ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪುಗಳನ್ನು ಯಾರೂ ಕದಿಯಲಾರರು..

ನೆನಪುಗಳನ್ನು ಯಾರೂ ಕದಿಯಲಾರರು..

 

 

  • ಜ್ಯೋತಿ ಅನಂತಸುಬ್ಬರಾವ್

 

ನಾಳೆಗೆ ಸರಿಯಾಗಿ ಒಂದು ತಿಂಗಳು… ನಾನು ಪರ್ಸ್ ಕಳೆದುಕೊಂಡು…. ಪರ್ಸ್ ವಾಪಸ್ ಪಡೆಯುವ ಆಸೆ ಕೈಚೆಲ್ಲಿ ಕುಳಿತಿದ್ದೆ. ಎಟಿಎಂ ಕಾರ್ಡ್ ಮಾಡಿಸಲು ಹೋದಾಗ ಅದು ಲಿಂಕ್ ಮಾಡಿ ಇದು ಲಿಂಕ್ ಮಾಡಿ ಎಂದು ಒಂದಿಷ್ಟುದ್ದ ಪಟ್ಟಿಯನ್ನೇ ಕೊಟ್ಟಿದ್ದರು. ಕೇಳಿ ದಂಗಾಗಿ ಹೋದ ನಾನು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿದ್ದೆ!

ಒಮ್ಮೆ ಮನೆಗೆ ಬಂದ ಕಾಮ್ರೇಡ್‌ಗಳ ಬಳಿ ನನ್ನ ಗೋಳನ್ನು ನಿವೇದಿಸಿಕೊಳ್ಳುತ್ತಿರುವಾಗ ಅವರೇ ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಮಾಡಿಸಿಕೊಡಲು ಮುಂದಾದರು. ಆಗಿಂದಾಗ್ಗೆ ಅರ್ಜಿ ತಂದು ತುಂಬಿ ಅಗತ್ಯ ದಾಖಲೆಗಳನ್ನೂ ಪಡೆದು ಕಚೇರಿಗೆ ಸಲ್ಲಿಸಿಬಿಟ್ಟರು. ಇನ್ನೇನು PAN card ಚಿಂತೆ ಇಲ್ಲ ಎಂದು ನಿರಾಳವಾದೆ.

ATM card ಕಳೆದುಹೋದ ಕಾರಣ ಬ್ಯಾಂಕ್ ನಲ್ಲಿದ್ದ ಚೂರುಪಾರು ಹಣವೂ ಸುರಕ್ಷಿತವಾಯಿತು (ಹಾಗೆಂದು ಹೇಳಲಾರೆ! ಈಗಾಗಲೇ ಮೋದಿ ಸರ್ಕಾರದ ಕಣ್ಣು ಬಿದ್ದಾಗಿದೆ…). PAN ಮತ್ತು ಆಧಾರ್ ಲಿಂಕ್ ಮಾಡದ ಹೊರತು ATM Card ನೀಡುವುದಿಲ್ಲ ಎಂಬ ಬ್ಯಾಂಕ್‌ನ ನಿಬಂಧನೆಗೆ ನಾನು ಕ್ಯಾರೆ ಅನ್ನದೆ ವಾಪಸ್ಸಾಗಿದ್ದೆ.

Voter ID card ಇನ್ನೂ ಮಾಡಿಸಿರಲಿಲ್ಲ. ಸೋಮವಾರ ಬರಲು ಹೇಳಿದ್ದರು, ಮೂರು ಸೋಮವಾರಗಳು ಕಳೆದೇ ಹೋದವು! ನನ್ನ ಕೆಲಸದ ಮಧ್ಯೆ ಹೋಗಲು ಬಿಡುವಾಗಲೇ ಇಲ್ಲ.

