ಮುಂಬೈ ಅಸೋಸಿಯೇಷನ್ “ನೇಸರು ಜಾಗತಿಕ ಕವನಸ್ಪರ್ದೆ 2017″ರಲ್ಲಿ
ಪ್ರಥಮ ಬಹುಮಾನ ಪಡೆದ ಕವಿತೆ

ಎಲ್ಲಿದ್ದೆವು ಇಷ್ಟು ದಿನ

ರೇಣುಕಾ ರಮಾನಂದ ಅಂಕೋಲಾ
ಪಾರಿಜಾತದ ಮೊಗ್ಗು
ಪಕಳೆ ಬಿಡಿಸುವ ಹೊತ್ತು
ನನಗೆ ನೀನೂ…
ನಿನಗೆ ನಾನೂ…
‘ಎಲ್ಲಿದ್ದೆವು ಇಷ್ಟು ದಿನ’-ಕೇಳಿಕೊಂಡು
ಮತ್ತೂ ಮತ್ತೂ ಅದನ್ನೇ ಹೇಳಿಕೊಂಡು
ಕಣ್ಣೀರು ಉಕ್ಕಿ
ನಕ್ಕೂ ನಕ್ಕೂ ಸುಸ್ತಾಗುವಾಗ
ಅದೇ ರಾತ್ರಿಯ ಬಿಕೋ ಬೀದಿಯಂಚಿನ
ನೆಮ್ಮದಿಯ ಕಾಡಿನಲ್ಲಿ
ಒಂಟಿ ಮರವೊಂದು ಗೆಲ್ಲು ಮುರಿಸಿಕೊಂಡು
ಅತ್ತ
ಸದ್ದಾಯಿತು
ಹಾಡೇ ಹಗಲಿಗೂ ಮೊದಲಿನ
ತಾಜಾ ನಸುಕಾಗಲು
ಇನ್ನೆಷ್ಟು ಹೊತ್ತು ಬಾಕಿ ಇದೆ…
ತಿಳಿಯುವುದಿಲ್ಲ ನನಗೆ
ಈ ಅಮವಾಸ್ಯೆಯ ಗಾಡಾಂಧಕಾರದಲ್ಲಿ
-ತಿಳಿಯುವುದಿಷ್ಟೇ…
ಓ ಅಲ್ಲೆಲ್ಲೋ ದೂರದಲ್ಲಿರುವ ನೀನು
ಮತ್ತಿಲ್ಲಿ ಸುಕ್ಕಾಗದ ಹಾಸಿಗೆಯ ಮೇಲೆ
ಮಂಡಿಯೂರಿ
ಬುದ್ಧಪೂರ್ಣಿಮೆಯ ಕುರಿತು
ಧ್ಯಾನಿಸುತ್ತಿರುವ
ನಾನು
ಹೇಳುವುದು ಬೇಡ
ಇತ್ತೀಚೆಗ್ಯಾಕೋ
ಪಾರಿಜಾತದ ಕಂಪಿಗೆ ಮಾರುಹೋಗುವವರು
ವಲಸೆ ಹೋಗುತ್ತಿದ್ದಾರೆ
ಸೋನೆಮಳೆಗೆ ಅರಳರಳುತ್ತಲೇ ಉದುರುವ
ಮೃದು ಮೊಲೆತೊಟ್ಟಿನಂತಹ ಹೂಗಳ ಮೇಲವರು ಮಹಾ ಗಡಿಬಿಡಿಯಲ್ಲಿದ್ದವರಂತೆ
ಓಡಿಯಾಡುತ್ತಿದ್ದಾರೆ
ಗೆಲ್ಲುಗಳಿಗೆ ಆತುಕೊಂಡ ಕೆಲವೇ
ಕೆಲವನ್ನು ಹೆಕ್ಕಿ
ಪೂಜೆಗೆಂದು ಒಯ್ಯುತ್ತಿದ್ದಾರೆ…
-ಹೇಳಿದೆನಲ್ಲ
ಹೇಳುವುದು ಬೇಡ
ನಿನ್ನೂರಿನ ಶಂಖದ ಹುಳ
ಇದನ್ನೆಲ್ಲ ನಂಬಲಿಕ್ಲಿಲ್ಲ…
ಏತನ್ಮಧ್ಯೆ
ಎಂದೊ ಒಮ್ಮೆ ನಿನ್ನೆದೆಯ ಮೇಲೆ
ಪಾರಿಜಾತದ ಹಚ್ಚೆ ನೋಡಿದಾಗಿನಿಂದ
ಮೊನಚಾಗುತ್ತಲೇ ಇದೆ
ವಿರಹ
ಅಚ್ಚ ಬಿಳಿಯ ಎಸಳೂ…
ಹವಳ ಕೆಂಪಿನ ತೊಟ್ಟೂ…
ಸೇರಿದ ಜಾಗದಲ್ಲಿ
ಭೇಟಿಯಾಗಬೇಕಿದೆ ನಾವಿಂದು
ಇದೇ ಮುಂಜಾನೆ..ಇದೇ ಸಂಜೆ..
ಅಥವಾ ಇದೇ ರಾತ್ರಿಯ
ಪಕಳೆ ಬಿಡಿಸುವ ಅದೇ ಹೊತ್ತಿಗೆ…
ಬರುತ್ತೀಯಲ್ಲ….





ಬ್ಯೂಟಿಫುಲ್ ರೇಣುಕಾ