ಡಾ ಶ್ವೇತಾರಾಣಿ ಹೆಚ್ ಮಹೇಂದ್ರ
ಸಿದ್ಧಗಂಗಾ ಜಾತ್ರೆಯಲ್ಲಿ ಮಾರಾಟಕ್ಕೆಂದು ಇಟ್ಟ ನೊಗಗಳು.
ಯಂತ್ರಗಳ ಭರಾಟೆಯಲ್ಲಿ ನೊಗಗಳು ಉಳಿವಿಗಾಗಿ ಹೋರಾಡುತ್ತಿವೆ..

ಡಾ ಶ್ವೇತಾರಾಣಿ ಹೆಚ್ ಮಹೇಂದ್ರ
ಸಿದ್ಧಗಂಗಾ ಜಾತ್ರೆಯಲ್ಲಿ ಮಾರಾಟಕ್ಕೆಂದು ಇಟ್ಟ ನೊಗಗಳು.
ಯಂತ್ರಗಳ ಭರಾಟೆಯಲ್ಲಿ ನೊಗಗಳು ಉಳಿವಿಗಾಗಿ ಹೋರಾಡುತ್ತಿವೆ..

ಎತ್ತು ಹೇಳಿದ ಕವಿತೆ:
ಯಾರೋ ಕತ್ತು ಹಿಸುಕಿ
ಪರಾರಿಯಾಗಿದ್ದಾರೆ.
ನಾನೇ ಹೆಗಲ ಮೇಲೆ ಹೊತ್ತು
ಹೊಲ ಉತ್ತಿದ ನೊಗವನ್ನು.
ನಾವೇನು ಕಮ್ಮಿ ಎಂಬಂತೆ
ಗೆದ್ದಲು ಕೂಡ ಮುತ್ತಿವೆ
ನೇಗಿಲ ಮೊಗವನ್ನು!
ಅಂದು ನನ್ನ ಮೈ ತೀಡಿ
ಬೆನ್ನು ಸವರಿದ ಕೈಗಳು
ದುಡಿದು ದಣಿವಾರಿಸಿಕೊಂಡ
ಕೆರೆ-ಕೊಳ್ಳಗಳು
ಕೊರಳ ಘಂಟೆಯ ಘಲ್-ಘಲ್ ಸದ್ದು
ಮರಕ್ಕೆ ಮೈ ಉಜ್ಜಿಕೊಂಡಾಗ ದೊರೆತ
ಅಂಗಾಂಗ ಪುಳಕ
ಎಲ್ಲವನ್ನೂ ನನ್ನವರೇ ಕಸಿದುಕೊಂಡಂತೆ
ಕನಸೊಂದು ದಾಖಲಾಗಿದೆ !
ಇಂದು ನನ್ನ ಕುರಿತು ಇಂಚಿಂಚೂ
ನಡೆದಿವೆ ನೂರೆಂಟು ಸಂಶೋಧನೆ
ಆದರೂ ಅದೇಕೋ ಗೊತ್ತಿಲ್ಲ
ಎಲ್ಲೂ ದಾಖಲಾಗಿಲ್ಲ ನನ್ನ ಸಂವೇದನೆ.
ನನ್ನ ಹೆಸರಿನಲ್ಲಿ
ಅದೆಷ್ಟೋ ಯೋಜನೆಗಳು
ಕಡತಗಳಲ್ಲೇ ಆದವು ಉಡಾವಣೆ.
ನಾನು, ನನ್ನವರು ಅಡ್ಡಾಡಿ ಬಂದ
ಗೋಮಾಳಗಳೆಲ್ಲ ಇವತ್ತು ಆಗಿವೆ
ಅಭಿವೃದ್ದಿಯ ಮುಖವಾಡ ತೊಟ್ಟ ಬಡಾವಣೆ !
ಇದೆಲ್ಲದರ ನಡುವೆಯೂ
ಬ್ರೇಕಿಂಗ್ ನ್ಯೂಸ್ ಏನಂದರೆ ?
ಜಾತಿ-ಧರ್ಮದ ಎಲ್ಲೆಯ ಧಾಟಿ
ಭಾರತ ಮಾತೆಯ ಮಕ್ಕಳು ಒಗ್ಗೂಡಿದ್ದಾರೆ!!
ನನಗೂ ನನ್ನ ಬಂಧು-ಬಳಗಕ್ಕೂ
ಕೊಡಿಸಲೆಂದೇ
ಕಸಾಯಿಖಾನೆಗಳಲ್ಲಿ ಜಂಟಿ ಖಾತೆ
ಎಲ್ಲರ ಕಿವಿಗೂ ಜೇಡ ಬಲೆ ಹೆಣದಿದೆ
ಯಾರಿಗೂ ಕೇಳುತ್ತಿಲ್ಲ ನನ್ನ ಮೂಕ ಕವಿತೆ !!!
– ಡಾ.ಮಹೇಂದ್ರ ಎಸ್ ತೆಲಗರಹಳ್ಳಿ