ಅವಳು..
ಡಾ. ಪ್ರೇಮಲತ ಬಿ
ಅವಳು
ಯಾರನ್ನೂ ಕಾಮಿಸುವುದಿಲ್ಲ
ಶೃಂಗಾರದಲ್ಲಿ ಕೆರಳುವ ತನ್ನ
ಪದಗಳನ್ನು ಪ್ರೀತಿಸುತ್ತಾಳೆ
ಅವಳಿಗೆ
ಯಾರನ್ನೂ ಖುಷಿಪಡಿಸುವ ಹಂಗಿಲ್ಲ
ಜೊತೆ ನೀಡುವ ಪದಗಳು
ಅವಳೊಡನೆ ಸುಖಿಸುತ್ತವೆ

ಅವಳ
ಕಾಮನೆಗಳಿಗೆ ವಯಸ್ಸಾಗುವುದಿಲ್ಲ
ಅವಳು ಪದಗಳ
ಕೈ ಹಿಡಿದಿದ್ದಾಳೆ
ಅವಳಿಗೆ
ತನಗಾಗಿ ಸುಖವನ್ನು ಕೊಳ್ಳಲಾಗಿಲ್ಲ
ಆದರೆ ಪದಗಳಲಿ ತುಂಬಿ
ಧರ್ಮಾರ್ಥ ಹಂಚುತ್ತಾಳೆ
ಅವಳನ್ನು
ದಹಿಸುವ ಒಂಟಿತನ ಪದಗಳಲ್ಲಿ
ಸಿಂಗರಿಸಿಕೊಳ್ಳುತ್ತವೆ ಜೊತೆ ಬೇಡುವ
ಹತ್ತು ಮನಗಳಲಿ ಶೃಂಗಾರವಾಗುತ್ತವೆ
ಅವಳು
ನಿತ್ಯ ವ್ಯಭಿಚಾರಿ
ಪದಗಳನು ಕಾಮಿಸಲು ಬಿಟ್ಟು
ಪೆನ್ನಿಡಿದು ಕೂರುವ ದಲ್ಲಾಳಿ
ಅವಳ
ಒಳಧ್ವನಿಗಳೆಲ್ಲ ರಾತ್ರಿಯಲಿ ಚೀರುತ್ತ
ಪದವಾಗಬಯಸುತ್ತವೆ ಬೆಳಗಿನ
ಹೊಳಪಲ್ಲಿ ಆರ್ದ್ರತೆ ತೋರಿ ಕವಿಗಳಾಗುತ್ತವೆ






Intresting lines
Thank you