ಇಂದು ಮಧ್ಯಾಹ್ನ ನಾನು ಒಂದು ಲೇಖನ ಕುಟ್ಟುತ್ತಿದ್ದಾಗ ಫೋನ್ ಕರೆ ಬಂದಿತು. “ಮೇಡಮ್, ತಾವು ಜ್ಯೋತಿ ಅವರಾ? ATM card ಕಳೆದುಕೊಂಡಿದ್ದೀರಾ?” ಎಂದು ಕೇಳಿದರು. ನಾನು ಕೊಂಚ ಆಶ್ಚರ್ಯದಿಂದಲೇ, “ಹೌದು, ತಾವೂಊ….” ಎಂದು ರಾಗ ಎಳೆದೆ. ನಿಮ್ಮ ಪರ್ಸ್ ಇಲ್ಲಿ ಸಿಕ್ಕಿದೆ, ಯಾರೋ ಕಸಕ್ಕೆ ಹಾಕಿದ್ದರು. ಕಸದವರು ಅದನ್ನು ತೆಗೆದು ಎಸೆಯುತ್ತಿದ್ದರು. ನಾವು ನೋಡಿ ಪರ್ಸ್ ಒಳಗಿದ್ದ ಕಾರ್ಡ್‌ಗಳನ್ನು ಜೋಪಾನ ಮಾಡಿಟ್ಟಿದ್ದೇವೆ. ಬಂದು ತೆಗೆದುಕೊಂಡು ಹೋಗಿ” ಎಂದು ವಿಳಾಸ ತಿಳಿಸಿದರು.

ನನಗರೆ ಕ್ಷಣ ಇದನ್ನು ನಂಬಲು ಸಾಧ್ಯವಾಗಲಿಲ್ಲ. ಹಗಲುಗನಸು ಕಾಣುತ್ತಿದ್ದೇನಾ ಎನಿಸಿತು. ದೀರ್ಘ ಉಸಿರು ತೆಗೆದುಕೊಂಡು ಅವರು ಹೇಳಿದ ವಿಳಾಸದ ಕಡೆ ಗಮನ ಹರಿಸಿದೆ, ಅಲ್ಲೇ ಒಂದು ತಿಂಗಳ ಹಿಂದೆ ನನ್ನ ಪರ್ಸ್ ಕಳೆದು ಹೋಗಿದ್ದು!

ಸಂಜೆ ಅವರು ಹೇಳಿದ ಜಾಗಕ್ಕೆ ಹೋದರೆ ನನ್ನ ಪರ್ಸ್ ನೆಲದ ಮೇಲೆ ಅನಾಥವಾಗಿ ಬಿದ್ದಿತ್ತು! ಅದನ್ನು ಕಂಡ ನನಗೆ ಅದೆಂಥಾ ಸಂತೋಷ ಅಂತೀರಾ…. ಗಲೀಜೆಂದೂ ಲೆಕ್ಕಿಸದೆ ಅದನ್ನು ಒಮ್ಮೆಲೆ ಕೈಗೆತ್ತಿಕೊಂಡೆ. ಕಳೆದುಹೋದ ಜೀವ ವಾಪಸ್ ಬಂದಂತಾಯ್ತು. ಅದರಲ್ಲಿ ಏನೂ ಇರಲಿಲ್ಲ. ನಾನು ಪ್ರೀತಿಸಿ ಕೊಂಡುತಂದಿದ್ದ ವಸ್ತು ನನ್ನ ಕೈ ಸೇರಿತ್ತು. ವಿಕಲಾಂಗವಾಗಿ ಅನ್ನುವುದು ಬೇರೆಯೇ ಮಾತು!

ನನಗೆ ಯಾರಾದರೂ ಸುಂದರವಾದ ಅತ್ಯಂತ ದುಬಾರಿಯಾದ ಒಂದು ಹೊಸ ಪರ್ಸ್ ಕೊಂಡು ತಂದುಕೊಟ್ಟಿದ್ದರೂ ಈ ಪರಿಯ ಸಂತಸ ಅನುಭವಿಸುತ್ತಿರಲಿಲ್ಲ. ಕಳೆದುಕೊಂಡ ಒಲವಿನ ವಸ್ತು ಯಾವುದೇ ಸ್ಥಿತಿಯಲ್ಲಿ ಮರಳಿ ಬಂದು ನಮ್ಮ ಮಡಿಲು ಸೇರಿದರೂ ಅದು ವರ್ಣಿಸಲಾರದ ಆನಂದವೇ.

