ಸಂತೆಬೆನ್ನೂರು ಫೈಜ್ನಟ್ರಾಜ್

1
ಹರಿವ ಸಿಹಿ ಸಹಿ
ನದಿಗಳನೆಲ್ಲಾ ಒಳಗಿಟ್ಟುಕೊಂಡ ಕಡಲು
ಹೊರ ಹಾಕಿದ ನೀರು ಉಪ್ಪೆ ;
ನಮಗೂ ಮನ ತಾಕೋ ಪ್ರೀತಿ,
ನಮ್ಮದೆನ್ನುವ ಕ್ಷಣಗಳಿದ್ದರೂ
ಆಗಾಗ ಸುರಿವ ಕಂಬನಿ ಉಪ್ಪಾಗಿದ್ದು
ಹಾಳು ಈ ಕಂಗಳ ತಪ್ಪೆ?
2
ಮಣ್ಣು ತಿಂದು ಮಣ್ಣಲ್ಲೇ ಬದುಕೋ
ಮಣ್ಣಿನ ಜೀವಿ ಎರಹುಳ
ಗೊಬ್ಬರಕ್ಕೆ ದಾರಿ
ಅನ್ನ ತಿಂದ ನಾವು ಅಮೃತವಾಗದೇ
ಮಣ್ಣ ಸೇರುವುದ ಮರೆತು ಸುಮ್ಮನೆ
ತೋಡುತ್ತಿದ್ದೇವೆ ಆಸೆಯ ಗೋರಿ!
3
ಮರೆತ ಮಾತುಗಳೆಷ್ಟೋ
ಬಾಯಲ್ಲಿ ಲಾಲಾರಸವಾಗಿ ಒದ್ದಾಡುತಿವೆ
ಅರ್ದಂಬರ್ದ ಹಾಡಂತೆ
ನಾಳೆಗಳು ಹೇಗೋ ಏನೋ
ಇದ್ದ ಕ್ಷಣವಷ್ಟೇ ನಮ್ಮದು ಅಪ್ಪಿಕೋ
ಸುಮ್ಮನೆ ಬಾಳು ಬಂದಂತೆ!
4
ಕಣ್ಣ ನೀರು ಕೆನ್ನೆ ಮೇಲೆ ಕಾಲುವೆಯಾಗಿದೆ
ದೂರದಲ್ಲಿ ಕೊಳಲು ಅನಾಥ ಸ್ವರದಿ
ನಿಟ್ಟುಸಿರು ಹಾಕುತಿದೆ
ಪ್ರೀತಿ ಅಂದರೆ ಸಿಗಲೇಬೇಕಾ?
ಕಳೆದುಕೊಂಡರೂ ಅದು ಪ್ರೀತಿನೆ;
ಹೃದಯಗಳು ಬಂದ ಉಸಿರ ಸಾಕೆಂದು ನೂಕುತಿದೆ!
5
ಬಿಡಿ ಸಾವು ನಮ್ಮ ಬೆನ್ನ ಹಿಂದಿದೆ
ಮುಂದೆ ಬರೋ ಅಷ್ಟರಲ್ಲಿ
ನಡೆದು ಬಿಡೋಣ ಹುಡುಕಿ ಪ್ರೀತಿ
ನೆನಪು ಹಳೆಯ ಸಾಲದಂತೆ
ಪದೇ ಪದೇ ಮೆಲುಕು
ಎಲ್ಲರನ್ನೂ ಪ್ರೀತ್ಸೋಣ ಅದೇ ಬಾಳ ನೀತಿ!






ಸೂಪರ್ ಚುಟಕಗಳು.
ಚೆನ್ನಾಗಿದೆ
ಓದಿ ಖುಷಿಪಟ್ಟೆ
NICE……