ಸಡಿಲು
– ಲಕ್ಷ್ಮೀಕಾಂತ ಇಟ್ನಾಳ
ಭೇಟಿಯಾದವು ಹಲ ಹಳೆಯ ನೆನಪುಗಳು ಸಂಜೆ
ಮರೆತ ಕೆಲ ಕನಸುಗಳ ಜೊತೆ ಮಾತಾಯಿತಂದೆ
ನೆನಪುಗಳ ಕೆದಕಿದೆವು ಕಣ್ಣಾದವು ಮಂಜು
ಆರಂಭ ಅಂತ್ಯದಲಿ ನಿನ್ನ ನೆನಪೇ ಬಂದು

ನೆನಪೊಂದು ಕನಸುಗಳ ಮುಸುಗೊಂದು ನೇಯಲು
ಕನಸುಗಳ ಮುಸುಗಿಗೆ ನೆನಪುಗಳೇ ದಾರ
ಕನಸೊಂದು ನಿದ್ದೆಯಲಿ ನೆನಪುಗಳ ಮೆಲ್ಲಲು
ಸುರಿಯುವುದು ನೆನಪುಗಳ ವರ್ಷಧಾರ
ಕಾಲನ ಹೊಡೆತಕ್ಕೆ ಕನಸುಗಳು ನಲುಗಲು
ಕಾಮನಬಿಲ್ಲು ಮೂಡದ ರಸಹೀನ ಮುಗಿಲು
ಇಡಿ ಇಡಿಯ ಬದುಕುಗಳ ಬಿಡಿ ಬಿಡಿಯ ಮಜಲು
ನಾನು ನೀನು ಆನು ತಾನುಗಳ ಗಂಟು ಸಡಿಲು






nice..