ಆದರೆ ಮನುಷ್ಯನ ವಿಕೃತ ಮನಸ್ಸಿಗೆ ಏನು ಹೇಳೋಣ? ಪರ್ಸ್ ನನ್ನ ಕೈ ತಪ್ಪಿದ್ದರೂ, ಅದೇನೂ ಲಾಕ್ ಆಗಿಲ್ಲದಿದ್ದರೂ, ಜಿಪ್ ತೆಗೆದು ಏನೇನು ಬೇಕೋ ಎಲ್ಲವನ್ನೂ ಪಡೆಯಬಹುದಾಗಿದ್ದರೂ, ಕತ್ತರಿ ಪ್ರಯೋಗ ಮಾಡಿ ಅದನ್ನು ವಿರೂಪಗೊಳಿಸಲಾಗಿತ್ತು. ನಾನಂತೂ ಒಂದು ಆಲೋಚನೆ ಮಾಡಿದ್ದೆ. ಯಾರಾದರೂ ಅದನ್ನು ಸಂತೋಷದಿಂದ ಬಳಸಲಿ ಎಂದು. ನಮ್ಮ ಜನರಿಗೆ “ಒಳ್ಳೆಯದರ” ಸುಖವನ್ನು ಅನುಭವಿಸಲೂ, ಸಂಭ್ರಮಿಸಲೂ ತಿಳಿಯುವುದಿಲ್ಲವೇ!? ಹಾಳು ಮಾಡುವುದೊಂದೇ ಕಲಿತಿದ್ದಾರೆಂಬುದನ್ನು ಕಂಡು ಬೇಸರವಾಯ್ತು.

ಆದರೆ ಒಳ್ಳೆಯ ಮನಸ್ಸುಗಳು ಸಮಾಜವನ್ನು ಸಂರಕ್ಷಿಸುತ್ತಿವೆ ಎಂಬ ಅನುಭವಸತ್ಯವೂ ಅತ್ಯಂತ ಸಂತಸ ನೀಡಿತು. ಟೈರ್ ಅಂಗಡಿಯ ಕಾರ್ಮಿಕರು ಯಾರೋ ಬಿಸಾಡುತ್ತಿದ್ದ ಕಾರ್ಡ್‌ಗಳನ್ನು ಕಂಡು ಅವುಗಳನ್ನು ಪಡೆದು ಕವರ್ ಒಳಗೆ ಸುರಕ್ಷಿತವಾಗಿರಿಸಿ, ನನ್ನ visiting card ನಲ್ಲಿದ್ದ ನನ್ನ ಮೊಬೈಲ್ ನಂಬರ್‌ಗೆ ಕರೆ ಮಾಡಿರುತ್ತಾರೆ. ಎಷ್ಟು ಒಳ್ಳೆಯತನ ನೋಡಿ…. ಈ ಕಾರ್ಮಿಕರ ಪ್ರಾಮಾಣಿಕತೆ, ಸಂವೇದನೆಗಳಿಗೆ ನಾನು ಚಿರ‌ಋಣಿ….

PAN card ಅರ್ಜಿ ಕೂಡ ಕಾರಣಾಂತರಗಳಿಂದ ತಿರಸ್ಕೃತವಾಗಿ ಇಂದೇ ಬಂದಿರುವುದು ಎಷ್ಟು ಕಾಕತಾಳೀಯ!

ಅಂದಹಾಗೆ ಈ ಪರ್ಸಿನ ಮೇಲೆ ಕೊಂಚ ಮೋಹ, ವ್ಯಾಮೋಹಕ್ಕೆ ಕಾರಣ ಇದೆ. ಎರಡು ವರ್ಷಗಳ ಕೆಳಗೆ ಚೀನಾಗೆ ಹೋಗಿದ್ದಾಗ ನಾನು ನೆನಪಿಗಾಗಿ, ಅಂತಹ ದುಬಾರಿಯಲ್ಲದ ಇದೊಂದೇ ವಸ್ತುವನ್ನು ಕೊಂಡಿದ್ದೆ!

ವಸ್ತುಗಳು ಕಳೆಯಬಹುದು, ಕಲಿತ ವಿಷಯಗಳನ್ನೂ, ಉಂಡ ನೆನಪುಗಳನ್ನು ಯಾರೂ ಕದಿಯಲಾರರು.

‍ಲೇಖಕರು Avadhi GK

16 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading