ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೋಡನೋಡುತ್ತಿದ್ದಂತೆಯೇ..

ಹೆಣ ಹೊರುವವರು ಯಾರು?

ಕು.ಸ.ಮಧುಸೂದನ

ನೋಡನೋಡುತ್ತಿದ್ದಂತೆಯೇ

ಮಂಕಾಗತೊಡಗುತ್ತಾನೆ ಸೂರ್ಯ,

ಹರಡಿಕೊಂಡ ಹಗಲಿನ ಚಾಪೆ

ಪ್ರಖರವಾಗಿದ್ದ ಬಿಸಿಲು ಮಂಕಾಗುತ್ತ

ಸಂಜೆಗತ್ತಲು ಕವಿಯತೊಡಗಿ

ಸರ್ಕಲ್ಲಿನ ದೊಡ್ಡ ಗಡಿಯಾರದ ಮುಳ್ಳುಗಳು

ಅಡ್ಡಾದಿಡ್ಡಿಯಾಗಿ ಓಡತೊಡಗುತ್ತವೆ

 

ಮಾಮೂಲಿ ದಿನಗಳೆಲ್ಲ

ಒಳ್ಳೆಯ ದಿನಗಳ ಮುಖವಾಡ ತೊಟ್ಟು

ಮುಖದ ಮುಂದೆ ಬಂದು ಕುಣಿಯತೊಡಗುತ್ತವೆ

ಕಷ್ಟಗಳೆಲ್ಲ  ಮಂಜುಗಡ್ಡೆಯಂತೆ ಕರಗಿ

ಹೋಯಿತೆಂದು ಹಬ್ಬ ಆಚರಿಸಿದವರ ಮನೆಯೊಳಗೆ

ಸಾವಿನ ಸೂತಕ ತುಂಬಿಕೊಳ್ಳತೊಡಗುತ್ತದೆ.

 

ಕಂತುಗಳಲ್ಲಿ ತಂದ  ದೊಡ್ಡ ಟಿವಿಯೊಳಗೆ ಅಗಲಬಾಯಿ ಅಗಲಿಸಿ

ಬೊಬ್ಬೆಹೊಡೆಯುವ  ನರಮನುಷ್ಯರ ಕಿರುಚಾಟಕ್ಕೆ

ಹೆದರಿದ ತೊಟ್ಟಿಲಲ್ಲಿನ ಮಗು ಕಿಟಾರನೆ ಕಿರುಚುತ್ತದೆ.

ಹುಡುಕುವ ಗೋಜಿರದೆ ಅವರೇ ಬಂದು ಕೇಳುತ್ತಿದ್ದಾರೆ

ಮನೆ ಬಾಗಿಲಿಗೆ

ಹೆಣಗಳಿವೆಯೇ ನಿಮ್ಮ ಮನೆಯೊಳಗೆ

ಹೆಗಲುಗಳಿವೆ ನಮ್ಮಲ್ಲಿ.

 

ಉತ್ತರವಿರದೆ ಸುಮ್ಮನೆ ಬಾಗಿಲು ಮುಚ್ಚುತ್ತೇನೆ

ಇದ್ದೊಂದು ಕವಿತೆಯ ಸಾಲೂ ಕಣ್ತಪ್ಪಿಸಿ ಕೈತಪ್ಪಿ

ಹೋಗಿದ್ದಕ್ಕೆ.

 

ಸತ್ತು

ಹೋದವರ

ಊರ ತುಂಬಾ

ಹೆಣ ಹೊರುವವರದೇ ಕಾರುಬಾರು

ಎಲ್ಲ ನಿಜ  ಆದರೆ ಅವರ ಹೆಣ ಹೊರುವವರು ಯಾರು?

 

ಮತ್ತೆ ಕವಿತೆ ಬರೆಯಲಾರೆ

ಶಪಥಗೈದ  ಕವಿಗೀಗ

ಕೈಗಳೇ ಇಲ್ಲ!

‍ಲೇಖಕರು avadhi

10 February, 2020

1 Comment

  1. T S SHRAVANA KUMARI

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading