
ಪ್ರವೀಣಕುಮಾರ್ .ಗೋಣಿ
ಸ್ಪ್ಯಾನಿಶ್ ಕವಿ ಪ್ಯಾಬ್ಲೋ ನೆರೂಡ ಅವರ “You start dying slowly” ಪದ್ಯದ ಭಾವಾನುವಾದ
ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ
ಹರಿಯದೆ ನಿಂತ ನೀರಂತೆ ನೀವಾದರೆ
ಓದದೇ ಅಧಮನಂತೆ ನೀವಾದರೆ
ಬದುಕಿನ ಬೆರಗುಗಳ ಸದ್ದಾಲಿಸದ ಕಿವುಡ ನೀವಾದರೆ
ನಿಮ್ಮ ಬಗ್ಗೆ ನಿಮಗೆ ಒಂದು ಹೆಮ್ಮೆಯಿಲ್ಲದಂತಾದರೆ
ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ .

ನಿಮ್ಮ ಆತ್ಮಗೌರವವನ್ನ ನೀವಾಗೇ ಕೊಂದರೆ
ಪರೋಪಕಾರದ ಕಿಮ್ಮತ್ತು ಮರೆತು ನೀವು ನಡೆದರೆ
ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ
ನಿಮ್ಮ ಬಿಡದಂತಹ ವ್ಯಸನಗಳ ಗುಲಾಮ ನೀವಾದರೆ
ಪ್ರತಿ ನಿತ್ಯ ಸಾಗುವ ಬದುಕಿನ ಹಾದಿಯನ್ನ
ನೀವು ಬದಲಿಸಿಕೊಳ್ಳದೆ ಬಡವಾದರೆ
ತರ ತರಹದ ರಂಗುಗಳುಳ್ಳ ಬಟ್ಟೆಗಳನ್ನ
ಧರಿಸದೇ ಬೇಸರಿಕೆಯ ನೀವು ಹೊತ್ತುಕೊಂಡರೆ
ಅಪರಿಚಿತರೊಂದಿಗೆ ಬೆರೆತು ನಗುತ ನಾಲ್ಕು
ಮಾತನಾಡದೆ ಬಿಗುವಿನಿಂದ ನೀವಿದ್ದರೆ
ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ.
ಬದುಕಿನಲ್ಲಿ ಬೆರಗುಗಳನ್ನ ಹೊಮ್ಮಿಸುವ
ನವೀನ ಭಾವಗಳನ್ನ ಪಸರಿಸುವ
ನವೋಲ್ಲಾಸದಿಂದ ಎದೆಯ ಬಡಿತ ಹೆಚ್ಚಿಸುವ
ಜೀವಗಳೆಡೆಗಿನ ನಿಮ್ಮ ಉದಾಸೀನದಿಂದ
ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ .
ಸಂತೃಪ್ತಿಯನ್ನ ನೀಡದ ಉದ್ಯೋಗದಿಂದ
ತೃಪ್ತಿಯನ್ನ ಕೊಡದ ಪ್ರೀತಿಯಿಂದ
ಬಿಡುಗಡೆ ಹೊಂದದೆ ಬದುಕನ್ನ
ಬದಲಿಸಿಕೊಳ್ಳದೆ ನರಳುವುದರಿಂದ
ಸುರಕ್ಷಿತ ವಲಯದಿಂದ ಹೊರಬರದೆ ಇರುವುದರಿಂದ
ಕನಸುಗಳ ಮೇರೆ ಮೀರದೆ ಸಾಗದಿರುವುದರಿಂದ
ಜೀವನದ ಯಾನದಲ್ಲಿ ಒಮ್ಮೆಯಾದರೂ
ಬದುಕಿನಿಂದ ನಾಗಾಲೋಟ ಕೀಳದಿದ್ದರೆ
ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ .






ಈ ಕವನವನ್ನು ಅನೇಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರ ಸೊಬಗಿಗೆ ಮಾರು ಹೋಗಿದ್ದಾರೆ. ಅವರಲ್ಲಿ ನಾನೂ ಒಬ್ಬಳು. ಆದರೆ ತಮಾಷೆ ಎಂದರೆ ಇದು ನೆರುಡನ ಕವನ ಅಲ್ಲ. ಬಹಳ ವರ್ಷಗಳಿಂದ ನೆಟ್ ಜಗತ್ತಿನಲ್ಲಿ ನೆರುಡನ ಹೆಸರಲ್ಲೆ ಓಡಾಡುತ್ತಿದೆ.