ಗಜಲ್
ಪ್ರಕಾಶ ಬಿ
ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟರಾತ್ರಿ
ನನ್ನೆದೆಯ ಭಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟರಾತ್ರಿ
ಕಾಲ ಗರ್ಭದ ಕತ್ತಲೆಗಳು ಕನಸುಗಳನು ಅವೆಷ್ಟೋ ಮಣ್ಣಾಗಿಸಿವೆ
ಬದುಕು ಹಣ್ಣಾಗಿಸುವಜೀವಕ್ಕಾಗಿಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟರಾತ್ರಿ
ಮಧುರ ಗಾಯಗಳು ನಿನ್ನುಸಿರ ಮುಲಾಮಿಗಾಗಿ ದಾರಿಕಾಯುತ್ತಲಿವೆ ಕ್ಷಣಕ್ಷಣ
ತುಟಿಯಂಚಿನ ನೋವಿಗೆ ಮುತ್ತಿನ ಮತ್ತಾಗಲಿಲ್ಲ ದೀಪ ಹಚ್ಚಿಟ್ಟರಾತ್ರಿ

ಕಣ್ಣ ಮೌನ ನಿನ್ನ ಮಾತಿಗಾಗಿಯೇ ಮಂತ್ರಗಳನು ಪಟಿಸುತ್ತಿವೆ
ಎದುರಾಗಲಿಲ್ಲ ನಿದಿರೆಯಲ್ಲೂ ನೀನು ಬರಲಿಲ್ಲ ದೀಪ ಹಚ್ಚಿಟ್ಟರಾತ್ರಿ
ಕೈ ಮುಗಿಯದ ಪ್ರಾರ್ಥನಾ ಮಂದಿರಗಳೆ ಉಳಿದಿಲ್ಲ ನಿನಗಾಗಿ
ಕತ್ತಲಾದ ಬದುಕಿಗೆ `ಪ್ರಕಾಶ’ ಮೂಡಲಿಲ್ಲ ದೀಪ ಹಚ್ಚಿಟ್ಟರಾತ್ರಿ






chennaagide.