ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರಾರು ತಲೆಬುರುಡೆಗಳು ಸಿಕ್ಕ ಸುದ್ದಿ..

ಸೋಬಿಬೋರ್

ಪ್ರವರ ಕೊಟ್ಟೂರ್

“ಕೊನೆ ನಿಲ್ದಾಣ ಬಂದಾಗಿದೆ
ನೀವೀಗಿ ರೈಲಿನಿಂದ ಇಳಿಯಬಹುದು”
ಗಡಸು ದನಿ ರೈಲಿನ ಮೈ ಮನಸ್ಸನ್ನು
ಆವರಿಸಿಕೊಳ್ಳುತ್ತದೆ,
ಇಂಜಿನ್ನು ಕ್ಯಾಕರಿಸಿ ಉಗುಳಿದ ಹೊಗೆಯ ನಡುವೆ
ಒಂದಿಡೀ ಊರು ಇಳಿದುಕೊಳ್ಳುತ್ತದೆ.

ಹೆಂಡತಿಯ ನಡು ಹಿಡಿದ ಗಂಡ
ಕೂಸು ಎದೆಗೊತ್ತಿಕೊಂಡ ಹೆಂಗಸು
ರಚ್ಚೆ ಹಿಡಿದ ಹುಡುಗಿ
ಲಗೇಜು ತಲೆಗಿಟ್ಟುಕೊಂಡ ಮುದುಕ
ಹಿಂಬಾಲಿಸುತ್ತಿರುವ ಮುದುಕಿ
ಅಲ್ಲೆಲ್ಲೋ ದೂರ ಮನೆಗಳನ್ನು ಹಿಂದೆಯೇ ಬಿಟ್ಟ
ಅಪರಿಚಿತ ಊರು

ಕಿಟಕಿಯೊಳಗೆ ಆ ತುಂಟ ಹುಡುಗಿ ನಾಲಿಗೆ ಹೊರ ಚಾಚಿ
ಮುದುಕರನ್ನು ಅಣಕಿಸುತ್ತಿದೆ,
ಗುಲಾಬಿ ಎಸಳಿನ ತುಟಿಯಲ್ಲಿ ಗುಲಗಂಜಿ ತೂಕದ ನಗು,
ಫ್ರಾಕಿನಲ್ಲಿಟ್ಟ ಬಿಳಿ ಹೂಗಳಿಗೆ
ಶ್ವೇತ ನಕ್ಷತ್ರಗಳಿಗೆ
ಆ ಹುಡುಗಿ ಹೇಳುವ ಕತೆಗಳು
ತೀರಾ ಇಷ್ಟವಂತೆ

ಹಿತ್ತಲ ಕುಂಬಳಕಾಯಿ ಹಣ್ಣಾದ ವಾಸನೆ
ಬಟ್ಟೆ ಒಣ ಹಾಕುವಾಗೆಲ್ಲಾ ಮೂಗಿಗೆ ಬಡಿದು
ಗೊಜ್ಜು ಮಾಡುವಂತೆ, ಹಲ್ವಾ, ಕೇಕು ಮಾಡುವಂತೆ
ಕಾಡುತ್ತಿತ್ತು.
ಜೋಸೆಫನಿಗೆ ಸಕ್ಕರೆ ಖಾಯಿಲೆ
ತಿನ್ನಬೇಡೆಂದು ಹೇಗೆ ಹೇಳೋದು
ಹಾಳು ದುರಾಸೆ, ಕೆಟ್ಟ ನಾಲಿಗೆ ಚಪಲ ಮುದುಕ

ಲೆದರ್ ಜಾಕೇಟಿನೊಳಕ್ಕೆ ಕೈಯಿಟ್ಟುಕೊಂಡ
ಮುದುಕಿ ಸೋಫಿಯಾ ಮನಸ್ಸನ್ನು
ಹಿತ್ತಲಲ್ಲೇ ಬಿಟ್ಟು ಬಂದಿದ್ದಾಳೆ.

ಕುಂಬಳಕಾಯಿ ರೈಲಿಗೇನು ಭಾರವಾಗುತ್ತಿರಲಿಲ್ಲ!
ಇನ್ಮುಂದೆ ಅಷ್ಟು ದೊಡ್ಡ ತಳಿ ಹಾಕಲೇಬಾರದು.
ಸಣ್ಣ ಕುಣಿಕೆ ಚೀಲದಿಂದ
ಬೀಜಗಳ ಕೈಗೆತ್ತುಕೊಂಡಳು.

