ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂತನ ದೋಶೆಟ್ಟಿ ಕವಿತೆ- ಬೋಳು ಹಣೆ..

ನೂತನ ದೋಶೆಟ್ಟಿ

ಆ ಈವ್‌ ಗೂ
ಆಕೆಯ ಮಗಳಿಗೂ ಇದ್ದದ್ದು 
ಸಹಜ ಬೋಳು ಹಣೆಯೇ
ಈವ್, ಆಡಮ್, ಅವರ ಮಗಳು
ಸಂಚರಿಸಿದ್ದ ಕಾಡುಗಳೆಲ್ಲ 
ಹಸಿರು ತುಂಬಿದ ಬಸುರಿಯರಾದರೂ 
ಅವರ ಹಣೆಯಿರಲಿ, ದೇಹವೂ ಬೋಳು.

ಅವರುಟ್ಟ ಮೊದಲ ಉಡುಗೆಯ ಹೆತ್ತ ಬಳ್ಳಿ
ಹುಯಿಲೆಬ್ಬಿಸಲಿಲ್ಲ 
ತಾನು ಬೋಳಾದೆನೆಂದು
ಅವರು ಕಡಿದು ಕಟ್ಟಿದ ಮನೆಯೆದುರು ನಿಂತ 
ಅದೇ ಮರವೂ ಗೋಳಾಡಲಿಲ್ಲ
ಅವರ ಸಂತಾನವಾದರೋ  ಕಡಿಯಿತು ಮರಗಳ 
ಬಯಲೂ ಬೆತ್ತಲಾಗುವವರೆಗೆ

ಎಲ್ಲವ ಬೋಳಾಗಿಸಿದ ಆ ಸಂತಾನಕ್ಕೆ
ಈಗ ತುಂಬಿಸುವ ಹುಕಿ
ನಡುನೆತ್ತಿಯ ಸುಡುಬಿಸಿಲಲಿ ಸುರಿದ ಬೆವರಲಿ
ಅವಳ ಹಣೆಯೇ ಕರಗಿ ಹರಿವಾಗ
ಆ ಸಂತಾನ ಅಲ್ಲಿ ಬೊಟ್ಟಿಟ್ಟು  ಗದರುತ್ತದೆ
ಹರಿಯಕೂಡದು ಬೆವರಿನೊಡನೆ ನೀನು!

ಅವಳು ನಗುತ್ತಾಳೆ
ಹಣೆ ನನ್ನದು, ಬೆವರಧಾರೆಯೂ
ಬೊಟ್ಟು ಅಲಂಕಾರವೋ ಮರುಳೇ,
ಸಮಯವಿದ್ದರೆ ತೀಡುತ್ತೇನೆ
ಇಲ್ಲವೋ ಬೆವರು ಸಾಲಂತೂ ಇದೆಯಲ್ಲಾ

ತುಂಬಿದ ನಿನ್ನ ಹೊಟ್ಟೆಯ ಕಣ್ಣಿಗೆ
ಕಾಣಲಾರದ ಲೋಕವ್ಯಾಪಾರವಿದು
ಹೆಚ್ಚು ಚೌಕಾಸಿ ಬೇಡ
ಬೇಕಿದ್ದರೆ ಕೊಳ್ಳು 
ಇಲ್ಲವೇ ನಿನ್ನ ದಾರಿ ಹಿಡಿದು ಹೊರಡು

ಮನೆಯಲ್ಲಿ ಮಕ್ಕಳಿಗೆ ಹಿಟ್ಟು ಬೇಯಿಸಬೇಕು ನಾನು
ನಿನ್ನಂಥ ಮೈಗಳ್ಳ ಅವರ ಅಪ್ಪನಿಗೂ.

‍ಲೇಖಕರು avadhi

1 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading