುಂಬಿಗಾಗಿ ಖರ್ಜೂರ ತರಿಸಿಕೊಡುವವನೋಬ್ಬನಿದ್ದಾನೆ ನಮ್ಮೂರಲ್ಲಿ. ಅಪರೂಪಕ್ಕೆ ಬಹುಮಾನ ಎಂದು ಗೇರುಬೀಜ, ಪಿಸ್ತಾ, ಬಾದಂ ಸಮಾರಾಧನೆ ಕೂಡ ಕದ್ದು ಮುಚ್ಚಿ ನಡೆಯುತ್ತೆ. ಚಾಕಲೇಟ್ ತಿನ್ನಿಸಬಾರದಲ್ಲ ನಾಯಿಗೆ, ಅದು ಒಳ್ಳೆಯದಲ್ಲ ಎಂಬ ಕಾರಣಕ್ಕೆ ಪಪ್ಪನಿಗೇ ಬೇಜಾರು. ದುಂಬಿಯ ಅಪರೂಪದ ಅಯಿಸ್ಕ್ರೀಂ ಔಟಿಂಗ್ ನೋಡಬೇಕು ನೀವು. ಕಾರಿನಿಂದಿಳಿದು ಪಾರ್ಲರಿನ ಬಾಗಿಲಲ್ಲಿ ಶಿಸ್ತಾಗಿ ಕೂತುಕೊಳ್ಳುತ್ತೆ. ಸ್ಟೈಲ್ ಆಗಿ ವೆನಿಲಾ ಅಯಿಸ್ಕ್ರೀಂ ತಿಂದು ವಾಪಸ್ ಹೋಗಿ ಕಾರಿನಲ್ಲಿ ಕೂತುಕೊಳ್ಳುತ್ತೆ.
ಹಾಗೆ ನೋಡಿದರೆ ಎಲ್ಲ ನಾಯಿಗಳಿಗೂ ಪಪ್ಪಾ ಮಾಡುತ್ತಿದ್ದದು ಕಣ್ ಕುಕ್ಕುವ ಪ್ರೀತಿ. ಮೋನುವನ್ನು ಕೈನೆಟಿಕ್ ನಲ್ಲಿ ದಿನವೂ ಒಂದು ರೌಂಡ್ ಹೊಡಿಸಬೇಕಿತ್ತು. ಕೈನೆಟಿಕ್ ನಲ್ಲಿ ಮುಂದೆನಿಂತು ಗಾಳಿಗೆ ಮುಖವೊಡ್ಡಿ ಹೋಗುತ್ತಿದ್ದಾಗಿನ ಮೋನುವಿನ ಮುಖದ ಖುಷಿಯ ನೆನಪು ಎಲ್ಲರಿಗೂ ಇನ್ನೂ ಇದೆ. ನಾನು ಹಾಸ್ತೆಲಿನಲ್ಲಿದ್ದಾಗ ಭೇಟಿಗೆಂದು ಬರುತ್ತಿದ್ದ ಪಪ್ಪನನ್ನು ಅಲ್ಲಿನ ಕೆಲಸದವರ ನಾಯಿಗಳೆಲ್ಲ ಬಾಲ ಆಡಿಸುತ್ತ ಬಂದು ಮಾತನಾಡಿಸುತ್ತಿದ್ದವು. ನಿನ್ನ ಮೈಯಿಂದ ಬರುವ ನಾಯಿ ವಾಸನೆ ಅವಕ್ಕೆ ಗೊತ್ತಾಗುತ್ತೇನೋ ನೋಡು. ನಡಕೊಂಡು ಹೋದರೆ ಕಿಂದರಿಜೋಗಿ ಹಂಗೆ ಊರ ನಾಯಿಯೆಲ್ಲ ಬರುತ್ತವೆ ನಿನ್ನ ಹಿಂದೆ ಎಂದು ಅಣಕಿಸುತ್ತಿದ್ದೆ. ಯಾವ ಅಪರಿಚಿತ ನಾಯಿಯೂ ಪಪ್ಪನ ಕಣ್ಣಿಗೆ ಕಣ್ ಕೊಟ್ಟು ನೋಡಿದ ಮೇಲೆ ಬೊಗಳಿದ್ದೆ ನೆನಪಿಲ್ಲ ನನಗೆ. ನಮ್ಮ ಪಕ್ಕದ ಮನೆಯ ಅಜ್ಜಿಯೊಬ್ಬರು ನಿಷ್ಕಲ್ಮಶವಾಗಿ ಹೇಳಿದ್ದರು. “ದೇವರೇ ಮುಂದಿನ ಜನ್ಮ ಅಂತೊಂದಿದ್ದರೆ ಹೆಗಡೆ ಡಾಕ್ಟರ್ ಮನೆಯ ನಾಯಿಯಾಗಿ ಹುಟ್ಟಿಸಪ್ಪ” ಎಂದು. ಯಾಕೆ ಅಜ್ಜಿ ಅವರ ಮಗಳೋ ಮಗನೋ ಆಗುದ್ ಬೇಡ? ಎಂದು ತಮಾಷೆ ಮಾಡುತ್ತಿದ್ದೆವು. ಅಂತಹಅತಿರೇಕದ ನಾಯಿ ಮೋಹ ಪಪ್ಪನದು.
ನಿಜಕ್ಕೂ ನಮ್ಮೆಲ್ಲರಿಗಿಂತ ಪಪ್ಪನ ಅಂತಃಕರಣವನ್ನು ಬಲ್ಲವರು, ಪಡೆದವರು ನಮ್ಮ ಮನೆಯ ನಾಯಿಮರಿಗಳು. ನಾವ್ಯಾರೂ ಅವರ ಬಳಿಯಿಲ್ಲದ ಈ ಸಂಜೆಗಳಲ್ಲಿ ಮಗಳಂತೆ ಬಳಿಯಿರುವದು ಪಪ್ಪ ಅಮ್ಮನ “ದುಂಬಿ”. ಆ ಎಲ್ಲ ಪುಟ್ಟು ಮರಿಗಳ ಪರವಾಗಿ ಹ್ಯಾಪಿ ಫಾದರ್ಸ್ ಡೇ ಪಪ್ಪಾ.






ತುಂಬ ಆಸಕ್ತಿಯಿಂದ ಓದಿಸಿಕೊಂಡು ಹೋಯಿತು ಈ ಬರಹ.ಹಿಂದೆ ನಾನು ಅವಧಿಯ ನನ್ನ ಅಂಕಣದಲ್ಲಿ ಬರೆದ ಶ್ವಾನಪುರಾಣಂ ಎಂಬ ಲೇಖನಕ್ಕೆ ನೀವು ಬರೆದ ಪ್ರತಿಕ್ರಿಯೆಯಲ್ಲಿ ನೀವು ನಿಮ್ಮ ಪಪ್ಪನ ಈ ಕೂಲಿಂಗ್ ಗ್ಲಾಸ್ ಪ್ರಿಯೆ ದುಂಬಿಯ ಬಗ್ಗೆ ಬರೆದಿದ್ದಿರಿ.ಮೊನ್ನೆ ಅದನ್ನು ಧರಿಸಿ ವಾಕಿಂಗ್ ಹೊರಡಲು ಸಜ್ಜಾಗಿ ಕುಳಿತ ಅದರ ಚಿತ್ರ ನೋಡಿದೆ.ನೀವೂ ಒಂದೆರಡು ನಾಯಿಗಳನ್ನು ಸಾಕಿಕೊಳ್ಳಿ..ಚೆನ್ನಾಗಿರುತ್ತೆ.