ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಾಗುತ್ತಾರೆ…

ತೇಜಾವತಿ ಎಚ್ ಡಿ

ಹಗಲಿಗೊಂದು ಇರುಳಿಗೊಂದು
ನವನವೀನ ಶೈಲಿಗಳ
ಆಕರ್ಷಣೆಗೆ ಒಳಗಾಗುವ
ಪಂಚರಂಗಿಗಳ ನಡುವೆ
ಆಯುಷ್ಯ ತೀರುವವರೆಗೂ
ತೀರದ ಗುರಿ ಆರದ ಸಾಧನೆಯೇರಿದ
ವಿಶ್ವಕ್ಕೆ ಬ್ರಾತೃತ್ವದ ಮಹತ್ವ ಸಾರಿದ
ವಿವೇಕಾನಂದರಂತಹವರು ನೆನಪಾಗುತ್ತಾರೆ…

ವಿಲಾಸಿ ರೆಕ್ಕೆಗಳ ಆಸೆಗಳಿಗೆ ಮರುಳಾಗಿ
ಕುರುಡು ವ್ಯಾಮೋಹಗಳ ಆಜೀವ ದಾಸರಾಗಿ
ತಮ್ಮತನವ ಗಿರವಿಯಿಟ್ಟು ಪಾಶಗಳಿಗೆ ಗುರಿಯಾಗುವವರ ಮದ್ಯೆ
ಅರಮನೆಯ ನೆರಳ ನೆನೆಯದೆ
ವೈಭೋಗಕ್ಕೆ ಆಶಿಸದೆ ಸಿರಿಸಂಪತ್ತನ್ನು ಆಳದೆ
ಬಯಲೊಳಗೆ ಬೆತ್ತಲಾಗಿ
ಅನುಭಾವದ ವಿರಕ್ತಳಾಗಿ
ಅಧ್ಯಾತ್ಮದ ಜೊತೆಸಾಗಿದ ಅನುರಾಗಕ್ಕೆ
ಅಕ್ಕನಂತಹವರು ನೆನಪಾಗುತ್ತಾರೆ…

ಅನುಕ್ಷಣವೂ ಬಣ್ಣಧರಿಸುವ ಗೋಸುಂಬೆಗಳಾಗಿ
ವ್ಯಕ್ತಿತ್ವದ ತುಲಾಭಾರಗಳನ್ನು
ಧನಕನಕಗಳಿಂದ ತೂಗುವ ತಕ್ಕಡಿಗಳೆದುರು
ಧರಿಸಿದ್ದ ಜನಿವಾರ ಎಸೆದು
ಮೌಂಜಿಯ ಹರಿದು ನವ್ಯದುಕೂಲವ ತೊರೆದು
ಲಿಂಗಕ್ಕೂ ಭೇದವೆಣಿಸದೆ
ಕೋಟ್ಯಂತರ ಮುಮುಕ್ಷುಗಳ ಸನ್ಮಾರ್ಗವ ಕಂಡು ಆತ್ಮ ತೃಪ್ತಗೊಂಡು
ಸುಮುಹೂರ್ತವೇ ಗಂಡುರೂಪಾಗಿ
ಭಕ್ತಿಗೇ ಭಂಡಾರಿಯಾದ ಕ್ರಾಂತಿಯ ಶಿಶು
ಬಸವಣ್ಣನಂತಹವರು ನೆನಪಾಗುತ್ತಾರೆ..

ಸಿರಿತನದ ಸುಪ್ಪತ್ತಿಗೆಯಲಿ
ಆಜೀರ್ಣ ನಿದ್ರಾಹೀನತೆಗಳಿಂದ ನರಳುವವರ ನಡುವೆ
ಭೂತಾಯಿಯ ಮಡಿಲಲ್ಲಿ ಅಂಬರದ ಹೊದಿಕೆ ಹೊದ್ದು ಬೋರಲು ಮಲಗಿದ
ಹಸಿದ ಜೀವಗಳು ನೆನಪಾಗುತ್ತಾರೆ..

ಕುಡಿಗಳಿಗಾಗಿ ಹಂಬಲಿಸಿ
ಹರಕೆ ಉಪವಾಸ ವ್ರತಗಳಿಗಾಗಿ ದೈವೀ ವೃಕ್ಷಗಳ ಪ್ರದಕ್ಷಿಣೆ ಹಾಕುವವರ ನಡುವೆ
ರೆಕ್ಕೆ ಬಲಿತು ಗೂಡ ತೊರೆದ ಹಕ್ಕಿಗಳ ನೆನೆದು
ಇಳಿಸಂಜೆಯ ಏಕಾಂತದ ಸಂಗಾತಿಗಳಾಗಿ ಸಮಯದೂಡುವ ವೃದ್ಧರು ನೆನಪಾಗುತ್ತಾರೆ..

ಬದುಕಿನ ವೈರುಧ್ಯಗಳ ಬಿರುಗಾಳಿಗೆ ತರಗೆಲೆಗಳಾಗಿ ಹಾರಿಹೋದವರ ನಡುವೆ
ಗಡಿ ದೇಶ ಭಾಷೆ ಭಕ್ತಿಗಾಗಿ ಜೀವತೆತ್ತ ಅದೆಷ್ಟೋ ಹುತಾತ್ಮರು ನೆನಪಾಗುತ್ತಾರೆ..
ನಿತ್ಯ ನೆನಪಾಗುತ್ತಾರೆ
ನೆನಪಾಗುತ್ತಲೇ ಇರುತ್ತಾರೆ
ಕೊನೆಗೆ…
ಆದರ್ಶಗಳಿಗೂ ಮೀರಿದ ಹೆಸರಾಗಿಬಿಡುತ್ತಾರೆ…

‍ಲೇಖಕರು Avadhi

5 April, 2021

1 Comment

  1. Kiran M

    ಜೀವನವನ್ನು ಸದಾ ಜೀವಂತವಾಗಿ ಜೀವಿಸಿದ ಮಹಾನುಭಾವರನ್ನು ನೆನಪಿಸುತ ಈಗಿನ ಸಮಾಜಕ್ಕೆ/ ಜೀವನನಕ್ಕೆ ಅಂಟಿಕೊಂಡಿರುವ, ಔಷಧಿನೇ ಇಲ್ಲದೆ ಗುಣವಾಗುವಂಥ ಒಂದು ಕಾಯಿಲೆ ಬಗ್ಗೆ ಉಲ್ಲೇಖಿಸಿರುವದು ಒಂದು ಗಮನೀಯ. ಇಂದಿನ ಜಗತ್ತು ಕೇವಲ ಸಮೃದ್ಧ , ಸ್ಥಿತಿವಂತ ಬದುಕಿಗಾಗಿ ಹೋರಾಟ ನಡೆಸಿದೆ ಹೊರತು, ಆತ್ಮ ತೃಪ್ತಿಗಾಗಿ, ನೆಮ್ಮದಿಗಾಗಿ ಹಾಗು ಮಾನವೀಯ ಮೌಲ್ಯಗಳಿಗಾಗಿ ಅಲ್ಲ ಅಂತ ಹಲವು ಬಾರಿ ಸ್ಪಷ್ಟವಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading