ರೇಖಾ ಭಟ್ ಹೊನ್ನಗದ್ದೆ
ಮರಿ ಹಕ್ಕಿಯೊಂದು ಹಾರಿ ಬಂತು
ಅಂಗಳದ ತುದಿಗೆ
ಕಾಳು ಬೀರಿದೆ
ಒಂದೊಂದೇ
ಕಾಳು ಆಯುತ್ತಾ
ಹತ್ತಿರ ಬಂತು
ತುದಿಬೆರಳ ಮೇಲೆ ವಿರಮಿಸಿತು
ಮತ್ತೆಲ್ಲೂ ಹೋಗಲಾರೆ ಎಂಬಂತೆ
ಹಕ್ಕಿ ನನ್ನ ಆಸರೆಯಲಿ
ನಾನು ಅದರ ಉಸಿರ ಎಣಿಕೆಯಲಿ
ಒಂಟಿತನವೆಲ್ಲ ಹಾರಿಹೋಗಿ
ಪುಳಕಗಳ ಕಾವು ನನ್ನೊಳಗೆ

ತುದಿಬೆರಳಿಂದ ಅಂಗೈಗೆ
ಅಂಗೈಯಿಂದ ಹೆಗಲು
ಹೆಗಲಿನಿಂದ ತಲೆ
ಮೇಲೆ ಏರಿಸಿದೆ ಆಡಿಸಿದೆ
ಬೊಗಸೆ ಕಾಳ
ಬಿಡದೇ ಸುರಿದೆ
ಹಕ್ಕಿ ಕೊಕ್ಕು ಬಲಿಯಿತು
ರೆಕ್ಕೆ ಗಟ್ಟಿಯಾಯಿತು
ನಿಂತ ನೆಲೆಯ ಬಿಸುಪು
ಅದೇ ಬೊಗಸೆ ಕಾಳು ರುಚಿಸದಾಯಿತು
ಇಷ್ಟಿಷ್ಟೇ ರೆಕ್ಕೆ ಬಿಚ್ಚಿತು
ನನ್ನ ಚಡಪಡಿಕೆಯ ಬಿಸಿ ಹೆಚ್ಚಿ:
ತಲೆಯಿಂದ ಭುಜಕೆ
ಭುಜದಿಂದ ಎದೆಗಿಳಿದು
ಒಳಗೆ ನೋವಿನ ಮೊಟ್ಟೆಯಿಟ್ಟು
ಕೊನೆಗೆ ಹಾರಿ ಹೋಯಿತು
ಗೊತ್ತಾಗಿದೆ ನನಗೆ:
ಪಂಜರ ಕಟ್ಟಲು ನನಗೆ ಬರದು
ಹಕ್ಕಿಗಳಿಗೆ ಹಾರದೇ ಇರಲಾಗದು






0 Comments