ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆರಳುಗಳ ಹಿಂದಷ್ಟೇ ನಡೆದೆ..

ಸಂದೀಪ್ ಈಶಾನ್ಯ

..

ನಿನ್ನೆಲ್ಲಾ ಬೇರುಗಳು ರಸಹೀನವಾಗಿ ಒಣಗಿ
ಮುರುಟಿಕೊಂಡು ನೆಲಕ್ಕೆ ಮನಸ್ಸಿಲ್ಲದೆ
ಹರಡಿಕೊಂಡಾಗ
ನೆಲ ಒಂದಿಷ್ಟು ತಂಪಾಗಬಹುದು
ಮತ್ತೆ ನಿನ್ನಲ್ಲಿ ಹೀರಿಕೊಳ್ಳಲು ಏನೂ ಇಲ್ಲಾ ಎಂದೆನಿಸಿದಾಗ ಒಂದಿಷ್ಟು ವಿಷಣ್ಣನಾಗಿ ನಿರ್ಲಜ್ಜೆಯಿಂದ ಮೌನವಾಗಬಹುದು
ಅಥವಾ
ನೊಂದವಳಂತೆ ಮುಖ ಅಡಗಿಸಿಟ್ಟು
ಕೈ ಮರೆ ಮಾಡಿ ಕಣ್ಣೀರಾಗಲೂಬಹುದು

ಯಾರೂ ಯಾರೋ ಹಿಂಜಿ ಎಸೆದ
ಬಸ್ಸಿನ ಟಿಕೇಟುಗಳ ಹಿಂದೆ
ಕಂಡಕ್ಟರ್ ನೆನಪಿಡಲಾರದೇ ಗೀಚಿಟ್ಟ
ಕುಂಟುಲಿಪಿಯ ಒಂದಂಕಿಯ ಚಿಲ್ಲರೆ ಕಾಸುಗಳು
ಇವರಿಬ್ಬರಿಂದಲೂ ಬಚಾವಾದವೆಂದು
ಗಹಗಹಿಸಿ ಹಾದಿಬೀದಿಯಲ್ಲೇ ಹೊರಳಾಡಿ ನಗಬಹುದು

ಪ್ರಯಾಣವನ್ನಷ್ಟೇ ಅವಲಂಬಿಸಿ ನಡಿಗೆ ಆರಂಭಿಸಿದಕ್ಕೆ ದಾರಿಯೇ ಮುನಿಸಿಕೊಳ್ಳಬಹುದು
ಕೈಯಲ್ಲಿಡಿದ ಅರಮನೆ ನರ್ತಕಿಯ ನೀಳ ನಡುವಿನಂತ
ಮದ್ಯದ ಲೋಟ ಇದ್ದಕ್ಕಿದ್ದಂತೆ ಅಲುಗಾಡಬಹುದು
ಅದರೊಳಗೆಲ್ಲಾ ತುಂಬಿಕೊಂಡಿರುವ
ಅಪ್ಸರೆಯರ ಮೊಲೆಯಿಂದ ತೊಟ್ಟಿಕ್ಕಿದ ಹನಿಗಳಂತ ವೈನ್ ಅಪರೂಪಕೊಮ್ಮೆ ಹಿರಿ ಸವಿದರೂ ಕಹಿ ಎನಿಸಬಹುದು

ಎಲ್ಲಾ ಗೋಡೆಗಳನ್ನೂ ಕೆಡವಿ ಬರೀ ಬಯಲನ್ನಷ್ಟೇ ಉಳಿಸಿಕೊಳ್ಳಬೇಕು
ಗಾಳಿ ನೀರು ಧೂಳು ಹಕ್ಕಿಗಳ ಉಯಿಲು
ಪ್ರೇಮಿಗಳಿಬ್ಬರ ಪಿಸುಪಿಸು ಸದ್ದು
ಆತ್ಮಹತ್ಯೆಗೆ ತೆರಳಿದವರ ಒಬ್ಬಂಟಿ ಮೌನ
ವಿಚ್ಛೇದನಕ್ಕೆ ಕಾದ ದಂಪತಿ ನಡುವಿನ ಖಾಲಿತನ
ಎಲ್ಲವೂ ಇಲ್ಲಿ ಉಚಿತವಾಗೇ ಇರಬೇಕು
ಅಲ್ಲೆಲ್ಲೋ ತುಕ್ಕುಹಿಡಿದ ಗೇಟಿಗೆ ನೇತುಬಿದ್ದ ಪೋಸ್ಟ್ ಡಬ್ಬಿಯೊಳಗೆ ಶತಮಾನದ ಹಿಂದೆ
ತುರುಕಿದ ಪತ್ರವನ್ನೊಮ್ಮೆ ಈಗ ತಿರುಗಿ ತರಬೇಕು
ಹನುಮಾನ ಚಾಲೀಸದಂತ ಹಳೆಯ ಪದ್ಯಗಳನ್ನು
ಗುಟ್ಟಾಗಿ ತಿದ್ದಿಬಿಡಬೇಕು

ಅಲ್ಪಾವಧಿತ ಜ್ಞಾನಶಾಖೆಗಳನ್ನು ಕಡೆಗಣಿಸಿ
ಸಾಕಿಯ ನೆರಳನ್ನರಸಿ ಮದುಶಾಲೆಯ ಕುರ್ಚಿಯೊಂದಕ್ಕೆ ಅಂಟಿಬಿಡಬೇಕು
ಈಗ
ನೂತನ ಮದುಪಾತ್ರೆಗೆ ಅಪ್ಸರೆಯರ ಮೊಲೆಗಳನ್ನು ಹಿಂಡಿ ತೊಟ್ಟಿಕ್ಕಿಸಿದ ಹನಿಗಳಂತ ವೈನ್ ತಿರುಗಿ ತುಂಬಿಕೊಳ್ಳಬಹುದು
ಹಿಂದೆ ಅಪರಾತ್ರಿಯಲ್ಲಿ ಸ್ಪರ್ಶಿಸಲಾರದೆ ವಂಚಿತರಾಗಿದ್ದ ಬೀದಿ ಸೂಳೆಯ ತುಂಬು ಮೊಲೆಗಳನ್ನು ಮತ್ತೊಮ್ಮೆ ನೆನೆದು ನಿದ್ರೆಗೆ ಜಾರಿಬಿಡಬಹುದು

 

‍ಲೇಖಕರು avadhi

6 April, 2017

1 Comment

  1. Sadashiv soratur

    ಅದ್ಬುತ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading