ತಿರಸ್ಕಾರ..
ಮಂಜುಳಾ ಹುಲಿಕುಂಟೆ
ಅವ್ವ ಹಡೆದ ದಿನ
ಮುಖನೋಡಲಾರದ ಅಪ್ಪ ಊರು ಬಿಟ್ಟಿದ್ದ
ಎತ್ತಿ ಮುದ್ದಿಸಬೇಕಾದ ಅಜ್ಜಿ
ಕೊಲ್ಲಲು ದಾರಿ ಹುಡುಕುತ್ತಿದ್ದಳು
ಹೆತ್ತವಳ ಎದೆಯಲ್ಲಿ ಸಂಭ್ರಮವಲ್ಲ
ಸಾವಿನ ಸಂಕಟವಿತ್ತು
ಅವಳ ಹುಟ್ಟಿನೊಂದಿಗೆ ಹುಟ್ಟಿದ್ದು ತಿರಸ್ಕಾರ..!
ಎದೆಯಾಲುಣಿಸಲು
ಅವಳವ್ವನಿಗೂ ಪುರುಸೊತ್ತಿರಲಿಲ್ಲ
ಹರಿದ ಲಂಗದ ಪುಟ್ಟ ಅಕ್ಕನೆದೆಯ ಕೂಸವಳು..
ಅಕ್ಕನ ಅಕ್ಷರ ಕಸಿದ
ಶಾಪವಿರಬೇಕು ಅವಳಿಗೆ
ಅಕ್ಷರವೇ ಕೊಲ್ಲಲು ನಿಂತುಬಿಡುತ್ತವೆ
ಅಪ್ಪನ ಬೆರಳಿಡಿದು
ನಡೆವ ಮುನ್ನ
ಅಣ್ಣನ ಬೆನ್ನಿನ ಕೂಸುಮರಿ ಅವಳು
ಕಳೆದುಕೊಂಡದ್ದಕ್ಕಾಗಿ ಕೊರಗಲಿಲ್ಲ
ಪಡೆದುದ್ದರ ನೆನಪೇ ಇರಲಿಲ್ಲ..
ನಿಜಕ್ಕೂ ಅವಳ ಹುಟ್ಟಿನೊಂದಿಗೆ ಹುಟ್ಟಿದ್ದು ತಿರಸ್ಕಾರ ..
ಎದೆಯಲ್ಲಿ ಒಲವು ಚಿಗುರುವಾಗಲೇ
ಚಿಗುಟಿತ್ತು ಒಲವಾದವನ ಬೆರಳು
ಅವನು ತೊರೆದು ಹೋದಾಗಲೂ ಅವಳು ಪರಿತಪಿಸಿಲ್ಲ
ತಿರಸ್ಕಾರ ಅವಳ ಹುಟ್ಟಿಗೆ ಸಾಕ್ಷಿ…
ಲೋಕ-ಲೋಕಗಳಾಚೆ
ಒಲವ ವರವಿಗಾಗಿ ಮೊರೆ ಹಿಡುವ
ಅವಳ ಕೂಗು ಯಾರ ಕಿವಿಗೂ ತಾಗುವುದೇ ಇಲ್ಲ
ಹಿಡಿ ಪ್ರೀತಿಗಾಗಿ ಹಂಬಲಿಸುವ ಅವಳ ಕಣ್ಣಿನಲ್ಲಿ
ಹರಿವ ಕಣ್ಣೀರಿಗೆ ಬರವಿಲ್ಲ
ಹುಟ್ಟಿನ ಸೂತಕವರಿಯದ
ಬದುಕಿಗೆ ಸಾವು ಸಾಂತ್ವನವಾಗಬಹುದೇನೋ
ಸಾವಿನೊಂದಿಗಷ್ಟೇ ಅವಳ ಸಲಿಗೆ …
ಪ್ರತೀ ಬಾರಿ ತೊರೆದು ಹೋದವರ
ನೆನಪೇ ಅವಳ ಪ್ರತೀ ಕ್ಷಣದ ಸಾವಿಗೆ ಸಾಕ್ಷಿಯಾಗಿಬಿಡುತ್ತದೆ
ತಿರಸ್ಕಾರ ನಿನ್ನೆ ಮೊನ್ನೆಯ ಪರಿಚಯವಲ್ಲ
ಅವಳ ಹುಟ್ಟಿನೊಂದಿಗೆ ಹುಟ್ಟಿದ್ದು ತಿರಸ್ಕಾರ..
ಬಿಟ್ಟು ಹೋಗಲೇಬೇಕಿದ್ದರೇ ಹೊರಟು ಬಿಡಿ
ಅವಳ ಎದೆಯ ಸಾವುಗಳ ಸಾಲಿನಲ್ಲಿ ..
ನಿಮ್ಮ ಒದ್ದ ಪಾದದ ಗುರುತೂ ಅಚ್ಚಾಗಲಿ.





very deep