“ಓಯ್ ಜೇಕಬ್… ಜೇಕಬ್…
ನಿಲ್ಲು ಜೋರಾಗಿ ಓಡ್ಬೇಡ”
ಈ ಹುಡುಗನ ಕಾಲು ಒಂದು ಕ್ಷಣ ಸುಮ್ಮನಿರಲ್ಲ,
ಮೆಲ್ಲ ನಡೆದು ಗೊತ್ತಿಲ್ಲ ಇದಕ್ಕೆ
ಓಡುವ ರಭಸಕ್ಕೆ ಟೊಪ್ಪಿಗೆ ಅಲ್ಲೇ ಬಿತ್ತು
ಜೂಲಿಯಾ ಕೈಗೆತ್ತಿಕೊಂಡು
ಮೆತ್ತಗೆ ಕೊಡವಿದಳು

ತನ್ನೊಂದು ಅಪರೂಪದ ಜಗತ್ತು
ತನ್ನೊಟ್ಟಿಗೇ ಬರುತ್ತಿದೆ,
ಕಣ್ಣು, ಮೂಗು, ಬಾಯಿ, ದಟ್ಟ ಕೂಡು ಹುಬ್ಬು,
ಗಲ್ಲ ಎಲ್ಲಾ ಅವರಪ್ಪನದೇ ಪಡಿಯಚ್ಚು.
ಅವ ತೀರಿ ಹೋದ ಮೇಲೆ
ನೋವು ಮರೆಸಿದ್ದು ಮುದ್ದು ಜೇಕಬ್

ಚೆರ್ರಿ ಹಣ್ಣುಗಳಿದ್ದ ಬುಟ್ಟಿ
ಬಗಲಿಗಿಟ್ಟುಕೊಂಡು ನಡೆಯುತ್ತಿರುವ ಹುಡುಗಿ
ನೋಡಲು ಥೇಟ್ ಚೆರ್ರಿ ಹಣ್ಣು,
ಕಾಂಟ್ಯಾಕ್ಸ್ ಕ್ಯಾಮೆರಾ ಹಿಡಿದ ನಾಝಿ ಮುದುಕ
ಮುಖ ಗಂಟಿಕ್ಕಿಕೊಂಡೇ ಫೋಟೊ ಕ್ಲಿಕ್ಕಿಸಿದ,
ಅವಳು ಅಸಹ್ಯ ಪಟ್ಟುಕೊಂಡಳು.

ಅವರು ಬಂದದ್ದು ಕೇವಲ ಪ್ರೀತಿ ಪಾತ್ರರ ಜೊತೆಗೋ
ಅಥವಾ ಲಗೇಜಿನ ಜೊತೆಗೋ ಅಲ್ಲ
ನೆಲದೊಳಕ್ಕ ಹಾಕಬಹುದಿದ್ದ ಕನಸುಗಳೊಂದಿಗೆ
ನಾಳೆಗಳ ಕನಸುಗಳೊಂದಿಗೆ

“ನಿಮಗಿದೋ ಹೊಸ ಊರು,
ನೀವಿಲ್ಲಿ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಿ,
ಯುದ್ಧ ಮುಗಿದು, ಎಲ್ಲರೂ ವಾಪಾಸು ಹೋಗೋಣ”
ನಾಝಿ ಧಿರಿಸಿನ ಸೈನಿಕ ಜೋರಾಗಿ ಗುಂಪಿಗೆ
ಕೂಗಿ ಹೇಳಿದ.
ನಾವು ಜೀವಂತವಾಗಿ ಇರ್ತೀವಲ್ಲಾ!
ಸಣ್ಣ ದನಿಯಲ್ಲಿ ಹೆಂಗಸು
ಜರ್ಮನರು ಕೊಟ್ಟ ಮಾತು ತಪ್ಪೋದಿಲ್ಲ.

ಸೋಬಿಬೋರ್ ನ ತೋಟವೊಂದರಲ್ಲಿ
ಮಣ್ಣು ಅಗೆಯುವಾಗ
ನೂರಾರು ತಲೆಬುರುಡೆಗಳು ಸಿಕ್ಕ ಸುದ್ದಿ

‍ಲೇಖಕರು avadhi

6 December, 2019

4 Comments

  1. soumya chikkamath

    Agadhi mast baraha

  2. soumya chikkamath

    Agadhi mast baraha..

  3. Kum.Veerabhadrappa

    ಪ್ರವರ ಅವರೆ ನಿಮ್ಮ ಈ ಕವಿತೆ ಚೆನ್ನಾಗಿದೆ, ಆದರೆ ಕ್ಯಾಕರಿಸಿ ಎನ್ನುವ ಪದಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ, ಸಾಸಿವೆಯ ಬೊಗಸೆಯಲ್ಲಿ ಸಾಗರವನ್ನು ತುಂಬಲೆತ್ನಿಸಿ,
    – ಕುಂವೀ (ಮಾಜಿಕವಿ)

  4. T S SHRAVANA KUMARI

    ಒಳ್ಳೆಯ ದೃಶ್ಯಕಾವ್ಯದಂತಿದೆ. ಕಡೆಯ ಸಾಲು ಮನ ಕಲಕಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading